3 ಎಕರೆಯಲ್ಲಿ ವಿವಿಧ ತಳಿಯ ಮಾವು ಬೆಳೆದು ಕೃಷಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದ ಯಾದಗಿರಿ ರೈತ

| Updated By: shruti hegde

Updated on: Apr 16, 2021 | 3:06 PM

ರೈತ ದುರ್ಗಣ್ಣ ಅವರು ಮಾವಿನ ಹಣ್ಣೊಂದರಿಂದಲೇ ಲಕ್ಷಾಂತರ ರೂಪಾಯಿ ಲಾಭ ಮಾಡಿಕೊಂಡಿದ್ದಾರೆ. ಇನ್ನು ದುರ್ಗಣ್ಣ ತೋಟದಲ್ಲಿ ಮಾವು ಮಾತ್ರ ಬೆಳೆದಿಲ್ಲ. ಇದರೊಂದಿಗೆ ಸಪೋಟಾ, ಪೇರಲ, ಗೋಡಂಬಿ, ದಾಳಿಂಬೆ, ಲಿಂಬೆ ಸೇರಿ ವಿವಿಧ ಹಣ್ಣಿನ ಗಿಡಿಗಳನ್ನೂ ಬೆಳೆಸುತ್ತಿದ್ದಾರೆ.

3 ಎಕರೆಯಲ್ಲಿ ವಿವಿಧ ತಳಿಯ ಮಾವು ಬೆಳೆದು ಕೃಷಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದ ಯಾದಗಿರಿ ರೈತ
ಮಾವು ಬೆಳೆ
Follow us on

ಯಾದಗಿರಿ: ಜಮೀನಿನಲ್ಲಿ ಕೃಷಿ ಮಾಡಿ ಕೈ ಸುಟ್ಟುಕೊಂಡು ನಂತರ ಕೃಷಿಯಿಂದ ದೂರವಾಗಿ ನಗರ ಸೇರುವ ಜನರು ಇತ್ತೀಚೆಗೆ ಹೆಚ್ಚಾಗಿದ್ದಾರೆ. ಆದರೆ ಯಾದಗಿರಿ ಜಿಲ್ಲೆಯ ವ್ಯಕ್ತಿಯೊಬ್ಬರು ಕೃಷಿ ಪದವಿ ಪಡೆದು ನೌಕರಿ ಮಾಡುವುದನ್ನು ಬಿಟ್ಟು ಕೃಷಿಯಲ್ಲೇ ಬದುಕು ಕಟ್ಟಿಕೊಂಡಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಪ್ರಗತಿಪರ ರೈತನಾಗಿ ಹೊರಹೊಮ್ಮಿ ಸಾವಿರಾರು ರೈತರಿಗೆ ಮಾದರಿಯಾಗಿದ್ದು, ಸಾಧನೆ ಪಥದತ್ತ ಹೆಜ್ಜೆ ಹಾಕುತ್ತಿದ್ದಾರೆ.

ಯಾದಗಿರಿ ತಾಲೂಕಿನ ಮುಂಡರಗಿ ಬಳಿಯ ದುರ್ಗಣ್ಣ ಹಪ್ಪಳ ಜಿಲ್ಲೆಯ ಇತರ ರೈತರಿಗೆ ಮಾದರಿಯಾಗಿ ಸಾಧನೆ ಮಾಡಿದ್ದಾರೆ. ದುರ್ಗಣ್ಣ ಅವರು ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಪದವಿ ಪಡೆದು ಆರಂಭದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ. ಅದರಲ್ಲಿ ಇವರಿಗೆ ತೃಪ್ತಿ ಸಿಗದ ಕಾರಣ ತಮ್ಮ ಸ್ವಂತ 3 ಎಕರೆ ಜಮೀನಿನಲ್ಲಿ ತೋಟಗಾರಿಕೆ ಮಾಡಲು ಆರಂಭಿಸಿದ್ದಾರೆ.

ಆರಂಭದಲ್ಲಿ ಬೇರೆಯವರಿಗೆ ತಮ್ಮ ತೋಟ ಲೀಜಿಗೆ ಕೊಟ್ಟಿದ್ದ ದುರ್ಗಣ್ಣ ಅವರು ಕಳೆದ 10 ವರ್ಷಗಳಿಂದ ತಾವೆ ಖುದ್ದು ತೋಟಗಾರಿಕೆ ಮಾಡಿ ವಿವಿಧ ರೀತಿಯ ಹಣ್ಣುಗಳನ್ನ ಬೆಳೆದು ಸಕ್ಸಸ್ ಕಂಡಿದ್ದಾರೆ. ಕಳೆದ 10 ವರ್ಷಗಳ ಹಿಂದೆ ತಮ್ಮ ಜಮೀನಿನಲ್ಲಿ ವಿವಿಧ ತಳಿಯ 80 ಕ್ಕೂ ಅಧಿಕ ಮಾವಿನ ಸಸಿ ಹಾಕಿದ್ದು, ಈಗ ಫಲ ಕೊಡುತ್ತಿದೆ.

ದುರ್ಗಣ್ಣ ಹಪ್ಪಳ ಅವರ ಜಮೀನಿನಲ್ಲಿ ಬೆಳೆದ ಲಿಂಬೆ ಬೆಳೆ

ಕಳೆದ ವರ್ಷ ಸರಿಯಾಗಿ ಇಳುವರಿ ಸಿಗಲಿಲ್ಲ. ಆದರೆ ಈ ಬಾರಿ ಅಂದುಕೊಂಡಿದ್ದಕ್ಕೂ ಹೆಚ್ಚಿನ ರೀತಿಯಲ್ಲಿ ಮಾವು ಫಲ ನೀಡಿದೆ. 80 ಕ್ಕೂ ಅಧಿಕ ಗಿಡಗಳಲ್ಲಿ ನೆಲಕ್ಕೆ ಹತ್ತುವಂತೆ ಮಾವು ಬಂದಿವೆ. ಇನ್ನು ನೀರಿಗಾಗಿ ಜಮೀನಿನಲ್ಲಿ ಎರಡು ಬೋರವೆಲ್​ಗಳನ್ನ ಕೊರಸಿದ್ದು, ಭರ್ಜರಿಯಾಗಿ ಮಾವು ಬೆಳೆ ಬಂದಿದೆ ಎಂದು ಪ್ರಗತಿ ಪರ ರೈತ ದುರ್ಗಣ್ಣ ಹಪ್ಪಳ ಹೇಳಿದ್ದಾರೆ.

ಗೇರು ಹಣ್ಣು

ಸದಾ ರೈತರ ಕಲ್ಯಾಣದ ಬಗ್ಗೆಯೇ ಯೋಚಿಸುವ ದುರ್ಗಣ್ಣ ಹಪ್ಪಳ, 10 ವರ್ಷಗಳ ಹಿಂದೆ ರಾಯಚೂರು ಕೃಷಿ ವಿಶ್ವವಿದ್ಯಾಲಯದಿಂದ ಮಲ್ಲಿಕಾ, ಖಾದರ್, ತೋತಾಪುರ, ಚಾಕೋ ಮಾವು, ಬೇನಿಷ ಹೀಗೆ ನಾನಾ ರೀತಿಯ ತಳಿಯ ಮಾವುಗಳನ್ನ ತಮ್ಮ ತೋಟದಲ್ಲಿ ಬೆಳೆದಿದ್ದಾರೆ. ಇನ್ನು ಕಳೆದ ಬಾರಿ ಕೊರೊನಾ ಕಿರಿಕಿರಿಯಿಂದಾಗಿ ಮಾವಿಗೆ ಕೇವಲ 40,000 ಬೆಲೆ ಸಿಕ್ಕಿತ್ತು. ಆದರೆ ಈಗ ಬೇಸಿಗೆ ಆರಂಭದಲ್ಲೇ ದುರ್ಗಣ್ಣ ಹಪ್ಪಳ ಅವರ ತೋಟಕ್ಕೆ ವ್ಯಾಪಾರಿಗಳು ಬಂದು ಹಣ್ಣು ಮತ್ತು ಕಾಯಿಗಳ ದರ ನಿಗದಿ ಮಾಡಿಕೊಳ್ಳುತ್ತಿದ್ದಾರೆ.

ಸಪೋಟ ಹಣ್ಣು

ರೈತ ದುರ್ಗಣ್ಣ ಅವರು ಮಾವಿನ ಹಣ್ಣೊಂದರಿಂದಲೇ ಲಕ್ಷಾಂತರ ರೂಪಾಯಿ ಲಾಭ ಮಾಡಿಕೊಂಡಿದ್ದಾರೆ. ಇನ್ನು ದುರ್ಗಣ್ಣ ತೋಟದಲ್ಲಿ ಮಾವು ಮಾತ್ರ ಬೆಳೆದಿಲ್ಲ. ಇದರೊಂದಿಗೆ ಸಪೋಟಾ, ಪೇರಲ, ಗೋಡಂಬಿ, ದಾಳಿಂಬೆ, ಲಿಂಬೆ ಸೇರಿ ವಿವಿಧ ಹಣ್ಣಿನ ಗಿಡಿಗಳನ್ನೂ ಬೆಳೆಸುತ್ತಿದ್ದಾರೆ. ಮಿಶ್ರ ತೋಟಗಾರಿಕೆ ಪದ್ಧತಿ ಮೂಲಕ ಇತರರಿಗೆ ಮಾದರಿ ಎನಿಸಿದ್ದಾರೆ. ಬರುವ ದಿನಗಳಲ್ಲಿ ಮೀನು, ಕುರಿ ಮತ್ತು ಜೇನು ಸಾಕಣೆ ಮಾಡಲು ನಿರ್ಧರಿಸಿದ್ದಾರೆ. ಇನ್ನು ದುರ್ಗಣ್ಣ ಅವರ ತೋಟದಲ್ಲಿ ಬೆಳೆದಿದ್ದ ಮಾವು ನೋಡಲು ಬಂದ ರೈತ ಮೂರ್ತಿ ತಮ್ಮ ಜಮೀನಿನಲ್ಲೂ ಸಹ ಇದೆ ರೀತಿ ಬೆಳೆಯಲು ದುರ್ಗಣ್ಣ ಅವರ ಸಹಕಾರ ಪಡೆಯುತ್ತೆವೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಮೋಜಿನ ಜೀವನಕ್ಕೆ ಮಾರುಹೋಗಿ ನೆಮ್ಮದಿ ಕಳೆದುಕೊಳ್ಳುತ್ತಿರುವ ಯುವ ಜನಾಂಗ ಕೃಷಿ, ಹೈನುಗಾರಿಕೆ ಹಾಗೂ ತೋಟಗಾರಿಕೆಯತ್ತ ಒಲವು ಹೊಂದುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕಾದರೆ ದುರ್ಗಣ್ಣರಂತೆ ಕೃಷಿಯತ್ತ ಒಲವು ತೋರಬೇಕಾಗಿದೆ.

ಇದನ್ನೂ ಓದಿ:

ಉತ್ತಮ ಫಸಲು ಬಂದರೂ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ; ಕೋಲಾರದಲ್ಲಿ ಆಲೂಗಡ್ಡೆ ಬೆಳೆದ ರೈತ ಕಂಗಾಲು

ಧಾರವಾಡದ ಮಾವು ಬೆಳೆಗೆ ಈ ಬಾರಿಯೂ ಕಂಟಕ; ಅಕಾಲಿಕ ಮಳೆಗೆ ರೈತರು ಕಂಗಾಲು

(Yadgir farmer grows 4 different varieties of Mango and finds his success in agriculture)