ಧಾರವಾಡದ ಮಾವು ಬೆಳೆಗೆ ಈ ಬಾರಿಯೂ ಕಂಟಕ; ಅಕಾಲಿಕ ಮಳೆಗೆ ರೈತರು ಕಂಗಾಲು

ಅಕಾಲಿಕ ಮಳೆ ಮತ್ತು ಇಬ್ಬನಿಯಿಂದ ಈ ಹಂಗಾಮಿನಲ್ಲಿ ನಾವು ಈಗಾಗಲೇ ಒಮ್ಮೆ ಸಂಕಷ್ಟ ಅನುಭವಿಸಿದ್ದೇವೆ. ಹವಾಮಾನ ವೈಪರೀತ್ಯದಿಂದ ಬೇಸಿಗೆಯಲ್ಲಿ ಆಲಿಕಲ್ಲು ಮಳೆ ಮತ್ತು ಬಿರುಗಾಳಿಯಿಂದ ಸಾಕಷ್ಟು ಪ್ರಮಾಣದ ಹಾನಿಯಾಗಿದೆ.

ಧಾರವಾಡದ ಮಾವು ಬೆಳೆಗೆ ಈ ಬಾರಿಯೂ ಕಂಟಕ; ಅಕಾಲಿಕ ಮಳೆಗೆ ರೈತರು ಕಂಗಾಲು
ಮಾವು ಬೆಳೆ
Follow us
|

Updated on: Apr 16, 2021 | 9:06 AM

ಧಾರವಾಡ: ಇತ್ತೀಚಿನ ವರ್ಷಗಳಲ್ಲಿ ಒಂದಿಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿರುವ ಮಾವು ಬೆಳೆಗಾರರು ಇದೀಗ ಫಸಲು ಕೈಗೆ ಬಂತು ಎನ್ನುವ ಹೊತ್ತಿಗೆ ತಲೆ ಮೇಲೆ ಕೈ ಹೊತ್ತುಕೊಂಡು ಕೂರುವ ಸ್ಥಿತಿ ನಿರ್ಮಾಣವಾಗಿದೆ. ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಮಾವು ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಪ್ರಸಕ್ತ ವರ್ಷ ಅಕಾಲಿಕ ಮಳೆ, ನಂತರ ದಟ್ಟವಾದ ಇಬ್ಬನಿ, ಮತ್ತೊಮ್ಮೆ ಅಕಾಲಿಕ ಗಾಳಿ ಹೀಗೆ ರೈತರ ಬೆಳೆಯನ್ನು ಕೈಗೆ ಸೇರದಂತೆ ಮಾಡಿದೆ.

ಹಿಂಗಾರು ಫಸಲುಗಳು ಕೈಗೆ ಬರುವ ಸಂದರ್ಭದಲ್ಲೇ ಬಂದೆರಗಿದ ಮಳೆ ಮತ್ತು ಬಿರುಗಾಳಿ ಮಾವು ಬೆಳೆಗಾರರ ನಿರೀಕ್ಷೆಗೆ ಬೆಂಕಿ ಇಟ್ಟಿದೆ. ಕಳೆದ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ 2 ಬಾರಿ ಅಕಾಲಿಕ ಮಳೆ ಸುರಿದಿತ್ತು. ಇದರಿಂದಾಗಿ ಹಿಂಗಾರು ಬೆಳೆಗಳಾದ ಜೋಳ, ಗೋಧಿ, ಕಡಲೆ, ಹತ್ತಿ, ಗೋವಿನಜೋಳ ಬೆಳೆಗೆ ಹಾನಿಯಾಗಿತ್ತು. ಜಿಲ್ಲೆಯಲ್ಲಿ ಏಪ್ರಿಲ್ ಎರಡನೇ ವಾರದವರೆಗೆ ಹಿಂಗಾರು ಬೆಳೆಗಳ ಕೊಯ್ಲು ಸಾಮಾನ್ಯ ಆದರೆ, ಈಗ ಅದಕ್ಕೂ ಅಡ್ಡಿಯಾಗಿದೆ.

ಪ್ರಸ್ತುತ ಸಂದರ್ಭದಲ್ಲಿ ಜಿಲ್ಲೆಯ ವಿವಿಧೆಡೆ ಮತ್ತೆ ವಿಪರೀತ ಗಾಳಿ, ಅಕಾಲಿಕ ಮಳೆ ಸುರಿದಿದೆ. ಪರಿಣಾಮ ಕೊಯ್ಲು ಮಾಡಲು ಕೂಡ ಸಮಸ್ಯೆಯಾಗಿದೆ. ಅಲ್ಲದೆ ರೈತರು ಈಗ ಜಾನುವಾರುಗಳಿಗೆ ವರ್ಷವಿಡೀ ಆಗುವಷ್ಟು ಮೇವು, ಹೊಟ್ಟಿನ ಬಣವೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಅಕಾಲಿಕ ಮಳೆಯಿಂದಾಗಿ ಜಮೀನಿನಲ್ಲಿದ್ದ ಮೇವು, ಹೊಟ್ಟು ತೋಯ್ದು ಕಪ್ಪು ಬಣ್ಣಕ್ಕೆ ತಿರುಗಿ, ಗುಣಮಟ್ಟ ಕ್ಷೀಣಿಸಿದೆ.

ರಾಜ್ಯದಲ್ಲಿ ಅತಿ ಹೆಚ್ಚು ಅಲ್ಫಾನ್ಸೋ ಮಾವು ಉತ್ಪಾದಿಸುವ ಜಿಲ್ಲೆ ಧಾರವಾಡ. ಇದರ ಜೊತೆಗೆ ಗುಟ್ಲಿ, ಮಲ್ಲಿಕಾ, ಹುಳಿಮಾವು ಸೇರಿದಂತೆ ವಿವಿಧ ತಳಿಗಳ ಮಾವು ಬೆಳೆಯನ್ನು ಸುಮಾರು 8,450 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ.‌ ಜಿಲ್ಲೆಯಲ್ಲಿ 2019 ರಲ್ಲಿ 87,000 ಟನ್, 2020ರಲ್ಲಿ 90,000 ಟನ್ ಮಾವು ಉತ್ಪಾದನೆಯಾಗಿತ್ತು. 2021 ರಲ್ಲಿ ಇದಕ್ಕಿಂತಲೂ ಹೆಚ್ಚು ಮಾವು ಉತ್ಪಾದನೆಯಾಗುವ ನಿರೀಕ್ಷೆ ಇತ್ತು. ಆದರೆ, ಮಾವು ಬೆಳೆ ಇನ್ನಷ್ಟೇ ಕೈಗೆಟುವ ಕಾಲದಲ್ಲಿ ಬಂದೆರಗಿದ ಇಬ್ಬನಿ, ಗಾಳಿ- ಅಕಾಲಿಕ ಮಳೆಯಿಂದ ಅನೇಕ ಕಡೆಗಳಲ್ಲಿ ಸಾಕಷ್ಟು ಹಾನಿಯಾಗಿದೆ.

mango loss

ಅಕಾಲಿಕ ಮಳೆಯಿಂದ ಕಂಗಾಲಾದ ಮಾವು ಬೆಳೆಗಾರರು

ಡಿಸೆಂಬರ್- ಜನವರಿಯಲ್ಲಿ ಹೂ ಬಿಟ್ಟಿದ್ದ ಮಾವು ಬೆಳೆ ನಂತರದ ದಿನಗಳಲ್ಲಿ ಇಬ್ಬನಿ ಕಾಟ ಎದುರಿಸಿತ್ತು. ಕಾಯಿ ಕಟ್ಟುವ ಹಂತದಲ್ಲಿ ಸಣ್ಣ ಮಿಡಿಗಳು ಉದುರಿ ಬಿದ್ದಿದ್ದವು. 8-10 ಕಾಯಿ ಕಟ್ಟುತ್ತಿದ್ದ ಮಾವಿನ ಗೊಂಚಲಿನಲ್ಲಿ ಕೇವಲ 2-3 ಕಾಯಿಗಳು ಉಳಿದಿದ್ದವು. ಕಳೆದ ವರ್ಷ ಕೊರೊನಾದಿಂದ ನರಳಿದ್ದ ಬೆಳೆಗಾರರು ಈ ಬಾರಿಯೂ ಅಂತಾರಾಜ್ಯ ವ್ಯಾಪಾರಸ್ಥರು ಬಾರದೆ ಇಕ್ಕಟ್ಟಿಗೆ ಸಿಲುಕುವಂತಾಗಿದೆ. ಪ್ರತಿ ಬಾರಿ ಜಿಗಿ ರೋಗ, ಹವಾಮಾನ ವೈಪರೀತ್ಯದಿಂದ ಮಾವು ಬೆಳೆಗಾರ ಪರಿತಪಿಸುವುದು ಮಾತ್ರ ತಪ್ಪುತ್ತಿಲ್ಲ. ಇದೀಗ ಅದರೊಂದಿಗೆ ಈ ಹವಾಮಾನ ವೈಪರೀತ್ಯವೂ ಸೇರಿಕೊಂಡು ರೈತರನ್ನು ಕಂಗಾಲಾಗುವಂತೆ ಮಾಡಿದೆ.

ಮಾವು ಬೆಳೆಗಾರರ ನೋವು ಏನು? ಅಕಾಲಿಕ ಮಳೆ ಮತ್ತು ಇಬ್ಬನಿಯಿಂದ ಈ ಹಂಗಾಮಿನಲ್ಲಿ ನಾವು ಈಗಾಗಲೇ ಒಮ್ಮೆ ಸಂಕಷ್ಟ ಅನುಭವಿಸಿದ್ದೇವೆ. ಹವಾಮಾನ ವೈಪರೀತ್ಯದಿಂದ ಬೇಸಿಗೆಯಲ್ಲಿ ಆಲಿಕಲ್ಲು ಮಳೆ ಮತ್ತು ಬಿರುಗಾಳಿಯಿಂದ ಸಾಕಷ್ಟು ಪ್ರಮಾಣದ ಹಾನಿಯಾಗಿದೆ. ಸದ್ಯಕ್ಕೆ ಸಮಸ್ಯೆ ಎದುರಿಸಿದ್ದೂ ಆಗಿದೆ. ಇದೀಗ ಫಸಲು ಕೈಗೆಟುವವರೆಗೆ ಮಳೆಯಾಗದಿದ್ದರೆ ಸಾಕು ಎಂದು ಮಾವು ಬೆಳೆಗಾರ ಮಹಾಂತೇಶ ಪಾಟೀಲ್ ಹೇಳಿದ್ದಾರೆ.

ಮಾವು ಬೆಳೆ ಹೂ ಬಿಡುವ ಸಂದರ್ಭದಲ್ಲಿ ಅಕಾಲಿಕ ಮಳೆಯಿಂದ ಸಂಕಷ್ಟ ಎದುರಿಸಿತ್ತು. ಈಗ ಜಿಲ್ಲೆಯ ಅಲ್ಲಲ್ಲಿ ಮಳೆಯಾಗಿದೆ. ಕೇವಲ ಮಳೆಯಾದರೆ ಫಸಲಿಗೆ ಹಾನಿಯಾಗದು. ಆಲಿಕಲ್ಲು ಮಳೆ ಅಥವಾ ರಭಸದ ಗಾಳಿ ಬೀಸಿದರೆ ಕಾಯಿಗಳು ನೆಲಕ್ಕುರುಳುತ್ತವೆ. ಹಾಗಾಗದಿದ್ದರೆ ಇದ್ದುದರಲ್ಲಿಯೇ ರೈತರಿಗೆ ಕೊಂಚ ಅನುಕೂಲವಾಗುತ್ತದೆ ಎಂದು ಧಾರವಾಡದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕಾಶಿನಾಥ ಭದ್ರಣ್ಣವರ್ ಹೇಳಿದ್ದಾರೆ.

ಇದನ್ನೂ ಓದಿ:

ಮಾವು ಕ್ಷೇತ್ರೋತ್ಸವ: ಆತಂಕಗೊಂಡ ರೈತರ ನೆರವಿಗೆ ಬಂದ ವಿಜ್ಞಾನಿಗಳ ತಂಡ

ರಾಮನಗರ ಜಿಲ್ಲೆಯಲ್ಲಿ ಆಕಾಲಿಕ ಮಳೆ: ಸಂಕಷ್ಟಕ್ಕೆ ಗುರಿಯಾದ ಮಾವು ಬೆಳೆಗಾರರು

( Mango crop destroyed because of heavy rain in Dharwad)