ಕೊರೊನಾ ಸೋಂಕಿತರ ಪತ್ತೆಗೆ ಮೊಬೈಲ್ ಟೆಸ್ಟಿಂಗ್ ವ್ಯಾನ್​ಗಳ ಮೊರೆ ಹೋದ ಕಲಬುರಗಿ ಜಿಲ್ಲಾಡಳಿತ

ಮೊಬೈಲ್ ವ್ಯಾನ್ ಮೂಲಕ ಅನೇಕ ಕಡೆ ಹೋಗಿ ಸಾರ್ವಜನಿಕರಿಂದ ಸ್ಯಾಂಪಲ್ಸ್ ಸಂಗ್ರಹಿಸುವ ಕೆಲಸವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಮಾಡುತ್ತಿದ್ದಾರೆ. ಜನರು ಸ್ವಯಂ ಪ್ರೇರಿತವಾಗಿ ಬಂದು ಟೆಸ್ಟ್ ಮಾಡಿಸಿಕೊಳ್ಳಬಹುದು. ಆದರೆ ಕೆಲವರಿಗೆ ಜಿಲ್ಲಾಡಳಿತ ಕಡ್ಡಾಯವಾಗಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಸೂಚನೆ ನೀಡಿದೆ.

ಕೊರೊನಾ ಸೋಂಕಿತರ ಪತ್ತೆಗೆ ಮೊಬೈಲ್ ಟೆಸ್ಟಿಂಗ್ ವ್ಯಾನ್​ಗಳ ಮೊರೆ ಹೋದ ಕಲಬುರಗಿ ಜಿಲ್ಲಾಡಳಿತ
ಮೊಬೈಲ್ ಟೆಸ್ಟಿಂಗ್ ವ್ಯಾನ್​ಗಳ ಮೂಲಕ ಕೊರೊನಾ ಸೋಂಕು ತಡೆಯಲು ಪ್ರಯತ್ನ
Follow us
preethi shettigar
| Updated By: Skanda

Updated on: Apr 16, 2021 | 9:33 AM

ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾದ ಎರಡನೇ ಅಲೆಯ ಅಬ್ಬರ ಜೋರಾಗಿದೆ. ಬಿಸಿಲನಾಡು ಕಲಬುರಗಿಯಲ್ಲಿ ಕಳೆದ ಹತ್ತು ದಿನದಲ್ಲಿ 24 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ. ಬರೋಬ್ಬರಿ ಮೂರು ಸಾವಿರ ಜನರಿಗೆ ಸೋಂಕು ತುಗಲಿದೆ. ಏಪ್ರಿಲ್ 15ರಂದು 624 ಜನರಿಗೆ ಸೋಂಕು ತಗುಲಿದೆ. ಎರಡನೇ ಅಲೆ ಅಬ್ಬರವನ್ನು ಕಡಿಮೆ ಮಾಡಲು ಇದೀಗ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಮೊಬೈಲ್ ಟೆಸ್ಟಿಂಗ್ ವ್ಯಾನ್​ಗಳ ಮೊರೆಹೋಗಿದೆ. ಸರ್ಕಾರ ಕೊರೊನಾ ಹಬ್ಬುವುದನ್ನು ಕಡಿಮೆ ಮಾಡಲು ಟೆಸ್ಟಿಂಗ್, ಟ್ರೇಸಿಂಗ್, ಟ್ರಿಟಿಂಗ್ ಬಗ್ಗೆ ಹೆಚ್ಚು ಗಮನ ನೀಡಲು ಸೂಚನೆ ನೀಡಿದೆ. ಹೀಗಾಗಿ ಕಲಬುರಗಿ ಜಿಲ್ಲಾಡಳಿತ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿರುವ ಪ್ರದೇಶದಲ್ಲಿ ಮತ್ತು ಜನನಿಬಿಡ ಪ್ರದೇಶದಲ್ಲಿ ಟೆಸ್ಟಿಂಗ್ ನಡೆಸಲು ಮೊಬೈಲ್ ವ್ಯಾನ್​ಗಳನ್ನು ಬಳಸುತ್ತಿದೆ. ಆ ಮೂಲಕ ಪ್ರತಿನಿತ್ಯ 5000ಕ್ಕೂ ಹೆಚ್ಚು ಜನರಿಗೆ ಕೊರೊನಾ ಪರೀಕ್ಷೆ ನಡೆಸುತ್ತಿದೆ.

ಏನಿದು ಮೊಬೈಲ್ ವ್ಯಾನ್? ಕೊರೊನಾ ಸೋಂಕು ಪತ್ತೆ ಮಾಡಲು ಟೆಸ್ಟಿಂಗ್ ಮಾಡುವುದು ಅನಿವಾರ್ಯ. ಕೊರೊನಾದ ಲಕ್ಷಣಗಳು ಇದ್ದರು ಕೂಡಾ ಕೊರೊನಾ ಸೋಂಕು ತಗುಲಿದೆಯಾ ಅಥವಾ ಇಲ್ಲವಾ ಎನ್ನುವುದು ಗೊತ್ತಾಗಬೇಕಾದರೆ ಕೊರೊನಾ ಟೆಸ್ಟ್ ಮಾಡಲೇಬೇಕು. ಆದರೆ ಬಹುತೇಕರು ಕೊರೊನಾ ಟೆಸ್ಟ್ ಕೇಂದ್ರಗಳಿಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ. ಹೀಗಾಗಿ ಕಲಬುರಗಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಇದೀಗ ಜನರಿದ್ದಲೇ ಹೋಗಿ ಕೊರೊನಾ ಟೆಸ್ಟ್​ ಮಾಡಿ ಸ್ಯಾಂಪಲ್ಸ್ ಸಂಗ್ರಹಿಸಲು ಮೊಬೈಲ್ ವ್ಯಾನ್ ಮೊರೆಹೋಗಿದೆ.

ಜಿಲ್ಲೆಯಲ್ಲಿ ಸದ್ಯ ಆರು ವ್ಯಾನ್​ಗಳನ್ನು ಟೆಸ್ಟಿಂಗ್ ನಡೆಸಲು ಸಿದ್ಧತೆ ಮಾಡಲಾಗಿದ್ದು, ಪ್ರತಿಯೊಂದು ವ್ಯಾನ್ ಕಲಬುರಗಿ ನಗರ ಮತ್ತು ಜಿಲ್ಲೆಯ ಅನೇಕ ಕಡೆ ಹೋಗಿ ಜನರಿಂದ ಸ್ಯಾಂಪಲ್ಸ್ ಸಂಗ್ರಹಿಸುವ ಕೆಲಸ ಮಾಡುತ್ತಿದೆ. ಈ ಮೊಬೈಲ್ ವ್ಯಾನ್​ನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಇರಲಿದ್ದು, ಅವರು ಸ್ಯಾಂಪಲ್ಸ್​ಗಳನ್ನು ಸಂಗ್ರಹಿಸುತ್ತಾರೆ. ನಂತರ ಅವುಗಳನ್ನು ಜಿಮ್ಸ್​ನಲ್ಲಿರುವ ಲ್ಯಾಬ್​ಗೆ ಕಳುಹಿಸಲಾಗುತ್ತದೆ. ಪ್ರತಿ ದಿನ ಒಂದೊಂದು ಭಾಗಕ್ಕೆ ಒಂದೊಂದು ವ್ಯಾನ್ ಹೋಗುತ್ತದೆ. ಒಂದು ವ್ಯಾನ್​ನಲ್ಲಿರುವ ಸಿಬ್ಬಂದಿಗಳು, ಪ್ರತಿನಿತ್ಯ 200ರಿಂದ 300ಜನರ ಕೊರೊನಾ ಟೆಸ್ಟ್​ನ ಸ್ಯಾಂಪಲ್ಸ್​ಗಳನ್ನು ಸಂಗ್ರಹಿಸುತ್ತಿದ್ದಾರೆ.

mobile van testing

ಕೊರೊನಾ ಸೋಂಕಿತರ ಪತ್ತೆಗೆ ಮೊಬೈಲ್ ಟೆಸ್ಟಿಂಗ್ ವ್ಯಾನ್​ ಬಳಕೆ

ಕೆಲವರಿಗೆ ಕೊರೊನಾ ಟೆಸ್ಟ್ ಕಡ್ಡಾಯ ಮೊಬೈಲ್ ವ್ಯಾನ್ ಮೂಲಕ ಅನೇಕ ಕಡೆ ಹೋಗಿ ಸಾರ್ವಜನಿಕರಿಂದ ಸ್ಯಾಂಪಲ್ಸ್ ಸಂಗ್ರಹಿಸುವ ಕೆಲಸವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಮಾಡುತ್ತಿದ್ದಾರೆ. ಜನರು ಸ್ವಯಂ ಪ್ರೇರಿತವಾಗಿ ಬಂದು ಟೆಸ್ಟ್ ಮಾಡಿಸಿಕೊಳ್ಳಬಹುದು. ಆದರೆ ಕೆಲವರಿಗೆ ಜಿಲ್ಲಾಡಳಿತ ಕಡ್ಡಾಯವಾಗಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಸೂಚನೆ ನೀಡಿದೆ. ಕಲಬುರಗಿ ನಗರದ ಸೂಪರ್ ಮಾರ್ಕೆಟ್​ನಲ್ಲಿರುವ ವ್ಯಾಪಾರಿಗಳು, ಬೀದಿ ಬದಿಯ ವ್ಯಾಪಾರಿಗಳು, ಕೆಲ ಬಡಾವಣೆಯಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿರುವ ಜನರು ಕಡ್ಡಾಯವಾಗಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಸೂಚನೆ ನೀಡಿದೆ. ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದನ್ನು ತಪ್ಪಿಸಲು ಟೆಸ್ಟ್​​ ಕಡ್ಡಾಯಗೊಳಿಸಲಾಗಿದೆ.

ಟೆಸ್ಟ್​ಗೆ ಜನರಿಂದ ಸಿಗದ ಸ್ಪಂದನೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಇದೀಗ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣವನ್ನು ತಗ್ಗಿಸಲು ಅನೇಕ ಕ್ರಮಗಳನ್ನು ಕೈಗೊಂಡಿದೆ. ಆದರೆ ಜಿಲ್ಲೆಯ ಅನೇಕ ಜನರು ಜಿಲ್ಲಾಡಳಿತದ ಕ್ರಮಕ್ಕೆ ಸ್ಪಂದನೆ ನೀಡುತ್ತಿಲ್ಲ. ಕೆಲವರಿಗೆ ಟೆಸ್ಟ್ ಮಾಡಿಸಿಕೊಳ್ಳುವಂತೆ ಸೂಚನೆ ನೀಡಿದರು ಕೂಡಾ ಟೆಸ್ಟ್ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿಯನ್ನೆ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಪೊಲೀಸರ ಸಹಾಯವನ್ನು ಪಡೆಯಲಾಗುತ್ತಿದೆ. ಪ್ರತಿಯೊಂದು ಮೊಬೈಲ್ ಟೆಸ್ಟಿಂಗ್ ವ್ಯಾನ್​ನಲ್ಲಿ ಓರ್ವ ಪೊಲೀಸ್​ ಸಿಬ್ಬಂದಿಯನ್ನು ಕೂಡಾ ನಿಯೋಜಿಸಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ವಿ. ವಿ ಜೋತ್ಸ್ನಾ ಹೇಳದ್ದಾರೆ.

ಜನರಿದ್ದಲ್ಲೇ ಹೋಗಿ ಕೊರೊನಾ ಟೆಸ್ಟ್ ಮಾಡಲು ಮೊಬೈಲ್ ವ್ಯಾನ್​ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ವ್ಯಾಪರಸ್ಥರು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಸೋಂಕಿನ ಲಕ್ಷಣಗಳು ಇದ್ದವರು ಸ್ವಯಂ ಪ್ರೇರಣೆಯಿಂದ ಬಂದು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕು. ಆ ಮೂಲಕ ಸೋಂಕು ಹರಡದಂತೆ ತಡೆಯಲು ಎಲ್ಲರೂ ಸಹಕಾರ ನೀಡಬೇಕು. ಜನರ ಸಹಕಾರ ಸಿಗದೇ ಹೋದರೆ ಸೊಂಕನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ವಿ. ವಿ ಜೋತ್ಸ್ನಾ ತಿಳಿಸಿದ್ದಾರೆ.

ಕಲಬುರಗಿ ನೆರೆಯ ಮಹಾರಾಷ್ಟ್ರ ರಾಜ್ಯಕ್ಕೆ ಗಡಿ ಹಂಚಿಕೊಂಡಿರುವುದರಿಂದ ಮಹಾರಾಷ್ಟ್ರದಿಂದ ಸಾಕಷ್ಟು ಜನರು ಜಿಲ್ಲೆಗೆ ಬರುತ್ತಾರೆ. ಹೀಗಾಗಿ ಜಿಲ್ಲೆಯಲ್ಲಿ ಸೋಂಕು ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜನರು ಜಿಲ್ಲಾಡಳಿತದ ಕ್ರಮಗಳಿಗೆ ಸ್ಪಂದಿಸಿದರೆ ಮಾತ್ರ ಜಿಲ್ಲೆಯಲ್ಲಿ ಸೋಂಕು ಕಡಿಮೆ ಮಾಡಬಹುದು ಎನ್ನುವುದು ನಿಶ್ಚಿತ.

ಇದ್ನನೂ ಓದಿ:

ಕೊರೊನಾದಿಂದ ಸತ್ತರೇ ಕೊಡ್ಬೇಕಂತೆ ಕಂತೆ ಕಂತೆ ಹಣ.. ಇಲ್ಲಿದೆ ಹೆಣದಿಂದ ಹಣ ಮಾಡೋ ಬೆಚ್ಚಿ ಬೀಳಿಸೋ ರಿಪೋರ್ಟ್

ಕೊರೊನಾ ಎಫೆಕ್ಟ್​: ತಡರಾತ್ರಿ ಕಾರ್ಯಾಚರಣೆಗಿಳಿದ ಸಚಿವ ಡಾ.ಕೆ.ಸುಧಾಕರ್​.. ನಿಯಮ ಪಾಲಿಸದ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ

(Kalburgi District administration go for mobile testing van to detect Covid cases )