ಸೀತಾಫಲ ಬೆಳೆ ಬೆಳೆದು ಭರ್ಜರಿ ಲಾಭ ಪಡೆಯುತ್ತಿರುವ ಇಂಜಿನಿಯರ್ ಪದವೀಧರ

| Updated By: Rakesh Nayak Manchi

Updated on: Oct 29, 2022 | 12:09 PM

ಇಂಜಿನಿಯರಿಂಗ್ ಓದು ಮುಗಿಸಿ ಐದಾರು ವರ್ಷ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ ಮಹಾಂತೇಶ್​ ಅವರಿಗೆ ಕೆಲಸ ಬೋರ್ ಅನ್ನಿಸಿತು. ಹೀಗಾಗಿ ಸೀತಾಫಲ ಕೃಷಿಯತ್ತ ಒಲವು ತೋರಿದ್ದಾರೆ. ಅದರಂತೆ ಕೃಷಿಯಲ್ಲಿ ಯಶಸ್ಸು ಕಂಡು ಭರ್ಜರಿ ಲಾಭವೂ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಸೀತಾಫಲ ಬೆಳೆ ಬೆಳೆದು ಭರ್ಜರಿ ಲಾಭ ಪಡೆಯುತ್ತಿರುವ ಇಂಜಿನಿಯರ್ ಪದವೀಧರ
ಸೀತಾಫಲ ಕೃಷಿಕ ಮಹಾಂತೇಶ್ ಹಿರೇಮಠ
Follow us on

ಯಾದಗಿರಿ: ಓದಿದ್ದು ಇಂಜಿನಿಯರ್ ಆಗಿದ್ದರೂ ಆಯ್ಕೆ ಮಾಡಿಕೊಂಡ ಕ್ಷೇತ್ರ ಕೃಷಿ. ಓದು ಮುಗಿಸಿ ಐದಾರು ವರ್ಷ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ ಇವರಿಗೆ ಕಂಪನಿ ಕೆಲಸ ಸಾಕು ಎನಿಸಿ ಕೃಷಿಯತ್ತ ಒಲವು ತೋರಿದರು. ಆಳಾಗಿ ದುಡಿ ಅರಸನಾಗಿ ಉಣ್ಣು ಎನ್ನುವ ಹಾಗೆ ಇಂಜಿನಿಯರ್ ಪದವೀಧರರೊಬ್ಬರು ತನ್ನ ಸ್ವಂತ ಜಮೀನಿನಲ್ಲಿ ಕೃಷಿ ಮಾಡಿ ಭರ್ಜರಿ ಲಾಭ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಮೊದಲು ಎನ್ನುವ ಹಾಗೆ ಸೀತಾಫಲ ಹಣ್ಣಿನ ಕೃಷಿಗೆ ಕೈ ಹಾಕಿದ ಇವರು ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಇದು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸೈದಾಪುರ ಗ್ರಾಮದ ರೈತ ಮಹಾಂತೇಶ್ ಹಿರೇಮಠ ನಡೆದುಬಂದ ಹಾದಿ.

ಸೈದಾಪುರ ಗ್ರಾಮದ ಮಹಾಂತೇಶ್ ಎಲ್ಲಾ ಯುವಕರಿಗೆ ಮಾದರಿಯಾಗಿದ್ದಾರೆ. ಈಗಿನ ಕಾಲದಲ್ಲಿ ಎಷ್ಟೇ ಓದಿದರು ಕೆಲಸ ಸಿಗುತ್ತಿಲ್ಲ ಎನ್ನುವ ಒಂದು ಯುವ ಸಮುದಾಯಕ್ಕೂ ಈತ ಮಾದರಿಯಾಗಿ ನಿಂತಿದ್ದಾರೆ. ಮಹಾಂತೇಶ್ ಓದಿದ್ದು ಇಂಜಿನೀಯರಿಂಗ್ ಆದರೂ ಸದ್ಯ ಕೃಷಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಇಂಜಿನೀಯರಿಂಗ್ ಮುಗಿಸಿದ್ದ ಮಹಾಂತೇಶ್ ಖಾಸಗಿ ಕಂಪನಿಯಲ್ಲಿ ನಾಲ್ಕೈದು ವರ್ಷ ಕೆಲಸ ಮಾಡಿದ್ದಾರೆ. ಆದರೆ ಕೆಲಸ ಯಾಕೋ ಬೇಡ ಅಂತ ಅನ್ನಿಸಿ ಕೃಷಿಯತ್ತ ಮುಖ ಮಾಡಿದರು.

ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಜಿಲ್ಲೆಯಲ್ಲಿ ಯಾರು ಬೆಳೆಯದಂತ ಸೀತಾಫಲ ಹಣ್ಣು ಬೆಳೆಯುತ್ತಿದ್ದಾರೆ. ಅದರಂತೆ ಸುಮಾರು 300 ಸೀತಾಫಲ ಹಣ್ಣಿನ ಗಿಡಗಳನ್ನ ಬೆಳೆದಿದ್ದಾರೆ. ಸಾಮಾನ್ಯ ಗುಡ್ಡಗಾಡು ಪ್ರದೇಶದಲ್ಲಿ ಸಿಕ್ಕಸಿಕ್ಕ ಕಡೆ ಬೆಳೆಯುವ ಸೀತಾಫಲ ಹಣ್ಣು ಸಿಗುತ್ತೆವೆ. ಆದರೆ ಈ ಸೀತಾಫಲ ಹಣ್ಣುಗಳು ಸ್ವಲ್ಪ ಬೇರೆನೆಯಾಗಿವೆ.

ಬೆಂಗಳೂರಿನ ಹೆಸರಗಟ್ಟದ ಭಾರತೀಯ ತೋಟಗಾರಿ ಸಂಶೋಧನ ಕೇಂದ್ರದಿಂದ ಮೂರು ವರ್ಷಗಳ ಹಿಂದೆ ಪ್ರತಿ ಗಿಡಕ್ಕೆ 110 ರೂ.ನಂತೆ ಸುಮಾರು 300 ಅರ್ಕಾಸನಾ ತಳಿ ಗಿಡಗಳನ್ನ ತಂದು ನೆಟ್ಟಿದ್ದಾರೆ. ಸದ್ಯ ಈಗ ಗಿಡಗಳು ಮೂರು ವರ್ಷದಾಗಿದ್ದರಿಂದ ಈ ವರ್ಷ ಫಲ ಕೊಡಲು ಆರಂಭಿಸಿವೆ. ಪ್ರತಿ ಗಿಡದಿಂದ ಸುಮಾರು 35 ಕೆಜಿಯಷ್ಟು ಹಣ್ಣು ಬರುವ ನಿರೀಕ್ಷೆಯಿದೆ. ಇಲ್ಲಿ ವರೆಗೆ ಕೇವಲ 35 ಸಾವಿರ ಹಣ ಖರ್ಚು ಮಾಡಿರುವ ಮಹಾಂತೇಶ್ ಇದರಿಂದ ಈ ಬಾರಿ 2 ಲಕ್ಷ ಲಾಭ ಬರುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಜಿಲ್ಲೆಯಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಬೆಳೆದ ಸೀತಾಫಲ ಹಣ್ಣುಗಳಿಗೆ ಹೆಚ್ಚು ಬೇಡಿಕೆ ಇದೆ. ಆದರೆ ಮಹಾಂತೇಶ್ ಅವರು ಜಮೀನಿನಲ್ಲಿ ಬೆಳೆದ ಅರ್ಕಾಸನ ತಳಿಯ ಹಣ್ಣುಗಳಿಗೆ ರಾಜ್ಯ ಮಹಾನಗರಗಳಲ್ಲಿ ಬಾರಿ ಬೇಡಿಕೆ ಇದೆ. ಇದರ ಜೊತೆಗೆ ವಿದೇಶದಲ್ಲೂ ಇದೆ ಹಣ್ಣಿಗೆ ಹೆಚ್ಚು ಬೇಡಿಕೆ ಕೂಡ ಇದೆಯಂತೆ. ಇನ್ನು ಸುಮಾರು 300 ಗಿಡ ಹಚ್ಚಿರುವ ಮಹಾಂತೇಶ್ ಈ ವರ್ಷನೇ ಫಲ ಕೊಡುತ್ತಿರುವ ಹಿನ್ನೆಲೆ ಕೇವಲ 2 ಲಕ್ಷ ಮಾತ್ರ ಲಾಭ ಸಿಗುತ್ತೆ. ಆದರೆ ಮುಂದಿನ ವರ್ಷ ಗಿಡಗಳು ನಾಲ್ಕು ವರ್ಷದಾಗುತ್ತದೆ. ಹೀಗಾಗಿ ಮುಂದಿನ ವರ್ಷ ಸುಮಾರು 8 ಲಕ್ಷ ಲಾಭ ಬರುವ ನಿರೀಕ್ಷೆ ಇಡಲಾಗಿದೆ.

ಇನ್ನು ಅರ್ಕಾಸನ ಗಿಡಗಳ ಜೊತೆಗೆ ಅಲ್ಲಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಸಿಗುವ ಸೀತಾಫಲ ಹಣ್ಣಿನ ಗಿಡಗಳು ಸಹ ಬೆಳೆಸಿದ್ದಾರೆ. ಈ ಅರ್ಕಾಸನ ಗಿಡಗಳು ಫಲ ನೀಡಬೇಕು ಎಂದರೆ ಈ ಗುಡ್ಡಗಾಡು ಪ್ರದೇಶದಲ್ಲಿ ಸಿಗುವ ಸೀತಾಫಲ ಹಣ್ಣಿನ ಅವಶ್ಯಕತೆ ತುಂಬಾಯಿದೆ. ಗುಡ್ಡಾಗಾಡು ಪ್ರದೇಶದ ಗಿಡಗಳ ಹೂವುಗಳಿಂದ ಈ ಗಿಡಗಳ ಹೂವುಗಳಿಗೆ ಪರಾಗಸ್ಪರ್ಶ ಮಾಡಿದರೆ ಮಾತ್ರ ಹಣ್ಣು ಕೊಡುತ್ತದೆ.

ಇನ್ನು ಜಮೀನಿನಲ್ಲಿ ಬೋರವೆಲ್ ಹೊಂದಿರುವ ಮಹಾಂತೇಶ್ ಕೇವಲ ನಾಲ್ಕು ತಿಂಗಳು ಮಾತ್ರ ಗಿಡಗಳಿಗೆ ನೀರು ಬಿಟ್ಟರೆ ಸಾಕು ಹಣ್ಣು ನೀಡಲು ಆರಂಭಸುತ್ತವೆ. ಹಣ್ಣು ಕಿಳಿದ ಬಳಿಕ ಗಿಡಗಳನ್ನ ಒಣಗಲು ಬಿಡುತ್ತಾರೆ. ಬಳಿಕ ಹಣ್ಣು ಬೇಕಾದಾಗ ನಾಲ್ಕು ತಿಂಗಳು ನೀರು ಬಿಟ್ಟರೆ ಹಣ್ಣು ಸಿಗುತ್ತವೆ. ಸದ್ಯ ಮಹಾಂತೇಶ್ ಬೆಳೆದ ಸೀತಾಫಲ ಹಣ್ಣಿಗೆ ಮಾರುಕಟ್ಟೆಯಲ್ಲಿ ಕೆಜಿ 180 ರೂ. ಬೆಲೆಯಿದೆ. ಹೀಗಾಗಿ ಈ ಬಾರಿ ಹೆಚ್ಚು ಲಾಭ ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನು ಈ ಭಾಗದಲ್ಲಿ ಹತ್ತಿ ಹಾಗೂ ತೊಗರಿ ಬೆಳೆದು ಮಳೆ ಬಂದರೆ ಮಳೆ ಬಾರದೆ ಇದ್ದರೂ ಹಾಳಾಗುವಂತ ಬೆಳೆಯನ್ನ ಬೆಳೆದು ರೈತರು ಸಾಕಷ್ಟು ಸಂಕಷ್ಟ ಸಿಲುಕುತ್ತಿದ್ದಾರೆ. ಹೀಗಾಗಿ ಮಹಾಂತೇಶ್ ಬೆಳೆದ ಸೀತಾಫಲ ನೋಡಿ ನಾವು ಯಾಕೆ ಬೆಳೆಯಬಾರದು ಅಂತ ರೈತರು ಮನಸ್ಸು ಮಾಡುತ್ತಿದ್ದಾರೆ.

ಒಟ್ಟಾರೆಯಾಗಿ ಓದಿದ್ದು ಇಂಜಿನೀಯರಿಂಗ್ ಆದರೂ ಮಹಾಂತೇಶ್ ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ. ಆಧುನಿಕ ಕೃಷಿ ಪದ್ದತಿಯನ್ನ ಬಳಸಿಕೊಂಡು ತೋಟಗಾರಿ ಬೆಳೆಯನ್ನ ಬೆಳೆಯುತ್ತಿದ್ದಾರೆ. ಮಹಾಂತೇಶ್ ಅವರ ಈ ಸಾಧನೆ ಕೆಲಸ ಇಲ್ಲ ಅಂತ ಓಡಾಡುವ ಯವಕರಿಗೆ ಸ್ಪೂರ್ತಿಯಂತಿದೆ.

ವರದಿ: ಅಮೀನ್ ಹೊಸುರ್, ಟಿವಿ9 ಯಾದಗಿರಿ

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ