ಸಿದ್ದರಾಮಯ್ಯ ಬ್ಲ್ಯಾಕ್​ಮೇಲ್​ಗೆಂದೇ ಸ್ಟಿಂಗ್ ಆಪರೇಷನ್, ಕಾಂಗ್ರೆಸ್​ನವರೂ ಶಾಮೀಲು: ಯತೀಂದ್ರ ಸ್ಫೋಟಕ ಆರೋಪ

ರಾಜ್ಯ ರಾಜಕಾರಣದಲ್ಲಿ ತಲ್ಲಣ ಮೂಡಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣದ ಬಗ್ಗೆ ಸಚಿವ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ತೇಜೋವಧೆ, ಬ್ಲ್ಯಾಕ್​ಮೇಲ್​ ಮಾಡುವ ಪ್ರಯತ್ನವಿದು ಎಂದಿರುವ ಅವರು, ಪುತ್ತೂರು ಟಿಕೆಟ್ ಆಕಾಂಕ್ಷಿಯೊಬ್ಬರು ಇದರಲ್ಲಿ ಶಾಮೀಲಾಗಿರುವ ಸಾಧ್ಯತೆ ವ್ಯಕ್ತಪಡಿಸಿದ್ದಾರೆ. ತನಿಖೆಯಿಂದ ಸತ್ಯ ಹೊರಬೀಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಬ್ಲ್ಯಾಕ್​ಮೇಲ್​ಗೆಂದೇ ಸ್ಟಿಂಗ್ ಆಪರೇಷನ್, ಕಾಂಗ್ರೆಸ್​ನವರೂ ಶಾಮೀಲು: ಯತೀಂದ್ರ ಸ್ಫೋಟಕ ಆರೋಪ
ಯತೀಂದ್ರ ಸಿದ್ದರಾಮಯ್ಯ
Edited By:

Updated on: Oct 23, 2026 | 12:53 PM

ಮೈಸೂರು, ಅಕ್ಟೋಬರ್ 23: ಕರ್ನಾಟಕ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣದ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಮಹತ್ವದ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣವು ಸಿದ್ದರಾಮಯ್ಯ ಅವರ ತೇಜೋವಧೆ ಮಾಡಲು ಮತ್ತು ಬ್ಲಾಕ್‌ಮೇಲ್ ಮಾಡುವ ಉದ್ದೇಶದಿಂದ ನಡೆಸಿದ ಸಂಚು. ಇದರಲ್ಲಿ ನಮ್ಮ ಪಕ್ಷದವರೂ (ಕಾಂಗ್ರೆಸ್) ಶಾಮೀಲಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಪೊಲೀಸರು ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ಇದೆ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ. ಒಂದು ವೇಳೆ ತನಿಖೆ ನಿರೀಕ್ಷಿತ ಮಟ್ಟದಲ್ಲಿ ನಡೆಯದಿದ್ದರೆ, ಮುಂದಿನ ಕ್ರಮಗಳ ಬಗ್ಗೆ ಯೋಚಿಸುವುದಾಗಿ ಅವರು ಹೇಳಿದರು. ಈ ಸ್ಟಿಂಗ್ ಆಪರೇಷನ್ ಹಿಂದೆ ಯಾರು ಇದ್ದಾರೆ, ನಮ್ಮ ಪಕ್ಷದವರೇ ಮಾಡಿದ್ದಾರೆಯೇ ಅಥವಾ ಬೇರೆಯವರ ಕೈವಾಡವಿದೆಯೇ ಎಂಬುದು ತನಿಖೆಯಿಂದ ಹೊರಬರಬೇಕು ಎಂದು ಅವರು ಹೇಳಿದರು.

ನಮ್ಮ ಪಕ್ಷದವರೇ ಶಾಮೀಲು: ಯತೀಂದ್ರ ಆರೋಪ

ಈ ಸ್ಟಿಂಗ್ ವಿಡಿಯೋದಲ್ಲಿ ತಮ್ಮ ಪಕ್ಷದವರೇ ಭಾಗಿಯಾಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಒಬ್ಬ ಮಾಧ್ಯಮ ಮುಖ್ಯಸ್ಥರೂ ಸಹ ಇದರಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದನ್ನು ವಿಡಿಯೋ ಸ್ಪಷ್ಟಪಡಿಸುತ್ತದೆ. ಆದರೆ, ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಇಡೀ ಪಕ್ಷವನ್ನು ದೂಷಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಪುತ್ತೂರು ಟಿಕೆಟ್ ಪಡೆಯುವುದಕ್ಕಾಗಿ ಸ್ಟಿಂಗ್: ಯತೀಂದ್ರ

ಸ್ಟಿಂಗ್ ಆಪರೇಷನ್‌ನ ಹಿಂದಿನ ಉದ್ದೇಶದ ಬಗ್ಗೆ ಮಾತನಾಡಿದ ಯತೀಂದ್ರ, ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆಯೊಬ್ಬರು ಪುತ್ತೂರು ಟಿಕೆಟ್‌ಗಾಗಿ ಆಕಾಂಕ್ಷಿಯಾಗಿದ್ದರು ಎಂಬ ಮಾಹಿತಿ ಇದೆ. ಹಾಗಾಗಿ, ರಾಜಕೀಯ ಲಾಭಕ್ಕಾಗಿ ಮತ್ತು ಸಿದ್ದರಾಮಯ್ಯ ಹೆಸರನ್ನು ಕೆಡಿಸಲು ಈ ರೀತಿಯ ಕೃತ್ಯಕ್ಕೆ ಮುಂದಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಸಿದ್ದರಾಮಯ್ಯ ಘನತೆಯನ್ನು ಹಾಳುಮಾಡಲು, ಅವರ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆ ಇಡಲು ಮತ್ತು ಬ್ಲಾಕ್‌ಮೇಲ್ ಮಾಡಲು ಈ ಯತ್ನ ನಡೆದಿದೆ ಎಂದು ಯತೀಂದ್ರ ಆರೋಪಿಸಿದರು.

ಯತೀಂದ್ರ ಮಾತನಾಡಿರುವ ವಿಡಿಯೋ ಇಲ್ಲಿ ನೋಡಿ
Yathindra Siddaramaih: ಪುತ್ತೂರು ಟಿಕೆಟ್​ಗಾಗಿ ಸ್ಟಿಂಗ್ ವಿಡಿಯೋ ಮಾಡವ್ರೆ.. ಯತೀಂದ್ರ ಹೇಳಿದ್ದೇನು? | #TV9D

ಈ ಸುಳ್ಳು ಆರೋಪಗಳಿಂದ ಸಿದ್ದರಾಮಯ್ಯ ಅವರು ತೀವ್ರ ಬೇಸರಗೊಂಡಿದ್ದಾರೆ ಎಂದು ಯತೀಂದ್ರ ತಿಳಿಸಿದರು. 40 ವರ್ಷಗಳ ತಮ್ಮ ರಾಜಕೀಯ ಜೀವನದಲ್ಲಿ ಸಿದ್ದರಾಮಯ್ಯ ಎಂದಿಗೂ ಇಂತಹ ಕಳಂಕಕ್ಕೆ ಗುರಿಯಾಗಿಲ್ಲ. ತಮ್ಮ ರಾಜಕೀಯ ಜೀವನದ ಕೊನೆಯ ಹಂತದಲ್ಲಿ ಇಂತಹ ಗಂಭೀರ ಆರೋಪಗಳು ಕೇಳಿಬಂದಾಗ ಯಾರಾದರೂ ಬೇಸರಗೊಳ್ಳುವುದು ಸಹಜ. ಆದರೆ, ಸತ್ಯ ಅವರ ಕಡೆಯಿದೆ, ನಮ್ಮ ಕಡೆಯಿದೆ. ತನಿಖೆಯ ಮೂಲಕ ಸತ್ಯ ಹೊರಬರುತ್ತದೆ ಮತ್ತು ಅಂತಿಮವಾಗಿ ಸತ್ಯಕ್ಕೆ ಜಯ ಸಿಗಲಿದೆ ಎಂದು ಯತೀಂದ್ರ ವಿಶ್ವಾಸ ವ್ಯಕ್ತಪಡಿಸಿದರು. ‘ತಂದೆ ಯಾವುದೇ ತಪ್ಪು ಮಾಡಿಲ್ಲ ಎಂದು ತಮ್ಮ ತಾಯಿ ಕೂಡ ದೃಢವಾಗಿ ನಂಬಿದ್ದಾರೆ’ ಎಂದು ಯತೀಂದ್ರ ತಿಳಿಸಿದರು. ಯಾರು ಏನೇ ಆರೋಪ ಮಾಡಿದರೂ, ಸತ್ಯ ಹೊರಬೀಳುವವರೆಗೂ ಎದುರಿಸಲು ಸಿದ್ಧ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Loading...
Unable to load recommendations.
Follow Us