
ಬೆಂಗಳೂರು, ಅಕ್ಟೋಬರ್ 23: ರಾಜ್ಯದಲ್ಲಿ ನವೆಂಬರ್ ಕ್ರಾಂತಿಯ ವಿಚಾರ ಭಾರಿ ಚರ್ಚೆಯಲ್ಲಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ನೀಡಿರುವ ಉತ್ತರಾಧಿಕಾರಿ ಹೇಳಿಕೆ ರಾಜ್ಯ ರಾಜಕೀಯದಲ್ಲಿ, ಅದರಲ್ಲೂ ಆಡೆಳಿತಾರೂಢ ಕಾಂಗ್ರೆಸ್ (Congress) ಪಾಳಯದಲ್ಲಿ ಸಂಚಲನ ಮೂಡಿಸಡಿದೆ. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿಸಿಎಂ ಡಿಕೆಶಿ ಒಂದೆಡೆ ಟೆಂಪಲ್ ರನ್ ನಡೆಸುತ್ತಿದ್ದರೆ, ಇತ್ತ ಸಿದ್ದರಾಮಯ್ಯ ಬಣ ಬೇರೆಯದ್ದೇ ತಂತ್ರ ಹೆಣೆಯುತ್ತಿದೆಯಾ ಎಂಬ ಅನುಮಾನ ಮೂಡಿಸಿದೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ‘ಕೈ’ ಪಾಳಯದಲ್ಲೇ ಆರಂಭಗೊಂಡಿವೆ.
ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿರೋ ಸಚಿವ ಸತೀಶ್ ಜಾರಕಿಹೊಳಿ, ನಾನು ಸಿದ್ದರಾಮಯ್ಯನವರ ಉತ್ತರಾಧಿಕಾರಿ ಅಂತಾ ಹೇಳಲ್ಲ. ಅದನ್ನು ಜನರು ಹಾಗೂ ಪಕ್ಷ ಹೇಳಬೇಕು ಎಂದಿದ್ದಾರೆ. ಸಿದ್ದರಾಮಯ್ಯ ಪುತ್ರ ಯತೀಂದ್ರ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಕಾಂಗ್ರೆಸ್ನಲ್ಲಿ ಅರಸು ನಂತರ ಬಂಗಾರಪ್ಪ ಬಳಿಕ ಸಿದ್ದರಾಮಯ್ಯ ಇದ್ದಾರೆ. ಅವರ ಬಳಿಕ ಯಾರೆಂದು ಮುಂದೆ ಉತ್ತರ ಸಿಗುತ್ತದೆ. ಆದರೆ 2028ಕ್ಕೆ ಕ್ಲೈಮ್ ಮಾಡೋದ್ರಲ್ಲಿ ನಾನೂ ಇದೀನಿ ಎಂದು ಸತೀಶ್ ಹೇಳಿರೋದು ಭಾರಿ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ನಾಯಕತ್ವ ವಿಚಾರದಲ್ಲಿ ಯತೀಂದ್ರ ಹೇಳಿದ್ದರಲ್ಲಿ ತಪ್ಪೇನಿದೆ: ಪರಮೇಶ್ವರ್ ಪ್ರಶ್ನೆ, ಅಚ್ಚರಿಯ ಹೇಳಿಕೆ
ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯನ್ನ ಗೃಹ ಸಚಿವ ಪರಮೇಶ್ವರ್ ಸೇರಿ ಹಲವು ಕಾಂಗ್ರೆಸ್ ನಾಯಕರು ಬೆಂಬಲಿಸಿದ್ದಾರೆ. ಸಿದ್ದರಾಮಯ್ಯರು ಅಹಿಂದ ಪ್ರಾರಂಭಿಸಿದಾಗ ಸತೀಶ್ ಜಾರಕಿಹೊಳಿಯವರು ಪ್ರಮುಖ ಪಾತ್ರ ವಹಿಸಿದ್ದರು. ಆ ಹಿನ್ನೆಲೆಯಲ್ಲಿ ಅವರ ಹೆಸರು ಹೇಳಿದರೆ ತಪ್ಪೇನಿದೆ? ಎಂದು ಪರಮೇಶ್ವರ್ ಪ್ರಶ್ನಿಸಿದ್ದಾರೆ. ಯತೀಂದ್ರ ಹೇಳಿರುವ ನಾಯಕತ್ವ ಸತೀಶ್ ಜಾರಕಿಹೊಳಿ ಅವರಲ್ಲಿದ್ದು, ಒಂದಲ್ಲ ಒಂದು ದಿನ ಅವರು ಸಿಎಂ ಆಗ್ತಾರೆ. ಎಲ್ಲರನ್ನೂ ಜೊತೆಗೆ ತೆಗೆದುಕೊಂಡು, ಸಿಎಂ ಸಿದ್ದರಾಮಯ್ಯನವರ ದಾರಿಯಲ್ಲೇ ಸತೀಶ್ ಸಾಗುತ್ತಿದ್ದಾರೆ ಎಂದು ಅಬಕಾರಿ ಸಚಿವ R.B. ತಿಮ್ಮಾಪುರ ಹೇಳಿದ್ದಾರೆ.
ಇತ್ತ ಡಿಸಿಎಂ ಡಿಕೆಶಿ ಬಣದ ಶಾಸಕರು ಮಾತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಕಿಡಿ ಕಾರಿದ್ದಾರೆ.
ಯತೀಂದ್ರ ಹೇಳಿಕೆ ಒಂದು ರೀತಿ ಎಳಸು ಸ್ಟೇಟ್ಮೆಂಟ್ ಅಂತಾ ರಾಮನಗರದಲ್ಲಿ ಶಾಸಕ ಇಕ್ಬಾಲ್ ಹುಸೇನ್ ತಿರುಗೇಟು ನೀಡಿದ್ದು, ಈ ರೀತಿಯ ಹೇಳಿಕೆಗಳನ್ನು ಕೊಡಬಾರದು ಎಂದಿದ್ದಾರೆ. ದೊಡ್ಡ ಮನೆತನ, ದೊಡ್ಡ ಸ್ಥಾನದಲ್ಲಿ ಇರುವ ನೀವು ತಾವಾಗಿ ಕೆಳಗೆ ಬೀಳೋದು ನಮಗೆ ಇಷ್ಟವಿಲ್ಲ. ನೀವು ಗೌರವಯುತವಾಗಿ ಹೇಳಿಕೆಗಳನ್ನ ಕೊಡಬೇಕು. ನಿಮ್ಮ ಮಾತಿನಲ್ಲಿ ಶಕ್ತಿ ಇಲ್ಲ ಎಂದು ಆರೋಪಿಸಿದ್ದಾರೆ. ಇನ್ನು ಈ ವಿಚಾರವಾಗಿ ಕೆಪಿಸಿಸಿಯಿಂದ ಯತೀಂದ್ರಗೆ ನೊಟೀಸ್ ನೀಡದ ಬಗ್ಗೆಯೂ ಆಕ್ರೋಶ ಹೊರ ಹಾಕಿರುವ ಇಕ್ಬಾಲ್, ನಾವು ಮಾಡಿದ್ರೆ ಬಲಾತ್ಕಾರ, ಬೇರೆಯವರು ಮಾಡಿದ್ರೆ ಚಮತ್ಕಾರ ಅನ್ನೋ ಪರಿಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:09 pm, Thu, 23 October 25