ಬೆಂಗಳೂರು, ಜನವರಿ 15: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣದ ವಿಚಾರಣೆ ಇಂದು ಕರ್ನಾಟಕ ಹೈಕೋರ್ಟ್ನಲ್ಲಿ ನಡೆಯಿತು. ಹಿರಿಯ ವಕೀಲ ರವಿವರ್ಮ ಕುಮಾರ್ ನೇತೃತ್ವದ ಪ್ರಾಸಿಕ್ಯೂಶನ್ನಿಂದ ವಾದ ಇಂದು ಮುಗಿದಿದೆ. ನ್ಯಾ| ನಾಗಪ್ರಸನ್ನ ಅವರಿರುವ ಏಕಸದಸ್ಯ ನ್ಯಾಯಪೀಠವು ಈ ಪ್ರಕರಣದಲ್ಲಿ ಆರೋಪಿ ಬಿಎಸ್ವೈ ಪರ ವಕೀಲರ ವಾದಕ್ಕೆ ಜನವರಿ 17 ಅನ್ನು ನಿಗದಿ ಮಾಡಿದೆ. ವಿಚಾರಣೆಯಲ್ಲಿ ಯಡಿಯೂರಪ್ಪ ಖುದ್ದಾಗಿ ಹಾಜರಾಗುವುದರಿಂದ ನೀಡಲಾಗಿದ್ದ ವಿನಾಯಿತಿಯನ್ನೂ ಹೈಕೋರ್ಟ್ ವಿಸ್ತರಣೆ ಮಾಡಿದೆ. ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು ಯಡಿಯೂರಪ್ಪ ಪರ ವಾದ ಮಾಡುತ್ತಿದ್ದಾರೆ.
ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ (ಪೋಕ್ಸೋ) ಕಾಯ್ದೆ ಅಡಿಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದು ಮಾಡಬೇಕೆಂದು ಯಡಿಯೂರಪ್ಪ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯುತ್ತಿದೆ. ಅಪ್ರಾಪ್ತೆಯ ಮೇಲೆ ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ಎಸಗಿದರೆನ್ನುವ ಗುರುತರ ಆರೋಪ ಈ ಪ್ರಕರಣದಲ್ಲಿ ಕೇಳಿಬಂದಿದೆ.
ಇದನ್ನೂ ಓದಿ: ಗುತ್ತಿಗೆದಾರರು ಪತ್ನಿಯರ ಒಡವೆ ಒತ್ತೆಯಿಟ್ಟು ಬೀದಿಗೆ ಬಂದಿದ್ದಾರೆ, ಖರ್ಗೆಯಿಂದ ಉಡಾಫೆ ಮಾತು ಬೇಡ: ಕುಮಾರಸ್ವಾಮಿ
ಸಂಬಂಧಿಯೊಬ್ಬರಿಂದ 9 ವರ್ಷದ ಹಿಂದೆ ಆದ ಅತ್ಯಾಚಾರ ಘಟನೆ ವಿಚಾರದ ಬಗ್ಗೆ ಸಹಾಯ ಕೋರಿ 2024ರ ಫೆಬ್ರುವರಿ 2ರಂದು 17 ವರ್ಷದ ಬಾಲಕಿ ಹಾಗೂ ಆಕೆಯ ತಾಯಿಯು ಯಡಿಯೂರಪ್ಪ ಅವರ ಡಾಲರ್ಸ್ ಕಾಲೊನಿ ನಿವಾಸಕ್ಕೆ ಹೋಗಿದ್ದರು. ಆಗ ಬಾಲಕಿ ಮೇಲೆ ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಇದೆ.
ಸಿಐಡಿ ಸಲ್ಲಿಸಿದ ಆರೋಪಪಟ್ಟಿಯಲ್ಲಿರುವ ಮಾಹಿತಿ ಪ್ರಕಾರ, ಅಂದು ಯಡಿಯೂರಪ್ಪ ಅವರು ತಮ್ಮ ಕೊಠಡಿಗೆ ಬಾಲಕಿಯೊಬ್ಬಳನ್ನೇ ಕರೆದು ಬಾಗಿಲು ಹಾಕಿಕೊಂಡಿದ್ದಾರೆ. ಬಳಿಕ ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಬಾಲಕಿ ಪ್ರತಿರೋಧಿಸಿದಾಗ ಯಡಿಯೂರಪ್ಪ ನಗದು ಹಣ ನೀಡಿದ್ದಾರೆ. ಇವತ್ತು ಹೈಕೋರ್ಟ್ನಲ್ಲಿ ನಡೆದ ವಿಚಾರಣೆಯಲ್ಲಿ ಪ್ರಾಸಿಕ್ಯೂಶನ್ನಿಂದ ನ್ಯಾಯಾಧೀಶರಿಗೆ ಈ ಘಟನೆಯನ್ನು ವಿವರಿಸಲಾಯಿತು.
ಯಡಿಯೂರಪ್ಪನವರ ಕೊಠಡಿಯಿಂದ ಹೊರಬಂದ ಬಳಿಕ ಬಾಲಕಿ, ಒಳಗೆ ನಡೆದ ಘಟನೆಯನ್ನು ತನ್ನ ತಾಯಿಗೆ ವಿವರಿಸಿದ್ದಾಳೆ. ವಕೀಲ ಹಿರೇಮಠ್ರೊಂದಿಗೆ ಮಾತನಾಡಿ ಘಟನೆಯ ಮಾಹಿತಿ ನೀಡಿದ್ದಾರೆ. ನಂತರ ಬಿಎಸ್ವೈ ನೀಡಿದ್ದ ನಗದು ಹಣದೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಬಳಿಕ ಮೊಬೈಲ್ ಕ್ಯಾಮರಾ ಆನ್ ಮಾಡಿ ಮತ್ತೆ ಬಿಎಸ್ವೈ ಮನೆಗೆ ಹೋಗಿದ್ದಾರೆ. ಮಗಳೊಂದಿಗೆ ಹಾಗೇಕೆ ವರ್ತಿಸಿದಿರಿ ಎಂದು ಯಡಿಯೂರಪ್ಪ ಅವರನ್ನು ಆ ತಾಯಿ ಪ್ರಶ್ನಿಸಿದ್ದಾರೆ. ‘ಇಲ್ಲ ಮರಿ, ಚಕ್ ಮಾಡಿದೆ’ ಎಂದು ಬಿಎಸ್ವೈ ಉತ್ತರಿಸಿದ್ದಾರೆ ಎಂದು ಘಟನೆಯನ್ನು ಕೋರ್ಟ್ ವಿಚಾರಣೆಯಲ್ಲಿ ವಿವರಿಸಿದ ಪ್ರಾಸಿಕ್ಯೂಶನ್, ಅಂದಿನ ಘಟನೆಯನ್ನು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ ಎಂದು ವಾದಿಸಿದೆ.
ಇದನ್ನೂ ಓದಿ: ಮುಡಾ ಹಗರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಮುಂದೂಡಿಕೆ
ಬಾಲಕಿಯ ಕುಟುಂಬಕ್ಕೆ ಯಡಿಯೂರಪ್ಪ ಕಡೆಯಿಂದ ಎರಡು ಲಕ್ಷ ರೂ ಸಂದಾಯವಾಗಿದೆ. ಈ ಅಂಶವನ್ನೂ ಪ್ರಾಸಿಕ್ಯೂಶನ್ ಎತ್ತಿತೋರಿಸಿದೆ. ಆದರೆ, ಆಕೆಗೆ ಸಮಸ್ಯೆ ಇದ್ದಿದ್ದರಿಂದ ಎರಡು ಲಕ್ಷ ರೂ ಹಣವನ್ನು ಪಿಎ ರುದ್ರೇಶ್ ಮೂಲಕ ಸಾಲವಾಗಿ ನೀಡಲಾಗಿದೆ ಎಂದು ಯಡಿಯೂರಪ್ಪ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಚೆಕ್ ಮಾಡಿದೆ ಎನ್ನುವುದನ್ನೂ ಒಪ್ಪಿಕೊಂಡಿರುವ ಯಡಿಯೂರಪ್ಪ, ತಾನು ಕೇಸ್ ಅನ್ನು ಚೆಕ್ ಮಾಡಿದೆ ಎಂದು ಹೇಳಿದ್ದಾಗಿ ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣದಲ್ಲಿ ಮಾರ್ಚ್ 15ರಂದು ಸಿಐಡಿಯಿಂದ ತನಿಖೆ ನಡೆಯುತ್ತಿದೆ. ಮೇ 27ರಂದು ಸಂತ್ರಸ್ತ ಬಾಲಕಿಯ ತಾಯಿ ಮೃತಪಟ್ಟಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ