ದೇವನಹಳ್ಳಿ: ಹದಿಹರೆಯದ ಯುವಕನೊಬ್ಬ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ನೀರಿಗೆ ಬಿದ್ದ ದಾರುಣ ಘಟನೆ ಹೊಸಕೋಟೆ ತಾಲೂಕಿನ ಗ್ರಾಮದಲ್ಲಿ ನಡೆದಿದೆ. 19 ವರ್ಷದ ಯುವಕ ನರಸಿಂಹ ಎಂಬಾತ ನೀರಿಗೆ ಬಿದ್ದಿದ್ದು, ಇನ್ನೂ ಪತ್ತೆಯಾಗಿಲ್ಲ. ಯುವಕನ ದೇಹಕ್ಕಾಗಿ ಸತತ 48 ಗಂಟೆಗಳಿಂದ ಹುಡುಕಾಟ ನಡೆಯುತ್ತಿದೆ. ಹೆಚ್ಎಎಲ್ ಮೂಲದ ನರಸಿಂಹ ಎಂಬಾತ ನೀರಿಗೆ ಬಿದ್ದ ಯುವಕನಾಗಿದ್ದು, ಹೊಸಕೋಟೆ ತಾಲೂಕಿನ ಗಂಗಾಪುರ ಕಲ್ಯಾಣಿಯಲ್ಲಿ ಶೋಧ ಕಾರ್ಯ ಮುಂದುವರಿದಿದೆ.
ನಿನ್ನೆ ಬರ್ತ್ ಡೇ ಪಾರ್ಟಿ ಮಾಡಲು 8 ಜನ ಯುವಕರು ಈ ಭಾಗಕ್ಕೆ ಬಂದಿದ್ದರು. ಈ ವೇಳೆ ಕಲ್ಯಾಣಿಯಲ್ಲಿ ನೀರು ಕಂಡು ಸೆಲ್ಫಿ ತೆಗೆದುಕೊಳ್ಳಲು ಇಳಿದಿದ್ದರು. ಆ ವೇಳೆ, ಹೀಗೆ ದುರ್ಘಟನೆ ಸಂಭವಿಸಿದೆ. ನಿನ್ನೆಯಿಂದ ಸತತವಾಗಿ ಹುಡುಕಾಟ ನಡೆಯಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿಗೆ ಯುವಕನ ದೇಹ ಇನ್ನೂ ಸಿಕ್ಕಿಲ್ಲ. ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸೆಲ್ಫಿ ಕ್ಲಿಕ್ಕಿಸಲು ಹೋಗಿ ಸಾವು ಸಂಭವಿಸಿದ ಘಟನೆಗಳು
ಇತ್ತೀಚಿನ ವರ್ಷಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ಬಿಟ್ಟವರ ಸಂಖ್ಯೆ ದೊಡ್ಡದಿದೆ. ಜಲಪಾತಗಳ ತುದಿಯಲ್ಲಿ, ಎತ್ತರದ ಪರ್ವತದ ಅಂಚಿನಲ್ಲಿ, ನದಿ ದಂಡೆಯಲ್ಲಿ, ಕಾಡು ಪ್ರಾಣಿಗಳ ಸನಿಹದಲ್ಲಿ ಹೀಗೆ ತೀರಾ ಅಪಾಯಕಾರಿ ಜಾಗದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳಬೇಕೆಂಬ ಆಸೆಯೇ ಜೀವಕ್ಕೆ ಮಾರಕವಾಗಿದೆ. ಕೆಲವರ ಸೆಲ್ಫಿ ಹುಚ್ಚು ಹೇಗೆ ಅವರ ಪ್ರಾಣಕ್ಕೆ ಕಂಟಕವಾಗುತ್ತೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳುವ ಧೈರ್ಯ ಪ್ರದರ್ಶಿಸಲು ಹೋದ ಯುವತಿಯೊಬ್ಬಳು ಸೀದಾ ಸಾವಿನ ಮನೆ ಸೇರಿದ್ದಾಳೆ.
ದುರಂತ ಅಂತ್ಯ ಕಂಡ ಹಾಂಗ್ಕಾಂಗ್ನ ಇನ್ಸ್ಸ್ಟಾ ಸೆಲೆಬ್ರಿಟಿಯ ಹೆಸರು ಸೋಫಿಯಾ ಚೆವುಂಗ್. ಬರೀ 32 ವರ್ಷದ ಇನ್ಸ್ಸ್ಟಾ ಸೆಲೆಬ್ರಿಟಿಯ ಜೀವನ ಯಾತ್ರೆ ಸೆಲ್ಫಿಯಿಂದ ಅಂತ್ಯವಾಗಿದೆ. ಹಪಾಲ್ ಲೈ ಜಲಪಾತದ ತುದಿಯಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಲು ಪ್ರಯತ್ನಿಸಿದ್ದ ಸೋಫಿಯಾ, ಜಲಪಾತಕ್ಕೆ ಬಿದ್ದು ಸಾವನ್ನಪ್ಪಿದ್ದಾಳೆ. ಕಾಲು ಜಾರಿ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ ಈ ಸುಂದರಿಯ ದುರಂತ ಅಂತ್ಯ ಇನ್ನಾದರೂ ಸೆಲ್ಫಿ ಪ್ರಿಯರಿಗೆ ಪಾಠವಾಗಬೇಕಿದೆ.
ಸಮುದ್ರದ ತಡೆಗೋಡೆ ಮೇಲೆ ಕುಳಿತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಯುವತಿಯೊಬ್ಬಳು ಆಯ ತಪ್ಪಿ ಸಮುದ್ರಕ್ಕೇ ಬಿದ್ದ ಘಟನೆಯೂ ಇತ್ತೀಚೆಗೆ ನಡೆದಿದೆ. ಅದೃಷ್ಟವಶಾತ್, ಅಲ್ಲೇ ಇದ್ದ ವ್ಯಕ್ತಿಯೊಬ್ಬ ಸಮಯಪ್ರಜ್ಞೆ ಮೆರೆದು ಸಮುದ್ರಕ್ಕೆ ಜಿಗಿದು ಆಕೆಯನ್ನು ರಕ್ಷಿಸಿದ ಪರಿಣಾಮ ದೊಡ್ಡ ಕಂಟಕದಿಂದ ಪಾರಾಗಿದ್ದಾಳೆ. ಸೆಲ್ಫಿ ಕ್ರೇಜ್ನಿಂದ ಅಪಾಯ ಎದುರಾಗುತ್ತಿರುವ ಘಟನೆಗಳು ಪದೇ ಪದೇ ಮರುಕಳಿಸುತ್ತಿದ್ದರೂ ಜನ ಇನ್ನೂ ಎಚ್ಚೆತ್ತುಕೊಳ್ಳದಿರುವುದು ದುರಂತವೇ ಸರಿ.
ಬೆಂಗಳೂರಿನಿಂದ ಹೊರಟ ಐರಾವತ ಬಸ್ ಅರಣ್ಯಕ್ಕೆ ನುಗ್ಗಿ, ಮರಕ್ಕೆ ಡಿಕ್ಕಿ: ಚಾಲಕ ಸ್ಥಳದಲ್ಲೇ ದುರ್ಮರಣ
Published On - 6:22 pm, Mon, 19 July 21