ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ತನ್ನ ಕಬಂದ ಬಾಹುಗಳನ್ನು ಚಾಚಿಕೊಂಡು ಮುನ್ನುಗ್ಗುತ್ತಿದೆ. ಸೋಂಕಿತರು ಕಣ್ಣ ಮುಂದೆಯೇ ನರಳಿ ನರಳಿ ಪ್ರಾಣ ಬಿಡುತ್ತಿದ್ದಾರೆ. ಇಷ್ಟೆಲ್ಲಾ ಆದರೂ ನಮ್ಮ ಜನ ಮಾತ್ರ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಕೊರೊನಾ ನಮಗೆ ಬರಲ್ಲ ಎನ್ನುವ ಭ್ರಮೆಯಲ್ಲಿ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಯುವಕನೋರ್ವ ಸಾವಿಗೂ ಮುನ್ನ ಕೊರೊನಾ ಕರಾಳತೆ ಹಾಗೂ ಆಸ್ಪತ್ರೆ ಅವ್ಯವಸ್ಥೆಯ ಸತ್ಯವನ್ನು ಬಿಚ್ಚಿಟ್ಟಿದ್ದಾನೆ. ಕೊರೊನಾ ಕರಾಳತೆ ಜತೆ ಆಸ್ಪತ್ರೆ ಅವ್ಯವಸ್ಥೆಯನ್ನೂ ಬಯಲು ಮಾಡಿದ್ದಾನೆ.
ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಸಾವಿನ ಒಂದು ದಿನ ಮುಂಚೆ ವಿಡಿಯೋ ಮಾಡಿ ಪೋಷಕರಿಗೆ ಕಳಿಸಿದ್ದಾನೆ. ಆ ವಿಡಿಯೋದಲ್ಲಿ ಕೊರೊನಾ ಕರಾಳತೆ ಜತೆ ಆಸ್ಪತ್ರೆ ಅವ್ಯವಸ್ಥೆಯೂ ಬಯಲಾಗಿದೆ. ವಿಡಿಯೋ ಮಾಡುವ ಮುನ್ನ ಯುವಕ ತನ್ನ ಪೋಷಕರಿಗೆ ಕರೆ ಮಾಡಿ ಆಸ್ಪತ್ರೆಯಲ್ಲಿ ನೀರು, ಊಟ ಕೊಡ್ತಿಲ್ಲ, ಚಿಕಿತ್ಸೆ ಕೊಡ್ತಿಲ್ಲ, ನನ್ನನ್ನು ಕರೆದುಕೊಂಡು ಹೋಗಿ ಎಂದು ಅಳಲು ತೋಡಿಕೊಂಡಿದ್ದ. ಆಗ ಸರಿ ನಾಳೆ ಕರೆದುಕೊಂಡು ಹೋಗ್ತೀವಿ ಎಂದು ಹೇಳಿ ಸಮಾಧಾನ ಮಾಡಿದ್ದರು. ಅದಾಗಿ ಮರುದಿನವೇ ಯುವಕನ ಸಾವಿನ ಸುದ್ದಿ ಕುಟುಂಬಸ್ಥರಿಗೆ ತಲುಪಿದೆ. ಆಸ್ಪತ್ರೆಗೆ ಅಡ್ಮಿಟ್ ಆದ ಎರಡೇ ದಿನಕ್ಕೆ ಯುವಕ ಬಲಿಯಾಗಿದ್ದಾನೆ.
ಯುವಕ ಮಾಡಿದ್ದ ವಿಡಿಯೋದಲ್ಲಿ ಏನಿದೆ?
ಕುಟುಂಬಸ್ಥರ ಬಳಿ ಏನೋ ಹೇಳಿಕೊಳ್ಳಬೇಕೆಂದು ಆಸೆ ಪಟ್ಟಿದ್ದ ಯುವಕ ಮಾತನಾಡಲು ಸಾಧ್ಯವಾಗದೇ ಮೂಕರೋಧನೆಯ ಅನುಭವಿಸಿದ ದೃಶ್ಯಗಳನ್ನು ಸೆರೆ ಹಿಡಿದಿದ್ದಾನೆ. ಐಸಿಯುವಿನಲ್ಲಿ ತನ್ನವರಿಗಾಗಿ ಕೊನೆಯ ಕ್ಷಣದಲ್ಲಿ ಹಂಬಲಿಸಿದ ಯುವಕನ ಮನ ಕಲಕುವ ದೃಶ್ಯಗಳು ಸೆರೆಯಾಗಿವೆ. ತನ್ನ ಕೊನೆ ಕ್ಷಣದ ನೋವಿನ ಕಥೆಯನ್ನು ಮೂಕ ರೋಧನೆಯನ್ನು ಚಿತ್ರಿಸಿ ಯುವಕ ತನ್ನ ಪೋಷಕರಿಗೆ ಕಳಿಸಿದ್ದಾನೆ. ಕೊನೆಗೆ ಆಕ್ಸಿಜನ್ ವ್ಯವಸ್ಥೆಯಿಂದ ಮೂಗು ಬಾಯಲ್ಲಿ ರಕ್ತ ಸೋರಿದು ಯುವಕ ಮೃತಪಟ್ಟಿದ್ದಾನೆ. ಕ್ರೂರಿ ಕೊರೊನಾವನ್ನು ಗೆಲ್ಲಲಾಗದೆ 30 ವರ್ಷದ ಯುವಕ ಬಲಿಯಾಗಿದ್ದಾನೆ. ಯುವಕನ ಈ ಕೊನೆ ಕ್ಷಣದ ವಿಡಿಯೋ ನೋಡಿದರೆ ಎಂತಹ ಕಲ್ಲು ಹೃದಯ ಕೂಡ ಒಂದು ಕ್ಷಣ ಮರುಗದೆ ಇರಲಾರದು. ಎಂತಹವರ ಕಣ್ಣಾಲೆಯೂ ಒದ್ದೆಯಾಗದೆ ಇರಲಾರದು. ಸದ್ಯ ವಿಡಿಯೋ ನೋಡಿದ ಕುಟುಂಬಸ್ಥರು ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ತಮ್ಮ ಬಲಿಯಾಗಿದ್ದಾನೆ ಎಂದು ಆರೋಪಿಸಿದ್ದಾರೆ.
ಯುವಕನ ಸಾವಿಗೆ ಕುಟುಂಬಸ್ಥರ ಆಕ್ರೋಶ ಹೊರ ಹಾಕಿದ್ದಾರೆ. ದಿನಕ್ಕೆ ಸಾವಿರಾರು ರೋಗಿಗಳು ದಾಖಲಾಗುತ್ತಿದ್ದಾರೆ. ಹೀಗಾಗಿ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಸರಿಯಾದ ಟ್ರೀಟ್ ಮೆಂಟ್ ಸಿಗ್ತಿಲ್ಲ. ವೈದ್ಯರ ನಿರ್ಲಕ್ಷ್ಯಕ್ಕೆ ಯುವಕ ಬಲಿಯಾಗಿರುವ ಆರೋಪ ಮಾಡಿ ಆಸ್ಪತ್ರೆಯ ಮುಂದೆ ಯುವಕನ ಕುಟುಂಬಸ್ಥರು ಕಣ್ಣೀರು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಇಲ್ಲಿ ಸೋಂಕಿತರಿಗೆ ನೀರು ಕೊಡಬೇಕು ಅಂದ್ರೂ ಇಲ್ಲಿರುವ ಸಿಬ್ಬಂದಿಗೆ ಐನೂರು ರೂಪಾಯಿ ಕೊಡಬೇಕು, ದುಡ್ಡಿದ್ರೇ ಎಲ್ಲಾ ಇಲ್ದೆ ಇದ್ರೇ ಊಟ ತಿಂಡಿ ಕುಡಿಯೋಕೆ ನೀರು ಸಹ ಸೋಂಕಿತರಿಗೆ ನೀಡಲ್ಲ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಲಾರಿ ಬೀಳ್ಲಿ, ಯಾರೇ ಸಾಯ್ಲಿ ಹೆಂಡ ಮಾತ್ರ ಸಿಗ್ಲಿ; ಲಾಠಿ ಏಟು ಬಿದ್ರೂ ಬೀಳ್ಲಿ ಬಾಚ್ಕೋ ಸಿಕ್ದಷ್ಟ್ ಬಾಟ್ಲಿ!