SSLC, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ದ್ವಿಚಕ್ರ ವಾಹನ, ಜಮೀರ್ ಘೋಷಣೆ
ತಮ್ಮ ಅಲ್ಪಸಂಖ್ಯಾತ ಸಮುದಾಯದ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ವಿದ್ಯಾರ್ಧಿಗಳಿಗೆ ಸಚಿವ ಜಮೀರ್ ಅಹ್ಮದ್ ಖಾನ್ ಬಂಪರ್ ಕೊಡುಗೆ ಘೋಷಣೆ ಮಾಡಿದ್ದಾರೆ. ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸ್ವಂತ ಹಣದಿಂದಲೇ ದ್ವಿಚಕ್ರ ವಾಹನ ಕೊಡಿಸುವುದಾಗಿ ಘೋಷಣೆ ಮಾಡಿದ್ದಾರೆ.
ಬೆಂಗಳೂರು, (ಜುಲೈ 29): ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದರೆ ವೈಯಕ್ತಿಕ ಖರ್ಚಿನಲ್ಲಿ ದ್ವಿಚಕ್ರ ವಾಹನ ಕೊಡಿಸುವುದಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಘೋಷಣೆ ಮಾಡಿದ್ದಾರೆ. ಬೆಂಗಳೂರಿನಲ್ಲಿಂದು ಅಲ್ಪಸಂಖ್ಯಾತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ 32 ಜನ ವಿದ್ಯಾರ್ಥಿಗಳಿಗೆ ನನ್ನ ವೈಯಕ್ತಿಕ ಖರ್ಚಿನಲ್ಲಿ ದ್ವಿಚಕ್ರ ವಾಹನ ನೀಡುತ್ತೇನೆ. ಸ್ಥಳೀಯ ಏಜನ್ಸಿಗಳ ಮೂಲಕ ಅರ್ಹ ವಿಧ್ಯಾರ್ಥಿಗಳ ಮನೆಗಳಿಗೆ ವಾಹನ ತಲುಪಿಸುತ್ತೇವೆ ಎಂದು ಭರವಸೆ ನೀಡಿದರು.
ಎಷ್ಟು ದಿನ ನಾನು ಸಚಿವನಾಗಿ ಇರುತ್ತೇನೋ ಇಲ್ವೋ ಗೊತ್ತಿಲ್ಲ. ನಾನು ಜೀವಂತವಾಗಿ ಇರ್ತಿನೋ ಇಲ್ವೋ ಗೊತ್ತಿಲ್ಲ. ಯಾಕಂದ್ರೆ ದೇವರು ಹಣೆ ಬರಹ ಬರೆದಿರುತ್ತಾನೆ. ಮುಂದೆ ನಾನು ಮಂತ್ರಿ ಆಗ್ತಿನೋ, ಇರ್ತಿನೋ ಗೊತ್ತಿಲ್ಲ. ಈಗ ನನ್ನನ್ನ ಅಲ್ಪಸಂಖ್ಯಾತ ಸಚಿವರಾಗಿ ಮಾಡಿದ್ದಾರೆ. ಮುಂದಿನ ನಾಲ್ಕು ವರ್ಷ ನಮ್ಮ ಸರ್ಕಾರ ಇರುತ್ತದೆ. ನಾನೇ ಅಲ್ಪ ಸಂಖ್ಯಾತ ಮಂತ್ರಿ ಆಗಿ ಇರ್ತಿನಿ ಅನ್ನೋ ವಿಶ್ವಾಸ ಇದೆ ಎಂದು ಹೇಳಿದ್ದಾರೆ. ಈ ಮೂಲಕ ಜಮೀರ್ ಸಂಪುಟ ಸರ್ಜರಿ ಹಾಗೂ ಖಾತೆ ಬದಲಾವಣೆ ವಿಚಾರಕ್ಕೆ ಪುಷ್ಟಿ ನೀಡಿದ್ದಾರೆ.
ಇದನ್ನೂ ಓದಿ: ಸಂಪ್ರದಾಯಕ್ಕೆ ಎಳ್ಳು-ನೀರು: ಕಾವೇರಿಗೆ ಬಾಗಿನ ಕಾರ್ಯಕ್ರಮದಲ್ಲಿ ಬಾಡೂಟ ಆಯೋಜನೆ
ಸಚಿವ ಜಮೀರ್ ಅಹ್ಮದ್ ಹೇಳಿಕೆ ಯಾವ ಹಗರಣವೂ ಇಲ್ಲ, ಬಿಜೆಪಿ ಅವರಿಗೆ ಇಶ್ಯೂ ಇಲ್ಲ. ಹೀಗಾಗಿ ಇಶ್ಯೂ ಮಾಡುವುದಕ್ಕೆ ಹೊರಟ್ಟಿದ್ದಾರೆ. ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಕ್ಲಾರಿಫಿಕೇಶನ್ ನೀಡಿದ್ದಾರೆ. ಇದರಲ್ಲಿ ಮುಖ್ಯಮಂತ್ರಿ ಪಾತ್ರ ಏನಿದೆ? ಯಾವುದೋ ದೇವರಾಜ್ ಕಡೆಯಿಂದ ಬಾಮೈದ ಕೊಂಡುಕೊಂಡಿದ್ದಾರೆ . ಬಾಮೈದ ಅವರ ಅಕ್ಕನಿಗೆ ಗಿಫ್ಟ್ ಮಾಡಿದ್ದಾರೆ. ಅವರದೇ ಸೈಟಿನಲ್ಲಿ ಮೂಡ ಲೇಔಟ್ ಮಾಡಿದೆ. ಸಿದ್ದರಾಮಯ್ಯನವರು ಸೈಟ್ ಹಂಚಿಕೆ ಮಾಡಿದ್ದಾರಾ? ಮುಖ್ಯಮಂತ್ರಿ ಇರುವಾಗ ಕೊಟ್ರಾ? ಬಿಜೆಪಿ ಸರ್ಕಾರ ಇರುವಾಗ ಕೊಟ್ಟಿದ್ದು ಸೈಟು. ಬಿಜೆಪಿ ಸರ್ಕಾರದಲ್ಲಿ ಕೊಟ್ಟಿದ್ದು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸೈಟ್ ಕೊಟ್ಟಿದ್ದಲ್ಲ ಎಂದು ಸಮಜಾಯಿಷಿ ನೀಡಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರೆ ಯಾವತ್ತೂ ಸಿಎಂ ಆಗುವ ಅವಕಾಶ ಸಿಗಲ್ಲ ಎಂದು ಬಿಜೆಪಿಗೂ ಕುಮಾರಸ್ವಾಮಿಗೂ ಗೊತ್ತು . ಏನೋ ಅವಕಾಶ ಸಿಕ್ಕಿದೆ, ಕೆಣಕಬೇಕು ಎಂದು ಕೆಣಕುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರೆ ಜೀವನದಲ್ಲೇ ಇನ್ನು ಮುಂದೆ ಬರೋಕೆ ಆಗಲ್ಲ ಅನ್ನೋ ಕಾರಣಕ್ಕೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅವರು ಇದರಲ್ಲಿ ಯಾಕೆ ಕೈ ಜೋಡಿಸುತ್ತಾರೆ? ನಮ್ಮ ಪಕ್ಷ ಹೈಕಮಾಂಡ್ ಪಕ್ಷ. ಹೈಕಮಾಂಡ್ ಏನ್ ತೀರ್ಮಾನ ಮಾಡತ್ತು ನಾವು ಯಾರು ಏನು ಮಾಡಕ್ಕಾಗಲ್ಲ . ಕೇಂದ್ರ ಸರ್ಕಾರದವರು ನಮಗೆ ಏನು ದುಡ್ಡು ಕೊಡಬೇಕು ಕೊಡ್ಲಿ, ಅದು ಕೊಟ್ಟು ಬಿಡ್ಲಿ ಎಲ್ಲ ಸರಿ ಹೋಗ್ಬಿಡುತ್ತೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಇದ್ದಾರೆ. ಈಗ ಮುಖ್ಯಮಂತ್ರಿ ಯಾವುದು ಖಾಲಿ ಇಲ್ಲ. ಮುಖ್ಯಮಂತ್ರಿ ಕುರ್ಚಿ ಕಾಲಿ ಇದ್ದರೆ ತಾನೆ ಚರ್ಚೆ ಮಾಡಬೇಕಾಗಿರುವುದು. ಈಗ ಮುಖ್ಯಮಂತ್ರಿ ಜಾಗದಲ್ಲಿ ಸಿದ್ದರಾಮಯ್ಯ ಇದ್ದಾರೆ , ನಮ್ಮ ಪಕ್ಷ ಹೈಕಮಾಂಡ್ ಪಕ್ಷ ಹೈಕಮಾಂಡ್ ಗೆರೆ ಹಾಕಿದರೆ ಆ ಗೆರೆ ನಾವೆಲ್ಲ ದಾಟುವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ