ಮೂರು ತಿಂಗಳಲ್ಲಿ ಜಿಪಂ, ತಾಪಂ ಚುನಾವಣೆ ಸಾಧ್ಯತೆ: ಸಚಿವ ಕೆಎಸ್ ಈಶ್ವರಪ್ಪ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 30, 2021 | 9:17 PM

ಕ್ಷೇತ್ರಗಳ ಪುನರ್​ವಿಂಗಡನೆ ಪ್ರಕ್ರಿಯೆಯಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಗಡಿ ಮಾತ್ರ ಬದಲಾವಣೆ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.

ಮೂರು ತಿಂಗಳಲ್ಲಿ ಜಿಪಂ, ತಾಪಂ ಚುನಾವಣೆ ಸಾಧ್ಯತೆ: ಸಚಿವ ಕೆಎಸ್ ಈಶ್ವರಪ್ಪ
ಸಚಿವ ಕೆ.ಎಸ್.ಈಶ್ವರಪ್ಪ
Follow us on

ಬೆಂಗಳೂರು: ಇನ್ನು ಮೂರು ತಿಂಗಳಲ್ಲಿ ಅಂದರೆ, 2022ರ ಮಾರ್ಚ್​ ತಿಂಗಳ ಒಳಗೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಕ್ಷೇತ್ರಗಳ ಪುನರ್​ವಿಂಗಡನೆ ಪ್ರಕ್ರಿಯೆಯಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಗಡಿ ಮಾತ್ರ ಬದಲಾವಣೆ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.

ನರೇಗಾ ಯೋಜನೆಯಡಿ 2021-22ನೇ ಸಾಲಿನಲ್ಲಿ ನೀಡಿದ್ದ 13 ಕೋಟಿ ಮಾನವ ದಿನದ ಗುರಿಯನ್ನು ಮೀರಿ ಕರ್ನಾಟಕದಲ್ಲಿ ಉದ್ಯೋಗ ಸೃಜನೆಯಾಗಿದೆ. ಈವರೆಗೆ ₹ 13.14 ಕೋಟಿ ಮಾನವ ದಿನಗಳ ಉದ್ಯೋಗ ಸೃಜನೆಯಾಗಿದೆ. ಸರ್ಕಾರದ ಬೇಡಿಕೆ ಪರಿಗಣಿಸಿ ಉದ್ಯೋಗ ಸೃಜನೆಗೆ ಅವಕಾಶ ನೀಡಲಾಗಿದೆ. ಈ ಸಾಲಿನಲ್ಲಿ ₹ 1.40 ಕೋಟಿ ಉದ್ಯೋಗ ಸೃಜನೆಗೆ ಕೇಂದ್ರವು ಒಪ್ಪಿಗೆ ನೀಡಿದೆ. ಇದರಿಂದ ರಾಜ್ಯಕ್ಕೆ ಹೆಚ್ಚುವರಿ ₹ 715 ಕೋಟಿ ಅನುದಾನ ಲಭ್ಯವಾಗಿದೆ. ಈ ವರ್ಷ ₹ 10.68 ಲಕ್ಷ ಜನರು ಯೋಜನೆಗೆ ಸೇರ್ಪಡೆಯಾಗಿದ್ದಾರೆ ಎಂದು ನುಡಿದರು.

ಜಲಶಕ್ತಿ ಅಭಿಯಾನದಲ್ಲಿ $ 4.87 ಲಕ್ಷ ಮೊತ್ತದ ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿ ಮುಗಿಸುವ ವೇಗದಲ್ಲಿ ಕರ್ನಾಟಕವು ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ರಾಮನಗರ, ತುಮಕೂರು, ಬೆಳಗಾವಿ, ಚಿತ್ರದುರ್ಗ, ಕೊಪ್ಪಳ, ಕಲಬುರಗಿಯಲ್ಲಿ ಜಲಶಕ್ತಿ ಅಭಿಯಾನದಲ್ಲಿ ಹೆಚ್ಚು ಕಾಮಗಾರಿ ನಡೆದಿದೆ.

ದೇಗುಲಗಳನ್ನು ಕಟ್ಟುಪಾಡುಗಳಿಂದ ಮುಕ್ತಗೊಳಿಸುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೇಗುಲದಲ್ಲಿ ಹಣ ಇದ್ದರೂ ದೇಗುಲಕ್ಕೆ ಬಳಸಲು ಅವಕಾಶವಿಲ್ಲ. ಸರ್ಕಾರ ಆ ಹಣಕ್ಕೆ ಕೈಹಾಕದೆ ಭಕ್ತರು ಆಯ್ಕೆ ಮಾಡುವ ಸಮಿತಿಗೆ ಹಣ ಬಳಕೆಯ ವಿವೇಚನೆ ಸಿಗುವಂತೆ ಆಗಬೇಕು. ಸಮಿತಿಗಳಿಗೆ ಹೆಚ್ಚು ಅಧಿಕಾರ ಕೊಡುವ ವ್ಯವಸ್ಥೆಯನ್ನು ನಾವು ರೂಪಿಸುತ್ತೇವೆ. ದೇವಾಲಯದ ಹಣವನ್ನು ಬೇರೆ ಕೆಲಸಗಳಿಗೆ ಬಳಸಲು ಸಾಧ್ಯವಾಗದಂಥ ನೀತಿಯನ್ನು ಇನ್ನಷ್ಟೇ ನಿರೂಪಿಸಬೇಕಿದೆ ಎಂದರು. ಸರ್ಕಾರದ ಉಸ್ತುವಾರಿ ಇದ್ದೇ ಇರುತ್ತದೆ ಎಂದು ಸ್ಪಷ್ಟಪಡಿಸಿದರು.ಇದನ್ನೂ ಓದಿ: ಪಕ್ಷದ ವರಿಷ್ಠರು ಸೂಚಿಸಿದರೆ ಸಚಿವ ಸ್ಥಾನ ತ್ಯಜಿಸಲು ಸಿದ್ಧ ಎಂದರು ಹಿರಿಯ ಸಚಿವ ಈಶ್ವರಪ್ಪ
ಇದನ್ನೂ ಓದಿ: ಪಕ್ಷದ ವರಿಷ್ಠರು ಸೂಚಿಸಿದರೆ ಸಚಿವ ಸ್ಥಾನ ತ್ಯಜಿಸಲು ಸಿದ್ಧ ಎಂದರು ಹಿರಿಯ ಸಚಿವ ಈಶ್ವರಪ್ಪ

Published On - 9:17 pm, Thu, 30 December 21