
ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ತಾತನಿಂದ ಮೊಮ್ಮಗನಿಗೆ ಮಹಾಮಾರಿ ಕೊರೊನಾ ವಕ್ಕರಿಸಿದೆ. 790ನೇ ಸೋಂಕಿತ ವೃದ್ಧನಿಂದ 804ನೇ ಸೋಂಕಿತ ಮೊಮ್ಮಗನಿಗೂ ಕೊರೊನಾ ಸೋಂಕು ದೃಢಪಟ್ಟಿದೆ.
ಮೇ 5ರಂದು ವೃದ್ಧನ ಪತ್ನಿ ಮೃತಪಟ್ಟಿದ್ದರು:
ಚಿಂತಾಮಣಿಯ ವೃದ್ಧನ ಪತ್ನಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಬೆಂಗಳೂರಿನ ಮಗಳ ಮನೆಯಲ್ಲಿ ವಿಶ್ರಾಂತಿ ಪಡೆದಿದ್ದರು. ಬಳಿಕ ಏ.26ರಂದು ಚಿಂತಾಮಣಿ ನಗರಕ್ಕೆ ವಾಪಸಾಗಿದ್ದರು. ನಂತರ ಮೇ 5ರಂದು ವೃದ್ಧನ ಪತ್ನಿ ಮೃತಪಟ್ಟಿದ್ದರು. ಅಂತ್ಯಸಂಸ್ಕಾರದ ವೇಳೆ ಸಂಬಂಧಿಕರು ಭಾಗಿಯಾಗಿದ್ದರು.
ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದವರಿಗೆ ಆತಂಕ:
ಮೇ 5ರಂದು ವೃದ್ಧನ ಮನೆಗೆ ತಾಲೂಕು ಅಧಿಕಾರಿ ಭೇಟಿ ನೀಡಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದವರಿಗೆ ಸೂಚಿಸಿದ್ದರು. ಕೊರೊನಾ ಸೋಂಕಿತ ವೃದ್ಧ ಹಲವೆಡೆ ಓಡಾಡಿದ್ದ ಹಿನ್ನೆಲೆಯಲ್ಲಿ ಯಾವ ಮೂಲದಿಂದ ವೃದ್ಧನಿಗೆ ಸೋಂಕು ಹರಡಿತು ಎಂದು ವೃದ್ಧನ ಸೋಂಕಿನ ಮೂಲದ ಬಗ್ಗೆ ಅಧಿಕಾರಿಗಳಿಂದ ತನಿಖೆ ನಡೆಸುತ್ತಿದ್ದಾರೆ.
ಲಂಡನ್ನಿಂದ 2 ತಿಂಗಳ ಹಿಂದೆ ಬಂದಿದ್ದ ಮೊಮ್ಮಗ:
ಇದೀಗ ವೃದ್ಧನ ಮೊಮ್ಮಗ 22 ವರ್ಷದ ಯುವಕನಿಗೂ ಕೊರೊನಾ ಪಾಸಿಟಿವ್ ಬಂದಿದೆ. ಈತ ಲಂಡನ್ನಿಂದ ಎರಡು ತಿಂಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದ. ಮೂಲತಃ ಬೆಂಗಳೂರಿನ ವಿಜಯನಗರ ನಿವಾಸಿಯಾಗಿದ್ದು, ಚಿಂತಾಮಣಿಯ ತಾತನ ಮನೆಗೆ ಇತ್ತೀಚೆಗೆ ಆಗಮಿಸಿದ್ದ. ಮೇ 5ರಂದು ಮೃತಪಟ್ಟಿದ್ದ ಅಜ್ಜಿಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ. ಯುವಕನ ಜೊತೆ 60ಕ್ಕೂ ಹೆಚ್ಚು ಜನ ಭಾಗಿಯಾಗಿದ್ರು.
ಚಿಂತಾಮಣಿಯ ತಾತ-ಮೊಮ್ಮೊಗನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈಗಾಗಲೇ ಪ್ರಾಥಮಿಕ ಸಂಪರ್ಕದಲ್ಲಿದ್ದ 73 ಮಂದಿಯನ್ನು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕ್ವಾರಂಟೈನ್ ಮಾಡಿದೆ.