ಕೊರೊನಾ ಟೆಸ್ಟ್ ವರದಿ ನೀಡಲು ಸರ್ಕಾರಿ ಆಸ್ಪತ್ರೆ ವೈದ್ಯನಿಂದಲೇ ಲಂಚ! ಎಲ್ಲಿ?

  • TV9 Web Team
  • Published On - 12:35 PM, 10 May 2020
ಕೊರೊನಾ ಟೆಸ್ಟ್ ವರದಿ ನೀಡಲು ಸರ್ಕಾರಿ ಆಸ್ಪತ್ರೆ ವೈದ್ಯನಿಂದಲೇ ಲಂಚ! ಎಲ್ಲಿ?

ಕೋಲಾರ: ಮಹಾಮಾರಿ ಕೊರೊನಾ ಅಟ್ಟಹಾಸದ ವಿರುದ್ಧ ವೈದ್ಯರು ಹಗಲು ರಾತ್ರಿ ಎನ್ನದೆ ಹೋರಾಡುತ್ತಿದ್ದಾರೆ. ವೈದ್ಯರ ತ್ಯಾಗಕ್ಕೆ ಜನ ವೈದ್ಯೋ ನಾರಾಯಣ ಹರಿ ಎಂಬ ಮಾತನ್ನು ನಂಬಲು ಶುರು ಮಾಡಿದ್ದಾರೆ. ಆದರೆ ಇಲ್ಲೊಬ್ಬ ವೈದ್ಯ ಕೊರೊನಾ ವಾರಿಯರ್ಸ್ ವೈದ್ಯರ ಹೋರಾಟಕ್ಕೆ ಮಸಿ ಬಳಿಯುವಂತ ಕೆಲಸ ಮಾಡಿದ್ದಾನೆ.

ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಆಸ್ಪತ್ರೆ ವೈದ್ಯ ಡಾ.ಶೀನಿವಾಸ್ ಕೊರೊನಾ ಸಂಕಷ್ಟವನ್ನೇ ಬಂಡವಾಳ ಮಾಡಿಕೊಂಡು ಲಂಚ ಪಡೆದಿದ್ದಾರೆ. ವೈದ್ಯ ಲಂಚ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೊರ ರಾಜ್ಯಗಳಿಗೆ ತೆರಳುವ ಜನರಿಗೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯವಶ್ಯಕ. ಹೀಗಾಗಿ ತಪಾಸಣೆಗೆ ಬಂದ ಜನರ ಬಳಿ ವೈದ್ಯಕೀಯ ತಪಾಸಣಾ ವರದಿ ನೀಡಲು ಲಂಚ ಪಡೆದಿದ್ದಾರೆ.

ಹಣ ನೀಡಿದ್ರೆ ಮಾತ್ರ ಕೊರೊನಾ ಟೆಸ್ಟ್ ರಿಪೋರ್ಟ್ ನೀಡುತ್ತಿದ್ದಾರೆ ಎಂದು ಜನರು ಆರೋಪಿಸಿದ್ದಾರೆ. ಮಹಿಳೆಯೊಬ್ಬರು ತನ್ನ ಮಗುವಿನ ಜೊತೆ ಟೆಸ್ಟ್ ಮಾಡಿಸಿಕೊಂಡ ರಿಪೋರ್ಟ್ ಪಡೆಯುವ ವೇಳೆ ವೈದ್ಯ ಹಣ ಪಡೆದಿರುವುದನ್ನು ಸ್ವತಃ ಮಹಿಳೆಯೇ ಮೊಬೈಲ್​ನಲ್ಲಿ ಸೆರೆಯಿಡಿದು ವೈರಲ್ ಮಾಡಿದ್ದಾಳೆ. ಒಬ್ಬರಿಗೆ 200 ರೂಪಾಯಿಯಂತೆ ಡಾ.ಶ್ರೀನಿವಾಸ್ ಲಂಚ ಪಡೆಯುತ್ತಿದ್ದರು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಸಖತ್ ವೈರಲ್ ಆಗಿದ್ದು, ಸರ್ಕಾರಿ ವೈದ್ಯನ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.