ಸಿಡ್ನಿ: ಭಾರತ- ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಹೀಗಾಗಿ ಎರಡು ತಂಡಗಳು 1-1 ರ ಸಮಬಲ ಸಾಧಿಸಿವೆ. ಹೀಗಾಗಿ ಬ್ರಿಸ್ಬೇನ್‌ನಲ್ಲಿ ಜನವರಿ 15 ರಿಂದ ಪ್ರಾರಂಭವಾಗಲಿರುವ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಎರಡು ತಂಡಗಳಿಗೂ ಮಹತ್ವದದ್ದಾಗಿದ್ದು, ಅಂತಿಮ ಟೆಸ್ಟ್ನಲ್ಲಿ ಗೆದ್ದ ತಂಡ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ.
ಒಂದು ಹಂತದಲ್ಲಿ ಗೆಲುವಿನ ಲಯದಲ್ಲಿದ್ದ ಟೀಂ ಇಂಡಿಯಾ ರಿಶಭ್ ಪಂತ್ ಹಾಗೂ ಚೇತೇಶ್ವರ್ ಪೂಜಾರ ವಿಕೆಟ್ ಕಳೆದುಕೊಂಡ ಬಳಿಕ ಸುಳಿನ ಸುಳಿಗೆ ಸಿಲುಕಿಕೊಂಡಿತ್ತು. ಆದರೆ ಜವಬ್ದಾರಿಯುತ ಆಟಕ್ಕೆ ಮುಂದಾದ ಹನುಮ ವಿಹಾರಿ ಹಾಗೂ ರವಿಚಂದ್ರನ್ ಅಶ್ವಿನ್ ತಾಳ್ಮೆಯ ಆಟಕ್ಕೆ ಮುಂದಾದರು. ಆದರೆ ಬ್ಯಾಟಿಂಗ್ನ ಆರಂಭದಲ್ಲೇ ಗಾಯದ ಸಮಸ್ಯೆಗೆ ಒಳಗಾದ ಹನುಮ ವಿಹಾರಿ ಮೈದಾನದಲ್ಲಿ ರನ್ ಗಳಿಸಲು ಪರದಾಡಿದರು. ಹೀಗಾಗಿ ವಿಹಾರಿಗೆ ಉತ್ತಮ ಸಾಥ್ ನೀಡಿದ ಅಶ್ವಿನ್ ತಂಡವನ್ನು ಸೋಲಿನ ಸುಳಿಯಿಂದ ಪಾರು ಮಾಡಿದರು. ಅಲ್ಲದೆ ಈ ಜೋಡಿ 256 ಬಾಲ್ಗಳನ್ನ ಎದುರಿಸುವುದರಿಂದಿಗೆ 50 ರನ್ಗಳ ಜೊತೆಯಾಟ ಆಡಿತು. ಅಂತಿಮವಾಗಿ 161 ಬಾಲ್ ಎದುರಿಸಿದ ವಿಹಾರಿ 23 ರನ್ ಗಳಿಸಿದರೆ, 128 ಬಾಲ್ ಎದುರಿಸಿದ ಅಶ್ವಿನ್ 33 ರನ್ ಗಳಿಸಿ ಅಜೇಯರಾಗಿ ಉಳಿದರು.
ಆಸಿಸ್ ವೇಗಿಗಳಿಗೆ ಬ್ರಹ್ಮ ನಿರಸನ..
ದಿನದ ಆರಂಭದಲ್ಲೇ ಟೀಂ ಇಂಡಿಯಾ ನಾಯಕ ರಹಾನೆ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ಆಸಿಸ್ ಬೌಲರ್ಗಳು, ನಂತರ 97 ರನ್ ಗಳಿಸಿದ್ದ ಪಂತ್ ಹಾಗೂ 77 ರನ್ ಗಳಿಸಿದ್ದ ಪೂಜಾರ ವಿಕೆಟ್ ಪಡೆದ ಬಳಿಕ ಗೆಲುವು ನಮದೆ ಎಂಬಂತೆ ಬೀಗಲು ಶುರು ಮಾಡಿದ್ದರು. ಆದರೆ ಟೀಂ ಇಂಡಿಯಾದ ಆಟಗಾರರಾದ ವಿಹಾರಿ ಹಾಗೂ ಅಶ್ವಿನ್, ಆಸಿಸ್ ವೇಗಿಗಳ ಆಲೋಚನೆಗೆ ಬೆಂಕಿ ಹಚ್ಚಿದರು. ಆಸಿಸ್ ವೇಗಿಗಳ ಘಾತಕ ವೇಗವನ್ನು ಸಮರ್ಥವಾಗಿ ಎದುರಿಸಿದ ಟೀಂ ಇಂಡಿಯಾ ಆಟಗಾರರು, ಆಸಿಸ್ ತಂಡದ ಗೆಲುವಿನ ಕನಸಿಗೆ ತಣ್ಣೀರೆರಚಿದರು.
ಗಾಯದ ಸಮಸ್ಯೆಯಲ್ಲೂ ವಿಶಿಷ್ಟ ಸಾಧನೆ ಮಾಡಿದ ವಿಹಾರಿ..
ಟೀಂ ಇಂಡಿಯಾದಲ್ಲಿ ಈಗ ತಾನೇ ಕಾಣಿಸಿಕೊಳ್ಳುತ್ತಿರುವ ಹನುಮ ವಿಹಾರಿ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಅಷ್ಟೇನೂ ಉತ್ತಮವಾಗಿ ಆಡಿರಲಿಲ್ಲ. ಹೀಗಾಗಿ ಕನ್ನಡಿಗ ರಾಹುಲ್ ಬದಲು ವಿಹಾರಿಗೆ ಸ್ಥಾನ ನೀಡಿದಿದ್ದಕ್ಕಾಗಿ ಕ್ರಿಕೆಟ್ ಪ್ರೇಮಿಗಳು ಬಿಸಿಸಿಐ ವಿರುದ್ದ ಕಿಡಿಕ್ಕಾರಿದ್ದರು. ಹೀಗಾಗಿ ವಿಹಾರಿ ಮೇಲೆ ಆಡಲೇ ಬೇಕಾದ ಒತ್ತಡ ಇತ್ತು. ಇದಕ್ಕೆ ಹಿನ್ನಡೆಯೆಂಬಂತೆ ವಿಹಾರಿಗೆ 3ನೇ ಟೆಸ್ಟ್ನ 2ನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುವ ವೇಳೆ ಮಂಡಿ ನೋವು ಕಾಣಿಸಿಕೊಂಡಿತು.
ಹೀಗಾಗಿ ವಿಹಾರಿ ರನ್ ಗಳಿಸಲು ಪರದಾಡುವಂತ್ತಾಯಿತು. ಆದರೆ ದೃತಿಗೆಡದ ಹನುಮ ವಿಹಾರಿ ತಂಡವನ್ನು ದಡ ಸೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಲ್ಲದೆ ಗಾಯದ ಸಮಸ್ಯೆಯಿದ್ದರು ತಾಳ್ಮೆಯ ಆಟವಾಡಿದ ವಿಹಾರಿ ಬರೋಬ್ಬರಿ 161 ಬಾಲ್ ಎದುರಿಸಿ ಕೇವಲ 23 ರನ್ ಗಳಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಬಾಲ್ ಎದುರಿಸಿ, ಕಡಿಮೆ ರನ್ ಕಲೆ ಹಾಕಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಗೆ ವಿಹಾರಿ ಪಾತ್ರರಾದರು.
ರಾಹುಲ್ ದ್ರಾವಿಡ್ ಹುಟ್ಟುಹಬ್ಬಕ್ಕೆ ತಕ್ಕನಾದ ಉಡುಗೂರೆಕೊಟ್ಟ ಅಶ್ವಿನ್- ವಿಹಾರಿ..
ಇಂದು ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್ ತಮ್ಮ 48 ನೇ ಜನುಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದ್ರಾವಿಡ್ ಟೆಸ್ಟ್ ಆಡುವ ವೇಳೆ ತಮ್ಮ ತಾಳ್ಮೆಯ ಆಟದಿಂದಲೇ ಎದುರಾಳಿ ತಂಡದ ಬೌಲರ್ಗಳನ್ನು ಹೈರಾಣಾಗಿಸುತ್ತಿದ್ದರು. ತಾಳ್ಮೆಯ ಆಟಕ್ಕೆ ಹೆಚ್ಚು ಒತ್ತು ನೀಡುತ್ತಿದ್ದ ದ್ರಾವಿಡ್ ಟೆಸ್ಟ್ ಕ್ರಿಕೆಟ್ಗೆ ಹೇಳಿ ಮಾಡಿಸಿದ ಆಟಗಾರನ್ನಾಗಿದ್ದರು. ಮೈದಾನದಲ್ಲಿ ಅತೀ ಹೆಚ್ಚು ಸಮಯ ನಿಂತು ಬ್ಯಾಟಿಂಗ್ ಮಾಡುತ್ತಿದ್ದ ದ್ರಾವಿಡ್, ಟೀಂ ಇಂಡಿಯಾಕ್ಕೆ ಎಷ್ಟೋ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಈ ತಾಳ್ಮೆಯ ಆಟದಿಂದಲ್ಲೇ ದ್ರಾವಿಡ್, ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ‘ದಿ ವಾಲ್’ ಎಂದು ಗುರುತಿಸಿಕೊಂಡಿದ್ದರು. ಇಂದು ಟೀಂ ಇಂಡಿಯಾ ಆಟಗಾರರು ತಮ್ಮ ತಾಳ್ಮೆಯ ಆಟದಿಂದಾಗಿ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದ್ದಾರೆ. ಹೀಗಾಗಿ ಇಂದು ಜನುಮ ದಿನ ಆಚರಿಸಿಕೊಳ್ಳುತ್ತಿರುವ ದ್ರಾವಿಡ್ಗೆ ಇದು ಉತ್ತಮ ಉಡುಗೊರೆಯಾಗಿದೆ
Published On - 12:44 pm, Mon, 11 January 21