New Column: ಆಗಾಗ ಅರುಂಧತಿ; ‘ನಿನ್ನನ್ನು ಕಂಡರೆ ಯಾರಿಗೂ ಆಗುವುದಿಲ್ಲ ಏಕೆ ಗೊತ್ತೆ?’

|

Updated on: Apr 30, 2022 | 5:50 PM

Thomas Hardy : ಥಾಮಸ್ ಹಾರ್ಡಿಯ ‘ಫಾರ್ ಫ್ರಮ್ ದಿ ಮ್ಯಾಡಿಂಗ್ ಕ್ರೌಡ್’ ನಾನು ಓದಿಕೊಂಡಿದ್ದರೆ ಚೆನ್ನಾಗಿತ್ತು. ಏಕೆಂದರೆ ಅದರಲ್ಲಿ ಬರುವ ಟ್ರಾಯ್ ಫ್ರಾನ್ಸಿಸ್​ನ ಅಪರಾವತಾರದಂತೆ ಇವ ಎನ್ನುವುದು ಮೊದಲೇ ತಿಳಿದುಬಿಡುತ್ತಿತ್ತು.

New Column: ಆಗಾಗ ಅರುಂಧತಿ; ‘ನಿನ್ನನ್ನು ಕಂಡರೆ ಯಾರಿಗೂ ಆಗುವುದಿಲ್ಲ ಏಕೆ ಗೊತ್ತೆ?’
Follow us on

ಆಗಾಗ ಅರುಂಧತಿ : ಫೇಸ್​ಬುಕ್ಕಿನಲ್ಲಿ ವಾಟ್ಸಾಪಿನಲ್ಲಿ, ಕಾಲೇಜಿನಲ್ಲಿ ವಿಶ್​, ಕಮೆಂಟ್​ಗಳ ಸುರಿಮಳೆ. ಆಪ್ತಗೆಳತಿ ಅಲ್ಲದಿದ್ದರೂ ಒಬ್ಬಳು ನಕ್ಷತ್ರಾಕಾರದ ಕಿವಿಯೋಲೆ ಕೊಟ್ಟಿದ್ದಾಳೆ. ಆದರೂ ಏನೋ ತಳಮಳ. ಅದೇ ಆತ ವಿಶ್ ಮಾಡಿಲ್ಲ ಎನ್ನುವುದೇ. ಆತನಿಗೆ ಗೊತ್ತು ನನ್ನ ಬರ್ತಡೇ ಅಂತ. ಫೇಸ್​ಬುಕ್ಕಿನ ಪ್ರತಿ ಪೋಟೋ ಪೋಸ್ಟುಗಳನ್ನು ನೋಡುತ್ತಾನೆ. ಈಗಲೂ ಅವನ ಕಿಡಿಮಾತುಗಳು ಸುಡುತ್ತಿವೆ, ‘ಅದೆಷ್ಟು ಜನ ನಿನ್ನೇ ಮಾತನಾಡಿಸುತ್ತಾರೆ. ನನ್ನ ಮಾತ್ರ…’ ಏನು ಹೀಗೆಂದರೆ? ವಯಸ್ಸಿನಲ್ಲಿ ಓದಿನಲ್ಲಿ ಸಂಪಾದನೆಯಲ್ಲಿ ಎಲ್ಲಕ್ಕಿಂತ ನನಗಿಂತ ದೊಡ್ಡದಾದ ಗಂಡಸು, ಹೀಗೇಕೆ ನನ್ನನ್ನು ಒತ್ತಡಕ್ಕೆ ತಳ್ಳುತ್ತಿದ್ದಾನೆ? ಆತ ತನ್ನ ಪ್ರೀತಿಯನ್ನು ಫೋನಿನಲ್ಲಿ ಪ್ರಸ್ತಾಪಿಸಿದಾಗ, ಒಪ್ಪಿಕೊಂಡು ನಾನು ತಪ್ಪು ಮಾಡಿದೆನೆ? ಏನೇನೋ ಗೊಂದಲಗಳು. ಅವನು ಫೇಸ್​ಬುಕ್ಕಿನಲ್ಲಿ ಕೆಲ ಫೋಟೋಗಳನ್ನು ನೋಡಿಯೇ ತಾನೇ ನನ್ನನ್ನು ಅವ ಮೆಚ್ಚಿಕೊಂಡಿದ್ದು, ಈಗ ಇದೇನಿದು ಇದ್ದಕ್ಕಿದ್ದ ಹಾಗೆ ಅವನ ವರಸೆ? ನಾನು ಅವನ ಸ್ವತ್ತು ಮಾತ್ರ ಎನ್ನುವ ಧೋರಣೆಯಾ? ಛೆ. ಒಮ್ಮೆ ಅವ ಸುಮ್ಮನೆ ಹ್ಯಾಪಿ ಬರ್ತಡೇ ಎಂದಾದರೂ ಕಳುಹಿಸಬಾರದಾ? ಹೆಣ್ಣನ್ನು ಕಾಯಿಸುವುದು, ನರಳಿಸುವುದು, ಆಕೆ ನರಳಿದಷ್ಟು ತನ್ನ ಅಡಿಯಾಳಾದಾಳು ಎಂಬ ಧೋರಣೆಯಲ್ಲಿಯೇ ಅವ ಹೀಗೆಲ್ಲ ಮಾಡುವುದು ತಾನೆ?
ಅರುಂಧತಿ (Arundhathi)

 

(ಸತ್ಯ 1)

ಹೀಗೆ ದುಃಖಪಡಲೆಂದೇ ಅವನ ಪ್ರೇಮನಿವೇದನೆ ಸ್ವೀಕರಿಸಿದ ಹಾಗಾಯಿತೆ? ಮಾಡುವುದಾದರೂ ಏನೀಗ? ತನಗಾದರೂ ಯಾರಿದ್ದಾರೆ? ನನ್ನ ಸೋದರರು, ಅಕ್ಕಂದಿರು, ತಂಗಿಯರು… ಯಾರ ಜೊತೆ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿ? ನಾನು ಅನಾಥಾಶ್ರಮಕ್ಕೆ ಹೋಗಿ ಅಲ್ಲಿಯ ಮಕ್ಕಳೊಂದಿಗೆ ಆಚರಿಸಿಕೊಳ್ಳಬೇಕು. ಹೌದಲ್ಲವೇ ಸಮಂತಾ? ಎಂದು ಅವಳನ್ನು ನೆನಪಿಸಿಕೊಳ್ಳುತ್ತ ಕನ್ನಡಿಯಲ್ಲಿ ನನ್ನನ್ನೇ ನಾನು ನೋಡಿಕೊಂಡೆ. ಆದರೆ ಸಮಂತಾ, ‘ಪ್ರತ್ಯೂಷಾ ಫೌಂಡೇಶನ್’ ನಲ್ಲಿರುವ ಮಕ್ಕಳ ಚಿಕಿತ್ಸೆಗೆ ದುಡ್ಡು ಕೊಡುತ್ತಾಳೆ. ನಾನು ಹಾಗೆಯೇ ಏನಾದರೂ ಮಾಡಬೇಕಲ್ಲ. ಕವಿಗೋಷ್ಠಿಯೋ, ಚರ್ಚೆಯೋ ಎಂದು ಕಾರ್ಯಕ್ರಮಗಳಿಗೆ ಹೋಗಿ ಬಂದಾಗೆಲ್ಲ ನನ್ನನ್ನೇ ನಾನು ಸಮಂತಾ ಎಂದು ಭಾವಿಸಿಕೊಂಡು ಹೆಮ್ಮೆ ಪಟ್ಟುಕೊಳ್ಳುತ್ತೇನೆ. ಆದರೆ ಸಮಂತಾ ರೀತಿಯಲ್ಲಿ ಸಾಮಾಜಿಕವಾಗಿ ತೊಡಗಿಕೊಳ್ಳಲು ನನಗಾಗುವುದೇ? ನಾನಿನ್ನೂ ಡಿಗ್ರಿ ಓದುತ್ತಿದ್ದೇನೆ. ಎಲ್ಲಿಂದ ಹಣ ತರಲಿ? ಹೋಗಲಿ ಆ ಮಕ್ಕಳಿಗೆ ಬಟ್ಟೆ ಕೊಡಿಸಬೇಕೆಂದರೂ ತಂದೆತಾಯಿಯನ್ನೇ ಕೇಳಬೇಕು. ಬೇಡ ಬಿಸ್ಕೆಟ್ ಪೊಟ್ಟಣ ಹಂಚುವಷ್ಟು ನನ್ನ ಬಳಿ ದುಡ್ಡಿದೆ. ಅದೇ ಸರಿ.

ಕಾಲೇಜಿನಲ್ಲಿ, ಹೋದಲ್ಲಿ ಬಂದಲ್ಲೆಲ್ಲ ಎಲ್ಲರೂ ನನ್ನನ್ನು ಅದೆಷ್ಟು ಗೌರವಿಸುತ್ತಾರೆ. ಆದರೆ ಸ್ವತಃ ನನ್ನ ಅಣ್ಣತಮ್ಮಂದಿರು ಯಾಕೆ ನನ್ನನ್ನು ಕೆಟ್ಟವಳೆಂದು ಅಪಪ್ರಚಾರ ಮಾಡುತ್ತಾರೆ, ಯಾಕೆ ಹೀಗೆಲ್ಲ? ಅನಾಥಾಶ್ರಮದಿಂದ ಬಿಸ್ಕೆಟ್ ಪೊಟ್ಟಣ ಹಂಚಿ ಹಿಂತಿರುಗುತ್ತಿದ್ದಾಗ ಮತ್ತೆ ಇವೇ ಯೋಚನೆಗಳು. ನನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಿದವ ತಾನು ಭಾರೀ ಶ್ರೀಮಂತ ಎಂದು ಹೇಳಿಕೊಳ್ಳುತ್ತಿದ್ದನಲ್ಲ ಅವನೂ ಅಷ್ಟೇ. ನಿನಗಿರುವಷ್ಟು ಜನಪ್ರಿಯತೆ ನನಗಿಲ್ಲ ಎಂದು ಕರಬುತ್ತಲೇ ಇರುತ್ತಾನೆ. ಆತ ಚೆನ್ನಾಗಿ ಹಣ ಗಳಿಸುತ್ತಾನೆ. ಈವತ್ತು ಅವ ನನ್ನೊಂದಿಗೆ ಮಾತನಾಡಿದ್ದರೆ ಇಬ್ಬರೂ ಸೇರಿ ಅನಾಥಾಶ್ರಮದ ಮಕ್ಕಳಿಗೆ ಏನಾದರೂ ಮಾಡಬಹುದಿತ್ತಲ್ಲ? ಆದರೆ ಈ ವಿಷಯ ಹೇಗೆ ಕೇಳಲು ಸಾಧ್ಯ ಅವನಲ್ಲಿ? ಆತ ಅಹಂಕಾರ, ಆಷಾಢಭೂತಿತನ ಬಿಟ್ಟಿದ್ದರೆ ಅವನನ್ನು ಯಾವ ವಾರ್ಡಿಗಾದರೂ ನಗರಸಭೆ ಎಲೆಕ್ಷನ್​ಗೆ ನಿಲ್ಲಿಸಿ ಅವನಿಗೂ ಒಂದು ಐಡೆಂಟಿಟಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದೆ. ಆದರೆ ಆತ ನನ್ನನ್ನು ನಾನೇ ಕೀಳಾಗಿ ನೋಡಿಕೊಂಡು ಜಿಗುಪ್ಸೆ ಹೊಂದಬೇಕು ಹಾಗೆ ಮಾಡುತ್ತಿದ್ದಾನೆ.

ಅದೆಷ್ಟು ಕನಸುಗಳು ನನಗೆ ಆತನ ಬಗ್ಗೆ ಮೊದಮೊದಲು. ಅವನಿಗೆ ಹೇಗೆ ಒಂದು ಐಡೆಂಟಿಟಿ ಸೃಷ್ಟಿಸುವುದು?  ಉಪ್ಪಿನಕಾಯಿಯ ಭರಣಿಗಳನ್ನು ತಯಾರಿಸಬೇಕು ಅಥವಾ ಗುಡಿಕೈಗಾರಿಕೆಗಳಿಗೆ ಸಂಬಂಧಿಸಿ ಕಂಪೆನಿ ಕಟ್ಟಬೇಕು. ಅದಕ್ಕೆ ಅವನೇ ಸಿಇಓ ಆಗಬೇಕು. ಹೀಗೆ… ಹೀಗೆ ಏನ್ನೂ ಏನೇನೋ. ಆದರೆ ಯಾವುದನ್ನೂ ನಾನು ಆತನಿಗೆ ಹೇಳಲೇ ಇಲ್ಲ! ಏಕೆಂದರೆ ಆತನ ಪ್ರತಿಯೊಂದು ಮಾತು ನನಗೆ ದಿಗಿಲು ಬಡಿಸುವಂಥದ್ದೇ. ಚೆನ್ನಾಗಿ ಮಾತನಾಡುತ್ತಿದ್ದವ ಒಮ್ಮೆಲೆ,  ‘ನಾನು ಶ್ರೀಲಂಕಾ ಹುಡುಗಿಯೊಂದಿಗೆ ತಿರುಗುತ್ತಿದ್ದೇನೆ ಏಕೆಂದರೆ, ನೀನು ಮೊನ್ನೆ ನನ್ನ ಜೊತೆ ಬರಲು ಒಪ್ಪಲಿಲ್ಲ ಕಾಫಿ ಕುಡಿಯಲು, ಅದಕ್ಕೆ ಹೀಗೆ ಮಾಡುತ್ತಿದ್ದೇನೆ’ ಎಂದು ಫೋನ್ ಕಟ್ ಮಾಡಿದ.  ಇನ್ನೊಮ್ಮೆ, ‘ಫೋಟೋದಲ್ಲಿ ನಿನ್ನ ಪಕ್ಕ ಇರುವ ಹುಡುಗಿ ನಿನಗಿಂತ ಚೆನ್ನಾಗಿದ್ದಾಳೆ’ ಎಂದು ಪಟ್ಟನೆ ಫೋನಿಟ್ಟ. ಬರೀ ಇದೇ ಆಯ್ತು. ಥಾಮಸ್ ಹಾರ್ಡಿಯ ‘ಫಾರ್ ಫ್ರಮ್ ದಿ ಮ್ಯಾಡಿಂಗ್ ಕ್ರೌಡ್’ ನಾನು ಓದಿಕೊಂಡಿದ್ದರೆ ಚೆನ್ನಾಗಿತ್ತು. ಏಕೆಂದರೆ ಅದರಲ್ಲಿ ಬರುವ ಟ್ರಾಯ್ ಫ್ರಾನ್ಸಿಸ್​ನ ಅಪರಾವತಾರದಂತೆ ಇವ ಎನ್ನುವುದು ಮೊದಲೇ ತಿಳಿದುಬಿಡುತ್ತಿತ್ತು.

ನನ್ನ ಅಜ್ಜಿಯ ಮಾತು ಕೇಳದಿದ್ದರೆ ನಾನು ಇಷ್ಟೊತ್ತಿಗೆ ‘ಫಾರ ಫ್ರಮ್ ಮ್ಯಾಡಿಂಗ್ ಕ್ರೌಡ್’ ನ ಬಾತಶೇಬಾ ಎವರ್ ಡೀನ್ ಆಗಿರುತ್ತಿದ್ದೆ. ಅಂದರೆ ಆತನ ಬಲೆಯಲ್ಲಿ ಬಿದ್ದಿರುತಿದ್ದೆ!

ಅಂದು ನಾನು ರೆಡಿಯಾಗುತ್ತಿದ್ದೆ. ಅಜ್ಜಿ ಎಲ್ಲಿ ಹೊರಟಿದ್ದೀಯಾ ಎಂದಳು. ಆ ದಿನ ಅವ ನಮ್ಮ ಮನೆಗೆ ಬಂದಿದ್ದನಲ್ಲ ಅವನು, ‘ನೀನು ಕಾಫಿ ಕುಡಿಯಲು ನನ್ನೊಂದಿಗೆ ಬಾರದಿದ್ದರೆ, ನಾನು ಶ್ರೀಲಂಕಾದವಳೊಂದಿಗೆ ಸುತ್ತಾಡುತ್ತೇನೆ. ಇಲ್ಲವಾದರೆ ಇನ್ನೊಬ್ಬಳೊಂದಿಗೆ ಮಾತನಾಡಿಕೊಂಡಿರುತ್ತೇನೆ.’ ಎಂದು ಹೆದರಿಸುತ್ತಿದ್ದಾನೆ. ಅದಕ್ಕೇ ನಾನು ಹೋಗುತ್ತಿದ್ದೇನೆ ಅಜ್ಜಿ. ನಿನಗೆ ಗೊತ್ತಾ? ಆಗಸ್ಟ್​ನಲ್ಲಿ ನನಗೆ ಸಾಹಿತ್ಯ ಪ್ರಶಸ್ತಿ ಬಂತು. ಎಲ್ಲರೂ ವಿಶ್ ಮಾಡಿದರು. ಆತ ಮಾಡಲೇ ಇಲ್ಲ. ನಾನು ಅವನೊಂದಿಗೆ ಹೊರಗೆ ಹೋಗದಿರುವ ಕಾರಣಕ್ಕೆ ಸಿಟ್ಟಾಗಿ ಹೀಗೆ ಮಾಡುತ್ತಿದ್ದಾನೆ.

ಇದನ್ನೂ ಓದಿ : Sydney Diary : ಹೆಣ್ಣುಮಕ್ಕಳನ್ನು ಅಡುಗೆಮನೆಯಲ್ಲಿ ಬೆಳೆಸಿ ಗಂಡುಹುಡುಗರನ್ನು ಹೊರಗೆ ಬೆಳೆಸಿದರೆ ಇನ್ನೇನಾಗುತ್ತದೆ?

ಅಜ್ಜಿ ಕೇಳಿದಳು, ‘ಓಹ್ ಆ ಹುಡುಗನೇ? ಅವ  ಯಾರೆಂದು ಗೊತ್ತೆ ನಿನಗೆ? ಅವನ ಅಜ್ಜಅಜ್ಜಿಯ ಬಗೆಗಾದರೂ ಗೊತ್ತೇ?’

ಮತ್ತು ನಾನೆಂದೆ, ‘ಅಜ್ಜಿ ನನಗೆಲ್ಲವೂ ಗೊತ್ತು’

ಯಾವುದಕ್ಕೂ ಅಷ್ಟಾಗಿ ತಲೆಕೆಡಿಸಿಕೊಳ್ಳದ ಅಜ್ಜಿ ವಿಚಿತ್ರವಾಗಿ ವರ್ತಿಸಿದಳು. ಹಣೆ ಹಣೆ ಚಚ್ಚಿಕೊಂಡಳು. ಅಯ್ಯೋ ಬಸವಣ್ಣ ಎಂದು ಹೇಳಲು ಶುರು ಮಾಡಿದಳು. ‘ನಿನ್ನನ್ನು ಕಂಡರೆ ಯಾರಿಗೂ ಆಗುವುದಿಲ್ಲ ಏಕೆ ಗೊತ್ತೆ? ಇಡೀ ಜಗತ್ತೇ ನಿನಗೆ ವಿಶ್ ಮಾಡಿದರು ನಿನ್ನ ಮನೆಯವರೇಕೆ ನನಗೆ ವಿಶ್ ಮಾಡೋದಿಲ್ಲ ಗೊತ್ತೇ? ಪ್ರಶಸ್ತಿ ಬಂದಾಗ ಯಾಕೆ ಅವರು ಖುಷಿಪಡಲಿಲ್ಲ ಎನ್ನುವುದು ಗೊತ್ತೇ? ಹೋಗಲಿ ನಿನ್ನನ್ನು ಏಕೆ ಹೀಗೆ ಸೇಡಿನಿಂದ ನೋಡುತ್ತಾರೆ ಎಂಬುದಾಗಲಿ ಗೊತ್ತೇ?’

ನಾನಂದೆ, ‘ಇಲ್ಲ ಅಜ್ಜಿ ಇಲ್ಲ ನನಗೆ ಗೊತ್ತಿಲ್ಲ. ಆತ ಕೂಡ ಹೀಗೆ ಹೇಳುತ್ತಾನೆ, ನಿನ್ನ ಸೋದರರೇ ನಿನ್ನ ಬಗ್ಗೆ ಕೀಳಾಗಿ ಮಾತನಾಡುತ್ತಾರೆಂದಮೇಲೆ ನೀನು…  ಆಗೆಲ್ಲಾ ನನಗೆ ನಖಶಿಖಾಂತ ಉರಿದುಹೋಗುತ್ತೆ. ಇಡೀ ಜಗತ್ತೆಲ್ಲ ನನ್ನ ಬಗ್ಗೆ ಹಾಡಿ ಹೊಗಳುವಾಗ ಈ ಸೋದರರು, ಮತ್ತಿವನೂ…’

ಅಜ್ಜಿ, ‘ಎಂದೂ ಇಲ್ಲದ ನೀನು ಇಂದು ಹೀಗೆ ಅವನೊಂದಿಗೆ ತಿರುಗಲು ಹೊರಟಿರುವಿಯೆಲ್ಲ! ನಿನ್ನ ತಾಯಿಯೂ ಹೀಗೇ ನಿನ್ನ ತಂದೆಯ ಜೊತೆ ತಿರುಗುತ್ತಿದ್ದಳು. ದೇವಸ್ಥಾನಗಳಿಗೂ ಹೋದರು. ರಜಿಸ್ಟರ್ ಮದುವೆಯೂ ಆದರು. ಆದರೆ ನೀನು ನಿನ್ನ ತಾಯಿಯ ಹೊಟ್ಟೆಯಲ್ಲಿರುವಾಗ ನಿನ್ನ ತಂದೆಯ ತಾಯಿ, ಅಂದರೆ ನಿನ್ನ ಅಜ್ಜಿ, ನನ್ನ ಗಂಡನನ್ನು ಕರೆದು, ‘ರಜಿಸ್ಟರ್ ಮದುವೆ ಆದರೆ ನಾವೇನು ಮಾಡಬೇಕು, ನಾವು ನಮ್ಮ ಮಗನಿಗೆ ಇನ್ನೊಂದು ಮದುವೆ ಮಾಡುತ್ತೇವೆ. ಹೊಟ್ಟೆಯಲ್ಲಿರುವ ಮಗುವನ್ನು ಕೊಂದುಬಿಡಿ. ಕ್ಷಣ ಕೂಡ ಇಲ್ಲಿ ನಿಲ್ಲದೆ ಇಲ್ಲಿಂದ ನಡೆದುಬಿಡಿ ಎಂದು ಹೇಳಿ ಇನ್ನೊದು ಮದುವೆಯನ್ನು ಮಾಡಿಯೇಬಿಟ್ಟರು.

‘ಆಗ ನಿನ್ನಜ್ಜನಿಗೆ ಹೇಗಾಗಿರಬೇಡ, ಆತನನ್ನು ಒಳಗೆ ಕೂಡ ಕರೆಯಲಿಲ್ಲ ಅವರು. ಆಗ ನಿಮ್ಮ ಅಜ್ಜನನ್ನು ಸಂತೈಸಿ ಸಮಾಧಾನಿಸಿ ಹೊಟ್ಟೆಯಲ್ಲಿರುವ ಮಗುವನ್ನು ಕೊಲ್ಲಬೇಡಿ ಎಂದು ಹೇಳಿ ಧೈರ್ಯ ತುಂಬಿದ್ದು ಯಾರು ಗೊತ್ತೆ? ಈಗ ಹೋಗುತ್ತಿರುವೆಯಲ್ಲಾ ಆ ಹುಡುಗನ ಅಜ್ಜ ಅಜ್ಜಿ! ಅವರು ಬಿಟ್ಟರೆ ಇನ್ನಾರೂ ನಿನ್ನ ಪರವಾಗಿ ಮಾತನಾಡಿಲ್ಲ ನೀನು ನಿನ್ನ ತಾಯಿಯ ಹೊಟ್ಟೆಯಲ್ಲಿದ್ದಾಗ. ಹಾಗಾಗಿ ನಿನ್ನ ವಂಶದವರೆಲ್ಲ ನಿನ್ನ ವಿರುದ್ಧವಾಗಿರುವುದು ಸಹಜ. ಹೇಳು, ನೀನು ನಿನ್ನ ತಾಯಿಯಂತೆಯೇ ಆಗುತ್ತೀಯಾ? ಗುಡಿ ಗುಂಡಾರ ಅಲೆದು  ಕೊನೆಗೆ ರಜಿಸ್ಟರ್ ಮದುವೆಯಾಗುವುದು…

ಈಗ ನೀನು ಹೀಗೆ ಆತನ ಜತೆ ಓಡಾಡಲು ಪ್ರಾರಂಭಿಸಿದರೆ ನಿನ್ನ ವಂಶದವರೆಲ್ಲರೂ ನಿನ್ನ ಅಧೋಗತಿಯನ್ನು, ಅಪಖ್ಯಾತಿಯನ್ನು ಬಯಸುತ್ತಾರೆ. ಆದರೆ ನೀನು ಹೀಗೆ ಆತನ ಜತೆಗೆ ಓಡಾಡಿದರೆ, ತಲೆ ತಗ್ಗಿಸುವುದು ಆತನ ಅಜ್ಜ ಅಜ್ಜಿಯ ವಂಶದವರು! ಏಕೆಂದರೆ ಅವರೇ ನಿನ್ನ ಪರವಾಗಿ ಅಂದು ಮಾತನಾಡಿ ನಿನ್ನನ್ನು ಉಳಿಸಿದ್ದು. ಏನು ಮಾಡುವೆ ನೀನೇ ಯೋಚಿಸು. ನೀನೂ ನಿನ್ನ ತಾಯಿಯ ಹಾದಿಯನ್ನೇ ತುಳಿಯುತ್ತೀಯಾ? ಅಥವಾ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆನ್ನುವುದು ತಲೆಯಲ್ಲಿದೆಯಾ?

ನನ್ನಷ್ಟಕ್ಕೆ ನಾನು ಬೆಚ್ಚಿ ಹೋದೆ. ನನಗೆ ಆತನ ಮಾತುಗಳೇ ರಿಂಗಣಿಸಿದವು. ಪದೇಪದೆ ಈಟಿಯಂತೆ ತಿವಿಯುತ್ತಿದ್ದ ಆತನ ಮಾತುಗಳು ನೆನಪಿಗೆ ಬಂದವು. ಅದಕ್ಕೆ ನನ್ನ ಮಲಸೋದರರು ನನ್ನನ್ನು ಕಂಡರೆ ಹೀಯಾಳಿಸುವುದು. ನನಗಿದು ಮೊದಲೇ ತಿಳಿದಿರಲಿಲ್ಲ. ನನ್ನವರೇ ನನ್ನ ಮೇಲೆ ಇಷ್ಟೊಂದು ಹಗೆ ಸಾಧಿಸುತ್ತಿದ್ದಾರೆ. ಊಹಾಪೋಹ ಕಟ್ಟಿ ಅಪಖ್ಯಾತಿಗೀಡು ಮಾಡುತ್ತಿದ್ದಾರೆ. ಅಷ್ಟೇ ಯಾಕೆ ನನ್ನನ್ನು ಕೊಲ್ಲಲೂ ಪ್ರಯತ್ನಿಸುತ್ತಿದ್ದಾರೆ. ಅಜ್ಜಿಯ ಮಾತಿನಿಂದ ಎಲ್ಲವೂ ತಿಳಿದುಹೋಯಿತು.

ಎಲ್ಲರೂ ನನ್ನ ತಾಯಿಯ ಧೈರ್ಯವನ್ನು ನೋಡಿ ಆಕೆಯ ಗಟ್ಟಿಗಟ್ಟಿಯಾದ ಮಾತುಗಳನ್ನು ಕೇಳಿ, ಆಕೆಯಂತಾಗಬೇಕು ಎಂದುಕೊಳ್ಳುವಾಗ, ‘ಅಜ್ಜಿ ನೀನು ಮಾತ್ರ ನಿನ್ನ ತಾಯಿಯಂತಾಗಬೇಡ’ ಎಂದು ಹೇಳಿದ್ದಳು.  ಅಜ್ಜಿ ಹೇಳಿದ್ದು ಸರಿ ಇತ್ತು ಕೂಡ.

ಏನು ಮಾಡಲಿ ನಾನು, ಮತ್ತೆ ನನ್ನಲ್ಲಿ ಗೊಂದಲ. ನನಗೀಗ ಆತನಿಗಿಂತ ಆತನ ಅಜ್ಜಅಜ್ಜಿಯ ಮೇಲೆ ಒಲವು ಹೆಚ್ಚಾಯಿತು. ಅವನ ಅಜ್ಜಅಜ್ಜಿ ನಾನು ತಾಯಿಯ ಹೊಟ್ಟೆಯಲ್ಲಿದ್ದಾಗಲೇ ನನ್ನನ್ನು ಬದುಕಿಸಿದ್ದಕ್ಕೆ ಗೌರವ ಮೂಡಲಾರಂಭಿಸಿತು. ಆದರೆ ಈತ ಪ್ರತಿ ಮಾತಿನಲ್ಲಿಯೂ ನನ್ನನ್ನು ಕೊಲ್ಲುತ್ತಿದ್ದ ಈಟಿಯಂತಹ ಮಾತುಗಳಿಂದ.

ಇದನ್ನೂ ಓದಿ : Orange Signal : ‘ಅಯ್ಯೋ ಗೋಡೆಯ ಬಣ್ಣ ಏನಿರಬೇಕಂತ ಹೇಳಿದರೆ ಸಾಕು ಅವಳು’

ಹಾಗಾಗಿ ನನ್ನೆಲ್ಲ ಶಕ್ತಿಯನ್ನೂ ಒಟ್ಟುಗೂಡಿಸಿಕೊಂಡು ಆತನಿಂದ ದೂರವಾಗಲು ಪ್ರಯತ್ನಿಸಿದೆ. ಅದು ಹೇಗೆ! ಮಾತುಮಾತಿಗೂ ಆತನನ್ನು ಲೇ ಲೇ ಲೇ ಲೇ ಎಂದು ಕರೆದು. ಸಿಡಿಲು ಗುಡುಗಿನಂತೆ ಆರ್ಭಟಿಸಿ. ಅವನ್ಯಾರು ನನಗೆ ತಿಳಿದೇ ಇಲ್ಲ ಎಂಬಂತೆ ನಾಟಕವಾಡಿ. ಇರೋ ಬರೋ ಪಾತ್ರೆ ಪಗಡೆಗಳನೆಲ್ಲಾ ಆತನ ಮೇಲೆ ಎಸೆದು. ಆತ ಎಣಿಸಿರಲೇ ಇಲ್ಲ ನಾನು ಹೀಗೆ ಮಾಡಬಹುದೆಂದು.

ಒಂದು ಕಡೆ ತಾಯಿಯಂತೆ ನಾನಾಗಬಾರದೆಂಬ ಹಟ. ಇನ್ನೊಂದು ಕಡೆ ನನ್ನ ಘನತೆಯನ್ನು ನಾಶಮಾಡಲು ಕಾದಿರುವ ಲಂಪಟ ಅಣ್ಣತಮ್ಮಂದಿರ ಮುಂದೆ ಸೋಲೊಪ್ಪಿಕೊಳ್ಳಬಾರದು ಎಂಬ ಕೆಚ್ಚು. ಮತ್ತೊಂದು ಕಡೆ
ಈ ಶೋಕಿಲಾಲ ಗಂಡಸಿನ ಧಿಮಾಕನ್ನ ಹುಟ್ಟಡಗಿಸುವ ಚಟ. ಇದರೆಲ್ಲದರ ಆಚೆಗೆ, ನನ್ನನ್ನು ಉಳಿಸಿದ ಆತನ ಅಜ್ಜ ಅಜ್ಜಿಗೆ ಏನಾದರೂ ಸಾಧನೆ ಮಾಡಿ ತೋರಿಸಬೇಕೇ ಹೊರತು, ಅವರ ಮೊಮ್ಮಗನೊಂದಿಗೆ ಓಡಾಡಿ ನನ್ನ ಘನತೆಯನ್ನು ಹರಾಜಿಗಿಡಬಾರದೆಂದು ನಿರ್ಧರಿಸಿದೆ.

ಇದೆಲ್ಲವೂ ಆ ಮೂರ್ಖ ಗಂಡಸಿಗೆ ತಿಳಿಯಲೇ ಇಲ್ಲ. ನಾನು ಆತನಿಗೆ ಈ ಸತ್ಯವನ್ನು ಹೇಳಲು ಹೋಗಲಿಲ್ಲ. ಕೇಳುವಷ್ಟು ವ್ಯವಧಾನವೂ ಆತನಿಗಿರಲಿಲ್ಲ. ಆತನಿಂದ ದೂರ ಹೋಗಲು ಪ್ರಯತ್ನಿಸಿದರೂ ಆತನಿಗೆ ಅರ್ಥವಾಗುತ್ತಿರಲಿಲ್ಲ. ಅವನೊಂದಿಗೆ ನಾನು ಹೋಗದ ಕಾರಣ ಅದನ್ನೇ ದೊಡ್ಡ ಸುದ್ದಿ ಮಾಡಿದ. ಇದು ಹೀಗೇ ಸಾಗಿದರೆ ಸರಿಯಲ್ಲವೆಂದು ದೊಡ್ಡ ಮಟ್ಟದ ಜಗಳವನ್ನೇ ಅವನೊಂದಿಗೆ ಆಡಬೇಕಾಯಿತು. ಮೊದಲು ಪ್ರೀತಿಯನ್ನು ಒಪ್ಪಿದವಳು. ಹೀಗೇಕೆ ವರ್ತಿಸಿದಳು ಎಂಬುದು ಇನ್ನೂ ಆತನಿಗೆ ತಿಳಿದೇ ಇಲ್ಲ. ಆತನಿಗೆ ತಿಳಿಯುವುದು ಬೇಡ. ನನಗೆ ಆತ ಎಂದೆಂದೂ ಬೇಡ.

ಹೆಣ್ಣು ಭ್ರೂಣಹತ್ಯೆಯನ್ನು ಮಾಡಬಾರದೆಂದು ಎಲ್ಲರೂ ಅರಚಿ ಕಿರುಚುವುದು ಫೋನಿನಲ್ಲಿ, ಪತ್ರಿಕೆಯಲ್ಲಿ, ಟಿವಿಯಲ್ಲಿ ಮಾತ್ರ. ಆದರೆ ಅದು ಆ ಕಾಲದಲ್ಲಿ, ಸ್ವತಃ ನನ್ನ ಅಜ್ಜಿಯೇ ನನ್ನನ್ನು ಗರ್ಭದಲ್ಲೇ ಹೊಸಕಿ ಹಾಕಲು ನೋಡಿದ್ದರು. ಯಾಕೋ ನನಗೆ ಪ್ರೀತಿ ಕ್ಷುಲ್ಲಕವೆನ್ನಿಸಿತು (Love is not my cup of tea). ನನಗೆ ನನ್ನ ಶೈಕ್ಷಣಿಕ ಮತ್ತು ಸಾಹಿತ್ಯಿಕ ಸಾಧನೆಗಳೇ ಮುಖ್ಯವೆನ್ನಿಸತೊಡಗಿದವು. ಅಲ್ಲಿಂದ ನನ್ನ ಎದೆ ಕಲ್ಲಾಗಿ ಹೋಯಿತು. ಎಂತಹ ಸಾವು ಬರಲಿ, ಎಂತಹ ನೋವು ಬರಲಿ, ಎಂತಹ ದಿಗಿಲು ಹಿಡಿಸುವ ಮಾತುಗಳೇ ಸುರಿಯಲಿ, ನನ್ನ ಹರಣಗೊಳಿಸಲು ಕಾಯುತ್ತಿರಲಿ ನಾನು ಮಾತ್ರ ನನ್ನ ಆತ್ಮಗೌರವವನ್ನು ನಿಶ್ಚಲವಾಗಿ ನಿರಂತರವಾಗಿ ಕಾಪಾಡಿಕೊಳ್ಳುವ ಪ್ರಯತ್ನದಲ್ಲಿರುತ್ತೇನೆ.

(ಮುಂದಿನ ಸತ್ಯ : ಅರುಂಧತಿ ಬರೆದಾಗ)

ಪ್ರತಿಕ್ರಿಯೆಗಾಗಿ : tv9kannadadigital@gmail.com 

ಇದನ್ನೂ ಓದಿ : ಋತುವಿಲಾಸಿನಿ : ಸಾವು ಆವರಿಸುವ ಹೊತ್ತಿನಲ್ಲಿ ನೀನು ಹೊರಗಿರಬೇಕು ಅಂತ ಬಯಸುವವಳು ನಾನು

Published On - 2:54 pm, Wed, 27 April 22