AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಋತುವಿಲಾಸಿನಿ : ಸಾವು ಆವರಿಸುವ ಹೊತ್ತಿನಲ್ಲಿ ನೀನು ಹೊರಗಿರಬೇಕು ಅಂತ ಬಯಸುವವಳು ನಾನು

Snake : ಕಾಯಿ ರಾಶಿಯ ಕೆಳಗೆ ಮಿರಿಮಿರಿ ಮಿರುಗು ನಾಗಪ್ಪ ನಡುಗುತ್ತ ಮಲಗಿರಬೇಕು ಎನಿಸಿ ಮಮತೆಯುಕ್ಕಿತು. ಹುಲಿ ಹುಲ್ಲೆ ಹಾವು ಹಕ್ಕಿ ಗಿಡ ಮಣ್ಣು ಕಲ್ಲು ಎಲ್ಲವೂ ಬೆಚ್ಚಗೆ ಬಾಳುವ ಕಾಲ ಕರುಣಿಸಲಿ ದೇವರು. ಇಲ್ಲಿ ಏನೋ.. ಏನೇನೋ ನಡೆಯುತ್ತಿದೆ.

ಋತುವಿಲಾಸಿನಿ : ಸಾವು ಆವರಿಸುವ ಹೊತ್ತಿನಲ್ಲಿ ನೀನು ಹೊರಗಿರಬೇಕು ಅಂತ ಬಯಸುವವಳು ನಾನು
ಫೋಟೋ : ಕೃಷ್ಣ ದೇವಾಂಗಮಠ
Follow us
ಶ್ರೀದೇವಿ ಕಳಸದ
|

Updated on:Apr 26, 2022 | 9:45 AM

ಋತುವಿಲಾಸಿನಿ | Rutuvilaasini : ಮೊನ್ನೆ ಕಾಯಿ ಕೀಳಿಸ್ತಿದ್ದೀನಿ ಅಂತೊಂದು ವಿಡಿಯೊ ಹಾಕಿದ್ದೆ ನಿನಗೆ. ನೆನಪಿದ್ಯಾ ಹನೀ? ತಿಂಗಳು ಮುಂಚೆಯೇ ಹೇಳಿದ್ರೂ ಇವತ್ತು ನಾಳೆ ಅಂತ ನೆಪ ತೆಗೀತಿದ್ದ ಕಾಯಿ ಕೀಳುವ ಹುಡುಗನಿಗೆ ಮನೆಯಲ್ಲಿ ಶುಭ ಕಾರ್ಯ ಎಂದೆ. ಕೂಡಲೇ ನಾಳೆ ಬೆಳಿಗ್ಗೇನೆ ಬರ್ತೀವಿ ಅಕ್ಕ ಅಂದ. ‘ಕಾಯಿ ಹೊರಲಿಕ್ಕೆ ನಂಗೆ ಹೇಳಬೇಡಿ ಮತ್ತೆ, ಜೊತೆಗೊಂದು ಹುಡುಗನನ್ನು ಕರಕೊಬರ್ತೀನಿ. ಏನಾದರೂ ಕೊಡಿರಂತೆ’ ಎಂದವನ ಮಾತು ಕೇಳಿ ಕೆಲಸ ಸಲೀಸಾಯ್ತು ಅಂತ ನಿರಾಳವಾಗಿದ್ದೆ ಹನೀ. ಮಾರನೆಯ ಬೆಳಿಗ್ಗೆ ನಾನಿನ್ನೂ ಹೊಸಿಲು ತೊಳೆದೇ ಇರಲಿಲ್ಲ.ಆಗಲೇ ಬೆಲ್ ಸದ್ದು. ಹೊರಬಂದರೆ ಮಾತಿಗೆ ತಪ್ಪದ ಮಗನಂತೆ ಕಾಯಿ ಕೆಡುವವ ಒಂದು ಫುಲ್ ಸ್ಮೈಲು ಕೊಟ್ಟು ಕೊನೆ ಮರದಿಂದ ಕೀಳ್ತಿನಿ ಅಂತ ಹೋಗಿ ಸರಸರನೆ ಮರ ಹತ್ತುವ ಮೆಷೀನು ಜೋಡಿಸಿದ. ಅವನು ಹೇಳಿದ್ದ ಆ ಹುಡುಗನೂ ಜೊತೆಯಲ್ಲಿದ್ದ. ಈಗಷ್ಟೇ ಮೀಸೆ ಚಿಗುರುತ್ತಿದ್ದ ಪೋರ ಅವನು. ಬಾಲಿಶತನವೂ ತುಂಟತನವೂ ತುಂಬಿಕೊಂಡು ಮುದ್ದಾಗಿದ್ದ. ನಂದಿನಿ ಹೆದ್ದುರ್ಗ, ಕವಿ, ಲೇಖಕಿ (Nandini Heddurga)

(ಋತು 6)

ಅವಸರದಲ್ಲಿ ಹೊಸಿಲಿಗೆ ಹೂವಿಟ್ಟು ನಾನೂ ಅಲ್ಲಿಗೆ ಹೋದೆ. ಚಕಚಕ ಹತ್ತಿ ಮೈ ತುಂಬಾ ಫಲ ಹೊತ್ತು ನಿಂತಿದ್ದ ಮರದಿಂದ ಬಲಿತ ಗೊನೆಗಳನ್ನು ಕಡಿದು ಹಾಕುವುದನ್ನು ನೋಡುವುದೇ ಖುಷಿ. ಇದೊಂದು ಕೆಲಸವನ್ನು ಮಾತ್ರ ಇವತ್ತಿನವರೆಗೂ ಅವರ ಪಾಡಿಗೆ ಅವರೇ ಮುಗಿಸಿ ಹೋಗಲು ಬಿಟ್ಟಿಲ್ಲ ಹನೀ ನಾನು.

ಬಲಿತ ಕಾಯಿ ಹಾಗೇ ಉಳಿಸ್ತಾರೆ ಅಂತಲೋ, ಒಣಸೋಗೆಗಳನ್ನು ಕಿತ್ತು ಮರ ಹಗೂರ ಮಾಡುವಲ್ಲಿ ಸೋಮಾರಿತನ ಮಾಡ್ತಾರೆ ಅಂತಲೋ, ಮರ ಹತ್ತುವ ತ್ರಾಸಿನ ಕೆಲಸದಲ್ಲಿ ಯಾವುದಕ್ಕೂ ಮತ್ತೊಂದು ಜೀವ ಜೊತೆಗಿರಬೇಕು ಎನ್ನುವುದೋ ನಾನು ಅಲ್ಲೇ ಉಳಿಯಲು ಇರುವ ಕಾರಣ.

ಅವನು ಒಂದು ಮರದಿಂದ ಮತ್ತೊಂದಕ್ಕೆ ಹತ್ತಿ ಕಾಯಿ ಉದುರಿಸುತ್ತಲೇ ಇದ್ದ. ಅದೋ.. ಅಲ್ಲಿ ನಿಂತಿದ್ದ ಆ ಹುಡುಗ ‘ಆಂಟಿ.. ರಾಶಿ ಹಾಕ್ತಿನಿ ಇನ್ನೂ’ ಅಂತಂದು ನನ್ನ ಒಪ್ಪಿಗೆಗೆ ಕಾಯ್ದ. ಒಂದು ಸಾಲಿನ ಮರ ಮುಗಿಯುವವರೆಗೂ ಅಲ್ಲಿ ಕಾಯಿ ಆರಿಸುವುದಕ್ಕೆ ಕಳಿಸುವುದಿಲ್ಲ ನಾನು. ವೃಥಾ ಅಪಾಯದ ಬಾಬ್ತು ಅದು. ಈ ಕಡೆ ಮರದಲ್ಲಿ ಕೆಡವುವಾಗ ಆ ತುದಿಯ ಮರದಲ್ಲಿ ರಾಶಿ ಹಾಕುತ್ತಿದ್ದ ಹುಡುಗನ ಚುರುಕುತನದ ಚಂದಕ್ಕೆ ಸೋತು ಅಲ್ಲೇ ಈ ಬದಿಯ ನೆರಳಲ್ಲಿ ಕೂರುವ ಅಂತ ಹೆಜ್ಜೆ ತೆಗೆಯುವ ಮುನ್ನ ಬುಡದಲ್ಲೇ ಬಿದ್ದಿದ್ದ ಕಾಯಿ ನೋಡಿ ರಾಶಿಯೆಡೆಗೆ ಎಸೆಯಲು ಬಗ್ಗಿ ಕೈ ಮುಂದೆ ಮಾಡಿದೆ.

ಮಿರಿಮಿರಿ ಮಿಂಚುವ ಗೋದಿಬಣ್ಣದ ಎರಡು‌ ಮಟ್ಟಸ ಗಾತ್ರದ ಸರ್ಪಗಳು ನಾನು ಕೈ ಇಟ್ಟಲ್ಲಿಂದ ಸರಕ್ಕನೆ ಪರಸ್ಪರ ವಿರುದ್ದ ದಿಕ್ಕಿನಲ್ಲಿ ಹರಿದವು! ಕಿರುಬೆರಳಿನಿಂದ ನಡುನೆತ್ತಿಯ ತನಕ ತಣ್ಣನೆಯ ಅಲೆ ಹಾದು ಅಕಸ್ಮಾತ್ ನನ್ನ ಹೆಜ್ಜೆಯನ್ನು ಆ ಜೀವದ ಮೇಲೇ ಇಟ್ಟಿದ್ದರೇ ಎನ್ನುವ ಯೋಚನೆ ಬಂದು ನಾಲಿಗೆ ಒಣಗಿ, ತುಟಿ ಬಿಳುಚಿಕೊಂಡು…

ಹನೀ

ಸಾವಿನ ಕುರಿತು ಎಂದೂ ಭಯಬೀಳದವಳು ನಾನು. ಹೆಜ್ಜೆಯ ಬುಡದಲ್ಲೇ ಘಟಿಸಿದ ಈ‌ ಅಸಂಗತಕ್ಕೆ  ಧಿಗ್ಮೂಡಳಾಗಿ ಕಳಚಿಬೀಳುತ್ತಿದ್ದ ಹೃದಯವನ್ನು ಮೆಲ್ಲಗೆ ಒತ್ತಿಹಿಡಿದು ಕೊನೆಯ ಕಿರುಬಾಲವಷ್ಟೇ ಕಾಣುತ್ತಿದ್ದ‌ ಸರ್ಪಗಳನ್ನೂ, ಅವು ಹೊಕ್ಕ ಬಿಲವನ್ನೂ‌ ನಡುಗುತ್ತ ನೋಡಿದೆ. ಒಂದು ಕ್ಷಣ ನೀವು ನನ್ನೊಳಗಿಂದ ಹೊರಗಿದ್ದಿರಿ. ಸಾವು ಆವರಿಸುವ ಹೊತ್ತಿನಲ್ಲಿ ನೀನು ಹೊರಗಿರಬೇಕು ಅಂತ ಬಯಸುವವಳು ನಾನು.

ಮತ್ತೊಂದು ವಿಚಿತ್ರ ಗೊತ್ತಾ‌ ಹನೀ?

ನಾನು ಕಾಯಿ ಆರಿಸಲು ಬಗ್ಗಿದ್ದು‌ ನೋಡಿ ಅದೋ ಅಲ್ಲಿದ್ದ ಆ ಹುಡುಗ ‘ಆಂಟಿ. ಬಂದೆ ಇರಿ’ ಎಂದಾಗ ‘ಇಲ್ಲೆರಡು ವಿಷಸರ್ಪಗಳು ಈಗಷ್ಟೇ ಸರಿದು ಹೋಗಿವೆ ಮಗೂ, ಅಲ್ಲಿ ಕಾಯಿ ಆಯುವುದು ಬೇಡ, ಬಿದ್ದಿರಲಿ ಬಿಡು’ ಅಂತನ್ನಬೇಕಿದ್ದ ನನ್ನ ಕೊರಳಿಂದ ಸ್ವರ ಹೊರಬರಲೇ ಇಲ್ಲ. ಜೀವದ ಮೂಲದ ಗುಣ ಸ್ವಾರ್ಥ ಹನೀ. ಎದ್ದು ಬರುತ್ತದೆ ಅಪಾಯದ ಸದ್ದು ಕೇಳಿದೊಡನೇ.

‘ನೀನು ಜೀವದಾಯಿನಿ ಪುಟ್ಟಾ, ಅದಮ್ಯ ಮೋಹ, ಅಸದೃಶ್ಯ ಮಮತೆ, ಉಕ್ಕುವ ಪ್ರೇಮಗಳಿಂದ ತುಂಬಿಕೊಂಡವಳು ನೀನು. ನಿನ್ನ ಸನಿಹಕ್ಕೆ ಬಂದ ಎಲ್ಲವೂ ನಿನ್ನ ಪ್ರೇಮದ ಪ್ರಭಾವಳಿಯೊಳಕ್ಕೆ ಸಿಲುಕಿ ಬಿಡುತ್ತವೆ. ನಿನ್ನಂತೆ ಸುತ್ತಿನ ಮರ ಮಣ್ಣು ಹಾವು ಹಕ್ಕಿಯನ್ನು ಪ್ರೀತಿಸಿದವಳನ್ನು ನಾನು ಈ ತನಕ ನೋಡಿಲ್ಲ’ ಅಂದಿರಲ್ಲವೇ ಮೊನ್ನೆ?

ನೋಡಿ ಈಗ!

ಎಳೆಚುಕ್ಕಿಯಂತ ಆ ಪೋರನನ್ನು ತಡೆಯಬೇಕು ಅಂತ ಅನಿಸಲಿಲ್ಲ ಯಾಕೆ ನನಗೆ? ಹುಡುಗ ಜಿಂಕೆಯಂತೆ ಹಾರಿ ಬಂದು ‘ಸರೀರಿ ಆಂಟಿ ಆ ಕಡೆಗೆ. ರಾಶಿ ಮಾಡ್ತೀನಿ’ ಅಂದವನ ಹೆಜ್ಜೆಗಳು ಕೇವಲ ಒಂದು ಮಾರು ದೂರದಲ್ಲಿದ್ದವು ಆ ಹಾವು ಹೊಕ್ಕ ಬಿಲಕ್ಕೆ. ಬಿಲದ ಸುತ್ತೂ ಸುರಿದ ಕಾಯಿತಳಲು.

ಇದನ್ನೂ ಓದಿ : ಋತುವಿಲಾಸಿನಿ: ಕಲ್ಲಂಗಡಿ ಒಡೆದ ವಿಡಿಯೋ ಕಳಿಸಿದ ನೀನು ದೇವರ ಮೆರವಣಿಗೆಯಲ್ಲಿ ಕಲ್ಲು ತೂರಿದ್ದನ್ನೇಕೆ ಕಳಿಸಲಿಲ್ಲ?

ಒಮ್ಮೆಗೆ ನಾನು ನಾನಾದೆ ಹನೀ! ನೀವು ಹೇಳುವ ಜೀವದಾಯಿನಿಯಾದೆ! ಎರಡೂ ಹಾವು ಅಡಗಿದ ಬಿಲದ ಆ ತುದಿಯಲ್ಲಿ ನಾನೇ ನಿಂತು ಮೇಲೆಲ್ಲ ಸುರಿದಿದ್ದ ಕಾಯಿಗಳನ್ನು ಎತ್ತಿಎತ್ತಿ ರಾಶಿ ಹಾಕಿದೆ. ಬಿಡಿ ಆಂಟಿ ನೀವು, ನಾ ಮಾಡ್ತೀನಿ ಅಂದ ಹುಡುಗನ ಜೀವ ಹೂವಿನಂಥದ್ದು. ಅದು ಹಾಗೇ ಇರಬೇಕು ಎನಿಸಿತ್ತು ಆ ಕ್ಷಣ!

ಹನೀ.. ನಿನ್ನ ಪ್ರೇಮ ಹೀಗೆ ಕ್ಷಣಕ್ಷಣಕ್ಕೂ ನನ್ನ ಮೆದುಗೊಳಿಸುತ್ತಿರುವ ಪರಿಗೆ ಬೆರಗಾಗಿದ್ದೇನೆ. ಕತ್ತಲು ಕವಿಯುತ್ತಿರುವ ಈ ಹೊತ್ತಿನಲ್ಲಿ ಆಚೆ ಕುಂತು ನಿನ್ನ ಬೆಚ್ಚನೆ ಪ್ರೇಮದ ಬಗ್ಗೆ ಯೋಚಿಸುವುದು ನಶೆ ನನಗೆ.

ನಿನಗೆ ಗೊತ್ತಾ?

ದಣಿದ ಈ ಸಂಜೆಗೆ ತನ್ನದೇ ಆದ ನಮ್ರಸೌಂದರ್ಯವಿದೆ. ನೋಡು… ಕಣ್ಣ ಕೆಳಗೆ ಸ್ಪಷ್ಟವಾಗುತ್ತಿರುವ ಗೆರೆಗಳು, ಬೈತಲೆಯಲ್ಲಿ ಇಣುಕುವ ಬೆಳ್ಳಿಕೂದಲು, ನಿರ್ಜೀವ ವಾಸ್ತವವನ್ನು ಕೊನೆಗೂ ಒಪ್ಪಿಕೊಂಡ ಮನಸ್ಸು ಎಲ್ಲವೂ ನಾನು ಮಾಗುತ್ತಿರುವುದಕ್ಕೆ ಸಾಕ್ಷಿಯಲ್ಲವೇ?

‘ನಿನ್ನ ಇರುವಿಕೆಗೇ ಮೆರುಗು, ನಿನ್ನ ಈ ಸಣ್ಣ ಅಹಂಕಾರ’ ಅಂದೆ ನೀನು.

ಹನೀ, ನಿನ್ನ ತೆಕ್ಕೆಯೊಳ ಸೇರುವ ಹುಚ್ಚಿಗಾಗಿ ಹಾದಿಗಳ ಹಸನು ಮಾಡುವವಳು ನಾನು. ನನಗೊಂದು ಅಹಂಕಾರ ಇದೆಯೆಂದರೆ ಅಚ್ಚರಿಯೆನಿಸುತ್ತದೆ. ಆದರೆ ನಿನ್ನ ದಿಟ್ಟಿ ನನ್ನ ಪ್ರತಿ ಮಿಡುಕನ್ನೂ ಸ್ಪಷ್ಟವಾಗಿ ಗುರುತಿಸುತ್ತದೆ. ಒಪ್ಪುತ್ತೇನೆ ನನಗೊಂದು ಚಂದದ ಜಂಭ ಇರಬಹುದೆಂದು.

ಭೆಟ್ಟಿಯಾದಾಗಲೆಲ್ಲ ಕಾಡುಹೂವಿನ ಬಳ್ಳಿಯಂತೆ ನಿನ್ನ ಕೊರಳಿಗೆ ಜೋತು ಬೀಳುವ ನನಗೆ ಹಿಂತಿರುಗಿದ ಮೇಲೆ ಸಂಕೋಚವೆನಿಸುತ್ತದೆ. ನಿನ್ನ ಮೂರನೆಯ ಮಗುವಾಗಬೇಕಾದವಳು ನಾನು. ನಿನ್ನ ತೋಳು, ಬೆರಳು, ನನ್ನ ಹುದುಗಿಸಿಕೊಂಡ ನಿನ್ನ ಎದೆ ಎಲ್ಲವನ್ನೂ ಕಚ್ಚಿ ಕಲೆಯೆಬ್ಬಿಸುವ ನನ್ನ ಹುಚ್ಚಾಟಕ್ಕೆ ಸಂಸಾರವಂದಿಗನಾದ ನೀನು ಭಯ ಬೀಳುವಾಗೆಲ್ಲ ನಂಗೆ ಪುಳುಪುಳು ಪುಳಕ.

ಮೊದಲೇ ಹಳ್ಳಿಯ ಜವಾರಿತನ ನನ್ನದು. ನಿನ್ನೊಂದಿಗಿದ್ದಾಗ ಆರೋಪಿಸಿಕೊಂಡ ನನ್ನ ಸಮಸ್ತ ನಾಗರಿಕ ಪಾತ್ರಗಳೂ ತನ್ನಿಂತಾನೇ ಕಳಚಿ ಬೀಳುತ್ತವೆ. ಹಕ್ಕಿ ಹಗೂರಾಗುತ್ತೇನೆ.

ನನ್ನ ಮಾತುಗಳು ಇನ್ನೂ ಕಚ್ಚಾ ಆಗುತ್ತವೆ. ಭೆಟ್ಟಿಯಾದ ಆರೇ ನಿಮಿಷಕ್ಕೆ ದೂರ ಕುಂತು ನನ್ನ ನೋಡಿ ‘ಈಗಷ್ಟೇ ಹುಟ್ಟಿದ ತಾಜಾ ಚುಕ್ಕಿಯಂತೆ ಹೊಳೆಯುತ್ತಿದ್ದಿ ಚಿನ್ನಾ’ ಎನ್ನುತ್ತಿ ಪ್ರತಿ ಬಾರಿ ನೀನು. ದೇವರು ಕರುಣಿಸಿದ ಈ ಸುಖದ ಸಂಗತಿಗಳು ನಮಗೆ ಅನಂತವಾಗಲಿ.

ಕಾಯಿ ರಾಶಿಯ ಕೆಳಗೆ ಮಿರಿಮಿರಿ ಮಿರುಗು ನಾಗಪ್ಪ ನಡುಗುತ್ತ ಮಲಗಿರಬೇಕು ಎನಿಸಿ ಮಮತೆಯುಕ್ಕಿತು. ಹುಲಿ ಹುಲ್ಲೆ ಹಾವು ಹಕ್ಕಿ ಗಿಡ ಮಣ್ಣು ಕಲ್ಲು ಎಲ್ಲವೂ ಬೆಚ್ಚಗೆ ಬಾಳುವ ಕಾಲ ಕರುಣಿಸಲಿ ದೇವರು. ಇಲ್ಲಿ ಏನೋ.. ಏನೇನೋ ನಡೆಯುತ್ತಿದೆ. ಯಾವುದನ್ನು ಕತ್ತರಿಸಿಬೇಕು ಯಾವುದಕ್ಕೆ ನೀರೆರೆಯಬೇಕು ತಿಳಿಯದೆ ಹೃದಯಗಳು ತತ್ತರಿಸುತ್ತಿವೆ. ಹಿಡಿ ಪ್ರೀತಿಗಾಗಿ ತಹತಹಿಸುತ್ತಿವೆ ಹನೀ.

ಇನ್ನೂರು ಸಿಗಬಹುದೆಂದುಕೊಂಡಿದ್ದ ಹುಡುಗ ‌ಮೇಲೆ ಮತ್ತೂ ನೂರು ಸಿಕ್ಕಿದ್ದು ಕಂಡು ಕಣ್ಣರಳಿಸಿದ. ಜೋಪಾನ ಕಣೋ ಅನ್ನಬೇಕಂದವಳಿಗೆ ಸದ್ದು ಬೇಡವೆನ್ನಿಸಿ ಅವನ ಬೆನ್ನು ನೇವರಿಸಿದೆ. ಬೆಳಕು ತುಂಬಿಕೊಂಡ. ಖಾಲಿ ನೂರು ರೂಪಾಯಿಯಲ್ಲಿ ಯಾರೂ ಬರೆಯಲಾಗದ ಕವಿತೆ ಓದಿಕೊಂಡ ಖುಷಿಯ ನಿನ್ನೊಡನಲ್ಲದೆ ಮತ್ತಾರಲ್ಲಿ ಹಂಚಿಕೊಳ್ಳಲಿ ಹನೀ?

(ಮುಂದಿನ ಋತು : 10.5.2022)

ಈ ಅಂಕಣದ ಎಲ್ಲಾ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/rutuvilaasini 

Published On - 8:45 am, Tue, 26 April 22

ಊರ ಜನರಿಂದ ಸೋಫಿಯ ಮಾವ, ಕುಟುಂಬಸ್ಥರಿಗೆ ಅಭಿನಂದನೆ
ಊರ ಜನರಿಂದ ಸೋಫಿಯ ಮಾವ, ಕುಟುಂಬಸ್ಥರಿಗೆ ಅಭಿನಂದನೆ
ಗ್ರಾ ಪಂ ಸದಸ್ಯನಿಗಿರುವಷ್ಟು ಕಾಮನ್ ಸೆನ್ಸ್ ಪಾಟೀಲ್​ಗೆ ಇಲ್ಲ: ಯತ್ನಾಳ್
ಗ್ರಾ ಪಂ ಸದಸ್ಯನಿಗಿರುವಷ್ಟು ಕಾಮನ್ ಸೆನ್ಸ್ ಪಾಟೀಲ್​ಗೆ ಇಲ್ಲ: ಯತ್ನಾಳ್
ಆಪರೇಷನ್ ಸಿಂದೂರದ ಬಗ್ಗೆ ಪಾಕಿಸ್ತಾನಿಗನ ನೇರ ಮಾತು ಕೇಳಿ
ಆಪರೇಷನ್ ಸಿಂದೂರದ ಬಗ್ಗೆ ಪಾಕಿಸ್ತಾನಿಗನ ನೇರ ಮಾತು ಕೇಳಿ
ಪಾಕಿಸ್ತಾನಕ್ಕೆ ಬಲೂಚಿ ಮತ್ತು ತಾಲಿಬಾನಿಗಳಿಂದಲೂ ಉಳಿಗಾಲವಿಲ್ಲ!
ಪಾಕಿಸ್ತಾನಕ್ಕೆ ಬಲೂಚಿ ಮತ್ತು ತಾಲಿಬಾನಿಗಳಿಂದಲೂ ಉಳಿಗಾಲವಿಲ್ಲ!
ಆಪರೇಷನ್​ ಸಿಂಧೂರ್​, ಪ್ರಧಾನಿಗೆ ಧನ್ಯವಾದ ತಿಳಿಸಿದ ಪಹಲ್ಗಾಮ್ ಸಂತ್ರಸ್ತೆ
ಆಪರೇಷನ್​ ಸಿಂಧೂರ್​, ಪ್ರಧಾನಿಗೆ ಧನ್ಯವಾದ ತಿಳಿಸಿದ ಪಹಲ್ಗಾಮ್ ಸಂತ್ರಸ್ತೆ
ಅರಸೊತ್ತಿಗೆ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ: ಅರ್ಚಕ ದೀಕ್ಷಿತ್
ಅರಸೊತ್ತಿಗೆ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ: ಅರ್ಚಕ ದೀಕ್ಷಿತ್
‘ಭರ್ಜರಿ ಬ್ಯಾಚುಲರ್ಸ್’ ಹೊಸ ಎಪಿಸೋಡ್​ಗೆ ಹೊರಾಂಗಣ ಶೂಟಿಂಗ್; ಯಾವ ಜಿಲ್ಲೆ?
‘ಭರ್ಜರಿ ಬ್ಯಾಚುಲರ್ಸ್’ ಹೊಸ ಎಪಿಸೋಡ್​ಗೆ ಹೊರಾಂಗಣ ಶೂಟಿಂಗ್; ಯಾವ ಜಿಲ್ಲೆ?
ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ: ಲೆಫ್ಟಿನೆಂಟ್ ಕರ್ನಲ್​ರ ಮಾವ ಹೇಳಿದ್ದೇನು?
ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ: ಲೆಫ್ಟಿನೆಂಟ್ ಕರ್ನಲ್​ರ ಮಾವ ಹೇಳಿದ್ದೇನು?
ಸೇನೆಗೆ ವರವಾಯ್ತೇ ಲಕ್ಷ್ಮೀ ಜನಾರ್ದನ ಪ್ರಸಾದ! ಬಲಭಾಗದಿಂದ ಹೂ ನೀಡಿದ ದೇವರು
ಸೇನೆಗೆ ವರವಾಯ್ತೇ ಲಕ್ಷ್ಮೀ ಜನಾರ್ದನ ಪ್ರಸಾದ! ಬಲಭಾಗದಿಂದ ಹೂ ನೀಡಿದ ದೇವರು
Dewald Brevis: ಬೇಬಿ ಎಬಿ ಸಿಡಿಲಬ್ಬರ: ಹೊಸ ದಾಖಲೆ ನಿರ್ಮಾಣ
Dewald Brevis: ಬೇಬಿ ಎಬಿ ಸಿಡಿಲಬ್ಬರ: ಹೊಸ ದಾಖಲೆ ನಿರ್ಮಾಣ