ಋತುವಿಲಾಸಿನಿ: ಕಲ್ಲಂಗಡಿ ಒಡೆದ ವಿಡಿಯೋ ಕಳಿಸಿದ ನೀನು ದೇವರ ಮೆರವಣಿಗೆಯಲ್ಲಿ ಕಲ್ಲು ತೂರಿದ್ದನ್ನೇಕೆ ಕಳಿಸಲಿಲ್ಲ?

Love : ಯಾವ ಏರಿಳಿತಗಳೂ ಇಲ್ಲದೇ, ಸಂಕಟವಿಲ್ಲದೆ, ಸಂತಾಪಗಳಿಲ್ಲದೆ ನಿನ್ನನ್ನು ಬ್ಲಾಕಿಸಿದೆ. ಪ್ರೀತಿಯ ಜವಾಬ್ದಾರಿಯೇ ಇಲ್ಲದ ನಿನ್ನ ಉಪವಾಸಕ್ಕೆ, ಪ್ರಾರ್ಥನೆಗೆ, ನಿಷ್ಠೆಗೆ ಏನರ್ಥವಿದೆ ಹನೀ? ಪ್ರೇಮವನ್ನೇ ಅರಿಯದವನು ದೇವರನ್ನು ಅರಿಯಬಲ್ಲನೇ?

ಋತುವಿಲಾಸಿನಿ: ಕಲ್ಲಂಗಡಿ ಒಡೆದ ವಿಡಿಯೋ ಕಳಿಸಿದ ನೀನು ದೇವರ ಮೆರವಣಿಗೆಯಲ್ಲಿ ಕಲ್ಲು ತೂರಿದ್ದನ್ನೇಕೆ ಕಳಿಸಲಿಲ್ಲ?
ಫೋಟೋ : ಡಾ. ನಿಸರ್ಗ
Follow us
|

Updated on:Apr 12, 2022 | 9:47 AM

ಋತುವಿಲಾಸಿನಿ | Rutuvilaasini : ಈ ಸಂಜೆಯಂತೆ ಯಾವತ್ತೂ ಮಾಡಿರಲಿಲ್ಲ ಹನೀ ನಾನು. ಎಲ್ಲವೂ ಸರಿಯಾಗಿಯೇ ಇದೆ ಎಂದು ನಂಬಿಸಲಿಕ್ಕೆ ಪ್ರಯತ್ನ ಪಡ್ತಿದ್ದೀನಿ. ರಚ್ಚೆ ಹಿಡಿದಳುವ ಆತ್ಮಕ್ಕೆ ಮತ್ತೊಂದರ ಆಮಿಷ ಒಡ್ಡಿದ್ದೀನಿ. ವಿಚಿತ್ರವಾದುದೆಲ್ಲವನ್ನೂ ಮಾಡ್ತಿದ್ದೀನಿ. ಮತ್ತೆಮತ್ತೆ ಚಾ ಕುಡಿದೆ. ಸಿಕ್ಕಿದ ಗೆಳತಿಯರ ಜೊತೆ ಅಗತ್ಯಕ್ಕೂ ಮೀರಿ ಅಬ್ಬರದಲ್ಲಿ ಮಾತಾಡಿದೆ. ಅಚ್ಚರಿಯೆಂಬಂತೆ ಇವತ್ತು ಹೆಚ್ಚೇ ಗುಬ್ಬಚ್ಚಿಗಳು ಬಂದವು ನನ್ನಂಗಳಕ್ಕೆ. ಎದುರು‌ಮನೆ ಬಾಗಿಲತುದಿಯಲ್ಲಿ ಕುಂತಿದ್ದ ಕಪ್ಪಬಿಳುಪು ಬೆಕ್ಕನ್ನು ಸದ್ದು ಮಾಡಿ ಕರೆದು ಹಾಲು ಅನ್ನದ ಬಟ್ಟಲಿಟ್ಟೆ. ಮುಖ ತಿರುವಿ ಹೋದರೂ ಆ ಮೆದು ತುಪ್ಪಳದ ಕುರಿತು ಅದಮ್ಯ ಪ್ರೀತಿ ಬಂತು. ಕತ್ತಲಾಗುತ್ತಲೂ ಮಲಗಲು ಅಣಿಯಾಗುತ್ತಿರುವ ನನ್ನ ದಾಸವಾಳಗಳನ್ನು ಒಮ್ಮೆ ನೇವರಿಸಿಬಂದೆ. ಕಡೆಮನೆಯ ಮಗು ಎಂದಿನಂತೆ ಕರ್ಕಶ ಸದ್ದು ಮಾಡಿ ಅಳುತ್ತಲೇ ಇದೆ. ಮಗು ಯಾಕಷ್ಟು ಅಳ್ತದೆ ಅಂತ ಮೊನ್ನೆ ಕೇಳಿ ಕೊಂಕು ನೋಟ ವಾಪಸು ಗಿಟ್ಟಿಸಿಕೊಂಡಮೇಲೂ ಆ ಮಗುವಿನ ಅಳು ನನ್ನ ಕಾಡ್ತಿದೆ. ನಂದಿನಿ ಹೆದ್ದುರ್ಗ, ಕವಿ, ಲೇಖಕಿ (Nandini Heddurga)

(ಋತು 5)

ಈ ಸಂಜೆ…

ಯಾವತ್ತೂ ಮಾಡಿರಲಿಲ್ಲ ಹೀಗೆ ಹನೀ. ದೇವರ ದೀಪ ಹಚ್ಚಲಿಲ್ಲ‌ ನಾನು! ಸಂಜೆ ಫೋನ್ ಮಾಡಿದಾಗೆಲ್ಲ ದೀಪ ಹಚ್ಚಿಯಾಯ್ತಾ ಪುಟ್ಟಾ ಅಂತ ಕೇಳ್ತಿಯಲ್ವಾ ನೀನು. ಇವತ್ತು ಹೀಗಾಗಿದ್ದೀನಿ ನೋಡು. ಸುಮ್ಮನೆ ದೇವರೆದಿರು ಕೂತೆ. ಮುಡಿಸಿದ್ದ ಅಚ್ಚಗೆಂಪಿನ‌ ದಾಸವಾಳಗಳು ಈಗಷ್ಟೇ ಬಿಡಿಸಿ ತಂದಂತೆ ಕಾಣ್ತಿದ್ದವು. ನನ್ನ ದೇವರು ಬಹಳ ನೆಮ್ಮದಿಯಾಗಿ ಆರಾಮು ಮಾಡ್ತಾ ಕುಂತಿದೆ!

ಮೈ ಉರಿಯುತ್ತೆ ನಂಗೆ ಆಗೆಲ್ಲ. ಸೃಷ್ಟಿಸಿದ ಮೇಲೆ ಹಕ್ಕಿನ ಪ್ರೀತಿ ಸಿಗುವಂತೆ ಮಾಡುವುದು ಹುಟ್ಟಿಸಿದವನ ಕರ್ತವ್ಯ ಹನೀ. ಸಿಕ್ಕಬೇಕಾದಲ್ಲಿ ಸೆಲೆ ಒಣಗಿ ಕೊಳಕು ಸಂಗ್ರಹವಾಗವಂತೆ ಮಾಡಿದ್ದೂ ಅವನೇ. ಈಗ ನಿನ್ನನ್ನೂ ಕರುಣಿಸಿದ್ದ. ನಾನು ಸುಖಿಯಾಗಿದ್ದೆ.

ಆದರೆ..

ಈ ನಡುವೆ ಮಾತಾಡ್ತಿಲ್ಲ ನೀನು. ಈ ವಾರದಲ್ಲಿ ದೇಶದ ಚಿಂತೆ ಚಿಂತನೆಗಾಗಿ ತಾರಾಮಾರ ಜಗಳಾಡ್ತಿದ್ದೀವಿ ನಾವು. ಮತ್ತೆ ಇನ್ನಿಲ್ಲದಂತೆ ತುಂಬಿಕೊಳ್ತಿದ್ದೀವಿ. ನನ್ನ ಜೀವ ಮೆತ್ತಗಿರಬೇಕು ಅಂದರೆ ನಿನ್ನ ಪ್ರೇಮದ ಪಸೆ ತಾಕುತ್ತಿರಬೇಕು. ನಿನಗದು ಗೊತ್ತಿದೆ. ಉಹು..ಹಾಗಾಗುತ್ತಿಲ್ಲ ಈಗ. ಕಾಯುವವಳಲ್ಲ ಇನ್ನೂ ನಾನು. ವಾರದಿಂಲೂ ನಿನಗೆ ಲೋಕಕಲ್ಯಾಣದ ಹುಚ್ಚು ಏರಿದೆ.

ಯಾರೋ ಹೊಡೆದರು, ಇನ್ಯಾರೋ ಕೊಂದರು, ಅವರ ಕಲ್ಲಂಗಡಿ ಚೂರಾದವು, ಕೊಲೆಯಾದದ್ದು ಉರ್ದು ಮಾತಾಡದೇ ಇದ್ದಿದ್ದಕ್ಕೆ ಅಂತ ಸಚಿವರು ಫನ್ನಿಯಾಗಿ ಹೇಳಿದ್ರು, ಸಚಿವರ ಜವಾಬ್ದಾರಿ ಅರಿತಿಲ್ಲ. ಊಫ್.. ಎಷ್ಟೆಲ್ಲಾ ವಿಶಾಲ ನಿನ್ನ ಜಗತ್ತು!

ನಿನ್ನ ಸಂಜೆಯ ಇಫ್ತಾರ್ ಈ ಹೊತ್ತಿಗೆ ಮುಗಿಯುತ್ತೆ. ಅ ನಂತರ ನನ್ನ ಸಲುವಾಗಿ ಮೀಸಲಾಗ್ತೀಯಾ ಅಂತ ಕಾಯುವ ನನಗೆ ನೀನೇ ಜಗತ್ತು. ಹೆಣ್ಣು ಸೋಲುವುದೇ ಇಲ್ಲಿ ಹನೀ. ಪ್ರೀತಿ ಆರಂಭವಾಯ್ತು ಎಂದರೆ ನಿರೀಕ್ಷೆಯನ್ನು ಪ್ರೀತಿಯ ಮೂರುಪಟ್ಟು ಏರಿಸಿಕೊಳ್ತಿವಿ. ನಿನ್ನ ಸಂಜೆಯ ಪ್ರಾರ್ಥನೆಯ ಸಮಯವೂ ಮುಗಿಯಿತು. ದೊಡ್ಡ ರಸ್ತೆಯಲ್ಲಿ ಆಝಾನು ಕೇಳಿ ಅರ್ಧಗಂಟೆ ಕಳೆಯಿತು. ಇಫ್ತಾರ್ ಕೂಡ ಮುಗಿದಿರಬಹುದು. ಇನ್ನೇನು ನನಗಾಗಿ ಸಿಕ್ತಿ ನೀನು. ಏನೆಲ್ಲ ಹೇಳುವುದಕ್ಕಿದೆ ನಿನಗೆ.

ಹನೀ

ಇಳಿಸಂಜೆ ಇಳಿಯುತ್ತಲೂ ತುಂಬಿದ ಬಿಂದಿಗೆಯಾಗುತ್ತೇನೆ ನಾನು. ನಿನಗದು ಗೊತ್ತಿದೆ. ಕರೆ ಬರಲಿಲ್ಲ ಇಲ್ಲಿತನಕ. ಕೋಪ ನೆತ್ತಿಗೇರಿತು. ಮೊದಲ ಬಾರಿಗೆ… ಮೊಟ್ಟಮೊದಲ ಬಾರಿಗೆ ನಿನ್ನ ಬ್ಲಾಕಿಸಿದೆ. ಹೌದು.

ನಂದು ಬ್ಲಾಕ್ಡ್ ಯೂ

ಯಾವ ಏರಿಳಿತಗಳೂ ಇಲ್ಲದೇ, ಸಂಕಟವಿಲ್ಲದೆ, ಸಂತಾಪಗಳಿಲ್ಲದೆ ನಿನ್ನನ್ನು ಬ್ಲಾಕಿಸಿದೆ. ಪ್ರೀತಿಯ ಜವಾಬ್ದಾರಿಯೇ ಇಲ್ಲದ ನಿನ್ನ ಉಪವಾಸಕ್ಕೆ, ಪ್ರಾರ್ಥನೆಗೆ, ನಿಷ್ಠೆಗೆ ಏನರ್ಥವಿದೆ ಹನೀ? ಪ್ರೇಮವನ್ನೇ ಅರಿಯದವನು ದೇವರನ್ನು ಅರಿಯಬಲ್ಲನೇ?

ನೋಡೀಗ.

ಬ್ಲಾಕಿಸಿದ ಮೇಲೆ ಕತ್ತಲಿಳಿದು ಇಷ್ಟು ಹೊತ್ತು ಆದಮೇಲೂ ನನ್ನ ಸಮಯ ದಂಡಿಯಾಗಿ ಉಳಿಯುತ್ತಿದೆ. ನೀನಿನ್ನು ಜಗತ್ತಿನ ಚಿಂತೆಯನ್ನು ಸಮೃದ್ದವಾಗಿ ಮಾಡು ಹನೀ. ನಿನ್ನ ಪ್ರೇಮದ ನಿರೀಕ್ಷೆ ಮಾಡುವುದಿಲ್ಲ ನಾನು. ನಿನ್ನ ಸಲುವಾಗಿ ಕಾಯುವುದಿಲ್ಲ ಇನ್ನು. ಮರಳುವ ಭಯವಿಲ್ಲ ನನಗಿನ್ನು. ಹೊರಳುವುದೂ… ಸುಡುವ ಭಯವಿಲ್ಲ. ಕಾಡುವುದೂ… ಎಲ್ಲಿದ್ದರೂ ಕಣ್ತುಂಬಿಬರುವ ಭಯವಿಲ್ಲ. ಸಂಭ್ರಮವೂ ಇನ್ನು ನನ್ನ ಪಾಲಿಗಿಲ್ಲ.

ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೇ ವಲಂ; ‘ಸಾಕ ನಿಲ್ಲಸ್ರೀ ಆರ್ತನಾದ, ಬುದ್ಧಿವಂತಿಕೆಯಿಂದ ಬಲಿಷ್ಠ ‘ನಾದ’ ಹೊಮ್ಮಿಸ್ರೀ’

ನಾನಾಗಿಯೇ ಇರಬಲ್ಲೆ. ನೀನಿರುವುದಿಲ್ಲ ಅಷ್ಟೇ.

‘ಎಲ್ಲಿಗಾದಾರೂ ಹೋಗು. ನನ್ನ ಮನಸ್ಸಿಂದ ದೂರವಾಗಿ. ನನ್ನ ಪ್ರೀತಿಯಿಲ್ಲದೇ ಎಲ್ಲಿದ್ದರೂ ನೀನು ನೆಮ್ಮದಿಯಾಗಿರುವುದಿಲ್ಲ. ನಿನ್ನ ನಿರಾಕಾರನೂ ನಿನ್ನ ಕ್ಷಮಿಸುವುದಿಲ್ಲ’

ಹೀಗಂದುಬಿಟ್ಟೆ ಹನೀ ಮನಸ್ಸಿನಲ್ಲಿ.

ಇಲ್ಲ… ಕಳಚಿಕೊಳ್ಳಬೇಕಾದವಳು ನಾನು, ಬ್ಲಾಕಿಸಿದ ಮೇಲೆ ದೂರ ಉಳಿಯಬೇಕಾದವಳು. ನಿನ್ನ ಕುರಿತು ಕಿಂಚಿತ್ ಚಿಂತೆಯನ್ನೂ ಮಾಡಬಾರದೆಂದು ಈಗಷ್ಟೇ ನಿರ್ಧರಿಸಿದವಳು ನಾನು.

ನನ್ನ ಹಾಗೆಲ್ಲ ನೋಯಿಸಬಹುದೇ? ಈ ವಯಸ್ಸಿನಲ್ಲೂ ಇಷ್ಟು ಹುಚ್ಚೆಬ್ಬಿಸಿಕೊಂಡು ಲೋಕ ಹಚ್ಚಿಕೊಳ್ಳುವಂತೆ ಮಾಡಿದವನು ನೀನು. ಹನೀ, ದಯಮಾಡಿ ಕೇಳು. ಹುಚ್ಚರ ಜಗತ್ತು ಇದು. ನಿನ್ನ ಜನಗಳನ್ನು ಉಳಿಸಿಕೊಳ್ಳುವ ಯೋಚನೆ ನಿನ್ನದು. ತಪ್ಪೋ ಅವರದ್ದೋ ಇವರದ್ದೋ. ಆದರೆ ನಿನ್ನ ಜನರ ಪರವಾಗಿ ಮಾತಾಡಲೇಬೇಕು ಅಂತ ಹಠ ತೊಟ್ಟಿದ್ದಿ.

ಅಜ್ಜನ ಹಣ್ಣಿನ ಅಂಗಡಿ ಹರಿದು ಚೆಲ್ಲಿದ ವಿಡಿಯೊ ಮಾತ್ರ ಕಳಿಸಿದವನಿಗೆ ದೇವರ ಮೆರವಣಿಗೆಯಲ್ಲಿ ಕಲ್ಲು ತೂರಿದ್ದು ಕಾಣದೇ ಹೋದದ್ದು ವಿಪರ್ಯಾಸ ಅಲ್ವಾ?

ಇವರು ದೇವಳದಲ್ಲಿ ನಿಷೇಧ ಹೇರಿದರು ಎನ್ನುವ ಸುದ್ದಿ ಫಾರ್ವರ್ಡ್ ಮಾಡುವ ನಿನಗೆ ಅಲ್ಲಿ ಕೇಸರಿ ಕವರ್ ಹಿಡಿದು ಹೊರಬಂದವರನ್ನು ಜಗ್ಗಾಡಿ ಹೊಡೆದಿದ್ದು ಕಾಣಿಸಲಿಲ್ಲ ಯಾಕೆ? ಕಲ್ಲಂಗಡಿ ರಕ್ತದ ಕಲೆಯಂತೆ ಕಾಣುವ ನಿನಗೆ ಕೊಲೆಯಾದವನ ತೊಡೆಯಿಂದ ಹರಿದಿದ್ದು ಕಲ್ಲಂಗಡಿ ಜ್ಯೂಸಲ್ಲ ಎನ್ನುವುದೇ ತಿಳಿಯಲಿಲ್ಲ!

ಹನೀ, ಕಲ್ಲಂಗಡಿ ಒಡೆದವರು, ಮೊಟ್ಟೆ ತೂರಿದವರು, ಕೊಂದವರು, ತಿಂದವರು, ಕೊಂದವರನ್ನೂ ಸಮರ್ಥಿಸಿಕೊಂಡವರು, ದಾಂಧಲೆ ಮಾಡಿದವರು, ಬಸ್ಸು ಸುಟ್ಟವರು, ವಿದ್ಯೆಗಿಂತಲೂ ಹಿಜಾಬೇ ಮುಖ್ಯ ಎಂದ ಮೂರ್ಖರು, ಅದಕ್ಕೆ ಆಹಾ ಎಂದ ಧರ್ಮಗುರುಗಳು, ಅವರೊಂದಿಗಿರುವ ಎಡಕ್ಕೆ ವಾಲಿದವರು, ನಾವೂ ಕೇಸರಿ ಶಾಲು ಸುತ್ಕೋತಿವಿ ಎಂದ ಶತಮೂರ್ಖರು, ಹಿಂದೆ ಇವರಿಂದ ಮೀನು ಕೊಳ್ಳಬೇಡಿ ಎಂದವರು, ಈಗ ಇವರ ವೆಹಿಕಲ್ಲಿಗೆ ನಿಷೇಧ ಹೇರಿ ಎನ್ನುತ್ತಿರುವವರು, ಅವನ ನರ ಕಟ್ ಆಗದೇ ಇದ್ರೆ ಸಾಯ್ತಿರಲಿಲ್ಲ. ನರ ಈಗ ಅಸಲಿ ಕೊಲೆಗಾರ ಎನ್ನುತ್ತಿರುವ ತಿರುಕ ರಾಜಕಾರಣಿಗಳು, ನಮ್ ವಿಷಯಕ್ಕೆ ಬಂದರೆ ನಾಲಿಗೆ ಕಟ್ ಮಾಡ್ತಿವಿ ಎನ್ನುತ್ತಿರುವ ಭಯಾನಕ ಭಕ್ತರು ಇವರೆಲ್ಲರೂ ಹುಚ್ಚರು ಹನೀ.

ಕಲ್ಲಂಗಡಿ ಅಜ್ಜನ ಸಂಕಟಕ್ಕೆ ಜೀವ ಸುಯ್ಯುತ್ತಿದೆ.

‘ಆಂಜನೇಯ ಬಾಬಾನ ಸನ್ನಿಧಾನದಿಂದ ಸಂಸಾರ ಸಾಗ್ತಿದೆ ಸಾಮಿ, ಆಂಜನೇಯ ಬಾಬಾ ನನ್ ಚೆನ್ನಾಗಿ ನೋಡ್ಕಾತಾನೆ ಅನ್ನು ನಂಬ್ಕೆ ಐತೆ’ ಅನ್ನುವ ಅಜ್ಜನ ಕಲ್ಲಂಗಡಿ ಅಂಗಡಿ ಇನ್ನೂ ಜಬರದಸ್ತಿನಲ್ಲಿ ನಡೆಯಲಿ ಅಂತ ಒಳಮನಸ್ಸು ನುಡಿದರೂ ನಿರಾಕಾರನನ್ನ ಹೊಗಳದೆ ಆಂಜನೇಯನ್ನ ಹೊಗಳ್ತೀಯಾ ಬುಡ್ಡಾ ಅಂತ ಗಡ್ಡಧಾರಿಗಳು ಬಡಿದರೆ ಎನ್ನುವ ಆತಂಕವೂ ಕಾಡ್ತಿದೆ ಹನೀ.

ನೀನು ಇದೆಲ್ಲಕ್ಕೂ ಉತ್ತರ ಹುಡುಕುತ್ತಾ ಹುಡುಕುತ್ತಾ ಲೋಕಕಲ್ಯಾಣಾರ್ಥವಾಗಿ ನನ್ನ ‌ಮರೆಯುತ್ತಿದ್ದಿ.

ನಿನ್ನ ಧ್ಯಾನಿಸುತ್ತ ಹಳೆಯ ನೆನಪುಗಳ ಹೊದ್ದು ಈ‌ ಹೊತ್ತಿನಲ್ಲಿ ಇಳಿವ ಕಣ್ಣೀರನ್ನೂ ಲೆಕ್ಕಿಸದೆ ಅರ್ಧಚಂದ್ರನನ್ನು ನೋಡುತ್ತಾ ಇಲ್ಲಿ ಕುಂತಿದ್ದೇನೆ.

ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ಹೊತ್ತಿನ ತುತ್ತಿಗಾಗಿ ಚಡಪಡಿಸುವ ಹಿಂದೂಗಳನ್ನು ತೋರಿಸಿಕೊಡುವೆ

ಹನೀ…

ಯಾರನ್ನೋ ಪ್ಲೀಸ್ ಮಾಡುವ ಭರದಲ್ಲಿ ತಪ್ಪನ್ನು ಮುಚ್ಚಿಡಬಾರದು ನೀನು ಅಂತ ಅಪೇಕ್ಷಿಸುವವಳು ನಾನು. ಇದೊಂದೇ ಕಾರಣವಾಗಿ ಈ ಹೆಣ್ಣುಮಕ್ಕಳು ಬುರ್ಖಾ ಬಿಸಾಕಿ ಹಕ್ಕಿಯಂತೆ ಹಾರಾಡಿಕೊಳ್ಳಲಿ ಎನ್ನಲು ನೀನು ಜೊತೆ ನಿಲ್ಲಬೇಕು ಅನ್ನುವವಳು ನಾನು.

ಮುಸ್ಲಿಮರು ಬಡತನದಲ್ಲಿದ್ದಾರೆ, ಹೆಣ್ಣುಮಕ್ಕಳು ‌ವಿದ್ಯೆ ಕಲಿತಿಲ್ಲ ಎನ್ನುವ ಹಳಹಳಿಕೆಯನ್ನು ಇನ್ನಾದರೂ ನಿಲ್ಲಿಸಿ ಬದಲಾವಣೆಗೆ ಒಡ್ಡಿಕೊಳ್ಳಬೇಕು ಅಂತ ಬಯಸುವವಳು ನಾನು.

ಹೆದ್ದಾರಿಯಲ್ಲಿ ಮಾರಿಗೊಂದು ಸಿಗುವ ಮಸೀದಿಗಳನ್ನು ಮಾರಿ ಸಿಗುವ ಕೋಟ್ಯಂತರ ಹಣದಲ್ಲಿ ಅದ್ಭುತವಾದ ಎಜುಕೇಶನ್ ಸಂಸ್ಥೆಗಳನ್ನು ತೆರೆದು ಲಿಬರಲ್ ಆದ ಶಿಕ್ಷಣವನ್ನು ಸಮುದಾಯ ಪಡೆಯಬೇಕು ಅಂತ ನಿನ್ನ ಭಾಷಣಗಳು ಇರಬೇಕು ಅಂತ ಬಯಸುವವಳು ನಾನು.

ಚಿಕ್ಕವಯಸ್ಸಿಗೇ ಅಡ್ಡಮಾರ್ಗ ಹಿಡಿದು ಹಣ ಸಂಪಾದಿಸುವ ಯುವಸಮುದಾಯಕ್ಕೆ ಹಣಕ್ಕಿಂತಲೂ ವಿದ್ಯೆ ‌ಮುಖ್ಯ ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕಾದವರು ನಿಮ್ಮಂಥ ಬುದ್ದಿಜೀವಿಗಳು ಅಂತ ಬಯಸುವವಳು ನಾನು.

ಆದರೆ ಹನೀ…

ನೀನು ಇದೇನನ್ನೂ ಮಾಡದೆ ಸರ್ಕಾರವನ್ನು, ಸಚಿವರನ್ನು, ಕೇಂದ್ರವನ್ನೂ, ಕಮಲವನ್ನೂ ದೂರುವವರ ಸಂಗಡ ಸೇರಿಕೊಳ್ಳುವುದರಲ್ಲಿ ಏನರ್ಥವಿದೆ? ಆಳುವವರು ಯಾರಿದ್ದರೂ ನೀವು ಲಿಬರಲ್ ಆಗದೆ ಯಾವುದೂ ಬದಲಾಗದು ತಾನೇ?

ಶಾಲು ಸುತ್ತಿಕೊಂಡವರಿಗೆ, ನಿಷೇಧ ಹೇರಿದವರಿಗೆ, ತಿನ್ನಬೇಡಿ ಉಣ್ಣಬೇಡಿ ಅಂತ ಕಾನೂನು ತಂದವರಿಗೆ ಸೆಡ್ಡು ಹೊಡೆಯುವಂತೆ ಬದುಕಿ ತೋರಬೇಕಾದವರಲ್ಲವೇ ನೀವು?

ಆದರೆ ಏನಾಗ್ತಿದೆ ನೋಡಿ.

ಸಿಕ್ಕಸಿಕ್ಕವರೆಲ್ಲರೂ ನಮ್ ಮನೆಯ ಕೂಲಿಯ ಮುಮ್ಮದ್ದು, ಸಹಾಯಕಿ ಜುಬೇದಾ, ನಮ್ ಮನೆ ಗಾರ್ಡನಿಂಗ್ ಮಾಡುವ ಹಮೀದ, ನನ್ನ ಹಮಾಲಿ ಇಸ್ಮಾಯಿಲ್ ಅಂತ ಚಾಕರಿ ಮಾಡುವವರೇ ಮುಸ್ಲಿಮರೇನೋ ಎನ್ನುವಂತೆ ಬರಕೊಂಡು ನಾವೆಷ್ಟು ಅನ್ಯೋನ್ಯವಾಗಿದ್ದೀವಿ ಅಂತ ತೋರಿಸಿಕೊಳ್ಳಲು ಯತ್ನಿಸ್ತಿದ್ದಾರೆ. ಇವರಿಗ್ಯಾರಿಗೂ ಅಜೀಂ ಪ್ರೇಮಜೀ, ಅಬ್ದುಲ್ ಕಲಾಂ, ನಮ್ಮೂರಿನ ಕರೀಂಖಾನ್ ಯಾಕೆ ಕಾಣಿಸಲೇ ಇಲ್ಲ. ಇಷ್ಟೆಲ್ಲವನ್ನೂ ಬರೆಯುತ್ತಿರುವ ನಾನೂ ನನ್ನೂರಿನ ಅದ್ಭುತ ಉದ್ಯಮಿ ಗೌಸ್ ಸಾಹೇಬರ ಕುರಿತು, ಅವರ ಸೊಸೆ ತಮನ್ನಾಳ ಕೃಷಿ ಆಸಕ್ತಿಯ ಕುರಿತು. ಯಾವುದೋ ಕುಟುಂಬ ಕಾರ್ಯಕ್ರಮದಲ್ಲಿ ಪ್ರೀತಿಯಿಂದ ನನ್ನ ಆಹ್ವಾನಿಸಿ ನಾನು ಮಾಂಸ ಮಡ್ಡಿ ತಿನ್ನುವವಳಲ್ಲ ಅಂತ ಲಿಂಗಾಯಿತರಿಂದ ಅಡುಗೆ ಮಾಡಿ ಬಡಿಸಿದ ಅವರ ಪ್ರೀತಿಯ ಕುರಿತು ‌ನಾನೇಕೆ ಬರೆಯಲಿಲ್ಲ ಹನೀ?

ಯಾಕಂದ್ರೆ ಹೀಗೆ ಸಾಲುಸಾಲಾಗಿ ಚಾಕರಿ ಮಾಡುವವರ ಕುರಿತು ಬರೆಯುವವರೊಳಗೆಲ್ಲ ಎಂತದೋ ಹಿಕ್ಮತ್ತಿದೆ. ಅರ್ಥ ಆಗಬೇಕಾದವರಿಗೆ ಅದು ಅರ್ಥ ಆಗ್ತಿಲ್ಲ ಯಾಕೋ.

ಹಿಜಾಬು ಕಾರಣವಾಗಿ ಇರುವ ಮುಸ್ಲಿಮರೆಲ್ಲರೂ ಚಾಕರಿಯವರೇ ಏನೋ ಎನ್ನುವಂತೆ ಬಿಂಬಿಸುತ್ತಿರುವುದು ಹೇಸಿಗೆಯಲ್ಲವಾ? ಅದಕ್ಕೆ ದನಿಯೇರಿಸಿ ವಿರೋಧಿಸಬೇಕಾದ ನಿಮಗೆ ಸ್ವರ‌ ಉಡುಗಿರುವುದಾದರೂ ಯಾಕೆ?

ನೀವೇ ಸಂತೆಯಲ್ಲಿ ಬೆತ್ತಲಾದಂತೆ ಆಯಿತಲ್ಲವೇ?

ಹೀಗೆಲ್ಲ ಪ್ರಶ್ನೆ ಮಾಡಿದರೆ ಬಲಪಂಥ ಅಂತ ಪಕ್ಕಕ್ಕಿಡುತ್ತೀರಾ. ಆದರೆ ನಂಗೆ ಎಡಬಲ ಮಧ್ಯ ಯಾವುದೂ ಇಲ್ಲ. ಎಲ್ಲರೂ ದೇಶ ಪ್ರೀತಿಸಬೇಕು, ಧರ್ಮ ಮನೆಯೊಳಗಿಡಬೇಕು, ವಿದ್ಯೆ ಕಲೀಬೇಕು. ಇಷ್ಟಾದರೆ ಇಂತಹ ಜೊಳ್ಳು ಸಂಗತಿಗಳೆಲ್ಲ ನಗಣ್ಯವಾಗ್ತವೆ ಬದುಕಿನಲ್ಲಿ.

ದೇವರೇ…

ನಿನ್ನ ಬ್ಲಾಕಿಸಿದವಳು ನಾನು. ನಿನ್ನ ಕುರಿತು ಇನ್ನೆಂದೂ ಯೋಚಿಸಬಾರದು ಎಂದುಕೊಂಡವಳು. ಬ್ಲಾಕಿಸಿದಾಗಿಂದ ಈವರೆಗೂ ನಿನ್ನ ಹೊರತು ಮತ್ತೇನೂ ಯೋಚಿಸಿಲ್ಲ.

ನನ್ನ ಕುರಿತು ‌ನನಗೇ ಅಸಹನೆ ಅನಿಸ್ತಿದೆ.

……

ಈಗ..ಈ ಹೊತ್ತಿನಲ್ಲಿ ನೀ ಏನು ಮಾಡ್ತಿರಬಹುದು. ಒಮ್ಮೆ… ಒಂದೇ ಒಂದು ಸರ್ತಿ ಅನ್​ಬ್ಲಾಕ್ ಮಾಡಿ ನೋಡ್ಲಾ? ನೀನು ನನ್ನ ಡಿಪಿ ಕಾಣದೆ ಕಂಗಾಲಾಗಿರಬಹುದಾ? ನನಗಾಗಿ ಎಷ್ಟೆಲ್ಲ ಮೆಸೇಜು ಕಳಿಸಿ ಕಾಯುತ್ತಿರಬಹುದಾ? ನನ್ನ ಪುಟ್ಟಾ ಯಾಕಾಗಿ ನೊಂದುಕೊಂಡಳು ಅಂತ ಸಂಕಟಪಡ್ತಿರಬಹುದಾ? ಹಾಗಾಗಬಾರದು.

ನೀನು ನೋಯುವಂತಿಲ್ಲ ನಾನಿರುವವರೆಗೂ. ಎಸ್​! ನಂದು ಅನ್​ಬ್ಲಾಕ್ಡ್​ ಯೂ. ನಿನ್ನ ಅನ್​ಬ್ಲಾಕ್​ ಮಾಡಿದೆ.

ಮತ್ತು…

ನೀನು ಆನ್​ಲೈನ್​ನಲ್ಲೇ ಇದ್ದೀ. ಒಂದು ಮೆಸೇಜ್ ಬರಬಹುದು ಈಗ. ಯಾಕೆ ಪುಟ್ಟ, ಕಾಣ್ತಿಲ್ಲ ಡಿಪಿ ಅಂತ ಕೇಳಬಹುದು ಅಂತ ಕಾಯುತ್ತಲೇ ಇದ್ದೇನೆ. ನಿನ್ನ ಅನ್​ಬ್ಲಾಕ್ ಮಾಡಿ ಒಂದೂವರೆ ತಾಸಾಯಿತು. ಆಗಿಂದಲೂ ನೀನು ಅನ್​ಲೈನ್​ನಲ್ಲೇ ಇದ್ದೀಯಾ ಮತ್ತು ನಾನು ಕಾಯುತ್ತಲೇ… ಲೇ…

(ಮುಂದಿನ ಋತು : 26.4.2022)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಕಳೆದ ಋತು : ಋತುವಿಲಾಸಿನಿ: ನಾಲ್ಕು ದಿನಗಳಾದರೂ ನಮ್ಮ ನಡುವೆ ಮಾತಿಲ್ಲದೆ ನನ್ನ ಕೋಪ ಮೀರಿದ್ದ ಆ ದಿನ

Published On - 9:46 am, Tue, 12 April 22

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ