Dharwad: ಮಾನವ ಜಾತಿ ತಾನೊಂದೆ ವಲಂ; ಸಾಲುಘಟನೆಗಳ ಹಿಂದೆ ವ್ಯವಸ್ಥಿತ ಕಾರ್ಯಸೂಚಿಯಿದೆ, ಎಚ್ಚೆತ್ತುಕೊಳ್ಳಿ!

Arpana HS : ಬಹುಸಂಖ್ಯಾತರ ಕೋಮುವಾದ, ಮೂಲಭೂತವಾದದಿಂದ ಅಕ್ಕಪಕ್ಕದ ದೇಶಗಳಿಗಾಗಿರುವ ದುಃಸ್ಥಿತಿಯನ್ನೂ ನೋಡಿಯೂ ಸತ್ಯ ಅರಿಯುವ ಮನಸ್ಸು ಮಾಡದಿದ್ದರೆ, ರಾಜಕೀಯದಾಟಕ್ಕೆ ದಾಳವಾದರೆ ನಮ್ಮ ಮುಂದಿನ ಪೀಳಿಗೆ ನಮ್ಮನೆಂದೂ ಕ್ಷಮಿಸದು.

Dharwad: ಮಾನವ ಜಾತಿ ತಾನೊಂದೆ ವಲಂ; ಸಾಲುಘಟನೆಗಳ ಹಿಂದೆ ವ್ಯವಸ್ಥಿತ ಕಾರ್ಯಸೂಚಿಯಿದೆ, ಎಚ್ಚೆತ್ತುಕೊಳ್ಳಿ!
ಅರ್ಪಣಾ ಎಚ್ ಎಸ್
Follow us
ಶ್ರೀದೇವಿ ಕಳಸದ
|

Updated on: Apr 12, 2022 | 11:55 AM

Vandalising Stalls in Dharwad : ಧಾರವಾಡದ ಹಣ್ಣಿನ ವ್ಯಾಪಾರಿ. ಹದಿನೈದು ವರ್ಷಗಳಿಂದಲೂ ಇಲ್ಲಿಯ ನುಗ್ಗಿಕೆರಿ ಹನುಮಂತನಗುಡಿಯ ಪ್ರಾಂಗಣದಲ್ಲಿ ವ್ಯಾಪಾರಕ್ಕೆ ತೊಡಗಿರುವಂಥವರು. ಶನಿವಾರ ಶ್ರೀರಾಮ ಸೇನೆಯ ತುಕಡಿಯೊಂದು ಅವರ ವ್ಯಾಪಾರಕ್ಕೆ ಅಡ್ಡಪಡಿಸಿ ಬರೋಬರಿ ಐದು ಕ್ವಿಂಟಾಲ್​ ಕಲ್ಲಂಗಡಿಯನ್ನು ಧ್ವಂಸಗೊಳಿಸಿದ ದೃಶ್ಯ ಕಣ್ಣಪಾಪೆಗಂಟಿ ಕುಳಿತಿದೆ. ನಮ್ಮೆಲ್ಲರ ಧಮನಿಗಳಲ್ಲಿ ಹರಿಯುತ್ತಿರುವ ಬಣ್ಣ, ಬಿರಿದ ಆ ಕಲ್ಲಂಗಡಿಯ ಒಡಲು. ಯಾಕೋ ಈ ರೂಪಕ ಇನ್ನೇನೋ ಸೂಚಿಸುವಂತಿದೆ. ಯಾವುದೂ ಒಮ್ಮೆಲೇ ಭುಗಿಲೇಳುವುದಿಲ್ಲ, ಅದು ಕೆಟ್ಟದ್ದೇ ಆಗಿರಲಿ ಒಳ್ಳೆಯದೇ ಆಗಿರಲಿ, ಬಿತ್ತದೆ ಬೆಳೆಯುವುದುಂಟೆ?; ಪುಂಡರೇ, ನೀವು ಯಾವ ಧರ್ಮದಲ್ಲಿಯೇ ಹುಟ್ಟಿರಲಿ, ಯಾವ ಜಾತಿಯವರೇ ಆಗಿರಲಿ, ಯಾವ ಭಾಗದವರೇ ಆಗಿರಲಿ, ಯಾವ ಪಕ್ಷದವರೇ ಆಗಿರಲಿ, ಯಾರೇ ನಿಮಗೆ ರೊಕ್ಕ ಮುಕ್ಕಿಸುತ್ತ, ವಿಷ ಕಕ್ಕಿಸುತ್ತಿರಲಿ, ಯಾರೇ ನಿಮ್ಮೊಳಗಿನ ಗೂಳಿತನಕ್ಕೆ ಕೆಂಪು ತೋರಿಸಿ ಇಂಥ ಸಾಲು ಪ್ರಕರಣಗಳೊಳಗೆ ನುಗ್ಗಿಸುತ್ತಿರಲಿ. ಇನ್ನಾದರೂ ಯೋಚಿಸಿ. ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ.

ಹೈದರಾಬಾದಿನಲ್ಲಿ ವಾಸಿಸುತ್ತಿರುವ ಲೇಖಕಿ, ಪತ್ರಕರ್ತೆ ಅರ್ಪಣ ಎಚ್. ಎಸ್. ಬರಹ.

ಕಲ್ಲಂಗಡಿ ಚೂರು ಚೂರಾಗಿ ನೆಲಕ್ಕೆ ಬೀಳುವಾಗ. ಹಲವಾರು ವರ್ಷಗಳಿಂದ ನಬಿಸಾಬರ ಜೊತೆಯೇ ವ್ಯಾಪಾರ ನಡೆಸಿರಬಹುದಾದ, ಸುತ್ತಲೂ ಇದ್ದ ಇತರ ವ್ಯಾಪಾರಿಗಳ್ಯಾರೂ ತಡೆಯುವ ಯತ್ನ ಮಾಡಲಿಲ್ಲವೇ? ಅಲ್ಲಿದ್ದ ಪೊಲೀಸರು ಅದನ್ನು ತಡೆಯುವ ಬದಲು, ನಿಧಾನಕ್ಕೆ ವಾಯುವಿಹಾರ ಮಾಡುತ್ತಿರುವವರಂತೆ ಓಡಾಡುತ್ತಾ ಘಟನೆಯ ಬಗ್ಗೆ ಸಾವಧಾನವಾಗಿ ವಿಚಾರಿಸಿಕೊಳ್ಳುತ್ತಾ ಉಳಿದದ್ದು ಏಕೆ? ದೇವಸ್ಥಾನದ ಸಮಿತಿಯವರೇ ಅನುಮತಿ ನೀಡಿರುವ ಅಂಗಡಿಯ ಮೇಲೆ ಹಾಗೆ ಹಾಡು ಹಗಲೇ, ಎಲ್ಲರ ಕಣ್ಣ ಮುಂದೆ ಧಾಳಿ ಮಾಡುವ ಧೈರ್ಯ ಒಂದು ಸಂಘಟನೆಯವರಿಗೆ ಎಲ್ಲಿಂದ ಬಂತು? ಇದು ಧಾರವಾಡದ ಹನುಮನ ದೇವಸ್ಥಾನದ ಎದುರಿನ ವಿಡಿಯೋ ನೋಡಿದಾಗಿನಿಂದ ನನ್ನನ್ನು ಕಾಡುತ್ತಿರುವ ಪ್ರಶ್ನೆ.

ಜನರ ನಡುವೆ ಕೋಮು ಭಾವನೆ ಹೆಚ್ಚಿದೆ. ಸಾಮರಸ್ಯ ಹಾಳಾಗಿದೆ ಎಂದು ನಾವು ಸುಲಭವಾಗಿ ಹೇಳಿಬಿಡಬಹುದು. ಕೊರಗಬಹುದು. ಆದರೆ, ಈ ಸ್ಥಿತಿಗೆ ತಲುಪುವುದಕ್ಕೆ ಕಾರಣವಾದ ರಾಜಕೀಯವನ್ನು ಹೊರಗಿಟ್ಟು ಇದನ್ನು ನೋಡುವುದಕ್ಕೆ ಸಾಧ್ಯವೇ ಇಲ್ಲ. ಸರ್ಕಾರದ ಕುಮ್ಮಕ್ಕಿಲ್ಲದೆ, ಪೊಲೀಸ್ ಇಲಾಖೆ ಕಣ್ಣುಮುಚ್ಚಿ ಕೂರುವುದಾಗಲಿ, ಪುಂಡರಿಗೆ ಇಂತಹ ಧೈರ್ಯ ಹುಟ್ಟುವುದಾಗಲೀ ಸಾಧ್ಯವೇ? ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ಸಂಭವಿಸುತ್ತಿರುವ ಸಾಲು ಸಾಲು ಘಟನೆಗಳು, ಏಳುತ್ತಿರುವ ವಿವಾದಗಳು ಕನ್ನಡಿಗರ ಮಧ್ಯೆ ಸುಖಾಸುಮ್ಮನೆ ಹುಟ್ಟಿಕೊಂಡ ದ್ವೇಷದ ಪರಿಣಾಮವಲ್ಲ. ಇದರ ಹಿಂದೊಂದು ವ್ಯವಸ್ಥಿತ ಕಾರ್ಯಸೂಚಿ ಇದೆ. ಸವಿಸ್ತಾರವಾದ ಯೋಜನೆ ಇದೆ ಎಂಬುದನ್ನು ನಾವು ಮರೆಯಬಾರದು. ಮುಂದಿನ ವರ್ಷದಲ್ಲಿ ಬರಲಿರುವ ಚುನಾವಣೆಗೆ ಪೂರ್ವ ತಯಾರಿ ಇವೆಲ್ಲಾ ಎಂಬುದನ್ನು ಯಾರೂ ಅಲ್ಲಗೆಳೆಯಲಾರರು. ಹಾಗಾದರೆ, ಗೊತ್ತಿದ್ದೂ ಗೊತ್ತಿದ್ದೂ ಈ ರಾಜಕೀಯದಾಟಕ್ಕೆ ನಾವೇಕೆ ಬಲಿಯಾಗುತ್ತಿದ್ದೇವೆ?

ಕಳೆದ ಕೆಲ ದಶಕದಿಂದ ಭಾರತದಲ್ಲಿ ಸರ್ವೇ ಸಾಮಾನ್ಯವಾಗುತ್ತಿರುವುದು ‘ಹಿಂದುಗಳು ಅಪಾಯದಲ್ಲಿದ್ದಾರೆಂಬ’ ಭಾವನೆ. ವರ್ಲ್ಡ್ ಟ್ರೇಡ್ ಸೆಂಟರ್ ದಾಳಿಯ ನಂತರ ಜಗತ್ತಿನಲ್ಲೆಡೆ ತಾರಕಕ್ಕೇರಿದ ಇಸ್ಲಮೋಫೋಬಿಯಾವನ್ನು ಭಾರತದಲ್ಲಿ ಸಮರ್ಥವಾಗಿ ಬಳಸಿಕೊಂಡು ಹಿಂದುಗಳಲ್ಲಿ ಅಸುರಕ್ಷತೆಯ ಭಾವವನ್ನು ಉತ್ತು, ಬಿತ್ತು, ಹುಲುಸಾಗಿ ಬೆಳೆಸಲಾಗಿದೆ. ಅದಕ್ಕೂ ಮೊದಲು ಕೋಮುಗಳ ನಡುವೆ ಅಸಹಿಷ್ಣುತೆ ಇರಲಿಲ್ಲವೆಂದಲ್ಲ. ಆದರೆ ಇದಕ್ಕೆ ಬಹುಪಾಲು ಕಾರಣವಾಗಿದ್ದದ್ದು ಜನರಿಗೆ ತಮ್ಮ ತಮ್ಮ ಧರ್ಮಗಳ ಮೇಲೆ ಇದ್ದ ಕುರುಡು ಪ್ರೀತಿ. ಆಗೀಗ ಕೋಮುಗಲಭೆಗಳು ಸಂಭವಿಸಿದಾಗ ಉಲ್ಭಣಗೊಳ್ಳುತ್ತಿದ್ದ ಕೋಮು ದ್ವೇಷ ಭಾವ, ನಂತರ ತಣ್ಣಗಾಗಿ, ನಿತ್ಯದ ಬದುಕಲ್ಲಿ ಅಗತ್ಯವಾಗಿದ್ದ ಪರಸ್ಪರ ಅವಲಂಬನೆಯನ್ನು ಅರ್ಥಮಾಡಿಕೊಂಡು, ಹಾಳಾದ ಸೌಹಾರ್ದತೆಯ ಸೇತುವೆ ದುರಸ್ತಿಯಾಗುತ್ತಿತ್ತು. ಅಂತಹ ಕೋಮುಗಲಭೆಯ ಸಂದರ್ಭದಲ್ಲೂ, ಬೀದಿಗಿಳಿದು ಬೆಂಕಿ ಹಚ್ಚುವವರು ನೂರಿದ್ದರೆ, ಅನ್ಯಕೋಮಿನ ಜನಕ್ಕೆ ಆಸರೆಯಾಗಿ, ರಕ್ಷಣೆ ನೀಡಲು ಸಿದ್ಧರಿದ್ದ ಜನ ಸಾವಿರವಿದ್ದರು.

ಆದರೆ, ಈಗ ಈ ಅನ್ಯ ಕೋಮಿನ ದ್ವೇಷಕ್ಕೆ ಧರ್ಮಾಧರಿತ ಪಕ್ಷಗಳು ಭದ್ರವಾದ ಬೇರೆಯದೇ ಬುನಾದಿ ಹಾಕಿಕೊಟ್ಟಿವೆ. ಬಹುಸಂಖ್ಯಾತರಲ್ಲಿ ಇನ್ನಿಲ್ಲದಂತೆ ಅಸುರಕ್ಷತೆಯ ಭಾವವನ್ನು ಹೆಚ್ಚಿಸಿವೆ. ಕೆಲ ರಾಜಕೀಯ ಪಕ್ಷಗಳ, ಸಿದ್ಧಾಂತಗಳ ಓಲೈಕೆ ರಾಜಕಾರಣವನ್ನು, ಕುರುಡು ಬೆಂಬಲವನ್ನು ಭೂತಗನ್ನಡಿಯಲ್ಲಿ ತೋರಿಸಿ, ಅದಕ್ಕೊಂದಿಷ್ಟು ಕಪೋಲಕಲ್ಪಿತ ವಿಷಯಗಳನ್ನು ಸೇರಿಸಿ ಅಲ್ಪಸಂಖ್ಯಾತರ ಮೇಲೆ ಅಸಹನೆಯನ್ನು ಹೆಚ್ಚಿಸಲಾಗುತ್ತಿದೆ. ನೀವು ಅನ್ಯ ಕೋಮಿನವರನ್ನು ರಕ್ಷಿಸಿದರೆ ಮುಂದೆ ಅವರೇ ನಿಮ್ಮ ಪ್ರಾಣಕ್ಕೆ ಎರವಾಗುತ್ತಾರೆ ಎಂಬಂತಹ ಸಂದೇಶಗಳನ್ನು ರವಾನಿಸಲಾಗುತ್ತಿದೆ. ಹೀಗಾಗಿ, ಅಸಹಿಷ್ಣುತೆಗೆ ಈಗ ತನ್ನ ಧರ್ಮದ ಮೇಲಿನ ಪ್ರೀತಿಗಿಂತ, ಹೆಚ್ಚಾಗಿ ಅನ್ಯ ಕೋಮಿನ ಮೇಲಿನ ದ್ವೇಷವೇ ಕಾರಣ ಎಂಬಂತಾಗಿದೆ.

ಇದನ್ನ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ಇರುಳಿನಲಿ ಹೋದಾನು ಪರಮಾತ್ಮ ಸಾಬಿಯ ಮನೆಗೆ

ಈ ದ್ವೇಷವನ್ನು ಶಾಶ್ವತವಾಗಿಸಿ, ಅದರಿಂದ ದೀರ್ಘಕಾಲದವರೆಗೆ ಲಾಭ ಪಡೆಯಲು ಇರುವ ಒಂದು ಉಪಾಯ ಕೋಮುಗಳ ನಡುವೆ ಇರುವ ಪರಸ್ಪರ ಅವಲಂಬನೆಯನ್ನು ಕಿತ್ತುಹಾಕುವುದು. ರಾಜ್ಯದಲ್ಲಿ ಸದ್ಯಕ್ಕೆ  ನಡೆಯುತ್ತಿರುವುದು ಇದೇ. ಮಾಂಸವನ್ನು ಕೀಳಾಗಿ ಕಾಣುವ ಜಾತಿಗಳ ಹಿಡಿತದಲ್ಲಿರುವ ಧರ್ಮಕ್ಕೆ ಸೇರಿದ ಮುಖಂಡರು ಏಕಾಏಕಿ ಮಾಂಸಾಹಾರದ ಸೇವನೆ ಬಗ್ಗೆ ಮಾತನಾಡಲು ಆರಂಭಿಸಿದ್ದೇಕೆ? ಹಲಾಲ್ ವಿವಾದದ ಮೂಲಕ ಮಾಂಸ ಉದ್ದಿಮೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರುವ ಮುಸ್ಲಿಮರಿಗೆ ಹೊಡೆತ ನೀಡುವುದು ಇದು ಉದ್ದೇಶ. ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ಹೊರಗಿಡುವ ಯೋಜನೆ ಹುಟ್ಟಿದ್ದೂ ಇದೇ ಕಾರಣಕ್ಕೆ. ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿದ್ದ ಬಪ್ಪನಾಡಿನಲ್ಲೇ ಇಂತಹದೊಂದು ಸಾಧ್ಯವಾಯಿತು ಎಂಬುದಕ್ಕಿಂತ ದೊಡ್ಡ ದುರಂತ ಮತ್ತೇನಿದೆ?

ಭಾರತದಂತಹ ಬಹುಸಂಸ್ಕೃತಿಯ, ಬಹುಧರ್ಮೀಯ ದೇಶದಲ್ಲಿ ಸೌಹಾರ್ದತೆಯ ಬುನಾದಿ ಇರುವುದು ಆರ್ಥಿಕ ಅವಲಂಬನೆಯಲ್ಲೇ. ವಿವಿಧ ಧರ್ಮದ ಜನರು ಒಟ್ಟಾಗಿ ದುಡಿಯದಿದ್ದರೆ ಹಲವರ ಮನೆಯಲ್ಲಿ ಒಲೆ ಉರಿಯಲು ಸಾಧ್ಯವೇ ಇಲ್ಲ. ಅಲ್ಲಲ್ಲಿ ಸಾಂಸ್ಕೃತಿಕ, ಸಾಮಾಜಿಕ ಕೊಡು-ಕೊಳ್ಳುವಿಕೆ ಇಲ್ಲವೆಂದಲ್ಲ. ಬೆಂಗಳೂರಿನ ಕರಗ, ಬಪ್ಪನಾಡಿನ ಡೋಲು, ಬಾಬಯ್ಯನ ಹಬ್ಬ, ಹಿಂದೂಗಳೇ ಮುಂದಾಳತ್ವ ವಹಿಸುವ ಉರುಸ್, ಮುಸ್ಲಿಮರು ಸಂಭ್ರಮಿಸುವ ಊರ ಜಾತ್ರೆಗಳು ಇದ್ದೇ ಇವೆ. ಆದರೆ, ಊರಲ್ಲಿ, ನಗರಗಳಲ್ಲಿ, ಹಳ್ಳಿಗಳಲ್ಲಿ ತಮ್ಮ ತಮ್ಮದೇ ಏರಿಯಾಗಳಲ್ಲಿ ವಿವಿಧ ಧರ್ಮದವರು, ಜಾತಿಯವರು ಪ್ರತ್ಯೇಕವಾಗಿ ಬಾಳುತ್ತಿರುವುದೇ ಹೆಚ್ಚಾಗಿರುವಾಗ ಈ ಎಲ್ಲಾ ಕೊಡು ಕೊಳ್ಳುವಿಕೆಗಿಂತಲೂ, ಹೆಚ್ಚಾಗಿ ಈ ವಿವಿಧ ದ್ವೀಪಗಳ ನಡುವೆ ಒಂದು ಗಟ್ಟಿಯಾದ ಸಂಪರ್ಕ ಏರ್ಪಡಿಸಿರುವುದು ವ್ಯಾಪಾರ, ವ್ಯವಹಾರಗಳು.

ಇಂತಹ ಒಂದು ಬಲವಾದ ಸೇತುವೆಯನ್ನು ಕಿತ್ತು ಹಾಕುವ, ಅನ್ಯ ಧರ್ಮೀಯರೊಂದಿಗೆ ವ್ಯವಹಾರವನ್ನೇ ಮಾಡದಂತಹ ವಾತಾವರಣ ಸೃಷ್ಚಿಸುವ ವ್ಯವಸ್ಥಿತ ಪ್ರಯತ್ನ ಈಗ ನಡೆಯುತ್ತಿದೆ. ಆದರೆ, ಇದೊಂದು ಸೂಯಿಸೈಡ್ ಮಿಷನ್ ಎಂಬುದನ್ನು ಜನ ಆದಷ್ಟು ಬೇಗ ಅರಿಯುವ ಅಗತ್ಯವಿದೆ. ಧರ್ಮದ ಹೆಸರಲ್ಲಿ ಮಾನವೀಯತೆ ಮರೆತರೆ, ನೆಲಕಚ್ಚುವ ಬದುಕುಗಳಿಗೆ ಧರ್ಮದ ಹಂಗಿರುವುದಿಲ್ಲ. ಬಹುಸಂಖ್ಯಾತರ ಕೋಮುವಾದ, ಮೂಲಭೂತವಾದದಿಂದ ಅಕ್ಕಪಕ್ಕದ ದೇಶಗಳಿಗಾಗಿರುವ ದುಃಸ್ಥಿತಿಯನ್ನೂ ನೋಡಿಯೂ ಸತ್ಯ ಅರಿಯುವ ಮನಸ್ಸು ಮಾಡದಿದ್ದರೆ, ರಾಜಕೀಯದಾಟಕ್ಕೆ ದಾಳವಾದರೆ ನಮ್ಮ ಮುಂದಿನ ಪೀಳಿಗೆ ನಮ್ಮನೆಂದೂ ಕ್ಷಮಿಸದು.

ಪ್ರತಿಕ್ರಿಯೆಗಾಗಿ : tv9kannadadigital@gmail.com

ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ‘ಕ್ಷಮೆ ಇರಲಿ, ನಾನು ಹೋರಾಟಗಾರನಲ್ಲ’