Dharwad: ಮಾನವ ಜಾತಿ ತಾನೊಂದೆ ವಲಂ; ಎಷ್ಟು ಗಾಳಿಸುದ್ದಿಗಳು? ಮೊದಲು ಬೆಚ್ಚುತ್ತಿದ್ದೆ, ಈಗ ಹುಸಿನಗೆ
Umarani Pujar : ‘ಅರೇ ಆಕೆ ಕುಂಕುಮವನ್ನು ಹಚ್ಚುವುದೇ ಇಲ್ಲ. ಆಕೆ ಮುಸ್ಲೀಮಳೆ? ಆಸಾರ್ ಉರುಸಿನಲ್ಲಿ ಅಂದು ಸಕ್ಕರೆ ಊದಿಸುತ್ತಿದ್ದಳು.’ ಅದನ್ನು ಕೇಳದೆ, ಸೂಫಿಯ ಗಾಯನವೇಕೆ ಅದ್ಭುತವಾಗಿದೆ? ಗಾನಕ್ಕೆ ತಲೆದೂಗುತ್ತಲೇ ಇರುತ್ತಿದ್ದೆ.
Vandalising Stalls in Dharwad : ಧಾರವಾಡದ ಹಣ್ಣಿನ ವ್ಯಾಪಾರಿ. ಹದಿನೈದು ವರ್ಷಗಳಿಂದಲೂ ಇಲ್ಲಿಯ ನುಗ್ಗಿಕೆರಿ ಹನುಮಂತನಗುಡಿಯ ಪ್ರಾಂಗಣದಲ್ಲಿ ವ್ಯಾಪಾರಕ್ಕೆ ತೊಡಗಿರುವಂಥವರು. ಶನಿವಾರ ಶ್ರೀರಾಮ ಸೇನೆಯ ತುಕಡಿಯೊಂದು ಅವರ ವ್ಯಾಪಾರಕ್ಕೆ ಅಡ್ಡಪಡಿಸಿ ಬರೋಬರಿ ಐದು ಕ್ವಿಂಟಾಲ್ ಕಲ್ಲಂಗಡಿಯನ್ನು ಧ್ವಂಸಗೊಳಿಸಿದ ದೃಶ್ಯ ಕಣ್ಣಪಾಪೆಗಂಟಿ ಕುಳಿತಿದೆ. ನಮ್ಮೆಲ್ಲರ ಧಮನಿಗಳಲ್ಲಿ ಹರಿಯುತ್ತಿರುವ ಬಣ್ಣ, ಬಿರಿದ ಆ ಕಲ್ಲಂಗಡಿಯ ಒಡಲು. ಯಾಕೋ ಈ ರೂಪಕ ಇನ್ನೇನೋ ಸೂಚಿಸುವಂತಿದೆ. ಯಾವುದೂ ಒಮ್ಮೆಲೇ ಭುಗಿಲೇಳುವುದಿಲ್ಲ, ಅದು ಕೆಟ್ಟದ್ದೇ ಆಗಿರಲಿ ಒಳ್ಳೆಯದೇ ಆಗಿರಲಿ, ಬಿತ್ತದೆ ಬೆಳೆಯುವುದುಂಟೆ?; ಪುಂಡರೇ, ನೀವು ಯಾವ ಧರ್ಮದಲ್ಲಿಯೇ ಹುಟ್ಟಿರಲಿ, ಯಾವ ಜಾತಿಯವರೇ ಆಗಿರಲಿ, ಯಾವ ಭಾಗದವರೇ ಆಗಿರಲಿ, ಯಾವ ಪಕ್ಷದವರೇ ಆಗಿರಲಿ, ಯಾರೇ ನಿಮಗೆ ರೊಕ್ಕ ಮುಕ್ಕಿಸುತ್ತ, ವಿಷ ಕಕ್ಕಿಸುತ್ತಿರಲಿ, ಯಾರೇ ನಿಮ್ಮೊಳಗಿನ ಗೂಳಿತನಕ್ಕೆ ಕೆಂಪು ತೋರಿಸಿ ಇಂಥ ಸಾಲು ಪ್ರಕರಣಗಳೊಳಗೆ ನುಗ್ಗಿಸುತ್ತಿರಲಿ. ಇನ್ನಾದರೂ ಯೋಚಿಸಿ. ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ.
ಇಂಗ್ಲಿಷ್ ಸ್ನಾತಕೋತ್ತರ ಪದವಿ ಪೂರೈಸಿರುವ ಉಮಾರಾಣಿ ಪೂಜಾರ ರಾಣೆಬೆನ್ನೂರಿನವರು. ಅವರ ಕವಿತೆ ನಿಮ್ಮ ಓದಿಗೆ.
ನಾನು ಭಾರತೀಯಳು
‘ಅವಳು ಕ್ರಿಶ್ಚಿಯನ್ನಳಾಗಿದ್ದಾಳೆಯೇ? ಬಾರಿ ಬಾರಿ ಚರ್ಚಿಗೆ ತೆರಳುತ್ತಾಳೆ. ನನ್ನ ಕಿವಿಗೆ ಕೇಳಿಸುತ್ತಿರಲೇ ಇಲ್ಲ.’ ಅನುವಾದಕಿಯಾಗಿ, ಗುಡ್ ಶೆಫರ್ಡ್ ಟೆಂಪಲ್ ಎಂದರೆ, ಒಳ್ಳೆಯ ಕುರುಬನ ದೇವಾಲಯ ಎಂದು ಅನುವಾದಿಸಲು ಮನ ತವಕಿಸುತ್ತಿತ್ತು.
‘ಅರೇ ಆಕೆ ಕುಂಕುಮವನ್ನು ಹಚ್ಚುವುದೇ ಇಲ್ಲ. ಆಕೆ ಮುಸ್ಲೀಮಳೆ? ಆಸಾರ್ ಉರುಸಿನಲ್ಲಿ ಅಂದು ಸಕ್ಕರೆ ಊದಿಸುತ್ತಿದ್ದಳು.’ ಅದನ್ನು ಕೇಳದೆ, ನಾನು ಸೂಫಿಯ ಗಾಯನವೇಕೆ ಅದ್ಭುತವಾಗಿದೆ? ಎಂದು ಗಾನಕ್ಕೆ ತಲೆದೂಗುತ್ತಲೇ ಇರುತ್ತಿದ್ದೆ.
‘ಅವಳೇ ಅಂದು ದಿಂಡಿಯಲ್ಲಿ ನೋಡಿದವಳೇ ಅವಳು. ಮರಾಠಿಯಲ್ಲಿ ಮಾತನಾಡುತ್ತಿದ್ದಳು. ನನಗೆ ಪರಿವೆ ಇಲ್ಲ.’ ಮಹಾರಾಣಾ ಪ್ರತಾಪ ಸಿಂಹ, ಶಿವಾಜಿ, ಜೀಜಾಬಾಯಿ ಇನ್ನೂ ಅನೇಕರ ಕಥೆ ತಿಳಿದುಕೊಳ್ಳುವ ಹಂಬಲವಷ್ಟೇ ಇದ್ದಿತ್ತು.
‘ಅವಳು ಬ್ರಾಹ್ಮಣಳೆ? ನಾನು ನೋಡಿದ್ದೇ ಆಕೆಯನ್ನು ಒಂದು ಬಾರಿ ಕಚ್ಛೆ ಹಾಕಿ ಸೀರೆ ಉಟ್ಟಿದ್ದಳು. ನತ್ತು ಧರಿಸಿದ್ದಳು. ಅದು ಕೂಡ ಕೇಳುತ್ತಿರಲಿಲ್ಲ.’ ನನ್ನಲ್ಲಿ ಇದ್ದದ್ದು ರಾಯರ ಮಠವೇಕೆ ತಂಪಾಗಿದೆ ಎಂಬ ಪ್ರಶ್ನೆಯೊಂದೆ!
‘ಆಕೆಯ ಬಳಿ ಬುದ್ಧನ ಚಿತ್ರವಿದೆ. ಮೇಜಿನ ಮೇಲೆ ಬುದ್ಧನ ಪ್ರತಿಮೆಯು! ಬುದ್ಧನ ಬಗೆಗೆ ಕವನಗಳನ್ನೂ ಬರೆದಿದ್ದಾಳೆ. ನನಗೆ ಅದು ಕೇಳಿಸುತ್ತಿರಲಿಲ್ಲ.’ ನಾನು ಬೋಧಿವೃಕ್ಷವೆಂದರೇನು? ಎಂಬ ಗೊಂದಲದಲ್ಲಿರುತ್ತಿದ್ದೆ.
ಎಷ್ಟು ಗಾಳಿಸುದ್ದಿಗಳು? ಮೊದಲು ಬೆಚ್ಚುತ್ತಿದ್ದೆ. ಈಗ ಹುಸಿನಗೆ. ಯಾವುದಕ್ಕೂ ನಾನು ಉತ್ತರಿಸದವಳೇ ಅಲ್ಲ. ಎಲ್ಲರಿಗೂ ತಿಳಿದಿದೆ, ನಾನೊಬ್ಬ ಶೂದ್ರಳು. ಆದರೂ ಏಕೆ ಪ್ರಶ್ನೆಗಳು? ನನಗೆ ತಿಳಿದಿರುವುದಿಷ್ಟೇ, ನಾನು ವಿಶ್ವಮಾನವಿ!
ಪ್ರತಿಕ್ರಿಯೆಗಾಗಿ : tv9kannadadigital@gmail.com
ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ಹೇ ರಾಮ್! ಪ್ರೀತಿ ಬೆರೆತ ಅನ್ನಧರ್ಮದ ಅಮಲೇರಿಸು
ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ಸಾಲುಘಟನೆಗಳ ಹಿಂದೆ ವ್ಯವಸ್ಥಿತ ಕಾರ್ಯಸೂಚಿಯಿದೆ, ಎಚ್ಚೆತ್ತುಕೊಳ್ಳಿ!