Dharwad: ಮಾನವ ಜಾತಿ ತಾನೊಂದೆ ವಲಂ; ನುಗ್ಗಿಕೆರಿಯ ನೀರು ಕಲಕುವುದನ್ನು ನೋಡುತ್ತಿದ್ದೀರಾ ರಹಿಮತ್ ಖಾನರೇ

Rajani Garud : ಆರ್ಥಿಕವಾಗಿ ದುರ್ಬಲರಾದ ಯಾವುದೇ ಜಾತಿ, ಧರ್ಮದ ಶಿಕ್ಷಣಾಕಾಂಕ್ಷಿಗಳಿಗೆ ಜಮಾತೆಯೇ ಖರ್ಚನ್ನು ಭರಿಸಿ ಓದಿಸುತ್ತದೆ. ನೆನಪಿರಲಿ, ಈ ಸಂಸ್ಥೆಗೆ ದೊಡ್ಡ ಆರ್ಥಿಕ ಸೌಲಭ್ಯವೇನಿಲ್ಲ. ಅಂಜುಮನ್ ಕಟ್ಟಡದ ಹೊರಭಾಗದಲ್ಲಿರುವ ಅಂಗಡಿಗಳ ಬಾಡಿಗೆಯೇ ಅದರ ಮುಖ್ಯ ಆದಾಯ.

Dharwad: ಮಾನವ ಜಾತಿ ತಾನೊಂದೆ ವಲಂ; ನುಗ್ಗಿಕೆರಿಯ ನೀರು ಕಲಕುವುದನ್ನು ನೋಡುತ್ತಿದ್ದೀರಾ ರಹಿಮತ್ ಖಾನರೇ
ರಜನಿ ಗರುಡ
Follow us
ಶ್ರೀದೇವಿ ಕಳಸದ
|

Updated on: Apr 13, 2022 | 9:25 AM

Vandalising Stalls in Dharwad : ಧಾರವಾಡದ ಹಣ್ಣಿನ ವ್ಯಾಪಾರಿ. ಹದಿನೈದು ವರ್ಷಗಳಿಂದಲೂ ಇಲ್ಲಿಯ ನುಗ್ಗಿಕೆರಿ ಹನುಮಂತನಗುಡಿಯ ಪ್ರಾಂಗಣದಲ್ಲಿ ವ್ಯಾಪಾರಕ್ಕೆ ತೊಡಗಿರುವಂಥವರು. ಶನಿವಾರ ಶ್ರೀರಾಮ ಸೇನೆಯ ತುಕಡಿಯೊಂದು ಅವರ ವ್ಯಾಪಾರಕ್ಕೆ ಅಡ್ಡಪಡಿಸಿ ಬರೋಬರಿ ಐದು ಕ್ವಿಂಟಾಲ್​ ಕಲ್ಲಂಗಡಿಯನ್ನು ಧ್ವಂಸಗೊಳಿಸಿದ ದೃಶ್ಯ ಕಣ್ಣಪಾಪೆಗಂಟಿ ಕುಳಿತಿದೆ. ನಮ್ಮೆಲ್ಲರ ಧಮನಿಗಳಲ್ಲಿ ಹರಿಯುತ್ತಿರುವ ಬಣ್ಣ, ಬಿರಿದ ಆ ಕಲ್ಲಂಗಡಿಯ ಒಡಲು. ಯಾಕೋ ಈ ರೂಪಕ ಇನ್ನೇನೋ ಸೂಚಿಸುವಂತಿದೆ. ಯಾವುದೂ ಒಮ್ಮೆಲೇ ಭುಗಿಲೇಳುವುದಿಲ್ಲ, ಅದು ಕೆಟ್ಟದ್ದೇ ಆಗಿರಲಿ ಒಳ್ಳೆಯದೇ ಆಗಿರಲಿ, ಬಿತ್ತದೆ ಬೆಳೆಯುವುದುಂಟೆ?; ಪುಂಡರೇ, ನೀವು ಯಾವ ಧರ್ಮದಲ್ಲಿಯೇ ಹುಟ್ಟಿರಲಿ, ಯಾವ ಜಾತಿಯವರೇ ಆಗಿರಲಿ, ಯಾವ ಭಾಗದವರೇ ಆಗಿರಲಿ, ಯಾವ ಪಕ್ಷದವರೇ ಆಗಿರಲಿ, ಯಾರೇ ನಿಮಗೆ ರೊಕ್ಕ ಮುಕ್ಕಿಸುತ್ತ, ವಿಷ ಕಕ್ಕಿಸುತ್ತಿರಲಿ, ಯಾರೇ ನಿಮ್ಮೊಳಗಿನ ಗೂಳಿತನಕ್ಕೆ ಕೆಂಪು ತೋರಿಸಿ ಇಂಥ ಸಾಲು ಪ್ರಕರಣಗಳೊಳಗೆ ನುಗ್ಗಿಸುತ್ತಿರಲಿ. ಇನ್ನಾದರೂ ಯೋಚಿಸಿ. ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ.

ಧಾರವಾಡದಲ್ಲಿರುವ ಲೇಖಕಿ, ರಂಗಕರ್ಮಿ ರಜನಿ ಗರುಡ ಬರಹ.

ವಾರದಕೊನೆಗೆ ಶನಿವಾರ ಸಂಜೆ ಮಕ್ಕಳನ್ನು ಕರೆದುಕೊಂಡು ಗೆಳತಿಯರು, ಅಕ್ಕತಂಗಿಯರು ಕೂಡಿ ನುಗ್ಗಿಕೆರಿಗೆ  ಹೋಗುವುದು ಕೆಲವರ್ಷಗಳ ಹಿಂದೆ ಸಾಮಾನ್ಯವಾಗಿತ್ತು. ಮುಖ್ಯರಸ್ತೆಯಿಂದ ದೇವಸ್ಥಾನಕ್ಕೆ ಹೋಗಬೇಕೆಂದರೆ ರಸ್ತೆಯ ಎಡಕ್ಕೆ ವಿಶಾಲವಾದ ಕೆರೆ, ಬಲಕ್ಕೆ ಭತ್ತದ ಗದ್ದೆಯ ಏರಿಯ ಮೇಲೆ ನಡೆದುಕೊಂಡು ದೇವಸ್ಥಾನ ತಲುಪಬೇಕು. ಕೆರೆಯ ದಡದ ಮೇಲಿರುವ ಹನುಮಂತದೇವರ ಗುಡಿಯ ಸುತ್ತಲೂ ಹೊಲ, ಗಿಡಮರಗಳಿವೆ. ಕಳೆದ ಏಳೆಂಟು ವರ್ಷಗಳಲ್ಲಿ ದೇವಸ್ಥಾನದ ಟ್ರಸ್ಟ್ ಭಕ್ತರಿಗೆ ಅನುಕೂಲವಾಗುವಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನೂ ಮಾಡಿದೆ. ನಾವು ಹೋಗುತ್ತಿದ್ದುದು ಭಕ್ತಿಗಿಂತ ಆ ಪರಿಸರವನ್ನು ಆನಂದಿಸಲು, ಸಣ್ಣ ಪಿಕ್​ನಿಕ್  ಹಾಗೆ ಸಮಯ ಕಳೆಯಲು. ಅಲ್ಲಿ ಸಿಗುತ್ತಿದ್ದ ಭಜಿ, ಮಿರ್ಚಿ, ಮಂಡಕ್ಕಿ ತಿಂದು ಅಲ್ಲಿಯೇ ಸಿಗುತ್ತಿದ್ದ ತರಕಾರಿ ಖರೀದಿಸಿ, ಸಿಕ್ಕ ಸ್ನೇಹಿತರು, ಗುರುತಿನವರೊಂದಿಗೆ ಹರಟೆಹೊಡೆದು ಮನೆಗೆ ಬಂದೆವೆಂದರೆ ವಾರಾಂತ್ಯವನ್ನು ಸಾರ್ಥಕವಾಗಿ ಕಳೆದ ನೆಮ್ಮದಿ, ಮಕ್ಕಳಿಗೂ ಶಾಲೆಯ ಏಕತಾನತೆಯಿಂದ ಬಿಡುಗಡೆಯಾದ ಅನುಭವ.

ಧಾರವಾಡ – ಹುಬ್ಬಳ್ಳಿ ಮತ್ತು ಸುತ್ತಲ ಹಳ್ಳಿಗಳ ಭಕ್ತರಿಂದ ಶನಿವಾರ ಮಾತ್ರ ಜನರಿಂದ ತುಂಬಿತುಳುಕುವ ಜಾಗ. ಕಳೆದ ಕೆಲವು ದಿನಗಳಿಂದ ನುಗ್ಗಿಕೆರಿಯಲ್ಲಿ ದ್ವೇಷದ  ಹೊಗೆಯಾಡುತ್ತಿದೆ, ಅಮಾನವೀಯವಾದ ಕೃತ್ಯಗಳು ಯುವಕರಿಂದ ನಡೆಯುತ್ತಿದೆ. ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಸಂಸಾರ ನಿರ್ವಹಿಸುತ್ತ, ಹೊಟ್ಟೆಹೊರೆದುಕೊಳ್ಳುವ ಮುಸ್ಲೀಂ ವ್ಯಾಪಾರಿಗಳ ಮೇಲೆ ದ್ವೇಷದ ಪ್ರಹಾರವನ್ನು ನೀಡಲಾಗುತ್ತಿದೆ. ದಿನದಿನವೂ ನುಗ್ಗಿಕೆರಿಯ ಕೆರೆಯ ನೀರು ಕಲಕುತ್ತಿದೆ, ಸುತ್ತಲಿನ ಹೊಲ ಇದಕ್ಕೆಲ್ಲ ಮೂಕಸಾಕ್ಷಿಯಾಗಿದೆ. ಆದರೆ ತಮ್ಮ ಉದ್ಯೋಗ ಮಾಡಿಕೊಂಡು, ತಮ್ಮ ಸಂಸಾರ ಪೊರೆಯಬೇಕಾದ ಯುವಕರು ಈ ದ್ವೇಷ ರಾಜಕಾರಣದಿಂದ ತಮಗಾಗುವ ಲಾಭದ ಬಗ್ಗೆ ಸ್ವಲ್ಪ ಯೋಚಿಸಿಬೇಕಿದೆ. ಈ ಸಾಂಸ್ಕೃತಿಕ ಶಹರಿನ ಇತಿಹಾಸ, ಸಹಬಾಳ್ವೆ ನೆಮ್ಮದಿಯ ಬದುಕನ್ನು ಕಣ್ಬಿಟ್ಟು ನೋಡಬೇಕಾಗಿದೆ.

ರೇಣುಕಾ ನಿಡಗುಂದಿಯವರ ಈ ಬರಹವನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ಈಗಲೇ ಈ ಸಾಂಸ್ಕೃತಿಕ ಭಯೋತ್ಪಾದನೆಯನ್ನು ಹತ್ತಿಕ್ಕಬೇಕು

ತಕ್ಷಣಕ್ಕೆ ನನಗೆ ಎರಡು ದೊಡ್ಡ ಹೆಸರನ್ನು ಅವರ ಕೊಡುಗೆಯ ಮೂಲಕ ಸ್ಮರಿಸಬೇಕು ಎನ್ನಿಸುತ್ತಿದೆ. ಮೊದಲನೆಯದು ಸಿತಾರರತ್ನ ರಹಿಮತ್ ಖಾನ್ ಕುಟುಂಬ. ಮೂರು – ನಾಲ್ಕು ತಲೆಮಾರಿನಿಂದ ಧಾರವಾಡದಲ್ಲಿ ನೆಲೆಸಿ, ಸಂಗೀತವನ್ನು ತಮ್ಮ ಧಾರವಾಡ ಘರಾಣೆಯ ಮೂಲಕ ಪ್ರಸಿದ್ಧಗೊಳಿಸಿದವರು. ಆ ಕುಟುಂಬ ನಡೆಸಿಕೊಂಡು ಬಂದಿರುವ ಭಾರತೀಯ ಸಂಗೀತ ವಿದ್ಯಾಲಯ ಮತ್ತು ರಹಿಮತ್ ಖಾನ್ ಪುಣ್ಯತಿಥಿ ಸಂಗೀತ ಕಾರ್ಯಕ್ರಮ ಧಾರವಾಡದ ಸಾಂಸ್ಕೃತಿಕ ಇತಿಹಾಸವನ್ನು ಶ್ರೀಮಂತಗೊಳಿಸಿದೆ. ಸಂಗೀತದ ವಿದ್ಯಾರ್ಥಿಗಳು, ಕಾರ್ಯಕ್ರಮಕ್ಕೆ ದೇಶದ ಬೇರೆ ಬೇರೆ ಭಾಗಗಳಿಂದ ಬರುವ ದೊಡ್ಡ ದೊಡ್ಡ ಸಂಗೀತಗಾರರು, ಅಪಾರವಾದ ಪ್ರೇಕ್ಷಕರನ್ನು ಹುಟ್ಟು ಹಾಕಿದ್ದು ಆ ಕುಟುಂಬದ ದೊಡ್ಡ ಕೊಡುಗೆ. ಈ ಎಲ್ಲ ಕಾರ್ಯಕ್ರಮಗಳನ್ನು ಅವರು ಧಾರವಾಡದ ಮೇಲ್ಜಾತಿಯವರೊಂದಿಗೆ ಕೂಡಿಯೇ ಮಾಡುತ್ತಾರೆ. ಈಗಲೂ ಅವರೆಲ್ಲ ಕೂಡಿಯೇ ವಾಕಿಂಗ್ ಮಾಡುತ್ತಾರೆ, ಒಟ್ಟಾಗಿ ಹೊಟೆಲಲ್ಲಿ ಕೂತು ಚಾ ಕುಡಿಯುತ್ತಾರೆ, ಒಬ್ಬರ ಮನೆಗೆ ಇನ್ನೊಬ್ಬರು ಹೋಗಿ ಬರುತ್ತಾರೆ, ಒಟ್ಟಾಗಿ ಕಾರ್ಯಕ್ರಮ ಆಯೋಜಿಸುತ್ತಾರೆ.

ಇನ್ನೊಂದು ಧಾರವಾಡದ ಹೃದಯ ಭಾಗದಲ್ಲಿರುವ ಅಂಜುಮನ್ ಶಿಕ್ಷಣ ಸಂಸ್ಥೆ. ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರ ಶಿಕ್ಷಣದವರೆಗೆ ಸಾವಿರಾರು ವಿದ್ಯಾರ್ಥಿಗಳನ್ನು ಈ ಸಂಸ್ಥೆ ಹೊಂದಿದೆ. ದೂರದ ಹಳ್ಳಿಯಿಂದ ಬರುವ ಬಡವಿದ್ಯಾರ್ಥಿಗಳು ಮತ್ತು ದಿನಗೂಲಿಗಳ ಮಕ್ಕಳು, ಸಮಾಜದ ಅಂಚಿನಲ್ಲಿ ಬದುಕು ಮಾಡುವವರ ಮಕ್ಕಳು ಇಲ್ಲಿ  ಶಿಕ್ಷಣ ಪಡೆಯುತ್ತಿದ್ದಾರೆ. ಆರ್ಥಿಕವಾಗಿ ದುರ್ಬಲರಾದ ಯಾವುದೆ ಜಾತಿಯ, ಯಾವುದೆ ಧರ್ಮದ ವಿದ್ಯಾರ್ಥಿಗಳು  ಶಿಕ್ಷಣಾಕಾಂಕ್ಷಿಗಳಾಗಿದ್ದರೆ ಸಾಕು, ಜಮಾತೆಯೇ ಅವರ ಖರ್ಚನ್ನು ಭರಿಸಿ ಓದಿಸುತ್ತದೆ. ನೆನಪಿರಲಿ, ಈ ಸಂಸ್ಥೆಗೆ ದೊಡ್ಡ ಆರ್ಥಿಕ ಸೌಲಭ್ಯವೇನಿಲ್ಲ. ಅಂಜುಮನ್ ಕಟ್ಟಡದ ಹೊರಭಾಗದಲ್ಲಿರುವ ಅಂಗಡಿಗಳ ಬಾಡಿಗೆಯೆ ಅದರ ಮುಖ್ಯ ಆದಾಯ.

ಅಂಜುಮನ್ ಸಂಸ್ಥೆಯಲ್ಲಿ ನಾನು ನಾಟಕಗಳು, ರಂಗತರಬೇತಿ ಶಿಬಿರಗಳು, ಹೆಣ್ಣುಮಕ್ಕಳ ಕುರಿತಾದ ಅರಿವಿನ ಕಾರ್ಯಕ್ರಮಗಳು, ಇನ್ನೂ ಹತ್ತುಹಲವಾರು ಕಾರ್ಯಕ್ರಮಗಳನ್ನು ಸಂತೋಷದಿಂದ ಮಾಡಿದ್ದೇನೆ. ಪ್ರತಿ ಬಾರಿ ಹೋದಾಗಲೂ ಸಂಸ್ಥೆಯ ಮುಖ್ಯಸ್ಥರು ಬರಿಗೈಯ್ಯಲ್ಲಿ ಕಳಿಸದೆ ಗೌರವ, ಘನತೆಯಿಂದ ನನ್ನನ್ನು ಕಂಡಿದ್ದಾರೆ. ಅಲ್ಲದೆ ನಮ್ಮ ನಾಟಕದ ಕೆಲಸಗಳಿಗೆ ಕೈ ಜೋಡಿಸುವ ಮುಸ್ಲೀಂ ಸಮುದಾಯದ ಹಾರ್ಮೋನಿಯಂ ಮತ್ತು ತಬಲ ವಾದಕರನ್ನು, ಬೆಳಕಿನ ವಿನ್ಯಾಸಗಾರರನ್ನು, ಬಟ್ಟೆಹೊಲಿದು ಕೊಡುವವರನ್ನು, ಬ್ಯಾಕ್ ಸ್ಟೇಜ್ ಕೆಲಸ ಮಾಡುವವರನ್ನು, ಸ್ವಚ್ಚತೆಯ ಕೆಲಸ ಮಾಡಿಕೊಡುವವರನ್ನು ಮತ್ತು ಆ ಸಮುದಾಯದ ಅನೇಕ ಸ್ನೇಹಿತರನ್ನು   ಹೊಂದಿದ್ದೇನೆ. ಹತ್ತುಹಲವು ಕಡೆ ಹೋಗಿ ಕೆಲಸ ಮಾಡುವ ನಾನು, ಸಮಯಕ್ಕೆ ಒದಗುವವರನ್ನು ಕೇವಲ ಅನ್ಯಧರ್ಮ ಎಂಬ ಕಾರಣಕ್ಕೆ ದೂರವಿಡಲು ಸಾಧ್ಯವೇ?

ಉತ್ತರಕರ್ನಾಟಕ ಹಿಂದೂ ಮತ್ತು ಮುಸ್ಲೀಂ ಸಮುದಾಯದ ಸೌಹಾರ್ದತೆಗೆ ಮಾದರಿಯಾಗಿತ್ತು. ಆ ನೆಮ್ಮದಿ ಈಗ ಕಾಣೆಯಾಗುತ್ತಿದೆ. ಆದರೆ ಒಂದಂತೂ ನಿಜ, ಕೋಮು ದ್ವೇಷದಿಂದಾಗಿ ಧಾರವಾಡಿಗರು ತಮ್ಮ ನೆರೆಹೊರೆಯವರನ್ನು ಕಳೆದುಕೊಳ್ಳುತ್ತಿದ್ದಾರೆ. ಸೌಹಾರ್ದತೆಯಿಂದ ಅಕ್ಕಪಕ್ಕದ ಮನೆಗಳಲ್ಲಿ ಜೊತೆಯಾಗಿ ಇರಲು ಬಿಡುತ್ತಿಲ್ಲ. ದೈನಂದಿನ ವ್ಯಾಪಾರ – ವ್ಯವಹಾರ ಕೂಡ ಕೋಮು ದ್ವೇಷದ ನೀಚರಾಜಕಾರಣದ ಅಡಿಗಾಗುತ್ತಿದೆ. ಮೊನ್ನೆ ನುಗ್ಗಿಕೆರಿಯಲ್ಲಿ ನಬಿಸಾಬರ ಕಲ್ಲಂಗಡಿ ಹಣ್ಣುಗಳನ್ನು ನುಚ್ಚುನೂರು ಮಾಡಿ ಬಂದ ಯುವಕರು, ತಮ್ಮ ಮನೆಯಲ್ಲಿ ತಮ್ಮವರೊಡನೆ ನೆಮ್ಮದಿಯಿಂದ ಕುಳಿತು ಕಲ್ಲಂಗಡಿ ಹಣ್ಣನ್ನು ತಿನ್ನಲು ಸಾಧ್ಯವೆ? …ಮಾನವ ಹೃದಯ ಇದ್ದವರಿಗಂತೂ ಸಾಧ್ಯವಾಗಲಿಕ್ಕಿಲ್ಲ.

ಪ್ರತಿಕ್ರಿಯೆಗಾಗಿ : tv9kannadadigital@gmail.com

ಎಚ್. ಎಸ್. ರಾಘವೇಂದ್ರ ರಾವ್ ಅವರ ಈ ಬರಹವನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ತಾಯಿಹೃದಯಕ್ಕೂ ಕ್ರೂರಿಯಾಗಲು ತರಬೇತಿ ಕೊಡುತ್ತಿರುವ ಕಾಲದಲ್ಲಿದ್ದೇವೆ

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ