Dharwad: ಮಾನವ ಜಾತಿ ತಾನೊಂದೆ ವಲಂ; ಈಗಲೇ ಈ ಸಾಂಸ್ಕೃತಿಕ ಭಯೋತ್ಪಾದನೆಯನ್ನು ಹತ್ತಿಕ್ಕಬೇಕು

Renuka Nidagundi : ನಿಮ್ಮ ಮನೆಯ ಗಂಡುಮಕ್ಕಳನ್ನು ಎಚ್ಚರದಿಂದ ಗಮನಿಸಿ. ಅವರ ಭಾಷೆ, ಮಾತು, ವ್ಯವಹಾರ, ಸ್ನೇಹಿತರ ಮೇಲೂ ಒಂದು ಕಣ್ಣಿರಲಿ. ನಿಮ್ಮ ಮಕ್ಕಳ ಮನಸ್ಸಿಗೆ ದ್ವೇಷದ ವಿಷವುಣಿಸಿ ಮನೆಯನ್ನು, ಊರನ್ನು, ದೇಶವನ್ನು ನಾಶಮಾಡಹೊರಟಿದೆ ದ್ವೇಷದ ದಳ್ಳುರಿ.

Dharwad: ಮಾನವ ಜಾತಿ ತಾನೊಂದೆ ವಲಂ; ಈಗಲೇ ಈ ಸಾಂಸ್ಕೃತಿಕ ಭಯೋತ್ಪಾದನೆಯನ್ನು ಹತ್ತಿಕ್ಕಬೇಕು
ರೇಣುಕಾ ನಿಡಗುಂದಿ
Follow us
|

Updated on:Apr 12, 2022 | 3:35 PM

Vandalising Stalls in Dharwad : ಧಾರವಾಡದ ಹಣ್ಣಿನ ವ್ಯಾಪಾರಿ. ಹದಿನೈದು ವರ್ಷಗಳಿಂದಲೂ ಇಲ್ಲಿಯ ನುಗ್ಗಿಕೆರಿ ಹನುಮಂತನಗುಡಿಯ ಪ್ರಾಂಗಣದಲ್ಲಿ ವ್ಯಾಪಾರಕ್ಕೆ ತೊಡಗಿರುವಂಥವರು. ಶನಿವಾರ ಶ್ರೀರಾಮ ಸೇನೆಯ ತುಕಡಿಯೊಂದು ಅವರ ವ್ಯಾಪಾರಕ್ಕೆ ಅಡ್ಡಪಡಿಸಿ ಬರೋಬರಿ ಐದು ಕ್ವಿಂಟಾಲ್​ ಕಲ್ಲಂಗಡಿಯನ್ನು ಧ್ವಂಸಗೊಳಿಸಿದ ದೃಶ್ಯ ಕಣ್ಣಪಾಪೆಗಂಟಿ ಕುಳಿತಿದೆ. ನಮ್ಮೆಲ್ಲರ ಧಮನಿಗಳಲ್ಲಿ ಹರಿಯುತ್ತಿರುವ ಬಣ್ಣ, ಬಿರಿದ ಆ ಕಲ್ಲಂಗಡಿಯ ಒಡಲು. ಯಾಕೋ ಈ ರೂಪಕ ಇನ್ನೇನೋ ಸೂಚಿಸುವಂತಿದೆ. ಯಾವುದೂ ಒಮ್ಮೆಲೇ ಭುಗಿಲೇಳುವುದಿಲ್ಲ, ಅದು ಕೆಟ್ಟದ್ದೇ ಆಗಿರಲಿ ಒಳ್ಳೆಯದೇ ಆಗಿರಲಿ, ಬಿತ್ತದೆ ಬೆಳೆಯುವುದುಂಟೆ?; ಪುಂಡರೇ, ನೀವು ಯಾವ ಧರ್ಮದಲ್ಲಿಯೇ ಹುಟ್ಟಿರಲಿ, ಯಾವ ಜಾತಿಯವರೇ ಆಗಿರಲಿ, ಯಾವ ಭಾಗದವರೇ ಆಗಿರಲಿ, ಯಾವ ಪಕ್ಷದವರೇ ಆಗಿರಲಿ, ಯಾರೇ ನಿಮಗೆ ರೊಕ್ಕ ಮುಕ್ಕಿಸುತ್ತ, ವಿಷ ಕಕ್ಕಿಸುತ್ತಿರಲಿ, ಯಾರೇ ನಿಮ್ಮೊಳಗಿನ ಗೂಳಿತನಕ್ಕೆ ಕೆಂಪು ತೋರಿಸಿ ಇಂಥ ಸಾಲು ಪ್ರಕರಣಗಳೊಳಗೆ ನುಗ್ಗಿಸುತ್ತಿರಲಿ. ಇನ್ನಾದರೂ ಯೋಚಿಸಿ. ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ

ಧಾರವಾಡ ಮೂಲದ ಲೇಖಕಿ, ಅನುವಾದಕಿ ರೇಣುಕಾ ನಿಡಗುಂದಿ ದೆಹಲಿಯಲ್ಲಿ ವಾಸವಾಗಿದ್ದಾರೆ. ಅವರ ಬರಹ ನಿಮ್ಮ ಓದಿಗೆ. 

“ ಕೈ ಎತ್ತಿ ನಿಂತಬಿಡ್ತ್ಯೀನಿ., ಕೊಂದ ಬಿಡ್ರಿ ನನ್ನ, ಕೊಂದಬಿಡ್ರಿ ನನ್ನ”

ನಬೀಸಾಬರ ಈ ಮಾತು ಕೇಳಿದವರ ಕಣ್ಣಲ್ಲಿ ನೀರು ಬರುತ್ತದೆ. ಧರ್ಮದ ಮದವೇರಿದ ಒಂದು ಪುಂಡರ ಗುಂಪಿನ ಎದುರು ಏಕಾಂಗಿಯಾಗಿ ನಿಂತ ನಬೀಸಾಬರ ಸ್ಥಿತಿ ಏನಾಗಿರಬಹುದೆಂದು ನಾವು ಊಹಿಸಬಹುದು. ಉತ್ತರಪ್ರದೇಶದ ದಾದ್ರಿಯ ಅಖಲಕ್​ನನ್ನು ಕೊಂದ ಕೋಮುವಾದಿ ರಕ್ತಬೀಜಾಸುರರ ಸಂತತಿ ನನ್ನೂರನ್ನೂ ತಲುಪಿದ್ದು ಎದೆ ನಡುಗಿಸಿದೆ. ಜಿಲ್ಲಾಧಿಕಾರಿಗಳೂ, ನಗರದ ಪೊಲೀಸ್ ಕಮೀಶನರೂ ಸಿಕ್ಕ ನಾಲ್ವರು ಪುಂಡರಿಗೆ ತಕ್ಕ ಶಿಕ್ಷೆ ವಿಧಿಸಬೇಕು. ಆದರೆ ತೆರೆಯಮರೆಯಲ್ಲಿ ಸರಕಾರವೇ ಕೋಮುವಾದವನ್ನು ಪೋಷಿಸುತ್ತಿದೆ ಎಂದಾಗ ಯಾರನ್ನು ದೂಷಿಸೋಣ?

ತಲೆಮಾರುಗಳಿಂದಲೂ ಹಿಂದೂ ಮುಸ್ಲಿಂ ಸಹಬಾಳ್ವೆ ಸೌಹಾರ್ದತೆಗೆ ಹೆಸರಾದ ನೆಲದಲ್ಲಿ ದುಷ್ಟಶಕ್ತಿಗಳು ನೆಲೆಯೂರುತ್ತಿವೆ. ಇವರನ್ನು ಬೆಳೆಸುತ್ತಿರುವ ‘ಐಡಿಯಾಲಾಜಿ’ ಯಾವುದು ಅದು ಎಲ್ಲಿಂದ ಬರುತ್ತಿದೆ ಎಂಬುದನ್ನು ನಾವೆಲ್ಲ ಬಲ್ಲೆವು.  ಹಿಂದೂ ಅಂದರೆ “ಹಿಂದುರಾಷ್ಟ್ರ” ವೆಂಬ ದ್ವೇಷದ ರಾಷ್ಟ್ರವಾದವನ್ನು ಮುನ್ನೆಲೆಗೆ ತರುತ್ತಿದೆ ಈ ಸರಕಾರ. ಬಹು ಸಂಸ್ಕೃತಿಯ ಈ ದೇಶವನ್ನು ಈ ರೀತಿಯಾಗಿ  ಹಾಳುಮಾಡುವುದು ಸಾಧ್ಯವಿಲ್ಲ. ಹಾಗೆ ಆಗಲೂ  ಬಿಡಬಾರದು.

ನುಗ್ಗಿಕೆರಿ ಹನುಮಪ್ಪ, ಚಾಲುಕ್ಯರ ಕಾಲದಲ್ಲಿ ಸ್ಥಾಪಿಸಲಾದದ್ದೆಂದು ಹೇಳುವ ಸೋಮೇಶ್ವರದ ಈಶ್ವರ ಗುಡಿ, ಲೈನ್ ಬಜಾರಿನ ಹನುಮಪ್ಪ, ಜಕಣಿಭಾವಿಯ ಹನುಮಪ್ಪನ ಗುಡಿ, ಮರಾಠಾ ಕಾಲೊನಿಗೆ ಹೊಂದಿಕೊಂಡ  ದುರ್ಗಾದೇವಿಗುಡಿ, ರವಿವಾರಪೇಟೆಯ ಲಕ್ಶ್ಮೀ ನಾರಾಯಣನ ಗುಡಿ, ಗಾಂಧಿಚೌಕಿನ ದತ್ತಾತ್ರೇಯ ಗುಡಿ,  ಮಂಗಳವಾರಪೇಟೆಯ ಈರಣ್ಣನ ಗುಡಿ, ಎಲ್ಲಮ್ಮನಗುಡಿ, ಓಣಿಕೇರಿಗೊಂದರಂತೆ ನೆಲೆನಿಂತ ದ್ಯಾಮವ್ವ ದುರಗವ್ವರು, ಮೊಹರಮ್ಮಿನ ಆಲಿ ದೇವರುಗಳು, ದರಗಾಗಳು ಹೀಗೆ ಜನರ ಕಷ್ಟಸುಖಗಳನ್ನು ಕೇಳುತ್ತವೆಂದು ನಾವೆಲ್ಲ ನಂಬುವ ಎಲ್ಲಾ ದೈವಗಳೂ ಧಾರವಾಡಿಗರ ಜನಜೀವನದಲ್ಲಿ ಹಾಸುಹೊಕ್ಕಾಗಿ ಹೋಗಿವೆ. ಅವು ನಮ್ಮ ಸಾಂಸ್ಕೃತಿಕ ಬದುಕಿನ ಭಾಗ. ಪರಸ್ಪರ ಸೌಹಾರ್ದತೆಯಿಂದ ಬಾಳುತ್ತಿದ್ದ ಜನರಿಗೆ ಈ ಬೇಧಭಾವ ಕೋಮುದ್ವೇಷವೆಂಬುದು ಗೊತ್ತೇ ಇದ್ದಿಲ್ಲ.

ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ಎಷ್ಟು ಗಾಳಿಸುದ್ದಿಗಳು? ಮೊದಲು ಬೆಚ್ಚುತ್ತಿದ್ದೆ, ಈಗ ಹುಸಿನಗೆ

ನಮ್ಮ ಹಬ್ಬಹುಣ್ಣಿವೆಗಳು ಅವರಿಗೂ, ಅವರ ಹಬ್ಬಗಳು ನಮಗೂ ನೆನಪಿರುತ್ತಿದ್ದವು. ಅವರ ಆಡುಗಳು ನಮ್ಮ ಬಾಗಿಲಿನ ಮಾವಿನತೋರಣವನ್ನು ತಿಂದುಹೋದರೂ ನಾವು ಜಗಳ ಮಾಡುತ್ತಿದ್ದಿಲ್ಲ. ನಮ್ಮ ತಾಯಿ ಅಂಗಳದಲ್ಲಿ ಡಿಕ್ಕಿಹೊಡೆಯುತ್ತಿದ್ದ ಗತ್ತಿನ ಹೋತವನ್ನು ನೋಡಿ “…ಏಯ್ ಇಮಾಂಬೂ ಬಕರೀದಗೆ ಬಿಟ್ಟಿರೇನು? ಅಂತ  ಕೇಳುವಷ್ಟು, ಅವರ ಹಬ್ಬದ ಅಡುಗೆ ಗಮಗಮ ಪರಿಮಳ ಬರುವಾಗ ಇವತ್ತೇನೋ ವಿಶೇಷ ಐತಿ ಎನ್ನುವಷ್ಟು ನಮಗೆ ಅವರು ಹತ್ತಿರವಿದ್ದರು. ವೈದ್ಯರು ಪಥ್ಯಕ್ಕೆ ಆಡಿನ ಹಾಲು ಹೇಳಿದರೆ ಅದು ನಮಗೆ ಧಾರಾಳವಾಗಿ ಸಿಗ್ತಿತ್ತು.  ಆಡು ಸಾಕುವ ಬೂಬುಗಳು ಮನೆಗೆ ತಂದು ಕೊಡ್ತಿದ್ದರು. ನಮ್ಮ ಬಾಲ್ಯದಲ್ಲಿ “ಆಡಿನ ಹಾಲನು ಕುಡಿಯೋಣ ಆನೆಯ ಬಲವನು ಪಡೆಯೋಣ “ಅಂತ ಪುಸ್ತಕಗಳಲ್ಲಿ ಓದಿದ್ದೆವು. ನನಗೆ ಆಡಿನ ಹಾಲನ್ನೇ ಕುಡಿಸಿದ್ದೆ ಎಂದು ನಮ್ಮ ತಾಯಿ ಆಗಾಗ ಹೇಳ್ತುತ್ತಿದ್ದಳು. ಈಗಿನ ಪರಿಸ್ಥಿತಿಯನ್ನು ನೋಡಿದರೆ ಆಡಿನ ಹಾಲನ್ನು ತರುವುದೂ ಅಪರಾಧವಾಗುವುದೇನೋ. ಜಾತಿ ರೀತಿನೀತಿ ಆಚರಣೆಗಳಿಂದ ಅವರು ಭಿನ್ನರಾದರೂ ಮನುಷ್ಯರಾಗಿ ನಾವೆಲ್ಲ ಒಂದೇ ಆಗಿದ್ದೆವು.

ಗುಡಿಗುಂಡಾರಗಳ ಸುತ್ತ ಕುಳಿತು ಹಣ್ಣು ಹೂವು ಕಾಯಿ ಪೂಜಾ ಸಾಮಗ್ರಿಗಳನ್ನು ಮಾರುವವರ ಬಗ್ಗೆ ಯಾವ ದೇವಸ್ಥಾನದವರಿಗೂ ಆಕ್ಷೇಪವಿದ್ದಿದ್ದಿಲ್ಲ. ಇಂದು ದೇವಸ್ಥಾನದ ಆವರಣದಲ್ಲಿರುವ ನಬೀಸಾಬರ ಅಂಗಡಿಯನ್ನು  ಖಾಲಿ ಮಾಡಲು ವಾರ್ನಿಂಗ್ ಕೊಡುವ ಅಧಿಕಾರ ಇವರಿಗೆ ಕೊಟ್ಟವರಾರು? ದುಡಿದು ಉಣ್ಣುವ ಯಾರು ಎಲ್ಲಿ ಬೇಕಾದರೂ ದುಡಿಯುವ, ವ್ಯಾಪಾರ ಮಾಡುವ ವ್ಯಕ್ತಿಸ್ವಾತಂತ್ರ್ಯವನ್ನು ನಮ್ಮ ಸಂವಿಧಾನ ನಮಗೆಲ್ಲರಿಗೂ ಕೊಟ್ಟಿದೆ. ಇವತ್ತಿನ ಯುವಕರಿಗೆ ಕೈಗೆ ಮಚ್ಚುಕೊಟ್ಟು ಕಡಿಬಡಿ ಕೊಲ್ಲು ಕಲಿಸುತ್ತಿರುವ ಸಂಸ್ಕೃತಿ ನಮ್ಮದಲ್ಲವೇ ಅಲ್ಲ. ಅದಕ್ಕೆ ಬಲಿಯಾಗಿತ್ತಿರುವವರ ಭವಿಷ್ಯದ ಬಗ್ಗೆ ಸಮಾಜದ ಬಗ್ಗೆ ಎಚ್ಚರವಿರಬೇಕಿತ್ತು. ಆ ಎಚ್ಚರವೂ ಮಾನವೀಯತೆಯೂ ತಮ್ಮ ಸರ್ವನಾಶದ ಜೊತೆಗೆ ಈ ನೆಲವನ್ನೂ ನಾಶಮಾಡಹೊರಟಿರುವವರಿಗೆ ಬುದ್ಧಿ ಹೇಳುವವರಾರು?

ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ಗುತ್ತುಮನೆಯ ಶೆಟ್ಟರಿಗೆ ಸತ್ತಾರನ ಬೈಹುಲ್ಲು ಬೇಕು

ಬಿಜೆಪಿಗರ ಕೆಂಗಣ್ಣಿನ ಉಗ್ರ ಹನುಮನಲ್ಲ ನಮ್ಮೂರಿನ ಹನುಮರು. ಪ್ರತಿ ಶನಿವಾರ ಸಾವಿರಾರು ಜನ ದರ್ಶನಕ್ಕೆಂದು ನುಗ್ಗಿಕೆರಿಗೆ ಹೋಗುತ್ತಾರೆ. ಮನೆಗೆ ದೂರದ ಊರಿನ ನೆಂಟರು ಬಂದರೆ ನಾವು ಪಿಕನಿಕ್ ಅಥವಾ ಗಾಳಿಸೇವನೆಯ ನೆಪದಲ್ಲಿ ಹೋಗುವುದು ನುಗ್ಗಿಕೆರಿಗೋ ಇಲ್ಲಾ ಸೋಮೇಶ್ವರಕ್ಕೊ ಅಥವಾ ದುರ್ಗಾದೇವಿವರೆಗೋ ಹೋಗುವವರೂ ಇದ್ದಾರೆ.  ಊರುಕೇರಿ ಬದಲಾಗುತ್ತಾ ಜನಸಂಖ್ಯೆಯೂ ಬೆಳೆಯುತ್ತಾ  ಬದಲಾಗುತ್ತಿರುವ ಧಾರವಾಡದಲ್ಲಿ ಪ್ರೇಮಿಗಳಿಗೆ ಭೇಟಿಯ ಏಕಾಂತ ಸ್ಥಳಗಳೆಂದರೆ ನುಗ್ಗಿಕೇರಿ, ಸೋಮೇಶ್ವರ, ಹತ್ತಿಕೊಳ್ಳ ಮುಂತಾದವು. ಏಕಾಂತದ ಸ್ಥಳಗಳು ಬೇಕೆಂದರೆ ನಮಗೆ ನೆನಪಾಗುವುದು ಇವೇ ಸ್ಥಳಗಳು.

ಸುತ್ತಲೂ ಹಚ್ಚಹಸುರಿನ ಗಿಡಮರ, ಸದಾ ತುಂಬಿಕೊಂಡಿರುವ  ದೊಡ್ದ ಕೆರೆಯಲ್ಲಿ ಬೆಳ್ಳಗಿನ ಬಾತುಕೋಳಿಗಳು, ಕಮಲದ ಹೂಗಳು ಕೆರೆಯನ್ನು ಅಂದವಾಗಿಸಿವೆ. ನುಗ್ಗಿಕೆರಿಯಲ್ಲಿ ಪೊಲೀಸ್ ಟ್ರೇನಿಂಗ್ ಸೆಂಟರೂ ಇದೆ.  ನಾವು ಚಿಕ್ಕವರಿರುವಾಗ ಶಾಲೆಯ ಪಿಕ್ನಿಕ್ ಹೋಗಿದ್ದೆವು. ನೆರೆಹೊರೆಯವರು ಸೇರಿ ಬುತ್ತಿ ಕಟ್ಟಿಕೊಂಡೂ ಊಟಕ್ಕೆ ಹೋಗಿದ್ದು ನೆನಪು. ಹೂವು ಹಣ್ಣು ಕಾಯಿ ಅಲ್ಲದೇ ದಾವಣಗೆರೆ ಬೆಣ್ಣೆ, ದೋಸೆ ಇಡ್ಲಿ ಮಾರುವವರೂ ಇದ್ದಾರೆ.  ಬೆಳಕಿನ ಓಟ, ನಡಿಗೆಗೆ ಬರುವ ಜನರೂ ನುಗ್ಗಿಕೇರಿಗೆ ಬೆಳಗಿನ ಉಪಹಾರಕ್ಕೆ ಬೆಣ್ಣೆ ದೋಸೆ ತಿನ್ನಲು ಬರುತ್ತಾರೆ.

ಸಮಯ ಕೈಮೀರುವ ಮೊದಲೇ ಇಂಥ ಪುಂಡರ ಪುಂಡಾಟಕ್ಕೆ ಕಡಿವಾಣ ಹಾಕದಿದ್ದರೆ “ಲವ್ ಜಿಹಾದ್”  ಇಲ್ಲಾ ಮರ್ಯಾದಾ ಹತ್ಯೆಯಂಥ ಅಮಾನವೀಯ ಸಮಾಜ ಕಂಟಕಗಳನ್ನು ನಮ್ಮ ಮನೆಯವರೆಗೂ ಕರೆತರುತ್ತಾರೆ. ಈಗಲೇ ಈ ಸಾಂಸ್ಕೃತಿಕ ಭಯೋತ್ಪಾದನೆಯನ್ನು ಹತ್ತಿಕ್ಕಬೇಕು. ಈಗಾಗಲೇ ನೆಮ್ಮದಿಯನ್ನು ಕೆಡಿಸುತ್ತಿರುವ ನಮ್ಮ ನಮ್ಮ ಊರುಗಳನ್ನು ನಮ್ಮ ನಮ್ಮ ಮನೆಯಗಳನ್ನು , ಕುಟುಂಬಗಳನ್ನು ಕಾಪಾಡಿಕೊಳ್ಳಬೇಕಿದೆ.

ಎಲ್ಲರಿಗೂ ನಾನು ಹೇಳುವುದಿಷ್ಟೇ ನಿಮ್ಮ ನಿಮ್ಮ ಮನೆಯ ಗಂಡುಮಕ್ಕಳನ್ನು ಎಚ್ಚರದಿಂದ ಗಮನಿಸಿ. ಅವರ ಭಾಷೆ, ಮಾತು, ವ್ಯವಹಾರ, ಅವರ ಸ್ನೇಹಿತರು, ಎಲ್ಲದರ ಮೇಲೂ ಒಂದು ಕಣ್ಣಿರಲಿ. ನಿಮ್ಮ ಮಕ್ಕಳ ಮನಸ್ಸಿಗೆ ದ್ವೇಷದ ವಿಷವುಣಿಸಿ ಮನೆಯನ್ನು , ಊರನ್ನು , ದೇಶವನ್ನು ನಾಶಮಾಡಹೊರಟಿದೆ ದ್ವೇಷದ ದಳ್ಳುರಿ.     ದಯವಿಟ್ಟು ಎಚ್ಚೆತ್ತುಕೊಳ್ಳಿ ನನ್ನ ಜನರೇ…

ಪ್ರತಿಕ್ರಿಯೆಗಾಗಿ : tv9kannadadigital@gmail.com

ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ಎಷ್ಟು ಗಾಳಿಸುದ್ದಿಗಳು? ಮೊದಲು ಬೆಚ್ಚುತ್ತಿದ್ದೆ, ಈಗ ಹುಸಿನಗೆ    

ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ಹೇ ರಾಮ್! ಪ್ರೀತಿ ಬೆರೆತ ಅನ್ನಧರ್ಮದ ಅಮಲೇರಿಸು

Published On - 3:07 pm, Tue, 12 April 22