Dharwad: ಮಾನವ ಜಾತಿ ತಾನೊಂದೆ ವಲಂ; ಹೊತ್ತಿನ ತುತ್ತಿಗಾಗಿ ಚಡಪಡಿಸುವ ಹಿಂದೂಗಳನ್ನು ತೋರಿಸಿಕೊಡುವೆ
Hakeem Padadka : ಧರ್ಮದ ಅಮಲೇರಿಸಿಕೊಂಡು ಸಂಕೋಲೆಯಿಂದ ತಪ್ಪಿಸಿಕೊಂಡು ಬಂದ ಹುಚ್ಚರು ಅವರು, ಕೈಲೊಂದು ಚಾಕು ಕೊಟ್ಟು ನೋಡಿ, ಮನುಷ್ಯರ ರಕ್ತವೂ ಚೆಲ್ಲೀತು.
Humanity : ಧಾರವಾಡದ ಹಣ್ಣಿನ ವ್ಯಾಪಾರಿ. ಹದಿನೈದು ವರ್ಷಗಳಿಂದಲೂ ಇಲ್ಲಿಯ ನುಗ್ಗೀಕೆರೆ ಹನುಮಂತನಗುಡಿಯ ಪ್ರಾಂಗಣದಲ್ಲಿ ವ್ಯಾಪಾರಕ್ಕೆ ತೊಡಗಿರುವಂಥವರು. ಶನಿವಾರ ಶ್ರೀರಾಮ ಸೇನೆಯ ತುಕಡಿಯೊಂದು ಅವರ ವ್ಯಾಪಾರಕ್ಕೆ ಅಡ್ಡಪಡಿಸಿ ಬರೋಬರಿ ಐದು ಕ್ವಿಂಟಾಲ್ ಕಲ್ಲಂಗಡಿಯನ್ನು ಧ್ವಂಸಗೊಳಿಸಿದ ದೃಶ್ಯ ಕಣ್ಣಪಾಪೆಗಂಟಿ ಕುಳಿತಿದೆ. ನಮ್ಮೆಲ್ಲರ ಧಮನಿಗಳಲ್ಲಿ ಹರಿಯುತ್ತಿರುವ ಬಣ್ಣ, ಬಿರಿದ ಆ ಕಲ್ಲಂಗಡಿಯ ಒಡಲು. ಯಾಕೋ ಈ ರೂಪಕ ಇನ್ನೇನೋ ಸೂಚಿಸುವಂತಿದೆ. ಯಾವುದೂ ಒಮ್ಮೆಲೇ ಭುಗಿಲೇಳುವುದಿಲ್ಲ, ಅದು ಕೆಟ್ಟದ್ದೇ ಆಗಿರಲಿ ಒಳ್ಳೆಯದೇ ಆಗಿರಲಿ, ಬಿತ್ತದೆ ಬೆಳೆಯುವುದುಂಟೆ?; ಪುಂಡರೇ, ನೀವು ಯಾವ ಧರ್ಮದಲ್ಲಿಯೇ ಹುಟ್ಟಿರಲಿ, ಯಾವ ಜಾತಿಯವರೇ ಆಗಿರಲಿ, ಯಾವ ಭಾಗದವರೇ ಆಗಿರಲಿ, ಯಾವ ಪಕ್ಷದವರೇ ಆಗಿರಲಿ, ಯಾರೇ ನಿಮಗೆ ರೊಕ್ಕ ಮುಕ್ಕಿಸುತ್ತ, ವಿಷ ಕಕ್ಕಿಸುತ್ತಿರಲಿ, ಯಾರೇ ನಿಮ್ಮೊಳಗಿನ ಗೂಳಿತನಕ್ಕೆ ಕೆಂಪು ತೋರಿಸಿ ಇಂಥ ಸಾಲು ಪ್ರಕರಣಗಳೊಳಗೆ ನುಗ್ಗಿಸುತ್ತಿರಲಿ. ಇನ್ನಾದರೂ ಯೋಚಿಸಿ. ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ.
ದಕ್ಷಿಣ ಕನ್ನಡದ ಪುತ್ತೂರಿನ ಹಕೀಂ ಪದಡ್ಕ ಬರೆದ ಕವಿತೆ
ಧರ್ಮವಲ್ಲ; ದೇಶ ಅಪಾಯದಲ್ಲಿದೆ
ಅವರು ಒಡೆದು ಹಾಕಿದ್ದು ಬರೇ ಕಲ್ಲಂಗಡಿಯನ್ನಾಗಿದ್ದಿದ್ದರೆ ನಮಗೆ ಕ್ಷಮಿಸಬಹುದಿತ್ತು, ಆದರೆ ಅಲ್ಲಿ ಚದುರಿಬಿದ್ದಿದ್ದು ನಮ್ಮೆದೆಯ ಚೂರುಗಳು
ತನ್ನ ಹೆಸರ ಎತ್ತಿ ಹಿಡಿದು ಅರಾಜಕತೆ ಸೃಷ್ಟಿಸುವುದ ರಾಮನಿಗಾಗಿಯಾದರೂ ತಡೆಯಬಾರದಿತ್ತೇ.. ಬಹುಶಃ ರಾಮನೂ ಮುನಿಸಿಕೊಂಡಿರಬೇಕು
ಧರ್ಮದ ಅಮಲೇರಿಸಿಕೊಂಡು ಸಂಕೋಲೆಯಿಂದ ತಪ್ಪಿಸಿಕೊಂಡು ಬಂದ ಹುಚ್ಚರು ಅವರು, ಕೈಲೊಂದು ಚಾಕು ಕೊಟ್ಟು ನೋಡಿ, ಮನುಷ್ಯರ ರಕ್ತವೂ ಚೆಲ್ಲೀತು
ಧರ್ಮಕ್ಕೆ ಸಂಕಟವಿದೆಯೆಂದು ಕಲ್ಲಂಗಡಿ ನೆಲಕ್ಕೆಸೆದ ಮುಟ್ಠಾಳರೇ, ಹೊತ್ತಿನ ತುತ್ತಿಗಾಗಿ ಚಡಪಡಿಸುವ ಹಿಂದೂಗಳನ್ನು ತೋರಿಸಿಕೊಡುವೆ ಅನ್ನ ನೀಡಿ ಧರ್ಮವನ್ನೂ ಧರ್ಮದವರನ್ನೂ ಸಂರಕ್ಷಿಸಿ ನೋಡಿ.
ಹೆಪ್ಪುಗಟ್ಟಿದ ಮೆದುಳು ಮತ್ತು ಉಸಿರುಗಟ್ಟಿದ ಪ್ರೀತಿ ದ್ವೇಷವನ್ನು ಮತ್ತೆ ಮತ್ತೆ ಚಿಗುರಿಸುತ್ತಿದೆ, ಸತ್ತು ಹೋದ ಮಾನವೀಯತೆಯ ಗೋರಿಯ ಮುಂದೆ ಬಿಕ್ಕಳಿಸುವ ಮನುಷ್ಯರನ್ನು ನೋಡಿ ಅವರು ಗಹಗಹಿಸಿ ನಗುತಿದ್ದಾರೆ
ಧರ್ಮಕ್ಕಿಂತ ಮೊದಲು ಇಲ್ಲಿ ದೇಶ ಅಪಾಯದಲ್ಲಿದೆ, ರಾಮ, ಅಲ್ಲಾಹ್, ಏಸು ಯಾರಾದರೂ ಒಮ್ಮೆ ಬಂದು ಕಾಪಾಡಿರಿ..
*
ಗಮನಿಸಿ : ಪ್ರತಿಕ್ರಿಯಾತ್ಮಕ ಕವನಗಳನ್ನು ಈ ಸರಣಿಗೆ ನೀವೂ ಕಳಿಸಬಹುದು. ಜೊತೆಗೆ ಎರಡು ಸಾಲಿನ ನಿಮ್ಮ ಪರಿಚಯ, ಫೋಟೋ ಇರಲಿ : tv9kannadadigital@gmail.com
ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ಗುತ್ತುಮನೆಯ ಶೆಟ್ಟರಿಗೆ ಸತ್ತಾರನ ಬೈಹುಲ್ಲು ಬೇಕು
ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ಇರುಳಿನಲಿ ಹೋದಾನು ಪರಮಾತ್ಮ ಸಾಬಿಯ ಮನೆಗೆ
ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ಸುಗಂಧ ಸೂಸುವ ನದಿಯಂತೆ, ಮೃತನದಿಯನ್ನು ಸೇರಲಿಹವು