ಅಫಘಾನಿಸ್ತಾನ ಕ್ರಿಕೆಟ್ ವ್ಯವಸ್ಥೆಗೆ ತಾಲಿಬಾನ್ ಯಾವುದೇ ತೊಂದರೆ ಮಾಡುವುದಿಲ್ಲ: ಕ್ರಿಕೆಟ್ ಮಂಡಳಿ ಮುಖ್ಯಸ್ಥ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 21, 2021 | 2:05 AM

90 ರ ದಶಕದಲ್ಲಿ ಅಫಘಾನಿಸ್ತಾನ ತಾಲಿಬಾನ್ ವಶದಲ್ಲಿದ್ದಾಗ ಕ್ರೀಡೆಯನ್ನು ಬಹಳ ಬಿಗಿಯಿಂದ ನಿಯಂತ್ರಿಸಲಾಗಿತ್ತು. ಮಹಿಳೆಯರನ್ನು ಯಾವುದೇ ಕ್ರೀಡೆಯಲ್ಲಿ ಭಾಗವಹಿಸದಂತೆ ನಿಷೇಧಿಸಲಾಗಿತ್ತು. ‘ಆದರೆ, ಕ್ರಿಕೆಟ್ ಯಾವುದೇ ಬೆದರಿಕೆ, ಅಪಾಯ ಇಲ್ಲ,’ ಎಂದು ಶಿನ್ವರಿ ಹೇಳಿದ್ದಾರೆ.

ಅಫಘಾನಿಸ್ತಾನ ಕ್ರಿಕೆಟ್ ವ್ಯವಸ್ಥೆಗೆ ತಾಲಿಬಾನ್ ಯಾವುದೇ ತೊಂದರೆ ಮಾಡುವುದಿಲ್ಲ: ಕ್ರಿಕೆಟ್ ಮಂಡಳಿ ಮುಖ್ಯಸ್ಥ
ಸಾಂದರ್ಭಿಕ ಚಿತ್ರ
Follow us on

ಅಫಘಾನಿಸ್ತಾನದ ರಾಜಕೀಯ ವಿಪ್ಲವದ ನಡುವೆ ಅಲ್ಲಿನ ಕ್ರಿಕೆಟ್ ಪ್ರೇಮಿಗಳಿಗೆ ಒಂದು ಸಂತೋಷದ ಸುದ್ದಿ ಲಭ್ಯವಾಗಿದೆ. ಆಫ್ಘನ್ ರಾಷ್ಟ್ರೀಯ ಕ್ರಿಕೆಟ್ ತಂಡ ರಾಷ್ಟ್ರದ ರಾಜಧಾನಿಯಲ್ಲಿ ತರಬೇತಿಯನ್ನು ಈ ವಾರದಿಂದ ಆರಂಭಿಸಿದೆಯೆಂದು ಕ್ರಿಕೆಟ್ ವ್ಯವಸ್ಥೆಯ ಮುಖ್ಯಸ್ಥ ಹಮೀದ್ ಶಿನ್ವರಿ ಶುಕ್ರವಾರದಂದು ತಿಳಿಸಿದರು. ಅಫಘಾನಿಸ್ತಾನವು ಪಾಕಿಸ್ತಾನದ ವಿರುದ್ಧ ಶ್ರೀಲಂಕಾದಲ್ಲಿ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳ ಸರಣಿಯನ್ನು ಆಡಲಿದೆ. ಸರಣಿ ಮುಂದಿನ ಎರಡು ವಾರಗಳ ಅವಧಿಯಲ್ಲಿ ಆರಂಭವಾಗಲಿದೆ ಎಂದು ಎಎಫ್ಪಿ ಗೆ ನೀಡಿದ ಸಂದರ್ಶನದಲ್ಲಿ ಶಿನ್ವರಿ ಹೇಳಿದ್ದಾರೆ.

‘ವಿಮಾನ ಸಂಚಾರ ಸೇವೆ ಆರಂಭವಾದ ಕೂಡಲೇ ತಂಡವನ್ನು ಶ್ರೀಲಂಕಾಗೆ ಕಳಿಸಲಿದ್ದೇವೆ, ಅಲ್ಲಿನ ಅಧಿಕಾರಿಗಳೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ,’ ಎಂದು ಶಿನ್ವರಿ ಹೇಳಿದ್ದಾರೆ.

90 ರ ದಶಕದಲ್ಲಿ ಅಫಘಾನಿಸ್ತಾನ ತಾಲಿಬಾನ್ ವಶದಲ್ಲಿದ್ದಾಗ ಕ್ರೀಡೆಯನ್ನು ಬಹಳ ಬಿಗಿಯಿಂದ ನಿಯಂತ್ರಿಸಲಾಗಿತ್ತು. ಮಹಿಳೆಯರನ್ನು ಯಾವುದೇ ಕ್ರೀಡೆಯಲ್ಲಿ ಭಾಗವಹಿಸದಂತೆ ನಿಷೇಧಿಸಲಾಗಿತ್ತು.
‘ಆದರೆ, ಕ್ರಿಕೆಟ್ ಯಾವುದೇ ಬೆದರಿಕೆ, ಅಪಾಯ ಇಲ್ಲ,’ ಎಂದು ಶಿನ್ವರಿ ಹೇಳಿದ್ದಾರೆ.

ಹಿಂದಿನ ತಾಲಿಬಾನ ಆಡಳಿತದಲ್ಲಿ ಕ್ರಿಕೆಟ್ಗೆ ಯಾವುದೇ ತೊಂದರೆ ಇರಲಿಲ್ಲ, ಹಾಗೆಯೇ ಈ ಸಲವೂ ಇರುವುದಿಲ್ಲ, ಕ್ರಿಕೆಟ್ಗೆ ಸಂಬಂಧಿಸಿದಂತೆ ತಾಲಿಬಾನ್ ವರಾತ ತೆಗೆದಿದ್ದು ನನ್ನ ಗಮನಕ್ಕೆ ಬಂದಿಲ್ಲ,’ ಎಂದು ಅವರು ಹೇಳಿದ್ದಾರೆ.

ಮಹಿಳಾ ಕ್ರಿಕೆಟ್ ಬಗ್ಗೆ ತಾನು ಯಾವುದೇ ಕಾಮೆಂಟ್ ಮಾಡುವುದು ಸಾಧ್ಯವಿಲ್ಲ ಎಂದು ಹೇಳಿದ ಶಿನ್ವರಿ ಮಂದಿನ ದಿನಗಳಲ್ಲಿ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಿದರು.

ಅಫಘಾನಿಸ್ತಾನದ ಸ್ಟಾರ್ ಆಟಗಾರ ಮತ್ತು ಟಿ20 ನಾಯಕ ರಶೀದ್ ಖಾನ್ ಮತ್ತು ಆಲ್-ರೌಂಡರ್ ಮೊಹಮ್ಮದ್ ನಬಿ ಅವರು ಸದ್ಯ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಟೂರ್ನಿಯಲ್ಲಿ ಆಡುತ್ತಿದ್ದು ತಾಲಿಬಾನ್, ದೇಶವನ್ನು ವಶಪಡಿಸಿಕೊಳ್ಳುವ ಮೊದಲು ಶಾಂತಿ ಕಾಪಾಡುವಂತೆ ಮನವಿ ಮಾಡುತ್ತಿದ್ದರು. ಆದರೆ ಅಫಘಾನಿಸ್ತಾನದ ಬಹಳಷ್ಟು ಆಟಗಾರರು ದೇಶದಲ್ಲೇ ಇದ್ದಾರೆ.

ಈ ವಾರದ ಆರಂಭದಲ್ಲಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಅಫಘಾನಿಸ್ತಾನ ಮತ್ತು ಪಾಕಿಸ್ತಾನ ನಡುವೆ ಮೂರು ಒಂದು ದಿನ ಪಂದ್ಯಗಳ ಸರಣಿ ನಡೆಸುವ ಬಗ್ಗೆ ತಾನಿನ್ನೂ ಆಶಾಭಾವನೆ ತಳೆದಿರುವುದಾಗಿ ಹೇಳಿತ್ತು. ಹಂಬನ್ಟೋಟಾ ಸ್ಟೇಡಿಯಂನಲ್ಲಿ ಪ್ರೇಕ್ಷಕರ ಗೈರು ಹಾಜರಿಯಲ್ಲಿ ಪಂದ್ಯಗಳನ್ನು ಆಯೋಜಿಸುವ ಇರಾದೆಯನ್ನು ಮಂಡಳಿ ಹೊಂದಿದೆ.

ಪಾಕಿಸ್ತಾನ ಮತ್ತು ಅಫಘಾನಿಸ್ತಾನ ನಡುವೆ ಒಂದು ದಿನದ ಪಂದ್ಯಗಳ ಸರಣಿ ಸೆಪ್ಟೆಂಬರ್ 3 ರಿಂದ ಆರಂಭವಾಗಲಿದೆ.

ಸದರಿ ಸರಣಿಯು ಯುಎಈ ನಲ್ಲಿ ನಡೆಯಬೇಕಿತ್ತು. ಆದರೆ ಆಫಘನಿಸ್ತಾನ ತನ್ನ ಸ್ವದೇಶದ ಸರಣಿಗಳನ್ನು ಆಡುವ ಇಲ್ಲಿನ ಸ್ಟೇಡಿಯಂಗಳು ಇಂಡಿಯನ್ ಪ್ರಿಮೀಯರ್ ಲೀಗ್ ಆಯೋಜಿಸಲು ಸಿದ್ಧಗೊಳ್ಳುತ್ತಿರುವುದರಿಂದ ಸರಣಿಯನ್ನು ಲಂಕಾಗೆ ಶಿಫ್ಟ್ ಮಾಡಲಾಯಿತು.

ಏತನ್ಮಧ್ಯೆ, ಅಫಘಾನಿಸ್ತಾನ ಕ್ರಿಕೆಟ್ ಮಂಡಳಿಯು ತನ್ನ ಟ್ವೆಂಟಿ ಲೀಗ್ ಸೆಪ್ಟೆಂಬರ್ 10 ರಿಂದ ಕಾಬೂಲ್ ನಗರದಲ್ಲಿ ಆಯೋಜಿಸುವುದಾಗಿ ಹೇಳಿದೆ.

‘ಅಫಘಾನಿಸ್ತಾನ ಕ್ರಿಕೆಟ್ ಅನ್ನು ಮೇಲೆತ್ತಲು ಮತ್ತು ಕ್ರೀಡೆಯಲ್ಲಿ ಉತ್ತಮ ಪ್ರದರ್ಶನಗಳನ್ನು ನೀಡುವುದಕ್ಕೆ ನಾವು ಬದ್ಧರಾಗಿದ್ದೇವೆ. ನಾವು ಇಂಡಿಯ ಮತ್ತಯ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ಗಳೊಂದಿಗೆ ಅತ್ಯುತ್ತಮ ಸಂಬಂಧಗಳನ್ನು ಹೊಂದಿದ್ದೇವೆ, ಮತ್ತು ನಾವು ಅಂತರರಾಷ್ಟ್ರೀಯ ಕ್ರಿಕೆಟ್ ಸಮುದಾಯದ ಭಾಗವಾಗಿದ್ದೇವೆ,’ ಎಂದು ಮಂಡಳಿ ಹೇಳಿದೆ.

ಇದನ್ನೂ ಓದಿ: ಟೀಮ್ ಇಂಡಿಯಾದಲ್ಲಿ ನೋ ಚಾನ್ಸ್​: ಭಾರತ ಕ್ರಿಕೆಟ್​ಗೆ ವಿದಾಯ ಹೇಳಿದ ಮಾಜಿ ಕ್ರಿಕೆಟಿಗನ ಮಗ