ಕೃಷಿಗಾಗಿಯೇ ಪ್ರತ್ಯೇಕವಾದ ಬಜೆಟ್ ಮಂಡಿಸಿ, ಇಡೀ ದೇಶದ ಗಮನ ಸೆಳೆದಿದ್ದರು ಬಿ.ಎಸ್.ಯಡಿಯೂರಪ್ಪ. 2021ರ ಕರ್ನಾಟಕ ಬಜೆಟ್ ಮಂಡಿಸುವ ಮೂಲಕ ಎಂಟನೇ ಬಾರಿಗೆ ಈ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಇನ್ನು ರಾಮಕೃಷ್ಣ ಹೆಗಡೆ ಹಾಗೂ ಸಿದ್ದರಾಮಯ್ಯ (ತಲಾ ಹದಿಮೂರು ಸಲ) ನಂತರ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸುವ ಅವಕಾಶ ಇದು. ನಿಮಗೆ ಗೊತ್ತಿರಲಿ, ಕೊರೊನಾ ಬಿಕ್ಕಟ್ಟಿನ ವೇಳೆಯಲ್ಲಿ ಉತ್ಪಾದನೆ ಮೇಲೆ ಯಾವುದೇ ಪರಿಣಾಮ ಆಗದಂತೆ ಕಾರ್ಯ ನಿರ್ವಹಿಸಿದ್ದು ಕೃಷಿ ವಲಯ. ಜಿಡಿಪಿ ಪಾಲಿನ ಬೆಳ್ಳಿಗೆರೆಯಂತೆ ಆಗಿದ್ದು ಸಹ ಇದೇ ವಲಯ. ಆದರೆ ಕೃಷಿಕರ ಸ್ಥಿತಿಯಲ್ಲಿ ಯಾವ ಬದಲಾವಣೆ ಆಗಿಲ್ಲ. ಕೇಂದ್ರ ಸರ್ಕಾರದಿಂದ ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ಸೇರಿ ಇತರ ಕಾನೂನುಗಳಿಗೆ ತಿದ್ದುಪಡಿ ತಂದ ಮೇಲೆ ರೈತರ ಸ್ಥಿತಿ ಮತ್ತೂ ಚಿಂತಾಜನಕ ಆಗಿದೆ ಹಾಗೂ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಇಂಥ ಸ್ಥಿತಿಯಲ್ಲಿ ಕರ್ನಾಟಕದ ರೈತರು ನಿರೀಕ್ಷೆ ಮಾಡುವುದೇನು? ಕೃಷಿ ಆರ್ಥಿಕ ತಜ್ಞ, ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರಾದ ಪ್ರಕಾಶ್ ಕಮ್ಮರಡಿ ಟಿವಿ9 ಕನ್ನಡ ಡಿಜಿಟಲ್ ಜೊತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರ ಹೇಗೆ ಕೆಲಸ ಮಾಡಿದ ಎಂಬ ಬಗ್ಗೆ ಒಂದು ಸಮೀಕ್ಷೆ ನಡೆಸಿದ್ದೀವಿ. ಅದರ ಫಲಿತಾಂಶದ ಪ್ರಕಾರ, ನರೇಗಾ ಅನುಕೂಲ ತಲುಪಿರುವುದು ಶೇ 23.4ರಷ್ಟು ಮಾತ್ರ. ಅದರಲ್ಲೂ ಮಲೆನಾಡು- ಕರಾವಳಿ ಭಾಗದಲ್ಲಿ ಶೇ 11ರಷ್ಟು ರೈತರಿಗೆ ಮಾತ್ರ ತಲುಪಿದೆ. ಒಕ್ಕಲಿಗ- ರೆಡ್ಡಿ ಸಮುದಾಯಕ್ಕೆ ಶೇ 15 ಹಾಗೂ ಬ್ರಾಹ್ಮಣ- ಲಿಂಗಾಯತ ಸಮುದಾಯ ಸೇರಿ ಶೇ 27ರಷ್ಟು ಮುಟ್ಟಿದೆ. ಕೋವಿಡ್ ಸಂದರ್ಭದಲ್ಲಿ ಸರ್ಕಾರದಿಂದ ಸಿಕ್ಕ ಬೆಂಬಲದ ಬಗ್ಗೆ ಕೂಡ ರೈತರನ್ನು ಪ್ರಶ್ನೆ ಮಾಡಲಾಗಿದೆ. ಒಟ್ಟಾರೆ ಶೇ 38.6ರಷ್ಟು ರೈತರು ತೃಪ್ತಿ ತಂದಿದೆ ಎಂಬ ಉತ್ತರ ನೀಡಿದ್ದಾರೆ. ಬಡ ರೈತರು ಶೇ 36, 60 ವರ್ಷ ಮೇಲ್ಪಟ್ಟ ರೈತರು ಶೇ 35, ಕೊಳವೆಬಾವಿ ಇರುವಂತಹವರು ಶೇ 33, ಅಹಿಂದ ರೈತರು ಶೇ 35ರಷ್ಟು ಮಂದಿ ಸರ್ಕಾರದ ಕ್ರಮದಿಂದ ತೃಪ್ತಿಯಾಗಿದೆ.
ಒಟ್ಟಾರೆಯಾಗಿ ಕೋವಿಡ್ ಸಂದರ್ಭದಲ್ಲಿ ಸರ್ಕಾರ ಸಮರ್ಪಕವಾಗಿ ಕೆಲಸ ಮಾಡಿದೆ, ಇದರಿಂದ ತೃಪ್ತಿಯಾಗಿದೆ ಎಂದು ಹೇಳಿರುವವರ ಪ್ರಮಾಣ ಇಂತಿದೆ: ಬಡ ರೈತರು ಶೇ 36, 60 ವರ್ಷ ಮೇಲ್ಪಟ್ಟವರು ಶೇ 35ರಷ್ಟು, ಕೊಳವೆಬಾವಿ ಇರುವವರು ಶೇ 33, ಅಹಿಂದ ರೈತರು ಶೇ 35. ಒಟ್ಟಾರೆಯಾಗಿ ಸರ್ಕಾರದ ಕೆಲಸವು ತೃಪ್ತಿ ತಂದಿದೆ ಎಂದಿರುವವರು ಶೇ 45ರಷ್ಟು. ಬ್ರಾಹ್ಮಣ- ಲಿಂಗಾಯತರು ಶೇ 46, ಒಕ್ಕಲಿಗರು ಮತ್ತು ರೆಡ್ಡಿಗಳು ಶೇ 44, ಅಹಿಂದ ಶೇ 44, ಕೊಳವೆಬಾವಿ ಇರುವ ರೈತರು ಶೇ 37, ಮುಂಬೈ ಕರ್ನಾಟಕದ ರೈತರು ಶೇ 55, ಅರವತ್ತು ವರ್ಷ ಮೇಲ್ಪಟ್ಟವರು ಶೇ 43 ಮತ್ತು ಪದವಿ ಹಾಗೂ ಅದಕ್ಕೆ ಮೇಲ್ಪಟ್ಟವರು ಶೇ 44ರಷ್ಟು ಮಂದಿ ಇದರಲ್ಲಿ ಇದ್ದಾರೆ.
ಕರ್ನಾಟಕದ ರೈತರಿಗೆ ಸಹಾಯ ಆಗಬೇಕು ಎಂದಾದರೆ ಸರ್ಕಾರದಿಂದ ಕೆಲವು ಕ್ರಮಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಅದನ್ನು ಒಂದೊಂದಾಗಿ ಹೀಗೆ ವಿವರಿಸಬಹುದು.
ಕೃಷಿ ಭೂಮಿಯ ಸದ್ಬಳಕೆ ಕಡೆಗೆ ಗಮನ ನೀಡಬೇಕು. ರಾಜ್ಯದಲ್ಲಿ 21 ಲಕ್ಷ ಹೆಕ್ಟೇರ್ ಭೂಮಿ ಬೀಳು ಬಿದ್ದಿದೆ. ಅದರ ಸದ್ಬಳಕೆ ಆಗಬೇಕು. ಗುಂಪು ಕೃಷಿ, ಸಹಕಾರ ತತ್ವದಲ್ಲಿ ಕೃಷಿ ಮಾಡುವುದಕ್ಕೆ ಬೇಕಾದ ವಾತಾವರಣ ಸೃಷ್ಟಿಯಾಗಬೇಕು, ಪ್ರೋತ್ಸಾಹ ನೀಡಬೇಕು. ಸಹಕಾರ ತತ್ವದಡಿ ಕೃಷಿ ಆಗುವುದರಿಂದ ಈ ಭೂಮಿಯ ಸದ್ಬಳಕೆ ಆಗುತ್ತದೆ.
ಕರ್ನಾಟಕದಲ್ಲಿ ಕೃಷಿಗೆ ದುಬಾರಿ ವೆಚ್ಚ ಆಗುತ್ತಿದೆ. ಒಟ್ಟಾರೆ ವೆಚ್ಚದಲ್ಲಿ ದಿನಗೂಲಿ, ಎತ್ತು, ಯಂತ್ರ ಇಂಥದ್ದರ ವೆಚ್ಚವೇ ಶೇ 23ರಷ್ಟಾಗುತ್ತದೆ. ಅದಕ್ಕೆ ಕೀಟನಾಶಕ, ಗೊಬ್ಬರ ಇವೆಲ್ಲವೂ ಸೇರಿ ವೆಚ್ಚದ ಪ್ರಮಾಣ ಶೇಕಡಾ 50 ಆಗಿಬಿಡುತ್ತದೆ. ಆದ್ದರಿಂದ ಕಡಿಮೆ ಬಾಡಿಗೆಗೆ ಯಂತ್ರೋಪಕರಣ ದೊರೆಯುವಂತಾಗಬೇಕು. ನರೇಗಾ ಯೋಜನೆಯ ಬಳಕೆಯಾಗದ ಹಣವನ್ನು ಕೃಷಿಕರಿಗೆ ಜಮೀನಿನಲ್ಲಿ ಕೆಲಸ ಮಾಡುವುದಕ್ಕೆ ಬಳಸುವಂತಾಗಬೇಕು. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಯಂತ್ರಧಾರೆ ಯೋಜನೆ ಪರಿಣಾಮಕಾರಿಯಾಗಬೇಕು. ಕೇರಳ ಮಾದರಿಯಲ್ಲಿ ಲ್ಯಾಂಡ್ ಆರ್ಮಿ ರಚಿಸಿ, ಒಟ್ಟಿಗೆ ಕೆಲಸ ಮಾಡುವುದರಿಂದ ಕೂಲಿಯಾಳುಗಳ ಸಮಸ್ಯೆ ನಿವಾರಣೆ ಆಗುತ್ತದೆ. ಅಲ್ಲಿ ಮಹಿಳೆಯರಿಗೂ ಕೆಲಸ ಸಿಕ್ಕು, ಆರ್ಥಿಕವಾಗಿಯೂ ಸಹಾಯ ಆಗುತ್ತಿದೆ.
ಕರ್ನಾಟಕದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಬರ ಬರುತ್ತದೆ. ಹವಾಮಾನದ ವೈಪರೀತ್ಯವನ್ನು ಕಾಣುತ್ತೇವೆ. ಆದ್ದರಿಂದ ಹವಾಮಾನಸ್ನೇಹಿ ಕೃಷಿ ಪದ್ಧತಿಯನ್ನು ಯೋಚಿಸಬೇಕು. ಮಲೆನಾಡು ಭಾಗದಲ್ಲಿ ಮಳೆ ಜಾಸ್ತಿ ಬಿದ್ದು ಸಮಸ್ಯೆ, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮಳೆಯ ಕೊರತೆ. ಹವಾಮಾನಕ್ಕೆ ಸೂಕ್ತವಾದ ತಳಿ ಅಭಿವೃದ್ಧಿ ಆಗಬೇಕು. ಯಾವ ಪ್ರಾದೇಶಿಕ ಭಾಗಕ್ಕೆ ಯಾವ ತಳಿ ಸೂಕ್ತ ಎಂದು ಸಂಶೋಧನೆ ನಡೆಸಿ, ಅಭಿವೃದ್ಧಿ ಪಡಿಸಬೇಕು. ಆದ್ದರಿಂದ ಕರ್ನಾಟಕ ಕೃಷಿ ಸಂಶೋಧನಾ ಕೇಂದ್ರ ಸಬಲವಾಗಬೇಕು. ಇದಕ್ಕಾಗಿ ಕೌನ್ಸಿಲ್ ರಚನೆಯಾಗಿ, ಮುಖ್ಯಮಂತ್ರಿಗಳು ಅಧ್ಯಕ್ಷತೆ ವಹಿಸಬೇಕು. ವಿಶ್ವವಿದ್ಯಾಲಯಗಳು, ವಿಜ್ಞಾನಿಗಳು ಇದರಲ್ಲಿ ಪಾಲ್ಗೊಳ್ಳಬೇಕು.
ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡುವುದಕ್ಕೆ ಕಾನೂನು ಸ್ವರೂಪ ನೀಡಬೇಕು. ಆ ಬೆಲೆಯು ರೈತರಿಗೆ ಶಾಸನಬದ್ಧವಾಗಿ ಸಿಗುವಂಥದ್ದಾಗಿದ್ದು, ಲಾಭದಾಯಕವೂ ಆಗಿರಬೇಕು. ಈಗಿನ ಸ್ಥಿತಿಯಲ್ಲಿ ಎಪಿಎಂಸಿ ದುರ್ಬಲವಾಗುತ್ತಿದೆ. ಎಪಿಎಂಸಿ ಹೊರಗೆ ವ್ಯವಹಾರ ಜಾಸ್ತಿ ಆಗುತ್ತಿದೆ. ಎಪಿಎಂಸಿ ಒಳಗೆ ವ್ಯವಹಾರ ಆಗಿದ್ದರೆ ಅಲ್ಲಿ ಕರ ಪಾವತಿಸಬೇಕು, ನಿಯಮ- ನಿಬಂಧನೆಗಳಿವೆ, ರೈತರಿಗೆ ಪಾವತಿಯಲ್ಲಿ ಮೋಸವಾಗಲ್ಲ, ತೂಕದಲ್ಲಿ ಮೋಸವಾಗಲ್ಲ. ಆದರೆ ಎಪಿಎಂಸಿ ಹೊರಗೆ ಯಾವ ನಿಯಮವೂ ಇಲ್ಲ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ, ಮೇ 15, 2020ರಲ್ಲಿ ಎಪಿಎಂಸಿ ಸುಗ್ರೀವಾಜ್ಞೆಯನ್ನು ಹೊರಡಿಸಿದ ಮೇಲೆ ಎಪಿಎಂಸಿಗೆ ಬರುವ ಆವಕ ಕನಿಷ್ಠ ಶೇ 20ರಿಂದ ಶೇ 75ಕ್ಕೂ ಹೆಚ್ಚು ಪ್ರಮಾಣದಲ್ಲಿ ಕಡಿಮೆ ಆಗಿದೆ. ಹೀಗೇ ಮುಂದುವರಿದಲ್ಲಿ ಎಪಿಎಂಸಿ ವ್ಯವಸ್ಥೆಯೇ ನಾಶವಾಗುತ್ತದೆ. ಆದ್ದರಿಂದ ಈ ಅಂಶಗಳನ್ನೆಲ್ಲ ಗಮನಿಸಿ ಕೃಷಿಗೆ ಬಜೆಟ್ನಲ್ಲಿ ಜೀವ ನೀಡಬೇಕು.
(ನಿರೂಪಣೆ: ಎಮ್. ಶ್ರೀನಿವಾಸ)
ಇದನ್ನೂ ಓದಿ: Karnataka Budget 2021: ಹಸಿವುಮುಕ್ತ ಕರ್ನಾಟಕಕ್ಕೆ ಪಣ, ಹಣ ಪೋಲು ತಪ್ಪಿಸಲು ಸಿಎಂ ಡ್ಯಾಶ್ಬೋರ್ಡ್
ಇದನ್ನೂ ಓದಿ: ಕರ್ನಾಟಕ ಬಜೆಟ್ 2021: ಮೂರು ತಿಂಗಳಿಗೊಮ್ಮೆ ಪರಾಮರ್ಶೆ ಮಾಡದ ಬಜೆಟ್ ಹೇಗೆ ಪರಿಣಾಮಕಾರಿ?