ಶಾರುಖ್ ಖಾನ್ ಬಾಲಿವುಡ್ನಲ್ಲಿ ಸತತ ಸೋಲು ಕಂಡಿದ್ದಾರೆ. ಆದಾಗ್ಯೂ, ಮುಂದಿನ ಚಿತ್ರಕ್ಕೆ ಅವರು 100 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿತ್ತು. ಇದು ಅನೇಕರಲ್ಲಿ ಅಚ್ಚರಿ ಮೂಡಿಸಿತ್ತು. ಈಗ ಈ ಸಂಭಾವನೆಯನ್ನೂ ಮೀರಿಸಿ ಅಜಯ್ ದೇವಗನ್ ಅಚ್ಚರಿ ಮೂಡಿಸಿದ್ದಾರೆ. ಇವರು ಒಟಿಟಿಗೆ ಕಾಲಿಡುತ್ತಿರುವುದಕ್ಕೆ ಬರೋಬ್ಬರಿ 125 ಕೋಟಿ ರೂ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಹೌದು, ಅಜಯ್ ದೇವಗನ್ ‘ರುದ್ರ’ ಹೆಸರಿನ ವೆಬ್ ಸೀರಿಸ್ನಲ್ಲಿ ನಟಿಸುತ್ತಿದ್ದಾರೆ. ಇದು ಬ್ರಿಟಿಷ್ ವೆಬ್ ಸಿರೀಸ್ ‘ಲೂಥರ್’ನ ಹಿಂದಿ ರಿಮೇಕ್ ಆಗಿರಲಿದೆ. ಇದರಲ್ಲಿ ಅಜಯ್ ದೇವಗನ್ ಪೊಲೀಸ್ ಅಧಿಕಾರಿ ಪಾತ್ರ ಮಾಡಲಿದ್ದಾರೆ. ಈ ವೆಬ್ ಸೀರಿಸ್ ಶೂಟಿಂಗ್ ಮುಂದಿನ ತಿಂಗಳಿಂದ ಆರಂಭಗೊಳ್ಳಲಿದೆ.
ಅಂದಹಾಗೆ, ಈ ವೆಬ್ ಸೀರಿಸ್ ಶೂಟಿಂಗ್ ಸತತ ಎರಡು ತಿಂಗಳ ಕಾಲ ನಡೆಯಲಿದೆ. ಕೇವಲ 60 ದಿನಗಳಲ್ಲಿ ಇದರ ಶೂಟಿಂಗ್ ಪೂರ್ಣಗೊಳಿಸಬೇಕು ಎಂಬುದು ಚಿತ್ರತಂಡದ ನಿರ್ಧಾರ. ಕೇವಲ ಎರಡು ತಿಂಗಳಿಗೆ ಅಜಯ್ ಈ ಮಟ್ಟದ ಗಳಿಕೆ ಮಾಡಿಕೊಳ್ಳುತ್ತಿರುವುದು ಅಚ್ಚರಿ ಮೂಡಿಸಿದೆ.
ಅಜಯ್ ದೇವಗನ್ ‘ತಾನ್ಹಾಜಿ’ ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಅವರು ಪ್ರತಿ ಸಿನಿಮಾಗೂ ಕಥೆ ಭಿನ್ನವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈಗ ಒಟಿಟಿಗೆ ಕಾಲಿಡುತ್ತಿರುವ ಅವರು ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇಷ್ಟು ದೊಡ್ಡ ಮೊತ್ತದ ಹಣ ಕೊಡ್ತಿರೋದು ಕೇವಲ ಶೂಟಿಂಗ್ಗಾಗಿ ಮಾತ್ರವಲ್ಲ. ವೆಬ್ ಸೀರಿಸ್ ಪ್ರಚಾರಕ್ಕೆ, ಸೋಶಿಯಲ್ ಮೀಡಿಯಾ ಪ್ರಮೋಷನ್, ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳೋದು ಕೂಡ ಆಗಿದೆ ಎನ್ನಲಾಗಿದೆ.
ರಾಜೇಶ್ ಮಪುಸ್ಕರ್ ರುದ್ರ ವೆಬ್ ಸೀರಿಸ್ ನಿರ್ದೇಶನ ಮಾಡಲಿದ್ದಾರೆ. ಅಪ್ಲಾಸ್ ಎಂಟರ್ಟೇನ್ಮೆಂಟ್ ಮತ್ತು ಬಿಬಿಸಿ ಸ್ಟುಡಿಯೂ ಇಂಡಿಯಾ ಜೊತೆಯಾಗಿ ಇದನ್ನು ನಿರ್ಮಾಣ ಮಾಡಲಿವೆ. ‘ಬೇಗ ಶೂಟಿಂಗ್ ಶುರುವಾಗಲಿ ಎಂದು ನಾನು ಕಾಯುತ್ತಿದ್ದೇನೆ. ಪೊಲೀಸ್ ಪಾತ್ರ ಮಾಡುವುದು ನನಗೆ ಹೊಸದೇನೂ ಅಲ್ಲ. ಆದರೆ ಈ ಬಾರಿ ನಾನು ಮಾಡುತ್ತಿರುವ ಪಾತ್ರ ಹೆಚ್ಚು ತೀಕ್ಷ್ಣ, ಕಠಿಣ ಮತ್ತು ಗಾಢವಾಗಿದೆ’ ಎಂದು ತಮ್ಮ ಪಾತ್ರದ ಬಗ್ಗೆ ಅಜಯ್ ದೇವಗನ್ ಬರೆದುಕೊಂಡಿದ್ದರು.
ಇದನ್ನೂ ಓದಿ: ಬಾಲಿವುಡ್ ಮಂದಿಗೆ ಬಂಗಲೆ ಖರೀದಿಸೋ ಕ್ರೇಜ್; 60 ಕೋಟಿ ಕೊಟ್ಟು ಅಜಯ್ ದೇವಗನ್ ಮನೆ ಖರೀದಿ