
ಕಲಬುರಗಿ: ಪ್ರವಾಹದ ಅಬ್ಬರಕ್ಕೆ ಉತ್ತರ ಕರ್ನಾಟಕದ ಪರಿಸ್ಥಿತಿ ತತ್ತರಿಸಿದೆ. ನೆರೆಯಿಂದಾಗಿ ಜನ ಬೀದಿಗೆ ಬಿದ್ದಿದ್ದಾರೆ. ನೆರೆಯಿಂದಾಗಿ ಕೋಟ್ಯಾಂತರ ರೂ ಬೆಲೆ ಬಾಡುವ ಆಸ್ತಿ ಪಾಸ್ತಿ ಹಾನಿಯಾಗಿದೆ. ಜನರ ನೋವುಗಳೇ ಬಂದು ಕಡೆಯಾದ್ರೆ ಪ್ರವಾಹದಲ್ಲಿ ಮೂಕ ಪ್ರಾಣಿಗಳ ರೋದನೆ ಕೇಳೋರೆ ಇಲ್ಲ. ತಮ್ಮ ಮಾಲೀಕನಿಂದ ದೂರವಾಗಿ ಊಟ ಆಶ್ರಯವಿಲ್ಲದೆ ಪರಿತಪಿಸುತ್ತಿವೆ.
ಮರವೇರಿ ಕುಳಿತ ಕೋತಿ ಮರಿ:
ಪ್ರವಾಹಕ್ಕೆ ತತ್ತರಿಸಿರುವ ಕೋತಿ ಮರಿ ಕಳೆದ 4ದಿನದಿಂದ ಅಫಜಲಪುರ ಪಟ್ಟಣದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲಿರುವ ಮರವೇರಿ ಕುಳಿತುಕೊಂಡಿದೆ. ಆಹಾರ ಇಲ್ಲದೆ, ನೀರು ಸಿಗದೆ ಪರದಾಡುತ್ತಿದೆ. ನಾಲ್ಕು ದಿನ ಕಳೆದರೂ ಅರಣ್ಯ ಇಲಾಖೆ ಅಧಿಕಾರಿಗಳು ಕೋತಿ ರಕ್ಷಣೆಗೆ ಮುಂದಾಗಿಲ್ಲ. ಹೀಗಾಗಿ ಮಂಗನನ್ನು ರಕ್ಷಿಸಲು ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಜೈ ಭೀಮ್ ನಗರ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2ದಿನದ ಹಿಂದೆ ಕೋತಿ ಮರಿ ಜೊತೆ ತಾಯಿ ಮರಿ ಸಹ ಇತ್ತು ಆದರೆ ಈಗ ಕೇವಲ ಕೋತಿಮರಿ ಮಾತ್ರ ಉಳಿದುಕೊಂಡಿದೆ. ಇನ್ನು ಅಫಜಲಪುರ ತಾಲೂಕಿನ ಘೋಳನೂರು ಗ್ರಾಮದಲ್ಲಿ ಭೀಮಾ ನದಿ ಪ್ರವಾಹದಲ್ಲಿ ಸಿಲುಕಿದ್ದ ನಾಯಿಯನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಜೀವ ಪಣಕ್ಕಿಟ್ಟು ಎದೆಯಾಳದ ನೀರಲ್ಲಿ ಹೋಗಿ ನಾಯಿಯ ಜೀವ ಉಳಿಸಿದ್ದಾರೆ.
ಮುಳ್ಳಿನ ಗುಡ್ಡದಲ್ಲಿ ಸಿಲುಕಿಕೊಂಡಿವೆ 120ಕ್ಕೂ ಹೆಚ್ಚು ಜಾನುವಾರುಗಳು:
ರಾಯಚೂರಿನಲ್ಲಿ ತಾಲೂಕಿನ ಕಾಡ್ಲೂರು, ಗುರ್ಜಾಪುರ ಗ್ರಾಮ ಮತ್ತು ಯಾದಗಿರ ಜಿಲ್ಲೆ ವಡಗೇರ ತಾಲೂಕಿನ ರೈತರ ಜಾನುವಾರುಗಳು ಪ್ರವಾಹದಲ್ಲಿ ಸಿಲುಕಿಕೊಂಡಿವೆ. ಕೃಷ್ಣ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಗುರ್ಜಾಪುರದ ನದಿ ದಂಡೆಯ ಮುಳ್ಳಿನ ಗುಡ್ಡದಲ್ಲಿರುವ 120ಕ್ಕೂ ಹೆಚ್ಚು ಜಾನುವಾರುಗಳು ಪ್ರವಾಹದಲ್ಲಿ ಸಿಲುಕಿಕೊಂಡಿವೆ. ಜಾನುವಾರು ರಕ್ಷಣೆ ಮಾಡುವಂತೆ ರೈತರು ಆಗ್ರಹಿಸಿದ್ದಾರೆ.