B Sriramulu: ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಶ್ರೀರಾಮುಲು ತಿರುಗೇಟು
B Sriramulu: ಕುರುಬರ ಹೋರಾಟದ ಹಿಂದೆ ಆರ್ಎಸ್ಎಸ್ ಕೈವಾಡವಿಲ್ಲ ಎಂದು ಹೇಳಿದ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಆರ್ಎಸ್ಎಸ್ಗೆ ಇಂತಹ ಕೆಲಸ ಮಾಡುವ ಅವಶ್ಯಕತೆ ಇಲ್ಲ ಎಂದರು.

ಗದಗ: ಸರ್ಕಾರದ ಬಳಿ ಹಣವಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯರವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಬಿ.ಶ್ರೀರಾಮುಲು ಬಾದಾಮಿಯಲ್ಲಿ ಕೋಟ್ಯಂತರ ರೂ. ವೆಚ್ಚದ ಅಭಿವೃದ್ಧಿ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಚಾಲನೆ ನೀಡುತ್ತಿದ್ದಾರೆ. ಈ ಹಣ ಎಲ್ಲಿಂದ ಬಂತು ಎಂದು ಸಿದ್ದರಾಮಯ್ಯರವರೇ ಹೇಳಬೇಕು ಎಂದು ಪ್ರಶ್ನಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಬೇರೆ ವಿಷಯ ಇಲ್ಲ. ಹೀಗಾಗಿ ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ನಿಂತಿಲ್ಲ. ಕೊವಿಡ್ ಮತ್ತು ಪ್ರವಾಹ ಹಿನ್ನೆಲೆ ಸರ್ಕಾರಕ್ಕೆ ಸ್ವಲ್ಪ ಸಮಸ್ಯೆಯಾಗಿದೆ. ಈಗ ಎಲ್ಲ ಸಚಿವರೂ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಆರ್ಎಸ್ಎಸ್ ಕೈವಾಡವಿಲ್ಲ ಕುರುಬರ ಹೋರಾಟದ ಹಿಂದೆ ಆರ್ಎಸ್ಎಸ್ ಕೈವಾಡವಿಲ್ಲ ಎಂದು ಹೇಳಿದ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಆರ್ಎಸ್ಎಸ್ಗೆ ಇಂತಹ ಕೆಲಸ ಮಾಡುವ ಅವಶ್ಯಕತೆ ಇಲ್ಲ. ಅದು ದೇಶ ಸೇವೆ ಮಾಡುವ ಕೆಲಸ ಮಾಡುತ್ತಿದೆ ಎಂದರು. ಇನ್ನೂ ಎಸ್ಟಿ ಮೀಸಲಾತಿಗಾಗಿ ಕುರುಬರ ಹೋರಾಟ ವಿಚಾರದ ಬಗ್ಗೆ ಮಾತನಾಡಿದ ಶ್ರೀರಾಮುಲು ಹೋರಾಟದಲ್ಲಿ ಸಿದ್ದರಾಮಯ್ಯನವರು ಏಕೆ ಭಾಗಿಯಾಗುತ್ತಿಲ್ಲವೆಂದು ಗೊತ್ತಿಲ್ಲ. ಸಚಿವ ಈಶ್ವರಪ್ಪಗೆ ಕಾಳಜಿ ಇದೆ. ಹೀಗಾಗಿ ಭಾಗಿಯಾಗುತ್ತಿದ್ದಾರೆ. ಸಚಿವ ಸ್ಥಾನಕ್ಕಿಂತ ಸಮುದಾಯ ದೊಡ್ಡದೆಂದು ಭಾಗಿಯಾಗಿದ್ದಾರೆ ಎಂದರು.
ಇದನ್ನೂ ಓದಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್: ಹೆಚ್.ವಿಶ್ವನಾಥ್ ವಾಗ್ದಾಳಿ
ಕಾಂಗ್ರೆಸ್ನಲ್ಲಿ ಸಾಕಷ್ಟು ಒಡಕಿದೆ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಕುರ್ಚಿ ಮಾತ್ರ ಕಾಣುತ್ತಿದೆ. ಜನರಿಗಾಗಿ ಕೆಲಸ ಮಾಡಬೇಕೆಂಬುದು ಸರ್ಕಾರದ ಉದ್ದೇಶವಾಗಿದ್ದರೇ ವಿಪಕ್ಷ ನಾಯಕ ಸಿಎಂ ಕುರ್ಚಿಗೆ ಹಾರಬೇಕೆಂಬ ಉದ್ದೇಶ ಹೊಂದಿದ್ದಾರೆ ಎಂದು ಹೇಳಿದರು. ಜೊತೆಗೆ ರಾಜ್ಯ ಕಾಂಗ್ರೆಸ್ನಲ್ಲಿ ಸಾಕಷ್ಟು ಒಡಕು ಇದೆ. ಒಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಎನ್ನುತ್ತಾರೆ. ಮತ್ತೊಂದೆಡೆ ಸಿದ್ದರಾಮಯ್ಯ ಸಿಎಂ ಆಗಬೇಕು ಅಂತಾರೆ. ಇನ್ನೊಂದೆಡೆ ದಲಿತರಿಗೆ ಸಿಎಂ ಸ್ಥಾನ ನೀಡಬೇಕು ಅಂತಾರೆ. ಅವರಲ್ಲಿ ಯಾವುದೂ ಸರಿಯಲ್ಲ ಎಂದು ಹೇಳಿದರು.



