ಬೆಂಗಳೂರು: ರಾಜಧಾನಿ ಗಡಿ ಬಂದ್.. ಹೋದಲ್ಲಿ ಬಂದಲ್ಲಿ, ಕುಂತಲ್ಲಿ-ನಿಂತಲೆಲ್ಲಾ ಇದೇ ವಿಷ್ಯ ಚರ್ಚೆಯಾಗ್ತಿದೆ. ರಾಜಧಾನಿಯ ಪ್ರತಿ ರಸ್ತೆಯಲ್ಲೂ ಗಂಟು ಮೂಟೆ ಕಟ್ಕೊಂಡು ಹೋಗೋರೇ ಕಣ್ಣಿಗೆ ಬೀಳ್ತಾರೆ. ಬೆಂಗಳೂರು ಸಹವಾಸ ಸಾಕಪ್ಪಾ. ಸಾಕು. ಜೀವ ಉಳಿಸಿಕೊಳ್ಳೋದೇ ಬೇಕು ಅಂತಾ ಸ್ವಂತ ಊರು ಸೇರ್ಕೊಳ್ತಿದ್ದಾರೆ. ಕೊರೊನಾ ಅಟ್ಟಹಾಸ ಬೆದರಿ ಮನೆಗಳನ್ನ ಖಾಲಿ ಮಾಡ್ತಿದ್ದಾರೆ. ಇದ್ರ ನಡ್ವೆ ಮತ್ತೆ ಲಾಕ್ಡೌನ್ ಆಗುತ್ತೆ. ಬೆಂಗಳೂರು ಗಡಿಗಳನ್ನ ಬಂದ್ ಮಾಡಲಾಗುತ್ತೆ ಅನ್ನೋದು ಜನರ ಆತಂಕವನ್ನ ಮತ್ತಷ್ಟು ಹೆಚ್ಚಿಸಿದೆ.
ಸುಳ್ಳು ವದಂತಿಗಳಿಗೆ ತೆರೆ ಎಳೆದ ರಾಜ್ಯ ಸರ್ಕಾರ!
ರಾಜಧಾನಿ ಬೆಂಗಳೂರು ಸ್ಮಶಾನದಂತಾಗಿದೆ. ನಿತ್ಯ ಸಾಲು ಸಾಲು ಮಂದಿ ಉಸಿರು ಚೆಲ್ಲಿ ಸಾವಿನ ಮನೆ ಸೇರ್ತಿದ್ದಾರೆ. ಇದ್ರ ನಡ್ವೆ ಕೊರೊನಾ ಹೆಚ್ಚಾಗಿರೋದ್ರಿಂದ ಲಾಕ್ಡೌನ್ ಮಾಡಲಾಗುತ್ತೆ. ಮತ್ತೆ ಬೆಂಗಳೂರಿನ ಗಡಿಗಳಿಗೆಲ್ಲಾ ಬಂದ್ ಆಗುತ್ತವೆ. ಬೆಂಗಳೂರಿಂದ ಯಾರು ಹೊರಗೆ ಹೋಗೋಕಾಗಲ್ಲ, ಬೇರೆ ಜಿಲ್ಲೆಗಳಿಂದ ಬೆಂಗಳೂರಿಗೆ ಬರೋಕಾಗಲ್ಲ ಅನ್ನೋ ವದಂತಿ ಎಲ್ಲೆಡೆ ಹರಿದಾಡ್ತಿದೆ.
ಆದ್ರೆ ಈ ಎಲ್ಲಾ ವದಂತಿಗಳನ್ನ ಸರ್ಕಾರ ತಳ್ಳಿ ಹಾಕಿದೆ. ಸರ್ಕಾರದ ಮಟ್ಟದಲ್ಲಿ ಆ ರೀತಿ ಬೆಂಗಳೂರನ್ನ ಬಂದ್ ಮಾಡುವ, ಅಂತರ್ ರಾಜ್ಯ, ಅಂತರ್ ಜಿಲ್ಲೆ ಸಂಚಾರ ಬಂದ್ ಮಾಡೋ ನಿರ್ಧಾರವಾಗಿಲ್ಲ. ಈ ಬಗ್ಗೆ ಯಾವುದೇ ಯೋಚನೆ ಇಲ್ಲ ಅಂತಾ ಸರ್ಕಾರದ ಹಿರಿಯ ಅಧಿಕಾರಿಗಳೇ ಟಿವಿ9ಗೆ ಮಾಹಿತಿ ನೀಡಿದ್ದಾರೆ.
ಇನ್ನು ಬೆಂಗಳೂರನ್ನ ದಿಢೀರ್ ಬಂದ್ ಮಾಡಿದ್ರೆ ಜನಜೀವನ ನಡೆಸೋದೇ ಕಷ್ಟವಾಗಿಬಿಡುತ್ತೆ. ಜಿಲ್ಲೆಗಳಿಂದ ಬರುವ ವಹಿವಾಟುಗಳೆಲ್ಲವೂ ಸ್ಥಗಿತಗೊಳ್ಳುತ್ತವೆ. ಈಗಾಗ್ಲೇ ಆರ್ಥಿಕ ಹೊಡೆತಕ್ಕೆ ಸಿಲುಕಿ ನಲುಗಿರೋ ಜನ್ರ ಜೀವನ ಮತ್ತಷ್ಟು ಖರಾಬ್ ಆಗಲಿದೆ. ತುತ್ತಿನ ಚೀಲ ತುಂಬಿಸೋಕೆ ಪರದಾಡೋ ಪರಿಸ್ಥಿತಿ ನಿರ್ಮಾಣವಾಗಬಹುದು. ಇದೆಲ್ಲಾ ಆತಂಕದಿಂದ ಸರ್ಕಾರ ಯಾವುದೇ ಬಂದ್ ಇಲ್ಲ ಅಂತಾ ಕ್ಲಿಯರ್ ಆಗಿ ಹೇಳಿದೆ.
Published On - 7:27 am, Wed, 8 July 20