ಬೆಂಗಳೂರು: ಬೆಂಗಳೂರಿನ ಬಹುತೇಕ ರಸ್ತೆಗಳು ಇನ್ನೂ ಕೂಡ ತನ್ನ ಸ್ವಚ್ಛತೆ ಕಾಪಾಡಿಕೊಂಡು ಬಂದಿದೆ ಎಂದರೆ ಅದಕ್ಕೆ ಕಾರಣ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP). ಸಾವಿರಾರು ಪೌರ ಕಾರ್ಮಿಕರು ಈ ಕೆಲಸದಲ್ಲಿ ನಿರತರಾಗಿದ್ದು, ಕಸ ವಿಲೇವಾರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂತಹ ಕಸ ಸಂಗ್ರಹಕ್ಕೆ ಈಗ ಸಾರ್ವಜನಿಕರು ಹೆಚ್ಚು ಶುಲ್ಕವನ್ನು ಪಾವತಿ ಮಾಡಬೇಕಿದೆ.
ಬೆಂಗಳೂರಿನ ಪತ್ರಿಯೊಂದು ಮನೆಗೂ ತೆರಳಿ ಕಸವನ್ನು ಸಂಗ್ರಹಿಸುವುದಷ್ಟೇ ಅಲ್ಲದೆ ಅವುಗಳಲ್ಲಿ ಹಸಿ ಕಸ–ಒಣ ಕಸವನ್ನು ಬೇರ್ಪಡಿಸುವ ಕಾರ್ಯವನ್ನು ಪೌರಕಾರ್ಮಿಕರು ಮಾಡುತ್ತಾರೆ. ಈ ನಿಟ್ಟಿನಲ್ಲಿ ಅವರ ವೇತನವನ್ನು ಹೆಚ್ಚಿಸುವ ನಿರ್ಧಾರವನ್ನು ಬಿಬಿಎಂಪಿ ತೆಗೆದುಕೊಂಡಿದ್ದು, ಕಸ ಸಂಗ್ರಹದ ಶುಲ್ಕವನ್ನು 200ಕ್ಕೆ ಹೆಚ್ಚಿಸಿದೆ.
‘ಜನವರಿಯಿಂದ ಪ್ರತಿ ತಿಂಗಳು 200 ರೂ.ಯಂತೆ ಸಾರ್ವಜನಿಕರು ಶುಲ್ಕವನ್ನು ಪಾವತಿಸಬೇಕಾಗಿದ್ದು, ಖಾಸಗಿ ಒಡೆತನಕ್ಕೆ ಒಳಪಟ್ಟ ಸಂಸ್ಥೆಗಳು ಕಸ ಸಂಗ್ರಹಣೆಗೆ 10,000 ರೂ. ಪಾವತಿಸಬೇಕು. ಬೆಸ್ಕಾಂನ ವಿದ್ಯುತ್ ಸೇವೆಗೆ ಶುಲ್ಕ ಪಾವತಿಸುವಂತೆ ನಮ್ಮ ಕಸ ವಿಲೇವಾರಿ ಸೇವೆಗೂ ಮಾಸಿಕ ಶುಲ್ಕ ಪಾವತಿಸಬೇಕಾಗುತ್ತದೆ. ವಿದ್ಯುತ್ ಶುಲ್ಕದ ಜೊತೆಗೆ ಜನವರಿಯಿಂದ ಕಸದ ಶುಲ್ಕವು ಪಾವತಿಯಾಗುತ್ತದೆ. ಆದರೆ ಶುಲ್ಕದ ಹಣ ಬಿಬಿಎಂಪಿ ಖಾತೆಗೆ ಹೋಗುತ್ತದೆ’ ಎಂದು ಎಲ್ಡಬ್ಲ್ಯೂಎಂ ವಿಶೇಷ ಆಯುಕ್ತರಾದ ರಣದೀಪ್ ಹೇಳಿದರು.
ಜನರ ಅಭಿಪ್ರಾಯ:
‘ಹಸಿ ಕಸ ಮತ್ತು ಒಣ ಕಸದ ಪ್ರತ್ಯೇಕ ವಿಲೇವಾರಿ ಇರುತ್ತದೆ. ಆದರೆ ನಿಗದಿಯಾದ ದಿನಕ್ಕೆ ಸರಿಯಾಗಿ ಕಸದ ಸಂಗ್ರಹಣೆಗೆ ಬರುವುದಿಲ್ಲ. ಶುಲ್ಕದ ಪಾವತಿಯ ನಂತರದಲ್ಲಾದರೂ ಇಂತಹ ಸಮಸ್ಯೆಗಳು ಬರದಿದ್ದರೆ ಸಾಕು ಎನ್ನುತ್ತಾರೆ’ ಬೆಂಗಳೂರಿನ ಹುಳಿಮಾವು ರಸ್ತೆಯ ನಿವಾಸಿ ಸ್ವಾತಿ.
‘ಕಸದ ಸಂಗ್ರಹಣೆಯೇ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ಹಸಿ ಕಸ–ಒಣ ಕಸ ಎಂಬುವುದು ಬರಿ ಇಲಾಖೆಯಲ್ಲಿನ ನಿರ್ಧಾರಕ್ಕೆ ಮಾತ್ರ ಸೀಮಿತವಾಗಿದೆ. ಕಸ ಸಂಗ್ರಹಣೆಗೆ ಬರುವ ಪೌರ ಕಾರ್ಮಿಕರಿಗೆ ಇವುಗಳ ಬಗ್ಗೆ ಮಾಹಿತಿ ಇಲ್ಲ. ಮೊದಲು ಅವರಿಗೆ ಈ ಬಗ್ಗೆ ಮಾಹಿತಿ ನೀಡುವುದು ಅಗತ್ಯ. ಇಲ್ಲವಾದರೆ ಶುಲ್ಕ ಪಾವತಿಗೆ ಅರ್ಥವೇ ಇರುವುದಿಲ್ಲ’ ಎನ್ನತ್ತಾರೆ ಯಲಹಂಕ ವಾರ್ಡ್.1 ರ ನಿವಾಸಿ ಹರೀಶ್.
Published On - 11:55 am, Wed, 25 November 20