India vs England | ರಾಹುಲ್ ಒಬ್ಬ ಮ್ಯಾಚ್ವಿನ್ನರ್, ಒಂದೆರಡು ವೈಫಲ್ಯಗಳಿಂದ ಅವರನ್ನು ಕಳಪೆ ಅನ್ನಲಾಗದು: ಆಕಾಶ್ ಚೋಪ್ರಾ
‘ತಾನೊಬ್ಬ ಮ್ಯಾಚ್ ವಿನ್ನರ್ ಎಂದು ಸಾಬೀತು ಮಾಡಿರುವ ಆಟಗಾರ ಒಂದರೆಡು ಇನ್ನಿಂಗ್ಸ್ಗಳಲ್ಲಿ ಫೇಲಾದ ತಕ್ಷಣ ಅವನ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡಲಾರಂಭಿಸಿದರೆ ನಾವು ವಿಶ್ವಕಪ್ ಗೆಲ್ಲುವ ಟೀಮನ್ನು ಕಟ್ಟಲಾಗುವುದಿಲ್ಲ’ ಎಂದು ಚೋಪ್ರಾ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟಿ20 ಕ್ರಿಕೆಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ರನ್ ಗಳಿಸಲು ವಿಫಲರಾದ ಕನ್ನಡಿಗ ಕೆ.ಎಲ್.ರಾಹುಲ್ ಅವರನ್ನು ಜನರು ಮನಬಂದಂತೆ ಟೀಕಿಸುತ್ತಿರುವುದು ಭಾರತದ ಮಾಜಿ ಆರಂಭ ಆಟಗಾರ ಮತ್ತು ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ ಅವರನ್ನು ಕೆರಳಿಸಿದೆ. ರಾಹುಲ್ ಮೊದಲ ಪಂದ್ಯದಲ್ಲಿ ಸೊನ್ನೆ ಮತ್ತು ಎರಡನೇ ಪಂದ್ಯದಲ್ಲಿ 1 ರನ್ ಗಳಿಸಿ ಔಟಾದರು. ಸರಣಿ ಆರಂಭಕ್ಕೆ ಮುನ್ನ ಐಸಿಸಿ ಟಿ20ಐ ಕ್ರಿಕೆಟ್ ಬ್ಯಾಟ್ಸ್ಮನ್ಗಳ ರ್ಯಾಂಕಿಂಗ್ನಲ್ಲಿ ಎರಡನೇ ಸ್ಥಾನದಲ್ಲಿದ್ದ ರಾಹುಲ್ ಈ ಎರಡು ವೈಫಲ್ಯಗಳಿಂದಾಗಿ ಮೂರನೇ ಸ್ಥಾನಕ್ಕಿಳಿದಿದ್ದಾರೆ. ರಾಹುಲ್ ಸ್ಪರ್ಶ ಕಳೆದುಕೊಂಡಿರುವುದು ವಿದಿತವಾಗಿದ್ದರೂ ಚೋಪ್ರಾ ಆರಂಭ ಆಟಗಾರನ ಬೆಂಬಲಕ್ಕೆ ನಿಂತಿದ್ದಾರೆ.
‘ತಾನೊಬ್ಬ ಮ್ಯಾಚ್ ವಿನ್ನರ್ ಎಂದು ಸಾಬೀತು ಮಾಡಿರುವ ಆಟಗಾರ ಒಂದರೆಡು ಇನ್ನಿಂಗ್ಸ್ಗಳಲ್ಲಿ ಫೇಲಾದ ತಕ್ಷಣ ಅವನ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡಲಾರಂಭಿಸಿದರೆ ನಾವು ವಿಶ್ವಕಪ್ ಗೆಲ್ಲುವ ಟೀಮನ್ನು ಕಟ್ಟಲಾಗುವುದಿಲ್ಲ. ಇಂದು ರಾಹುಲ್ ಫೇಲಾಗಿದ್ದಾರೆ, ನಾಳೆ ಪಂತ್ ವಿಫಲರಾಗಬಹುದು ಮತ್ತು ನಾಳಿದ್ದು ಕಿಷನ್. ಟೀಕಿಸುವುದು ಮುಂದುವರೆದರೆ ತಮ್ಮ ಸ್ಥಾನಗಳ ಬಗ್ಗೆ ಅಭದ್ರತೆಯ ಭಾವ ಇಟ್ಟುಕೊಂಡಿರುವ ಆಟಗಾರರ ತಂಡವನ್ನು ಕಟ್ಟಬೇಕಾದೀತು’ ಎಂದು ಚೋಪ್ರಾ ಹೇಳಿದ್ದಾರೆ.
ತಮ್ಮ ವೃತ್ತಿ ಬದುಕಿನಲ್ಲಿ 28ರ ಪ್ರಾಯದ ರಾಹುಲ್, ಓಪನರ್ನಿಂದ ಹಿಡಿದು ಬೇರೆಬೇರೆ ಕ್ರಮಾಂಕಗಳಲ್ಲಿ ಬ್ಯಾಟ್ ಮಾಡಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಅವರು 2 ಶತಕಗಳನ್ನು ಬಾರಿಸಿದ್ದು ಅವರ ಸರಾಸರಿ 41ಕ್ಕಿಂತ ಜಾಸ್ತಿ ಮತ್ತು ಅವರ ಸ್ಟ್ರೈಕ್ ರೇಟ್ 143.67. 2020 ರ ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ ಪಂಜಾಬ್ ಕಿಂಗ್ಸ್ ಟೀಮಿನ ನಾಯಕರಾಗಿರುವ ರಾಹುಲ್ ಗರಿಷ್ಠ ರನ್ಗಳಿಕೆಯ ಹಿರಿಮೆಗೆ ಪಾತ್ರರಾದರು.
ವಿಕೆಟ್ಕೀಪರ್ ಆಗಿಯೂ ರಾಹುಲ್ ಉತ್ತಮ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ರಿಷಭ್ ಪಂತ್ ಅವರನ್ನು ಟೀಮಿನಿಂದ ಡ್ರಾಪ್ ಮಾಡಿದಾಗ ಮತ್ತು ಆಸ್ಟ್ರೇಲಿಯಾ ಪ್ರವಾಸದಲ್ಲಿ ಸೀಮಿತ ಓವರ್ಗಳ ಸರಣಿಗಳಲ್ಲಿ ಅವರು ವಿಕೆಟ್ಕೀಪರ್ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದರು.
If we start asking questions about a runaway match-winner after just two low-scores, we aren’t going to build a team that’ll win the World Cup. If it’s Rahul today, it’ll be Ishan tomorrow…Pant day after. And then…will have a team of insecure players. IMHO. https://t.co/W369A0jxxb
— Aakash Chopra (@cricketaakash) March 15, 2021
ಕರೀಯರ್ನಲ್ಲಿ ಸ್ಥಿರ ಪ್ರದರ್ಶನಗಳನ್ನು ನೀಡುತ್ತಾ ಬಂದಿರುವ ರಾಹುಲ್ ರಾಷ್ಟ್ರೀಯ ತಂಡಕ್ಕೆ ಆಡುವಾಗ ವಿಫಲರಾಗಿರುವ ಸಂದರ್ಭಗಳು ಬಹಳ ಕಡಿಮೆ. ಅಲ್ಲದೆ ಬಹಳ ದಿನಗಳ ನಂತರ ಮೈದಾನಕ್ಕಿಳಿದಿರುವುದು ಫೇಲಾಗಿರುವುದಕ್ಕೆ ಕಾರಣವಾಗಿರಬಹುದು. ಡಿಸೆಂಬರ್ 8ರಂದು ಆಸ್ಟ್ರೇಲಿಯಾದ ವಿರುದ್ಧ ಅಂತರರಾಷ್ಟ್ರೀಯ ಪಂದ್ಯವೊಂದರಲ್ಲಿ ಆಡಿದ ನಂತರ ಅವರು ಮತ್ತೆ ಬ್ಯಾಟ್ ಹಿಡಿದು ಕ್ರೀಸಿಗೆ ಬಂದಿದ್ದು ಮಾರ್ಚ್ 12 ರಂದು, ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟಿ20ಐ ಪಂದ್ಯದಲ್ಲಿ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಸರಣಿಗಳಲ್ಲಿ ಅವರಿಗೆ ಆಡುವ ಇಲೆವೆನ್ನಲ್ಲಿ ಅವಕಾಶ ಸಿಗಲಿಲ್ಲ.
ಮೊದಲೆರಡು ಪಂದ್ಯಗಳಿಗೆ ರೋಹಿತ್ ಶರ್ಮ ಅವರನ್ನು ರೆಸ್ಟ್ ಮಾಡಿಸಲಾಗಿದೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದರು. ಮಂಗಳವಾರದಂದು ನಡೆಯುವ ಮೂರನೇ ಪಂದ್ಯಕ್ಕೆ ಅವರು ರೋಹಿತ್ ಅವರನ್ನು ಆಡಿಸುತ್ತಾರೆಯೇ ಇಲ್ಲವೇ ರಾಹುಲ್ಗೆ ಮತ್ತೊಂದು ಅವಕಾಶ ಕಲ್ಪಿಸುತ್ತಾರೆಯೇ ಅಂತ ಕಾದು ನೋಡಬೇಕು.
ಇದನ್ನೂ ಓದಿ: India vs England: ವೈಯಕ್ತಿಕ ಉದಾರಣೆಯೊಂದಿಗೆ ಟೀಮಿನ ಆತ್ಮವಿಶ್ವಾಸ ಹೆಚ್ಚಿಸಿರುವ ಕೊಹ್ಲಿ
Published On - 5:18 pm, Tue, 16 March 21