ಬೆಂಗಳೂರು: ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಗಲಭೆ ಪ್ರಕರಣದ ಬಳಿಕ ಪರಾರಿಯಾಗಿರುವ ಮಾಜಿ ಮೇಯರ್ ಸಂಪತ್ ರಾಜ್ಗೆ ಹೈಕೋರ್ಟ್ನಲ್ಲಿ ಭಾರೀ ಹಿನ್ನಡೆಯಾಗಿದೆ. ಅವರೀಗ ಎಲ್ಲೇ ಇದ್ರೂ ಪೊಲೀಸರಿಗೆ ಶರಣಾಗಲೇಬೇಕು ಎಂಬಂತಾಗಿದೆ.
ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಗಲಭೆ ಪ್ರಕರಣಕ್ಕೆ ತಡೆಯಾಜ್ಞೆ ಕೋರಿ ಮಾಜಿ ಮೇಯರ್ ಸಂಪತ್ ರಾಜ್ ಅರ್ಜಿ ಸಲ್ಲಿಸಿದ್ದರು. ಆದರೆ ಸಿಸಿಬಿ ಪರ ಎಸ್ ಪಿಪಿ ಪ್ರಸನ್ನಕುಮಾರ್ ಅವರು ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಸಂಪತ್ ರಾಜ್ ಪೊಲೀಸರ ವಿಚಾರಣೆ ತಪ್ಪಿಸಿಕೊಂಡಿದ್ದಾರೆ. ಕೊರೊನಾ ನೆಪ ಹೇಳಿ ಆಸ್ಪತ್ರೆ ಸೇರಿದ್ದರು. 7 ವಾರ ಕಳೆದರೂ ಆಸ್ಪತ್ರೆಯಿಂದ ಹೊರಗೆ ಬಂದಿರಲಿಲ್ಲ. ಕೊರೊನಾ ಮತ್ತೆ ಬಂದಿದೆ ಎಂದೂ ನೆಪ ಹೇಳಿದ್ದರು.
ಈ ಮಧ್ಯೆ, ಪೊಲೀಸರ ಕಣ್ತಪ್ಪಿಸಿ, ಡಿಸ್ ಚಾರ್ಜ್ ಆಗಿದ್ದಾರೆ. ಈ ಬಗ್ಗೆ ಆಸ್ಪತ್ರೆಯವರು ಪೊಲೀಸರಿಗೆ ಮಾಹಿತಿ ನೀಡಿಲ್ಲ. ಈಗ ಸಂಪತ್ ರಾಜ್ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದಾರೆ. ಹಾಗಾಗಿ ಪ್ರಕರಣಕ್ಕೆ ತಡೆ ನೀಡದಂತೆ ಎಸ್ ಪಿಪಿ ಪ್ರಸನ್ನ ಕುಮಾರ್ ಅವರು ಪ್ರತಿ ವಾದ ಮಂಡಿಸಿದರು. ಹಾಗಾಗಿ, ಪ್ರಕರಣಕ್ಕೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನ್ಯಾ.ಸೂರಜ್ ಗೋವಿಂದರಾಜ್ ನಿರಾಕರಿಸಿದ್ದಾರೆ.