ಬೆಂಗಳೂರು: ಬಿಡಿಎನಿಂದ ಮತ್ತೊಂದು ಹೊಸ ಲೇಔಟ್ ನಿರ್ಮಾಣಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಅರ್ಕಾವತಿ ಮುಂದುವರಿದ ಬಡಾವಣೆ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದ್ದು, ಇದಕ್ಕೂ ಅರ್ಕಾವತಿ ಬಡಾವಣೆಯೆಂದು ಹೆಸರಿಡಲು ಸೂಚನೆ ನೀಡಲಾಗಿದೆ. ಅರ್ಕಾವತಿ ಬಡಾವಣೆಗೆ ಹತ್ತಿರವಿರುವ ಗ್ರಾಮಗಳ ಜಮೀನು ಸ್ವಾಧೀನ ಪ್ರಕ್ರಿಯೆಗೆ ಸರ್ಕಾರ ಒಪ್ಪಿಗೆ ನೀಡಿದೆ.
ಕಟ್ಟಿಗೇನಹಳ್ಳಿ, ಕೋಗಿಲು, ಶ್ರೀನಿವಾಸಪುರ, ಬೈಯಪ್ಪನಹಳ್ಳಿ, ಬೆಟ್ಟಹಳ್ಳಿ, ಮಿಟ್ಟಗಾನಹಳ್ಳಿ, ಸಾತನೂರಿನಲ್ಲಿ ಸುಮಾರು 450 ಎಕರೆ 15 ಗುಂಟೆಯಷ್ಟು ಜಮೀನು ಸ್ವಾಧೀನಪಡಿಸಿಕೊಳ್ಳಲು ಆದೇಶಿಸಲಾಗಿದೆ. ಅರ್ಕಾವತಿ ಲೇಔಟ್‌ನಲ್ಲಿ ನಿವೇಶನಗಳ ಅಲಭ್ಯತೆ ಎದುರಾಗಿತ್ತು. ಹೀಗಾಗಿ ಫಲಾನುಭವಿಗಳಿಗೆ, ರೈತರಿಗೆ ನೀಡಲು ನಿವೇಶನಗಳೇ ಇರಲಿಲ್ಲ. ಡಿನೋಟಿಫೈ, ರೀಡೂಗಳಿಂದಾಗಿ ನಿವೇಶನಗಳ ಕೊರತೆ ಇತ್ತು.
ಹೀಗಾಗಿ ಮುಂದುವರಿದ ಬಡಾವಣೆ ನಿರ್ಮಾಣ ಮಾಡಲು ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಬಿಡಿಎ ಪತ್ರ ಬರೆದಿತ್ತು. ಬಡಾವಣೆ ನಿರ್ಮಾಣ ಮಾಡಲು ಸರ್ಕಾರ ಒಪ್ಪಿಗೆ ಹಿನ್ನೆಲೆಯಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲು ಬಿಡಿಎನಿಂದ ಸಿದ್ಧತೆ ನಡೆಸಲಾಗುತ್ತಿದೆ. ಆದರೆ ಲೇಔಟ್‌ಗೆ ರೈತರು ಒಪ್ಪಿಗೆ ನೀಡುವುದು ಕಷ್ಟದ ಮಾತು ಎಂಬ ಸುದ್ದಿ ಕೇಳಿಬರುತ್ತಿದೆ.