ಬೆಂಗಳೂರು: ಅಕ್ರಮ ಸಕ್ರಮ ಯೋಜನೆಯ ಸೋಗಿನಲ್ಲಿ ಪ್ರಾಧಿಕಾರದ ಹೆಸರು ಬಳಸಿ ವಂಚಕರು ಭೂ ಮಾಲೀಕರು ಮತ್ತು ಮನೆ ಮಾಲೀಕರಿಗೆ ದೋಖಾ ನೀಡುತ್ತಿರುವ ಪ್ರಕರಣಗಳು ವರದಿಯಾಗಿದೆ. ಅದರಲ್ಲೂ, ನಾಗರೀಕ ಸೌಲಭ್ಯ ನಿವೇಶನದಾರರು (CA ಸೈಟ್ ಮಾಲೀಕರು), ಮನೆ ಮಾಲೀಕರು ಮತ್ತು ಭೂ ಮಾಲೀಕರನ್ನು ಟಾರ್ಗೆಟ್ ಮಾಡಿ ವಂಚನೆ ಮಾಡಲಾಗಿದೆ ಎಂಬ ಮಾಹಿತಿ BDAಗೆ ಸಿಕ್ಕಿದೆ.
ಪ್ರಾಧಿಕಾರದ ನಕಲಿ ಸೀಲು ಮತ್ತು ಸ್ಟಾಂಪ್ಗಳನ್ನ ಬಳಸುವ ಜೊತೆಗೆ ಅಧಿಕಾರಿಗಳ ಸಹಿಯನ್ನ ಸಹ ನಕಲು ಮಾಡಿ ನಿವೇಶನದಾರರಿಗೆ ವಂಚನೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಆಯುಕ್ತರ ಸೂಚನೆ ಮೇರೆಗೆ ಅಕ್ರಮ ಸಕ್ರಮದಡಿ ನಿಮ್ಮ ಮನೆಯನ್ನ ಸಕ್ರಮಗೊಳಿಸುತ್ತೇವೆ ಅಂತಾ ಹೇಳಿ ಲಕ್ಷ ಲಕ್ಷ ಹಣ ಪಡೆದು ವಂಚಿಸಿರುವುದು ಸಹ ಬೆಳಕಿಗೆ ಬಂದಿದೆ. ಹಾಗಾಗಿ, ಇಂಥ ವಂಚನೆಯ ಬಗ್ಗೆ ಕೆಲವರಿಂದ ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ದೂರು ಸಲ್ಲಿಸಲಾಗಿದೆ.
ಈ ನಿಟ್ಟಿನಲ್ಲಿ BDA ಈ ಕುರಿತು ಸ್ಪಷ್ಟನೆ ನೀಡಿದೆ. ಪ್ರಾಧಿಕಾರ ಈ ರೀತಿಯ ಯಾವುದೇ ಆದೇಶವನ್ನ ಹೊರಡಿಸಿಲ್ಲ. ಇದರ ಬಗ್ಗೆ ನಮ್ಮ ಜಾಗೃತ ದಳದಿಂದ ತನಿಖೆ ನಡೆಸಲಾಗುತ್ತಿದೆ. ಯಾರಿಗಾದರೂ ಈ ರೀತಿ ನೋಟಿಸ್ ಬಂದರೇ ಕೂಡಲೇ ಅಧಿಕಾರಿಗಳನ್ನ ಸಂಪರ್ಕಿಸಿ ಅಂತಾ BDA ಆಯುಕ್ತ ಹೆಚ್.ಆರ್.ಮಹಾದೇವ ಮನವಿ ಮಾಡಿದ್ದಾರೆ.