ರಾಮನಗರ: ಚನ್ನಪಟ್ಟಣ ನಗರದಲ್ಲಿ ಕರಡಿಯೊಂದು ಪ್ರತ್ಯಕ್ಷಗೊಂಡು, ಮಹಿಳೆ ಮೇಲೆ ಭೀಕರ ದಾಳಿ ನಡೆಸಿದೆ. ಚನ್ನಪಟ್ಟಣ ನಗರದ ಸುಣ್ಣದ ಕೇರಿಯಲ್ಲಿ ಬೆಳಗಿನ ಜಾವ 3 ಗಂಟೆಗೆ ಸುಮಾರಿಗೆ ಕರಡಿ ಕಾಣಿಸಿಕೊಂಡಿದೆ. ಇಡೀ ನಗರ ಪ್ರದಕ್ಷಿಣೆ ಹಾಕಿರುವ ಆ ಕರಡಿ ಬೆಳಗಿನ ಜಾವ ಆರು ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಬಂದ ನಗರಸಭಾ ಮಾಜಿ ಸದಸ್ಯೆ ಸಾಕಮ್ಮ (೬೫) ಎಂಬ ವೃದ್ಧೆಯ ಮೇಲೆ ಕಾಂಪೌಂಡ್ ನಲ್ಲಿಯೇ ಹಠಾತ್ ದಾಳಿ ನಡೆಸಿದೆ.
ಕಾಂಪೌಂಡ್ ನಲ್ಲಿ ಅಡಗಿ ಕುಳಿತಿದ್ದ ಕರಡಿ ಏಕಾಏಕಿ ಮಹಿಳೆಯ ಮೇಲೆ ಎರಗಿದೆ. ಅವರ ಮುಖವನ್ನು ಸಂಪೂರ್ಣವಾಗಿ ಪರಚಿ ಹಾಕಿದೆ. ಸಹಾಯಕ್ಕೆ ತೆರಳಿದ ಅವರ ಪುತ್ರ ಸುಧೀರ್ (೪೦) ಮೇಲೆ ಸಹ ದಾಳಿ ನಡೆಸಿ, ಗಾಯಗೊಳಿಸಿದೆ. ಸಾಕಮ್ಮನವರಿಗೆ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸಂಜಯ ಗಾಂಧಿ ಆಸ್ಪತ್ರೆಗೆ ಕಳುಹಿಸಿಲಾಗಿದೆ.
ಕರಡಿ ದಾಳಿಯಿಂದ ಎಚ್ಚೆತ್ತುಕೊಂಡ ಸುತ್ತಮುತ್ತಲ ಜನರ ಕೂಗು ಜೋರಾದಂತೆ ಕರಡಿ ಪರಾರಿಯಾಗಿದೆ. ಘಟನೆ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 1:13 pm, Wed, 27 May 20