‘ಊರು ತುಂಬಾ ಕುರುಬರೇ ಇರೋದು! ಆದ್ರೆ ಗ್ರಾ.ಪಂ. ಚುನಾವಣೆಯಲ್ಲಿ ಈಶ್ವರಪ್ಪ ಅನ್ಯಾಯ ಮಾಡಿದರು!’ ಗ್ರಾಮಸ್ಥರ ಆಕ್ರೋಶ
ಎಸ್‌ಸಿ ಸಮುದಾಯವೇ ಇಲ್ಲದಿರುವ ಬೀರಯ್ಯನಪಾಳ್ಯ ಗ್ರಾಮಕ್ಕೆ ಎಸ್‌ಸಿ ಮಹಿಳಾ ಮೀಸಲಾತಿ ಪ್ರಕಟಿಸಿರುವುದು ಗ್ರಾಮಸ್ಥರ ಬೇಸರಕ್ಕೆ ಕಾರಣವಾಗಿದೆ. ಹಾಗೂ ಈ ಬಾರಿಯ ಚುನಾವಣೆಗೆ ಬೇರೆ ಗ್ರಾಮದಿಂದ ಅಭ್ಯರ್ಥಿಯನ್ನು ಕರೆತರಬೇಕಿದೆ.
ಸ್ವಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಊರಿನ ಯಾರೊಬ್ಬರೂ ಮೀಸಲಾತಿಗೆ ಬಾರದ ಕಾರಣ ಬೇರೊಂದು ಗ್ರಾಮದ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲು ಸ್ಥಾನ ನೀಡುವ ಮೂಲಕ ಸಚಿವ ಈಶ್ವರಪ್ಪ ಮತ್ತು ಜಿಲ್ಲಾಧಿಕಾರಿ ರವೀಂದ್ರ ತಮ್ಮದೇ ಸಮುದಾಯಕ್ಕೆ ಮೋಸ ಮಾಡಿದ್ದಾರೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಬೀರಯ್ಯನಪಾಳ್ಯ ಗ್ರಾಮದ ತುಂಬಾ ಕುರುಬ ಸಮುದಾಯ ಮನೆಗಳಿದ್ದು ಒಟ್ಟು 438 ರಿಂದ 450 ಮತದಾರರಿದ್ದಾರೆ. ಪ್ರತಿವರ್ಷ ಬೀರಯ್ಯನಪಾಳ್ಯ ಗ್ರಾಮಕ್ಕೆ ಸಾಮಾನ್ಯ ಅಥವಾ 2ಎ ಅಡಿಯಲ್ಲಿ ಗ್ರಾಮ ಪಂಚಾಯತಿ ಚುನಾವಣೆಗೆ ಮೀಸಲಾತಿ ಪ್ರಕಟಿಸಲಾಗುತ್ತಿತ್ತು.
ಆದ್ರೆ ಈ ವರ್ಷ ಎಸ್‌ಸಿ ಸಮುದಾಯವೇ ಇಲ್ಲದಿರುವ ಗ್ರಾಮಕ್ಕೆ ಎಸ್‌ಸಿ ಮಹಿಳಾ ಮೀಸಲಾತಿ ಪ್ರಕಟಿಸಿರುವುದು ಗ್ರಾಮಸ್ಥರ ಬೇಸರಕ್ಕೆ ಕಾರಣವಾಗಿದೆ. ಹಾಗೂ ಈ ಬಾರಿಯ ಚುನಾವಣೆಗೆ ಬೇರೆ ಗ್ರಾಮದಿಂದ ಅಭ್ಯರ್ಥಿಯನ್ನು ಕರೆತರಬೇಕಿದೆ.
ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ರವೀಂದ್ರ ಸಹ ಕುರುಬ ಸಮುದಾಯದವರಾಗಿದ್ದು, ಆಡಳಿತ ಯಂತ್ರವೇ ತಮ್ಮ ಪರವಾಗಿ ನಿಲ್ಲದೇ ನಮ್ಮ ಸಮುದಾಯಕ್ಕೆ ದ್ರೋಹ ಮಾಡಿದೆ ಎಂದು ಬೀರಯ್ಯನಪಾಳ್ಯ ಗ್ರಾಮದ ಚುನಾವಣಾ ಆಕಾಂಕ್ಷಿಗಳು ಹಾಗೂ ಗ್ರಾಮಸ್ಥರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಬೀರಯ್ಯನಪಾಳ್ಯ ಗ್ರಾಮವು ಸಾಮಾಜಿಕ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದು ಸ್ವ ಗ್ರಾಮದಲ್ಲಿ ಚುನಾಯಿತ ಸದಸ್ಯರಿದ್ದರೆ ಅಭಿವೃದ್ದಿ ಮಾಡಬಹುದಾಗಿದೆ. ಆದರೆ ನೆರೆ ಗ್ರಾಮದ ಸದಸ್ಯರನ್ನ ಆಯ್ಕೆ ಮಾಡಿದರೆ ಪ್ರತಿಯೊಂದು ಕೆಲಸಕ್ಕೂ ನೆರೆ ಗ್ರಾಮಕ್ಕೆ ಅಲೆಯಬೇಕಿದೆ.
ಅಷ್ಟೆ ಅಲ್ಲದೆ ನಮ್ಮ ಊರಿನ ಅಭಿವೃದ್ದಿ ವಿಚಾರದಲ್ಲಿ ನೆರೆ ಗ್ರಾಮದವರಿಗೆ ಆಸಕ್ತಿ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಅಭಿವೃದ್ದಿ ಕುಂಟಿತವಾದರೆ ಈಗ ಪ್ರಕಟವಾಗಿರುವ ಮೀಸಲಾತಿ ಪಟ್ಟಿ ಹಾಗೂ ಪಟ್ಟಿ ಹೊರಡಿಸಿರುವ ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾಡಳಿತವೇ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published On - 4:53 pm, Tue, 8 December 20