ಕನ್ನಡಿಗರ ಮನೆಮಾತಾಗಿರುವ ಟಿವಿ9 ಕನ್ನಡ ಸುದ್ದಿವಾಹಿನಿಗೆ 14 ವರ್ಷಗಳ ಸಾರ್ಥಕತೆ

ಉತ್ತಮ ಸಮಾಜಕ್ಕಾಗಿ ಎಂಬ ಸಂದೇಶ ಹೊತ್ತು ಮನೆಮನೆಗಳಲ್ಲಿ ಬೆಳಗಿದ ಟಿವಿ9 ಕನ್ನಡ ಸುದ್ದಿವಾಹಿನಿ ಮೊದಲ ಬಾರಿಗೆ ಕರ್ನಾಟಕದ ಜನತೆಗೆ ಕ್ಷಣಕ್ಷಣದ ಸುದ್ದಿ ಕೊಡೋ ಮಹತ್ವದ ಜವಾಬ್ದಾರಿ ವಹಿಸಿಕೊಂಡಿತ್ತು.

ಕನ್ನಡಿಗರ ಮನೆಮಾತಾಗಿರುವ ಟಿವಿ9 ಕನ್ನಡ ಸುದ್ದಿವಾಹಿನಿಗೆ 14 ವರ್ಷಗಳ ಸಾರ್ಥಕತೆ
sadhu srinath

|

Dec 09, 2020 | 10:21 AM

ಅದು 2006ರ ಡಿಸಂಬರ್ 9. ಕರುನಾಡಿನ ಮೊದಲ 24X7 ಸುದ್ದಿವಾಹಿನಿ ಲೋಕಾರ್ಪಣೆಗೊಂಡ ದಿನ. ಕರ್ನಾಟಕದ ಜನತೆ ಮುಂಜಾನೆ ಎದ್ದು ತಮ್ಮ ನಿತ್ಯ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕಾದವರು ಟಿವಿ ಮುಂದೆ ಕೂರುವಂತಹ ಸನ್ನೀವೇಶ ನಿರ್ಮಾಣ ಆಗಿದ್ದು ಅಂದಿನಿಂದ. ಉತ್ತಮ ಸಮಾಜಕ್ಕಾಗಿ ಎಂಬ ಸಂದೇಶ ಹೊತ್ತು ಮನೆಮನೆಗಳಲ್ಲಿ ಬೆಳಗಿದ ಟಿವಿ9 ಕನ್ನಡ ಸುದ್ದಿವಾಹಿನಿ ಮೊದಲ ಬಾರಿಗೆ ಕರ್ನಾಟಕದ ಜನತೆಗೆ ಕ್ಷಣಕ್ಷಣದ ಸುದ್ದಿ ಕೊಡೋ ಮಹತ್ವದ ಜವಾಬ್ದಾರಿ ವಹಿಸಿಕೊಂಡಿತ್ತು.

ಅದುವರೆಗೂ ಹಿಂದಿನ ದಿನದ ಸುದ್ದಿಯನ್ನು ಮರುದಿನ ತಿಳಿದುಕೊಳ್ಳುತ್ತಿದ್ದ ಜನರಿಗೆ ಜಗತ್ತಿನ ಆಗುಹೋಗುಗಳನ್ನು ಕ್ಷಣಾರ್ಧದಲ್ಲಿ ಟಿವಿ9 ಮನೆಬಾಗಿಲಿಗೆ ತಲುಪಿಸಲಾರಂಭಿಸಿತು. ಕನ್ನಡಿಗರಿಗೂ ಕೂಡ ಇದು ಹೊಸ ಅನುಭವ ಆಗಿತ್ತು. ತಮ್ಮ ಸುತ್ತಮುತ್ತಲಿನಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಆ ಕ್ಷಣದಲ್ಲೇ ನೇರ ಪ್ರಸಾರದ ಮೂಲಕ ಮನಮುಟ್ಟಿಸಿದ ಟಿವಿ9 ಆ ಕ್ಷಣದಿಂದಲೇ ಕನ್ನಡಿಗರ ಮನೆಮಾತಾಯಿತು.

ರಹಸ್ಯ ಕಾರ್ಯಾಚರಣೆ, ನಿರಂತರ ಅಭಿಯಾನ, ನಿಖರ ವಿಶ್ಲೇಷಣೆ, ಸರಳ ನಿರೂಪಣೆ, ಆಡು ಭಾಷೆಯ ಬಳಕೆ. ಪಕ್ಕಾ ಸುದ್ದಿ, ಪ್ರಾಮಾಣಿಕ ವರದಿ, ಮನಮುಟ್ಟುವಂತಹ ಪ್ರಮೋ… ಇವು ಟಿವಿ9ನ ಬ್ರಾಂಡ್​. ಹೀಗಾಗಿ ಪ್ರಸಾರ ಆರಂಭಿಸಿದ ಮೊದಲ ವಾರದಿಂದಲೇ ಸುದ್ದಿವಾಹಿನಿ ವಿಭಾಗದಲ್ಲಿ ನಂಬರ್1 ಸ್ಥಾನ ಪಡೆದುಕೊಂಡ ಟಿವಿ9 ಸತತ 14 ವರ್ಷಗಳಿಂದ ವೀಕ್ಷಕರ ಮನದಲ್ಲೂ, ಟಿಆರ್​ಪಿಯಲ್ಲೂ ನಂಬರ್1 ಸ್ಥಾನದಲ್ಲೇ ಮುಂದುವರೆದಿದೆ. ಹಾಗಾಂತ ಟಿವಿ9ನ ಸುದೀರ್ಘ ಪಯಣದ ಹಾದಿ ಅಷ್ಟು ಸುಲಭವಾಗಿರಲಿಲ್ಲ.

ರಾಜಕೀಯ ದೊಂಬರಾಟ, ಭ್ರಷ್ಟಚಾರ, ಆಡಳಿತ ವರ್ಗದ ನಿರ್ಲಕ್ಷ್ಯದ ವಿರುದ್ಧ ಸಮರ ಸಾರಿದ ಟಿವಿ9 ಗೆ ಅನೇಕರು ತೊಂದರೆ ಕೊಟ್ಟದ್ದು ಸುಳ್ಳಲ್ಲ. ಸ್ಟುಡಿಯೋಗೆ ನುಗ್ಗಿ ಮಾಡಿದ ದಾಂಧಲೆ, ನ್ಯಾಯಾಲಯದಲ್ಲಿ ಹೂಡಿದ ಮಾನನಷ್ಟ ಮೊಕದ್ದಮೆ, ಪೊಲೀಸ್ ಠಾಣೆಯಲ್ಲಿ ಹೂಡಿದ ಕ್ರಿಮಿನಲ್ ಮೊಕದ್ದಮೆ… ಹೀಗೆ ನಾನಾ ರೀತಿಯಲ್ಲಿ ರಾಜಕೀಯ ಪ್ರಭಾವಿಗಳು, ಭ್ರಷ್ಟ ಅಧಿಕಾರಿಗಳು, ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳು ನಿರಂತರ ಕಿರುಕುಳ ಕೊಟ್ಟಿದ್ದಾರೆ.

ಆದರೆ ವೃತ್ತಿಪರ ಪತ್ರಕರ್ತರಿಂದಲೇ ಕೂಡಿದ್ದ ಟಿವಿ9 ಈ ಎಲ್ಲಾ ಕಷ್ಟ ನಷ್ಟಗಳನ್ನು, ಇತರ ಸುದ್ದಿವಾಹಿನಿಗಳ ಪೈಪೋಟಿಯನ್ನು ಮೆಟ್ಟಿನಿಂತು ಇಂದಿಗೂ ಕರ್ನಾಟಕದ ಜನಪ್ರಿಯ ಸುದ್ದಿವಾಹಿನಿಯಾಗಿ ಮುಂದುವರೆದಿದೆ.

ಸುದ್ದಿವಾಹಿನಿ ಎಂದರೆ ಕೇವಲ ಸುದ್ದಿ ತಲಪಿಸುವುದಷ್ಟೆ ಅಲ್ಲ… ಸಮಾಜದ ಸಮಸ್ಯೆಗೂ ಸ್ಪಂದಿಸುವ ಮಾತೃಹೃದಯದ ಸುದ್ದಿಸಂಸ್ಥೆ ಅನ್ನೋದನ್ನ ಕಳೆದ 14 ವರ್ಷಗಳಲ್ಲಿ ಟಿವಿ9 ತೋರಿಸಿಕೊಟ್ಟಿದೆ. ಅತಿವೃಷ್ಟಿ, ಜಲಪ್ರಳಯವಾದಾಗ ಮೊದಲು ಸಂತ್ರಸ್ಥರ ನೆರವಿಗೆ ಧಾವಿಸುತ್ತಿದ್ದದ್ದು ಟಿವಿ9 ಕನ್ನಡ ಸುದ್ದಿವಾಹಿನಿ.

ಉತ್ತರ ಕರ್ನಾಟಕದಲ್ಲಿ ದಾನಿಗಳ ನೆರವಿನಿಂದ ಸಂತ್ರಸ್ಥರಿಗೆ 500ಕ್ಕೂ ಹೆಚ್ಚು ಮನೆಕಟ್ಟಿಕೊಡಲಾಗಿದೆ. ಕೊಡಗಿನಲ್ಲಿ ಭೂಕುಸಿತವುಂಟಾದಾಗ ಅಲ್ಲಿನ 100ಕ್ಕೂ ಹೆಚ್ಚು ಮಕ್ಕಳನ್ನು ದತ್ತು ತೆಗೆದುಕೊಂಡು ಅವರಿಗೆ ಉಚಿತ ಶಿಕ್ಷಣದ ವ್ಯವಸ್ಥೆ ಕಲ್ಪಿಸಲಾಗಿದೆ. ಕರಾವಳಿಯಲ್ಲಿ ಎಂಡೋ ಸಲ್ಫಾನ್​ನಿಂದ ಸಮಸ್ಯೆಯಾದವರಿಗೆ ಆಸ್ಪತ್ರೆ, ನೆರವು ನೀಡಲಾಗಿದೆ. ಹೀಗೆ ಪ್ರತಿಬಾರಿಯೂ ಕರ್ನಾಟಕ ಮತ್ತು ನೆರೆಯ ರಾಜ್ಯಗಳಲ್ಲಿ ನೆರೆ ಸಮಸ್ಯೆಯಾದಾಗ ಜನರಿಂದ ಆಹಾರ, ಬಟ್ಟೆ, ದಿನನಿತ್ಯ ಉಪಯೋಗಿಸುವ ವಸ್ತುಗಳನ್ನು ಸಂಗ್ರಹಿಸಿ ಸಂತ್ರಸ್ಥರಿಗೆ ತಲುಪಿಸಿದೆ.

ಟಿವಿ9 ಕಳೆದ 14 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸಾಮಾಜಿಕ ಕೆಲಸಗಳಿಗೆ ಸಾಕಷ್ಟು ಬಾರಿ ಮನ್ನಣೆ, ಗೌರವ ಸಂದಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಜೊತೆಗೆ ದೇಶದ ಪತ್ರಿಕೋದ್ಯಮ ಕ್ಷೇತ್ರದ ಆಸ್ಕರ್​ ಎಂದೇ ಖ್ಯಾತಿ ಪಡೆದಿರುವ ರಾಮನಾಥ ಗೋಯಂಕಾ ಪ್ರಶಸ್ತಿ, ಎನ್ಬಾ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರವಾಗಿದೆ.

ಬದಲಾವಣೆ ಜಗದ ನಿಯಮ. ಅದರಂತೆ ಜನರ ನಾಡಿಮಿಡಿತವನ್ನು ಅರಿತುಕೊಂಡು ಕಾಲಕ್ಕೆ ಕಾಲಕ್ಕೆ ಅಪ್​ಡೇಟ್​ ಆಗುತ್ತಾ ಸಾಗಿರುವ ಟಿವಿ9ಗೆ ಈಗ 14ರ ಸಂವತ್ಸರ. ಇಷ್ಟು ವರ್ಷ ಕಳೆದರೂ ವೀಕ್ಷಕರಿಗೆ ಟಿವಿ9 ಸುದ್ದಿ ವಾಹಿನಿಯಲ್ಲಿ ಅದೇ ವಿಶ್ವಾಸ, ಅದೇ ಭರವಸೆ. ಮುಂದೆಯೂ ಇದೇ ವಿಶ್ವಾಸ ಮತ್ತು ಅದೇ ಭರವಸೆಯನ್ನ ಉಳಿಸಿಕೊಳ್ಳುವ ಪಣತೊಟ್ಟಿದೆ ವೃತ್ತಿಪರ ಪತ್ರಕರ್ತರ ತಂಡ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada