ರಿಷಭ್ ಪಂತ್ ಮತ್ತು ಇಶಾನ್ ಕಿಷನ್ ಯಾರು ಹಿತವರು ನಿಮಗೆ ಈ ಇಬ್ಬರೊಳಗೆ? ಇಂಥದೊಂದು ಚರ್ಚೆ ಶುರುವಾಗಿರೋದು ನಿಮ್ಮ ಗಮನಕ್ಕೂ ಬಂದಿರಬಹುದು. ಕ್ರಿಕೆಟ್ ಆಟವೇ ಹಾಗೆ. ಹೋಲಿಕೆಗಳು ಈ ಆಟದ ಅವಿಭಾಜ್ಯ ಅಂಗ. ಅಂದಕಾಲತ್ತಿಲ್ ನಡೆದುಕೊಂಡು ಬಂದಿರುವ ಪ್ರಕ್ರಿಯೆ ಇದು. ಪಂತ್ ಮತ್ತು ಕಿಷನ್ ಒಂದೇ ಕೆಟೆಗರಿಗೆ ಸೇರಿದ ಆಟಗಾರರು, ಅಂದರೆ ವಿಕೆಟ್ಕೀಪರ್/ಬ್ಯಾಟ್ಸ್ಮನ್ಗಳು. ಬ್ಯಾಟಿಂಗ್ ವಿಷಯಕ್ಕೆ ಬಂದರೆ ಇಬ್ಬರೂ ಚೆಂಡಿರೋದೆ ಚಚ್ಚಲು ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವವರು. ವಿಕೆಟ್ ಹಿಂದೆ ಸಹ ಅವರಲ್ಲಿ ಉಲ್ಲೇಖಿಸಬಹುದಾದ ನ್ಯೂನತೆಗಳಿಲ್ಲ. ಭಾರತದ ಮಾಜಿ ವಿಕೆಟ್ಕೀಪರ್/ಬ್ಯಾಟ್ಸ್ಮನ್ ಮತ್ತು ಅಯ್ಕೆ ಸಮಿತಿಯ ಮಾಜಿ ಸದಸ್ಯ ಸಬಾ ಕರೀಮ್ ಅವರ ಪ್ರಕಾರ ಪಂತ್ ಮತ್ತು ಕಿಷನ್ ಇಬ್ಬರೂ ಕ್ರಿಕೆಟ್ನ ಮೂರು ಆವೃತ್ತಿಗಳಿಗೆ ಸೂಟ್ ಆಗುವ ಆಟಗಾರರು. ಟೆಸ್ಟ್ ಕ್ರಿಕೆಟ್ನಲ್ಲಿ ಪಂತ್ ತೋರಿದ ಪರಾಕ್ರಮಶಾಲಿ ಬ್ಯಾಟಿಂಗ್ ಪ್ರದರ್ಶನ ಮತ್ತು ತಾನಾಡಿದ ಮೊದಲ ಪಂದ್ಯದಲ್ಲೇ ಭರ್ಜರಿ ಅರ್ಧ ಶತಕ ಬಾರಿಸಿದ ಕಿಷನ್ ಅವರ ಬ್ಯಾಟಿಂಗ್ ನೋಡಿದ ನಂತರವೇ ಕರೀಮ್ ಈ ಅಭಿಪ್ರಾಯ ತಳೆದಿದ್ದಾರೆ.
ಸುದ್ದಿಸಂಸ್ಥೆಯೊಂದು ನಡೆಸಿದ ಚರ್ಚೆಯಲ್ಲಿ ಪಾಲ್ಗೊಂಡು ಮಾತಾಡಿದ ಕರೀಮ್; ಪಂತ್ ಮತ್ತು ಕಿಷನ್ ಇಬ್ಬರೂ ಮ್ಯಾಚ್ವಿನ್ನರ್ಗಳು ಮತ್ತು ಇಂಥ ಪ್ರಚಂಡ ಯುವ ಪ್ರತಿಭೆಗಳನ್ನು ಪಡೆದಿರುವ ಭಾರತ ಧನ್ಯ ಎಂದು ಹೇಳಿದರು. ‘ತಾವು ಮ್ಯಾಚ್ವಿನ್ನರ್ಗಳೆಂದು ಸಾಬೀತು ಮಾಡಲು ಇಬ್ಬರೂ ಪ್ರಯತ್ನಿಸಿದ್ದಾರೆ. ಹಿಂದೆ, ಪಂತ್ ಈ ಅಂಶವನ್ನು ಟೆಸ್ಟ್ಗಳಲ್ಲಿ ಪ್ರೂವ್ ಮಾಡಿ ಸೀಮಿತ ಓವರ್ಗಳ ಕ್ರಿಕೆಟ್ಗೆ ವಾಪಸ್ಸಾದರು. ಈಗ ಕಿಷನ್ ತನಗೆ ದೊರೆತ ಮೊದಲ ಅವಕಾಶದಲ್ಲೇ ಪ್ರತಿಭೆಯನ್ನು ಮೆರೆದಿದ್ದಾರೆ, ಇಬ್ಬರ ಮೈಂಡ್ಸೆಟ್ ಒಂದೇ ರೀತಿಯಾಗಿದೆ’ ಎಂದು ಕರೀಮ್ ಹೇಳಿದರು.
‘ಕಿರು ಆವೃತ್ತಿಯ ಕ್ರಿಕೆಟ್ನಲ್ಲಿ ಇಶಾನ್ ಕಿಷನ್ ಮತ್ತು ರಿಷಭ್ ಪಂತ್ರಂಥ ಪಂದ್ಯ ಗೆದ್ದುಕೊಡಬಲ್ಲ ಸಾಮರ್ಥ್ಯದ ಆಟಗಾರರು ಭಾರತಕ್ಕೆ ಲಭ್ಯರಿರುವುದು ಅದೃಷ್ಟವೆಂದೇ ಹೇಳಬೇಕು. ಮುಂಬರುವ ದಿನಗಳಲ್ಲಿ ಇವರಿಬ್ಬರು, ಎಲ್ಲ ಮೂರು ಫಾರ್ಮಾಟ್ಗಳಲ್ಲೂ ಭಾರತವನ್ನು ಪ್ರತಿನಿಧಿಸಲಿದ್ದಾರೆನ್ನುವ ಭರವಸೆ ನನಗಿದೆ,’ ಎಂದು ಕರೀಮ್ ಹೇಳಿದರು.
‘2016ರಲ್ಲಿ ಅಂಡರ್-19 ವಿಶ್ವಕಪ್ನಲ್ಲಿ ಭಾಗವಹಿಸಿದ ಭಾರತದ ಎಳೆಯರ ತಂಡದ ಭಾಗವಾಗಿದ್ದ ಪಂತ್ ಮತ್ತು ಕಿಷನ್ ಆ ಟೂರ್ನಿಯಲ್ಲಿ ತೋರಿದ ಅಪ್ರತಿಮ ಪ್ರದರ್ಶನಗಳಿಂದ ಸೀನಿಯರ್ ಟೀಮಿನಲ್ಲಿ ಆಡುವ ಅರ್ಹತೆ ಗಿಟ್ಟಿಸಿದ್ದಾರೆ. ಸದರಿ ಟೂರ್ನಿಯಲ್ಲಿ ಕಿಷನ್ ತಂಡವನ್ನು ಮುನ್ನಡೆಸಿದ್ದರೆ, ಪಂತ್ ಬ್ಯಾಟ್ನಿಂದ ಉತ್ತಮ ಪ್ರದರ್ಶನಗಳನ್ನು ನೀಡಿದ್ದರು. ಕಿರಿ ವಯಸ್ಸಿನಲ್ಲಿ ಪಡೆದುಕೊಂಡ ಅನುಭವವೇ ಅವರು ಅಂತರರಾಷ್ಟ್ರೀಯ ಕ್ರಿಕೆಟ್ನ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳಲು ನೆರವಾಗಿದೆ ಎಂದು ಕರೀಮ್ ಹೇಳಿದರು.
‘ಇಶಾನ್ ಕಿಷನ್ ಮತ್ತು ರಿಷಬ್ ಪಂತ್ ಇಬ್ಬರೂ 2016ರ ಅಂಡರ್-19 ವಿಶ್ವಕಪ್ನಲ್ಲಿ ಆಡಿದ್ದಾರೆ. ಹಾಗಾಗಿ ಅವರಿಗೆ ಭದ್ರವಾದ ಅಡಿಪಾಯ ಸಿಕ್ಕಿದೆ. ಅಂತರರಾಷ್ಟ್ರೀಯ ಕ್ರಿಕೆಟ್ನ ಹೊಣೆಗಾರಿಕೆಗಳನ್ನು ಅವರು ಅರ್ಥಮಾಡಿಕೊಂಡಿದ್ದಾರೆ ಮತ್ತು ತಮ್ಮ ಸಾಮರ್ಥ್ಯವನ್ನು ಹೇಗೆ ಸಾಬೀತು ಮಾಡಬೇಕೆನ್ನುವ ಅಂಶವನ್ನೂ ತಿಳಿದುಕೊಂಡಿದ್ದಾರೆ’ ಎಂದು ಕರೀಮ್ ಹೇಳಿದರು. ಯುವ ಆಟಗಾರನ್ನು ಹಿಂದಿನ ಗ್ರೇಟ್ ಆಟಗಾರರಿಗೆ ಹೋಲಿಸುವುದು ಭಾರತದಲ್ಲಿ ಅನಿವಾರ್ಯ, ಪಂತ್ ಹಾಗೂ ಕಿಷನ್ಗೆ ಅದರ ಬಗ್ಗೆ ಅರಿವಿದೆ ಎಂದು ಕರೀಮ್ ಹೇಳುತ್ತಾರೆ.
‘ನಿರ್ಭೀತಿಯ ಮನೋಭಾವ, ಬಿಗ್ ಹಿಟ್ಟಿಂಗ್ ಮತ್ತು ವಿಕೆಟ್ಗಳ ಹಿಂದೆ ತೋರುವ ಪ್ರದರ್ಶನಗಳಿಂದ ಅವರನ್ನು ಎಂ.ಎಸ್. ಧೋನಿಯೊಂದಿಗೆ ಹೋಲಿಸಲಾಗುತ್ತಿದೆ. ಇದಕ್ಕಿಂತ ದೊಡ್ಡ ಸಾಧನೆ ಅವರಿಗೆ ಮತ್ತೊಂದಿಲ್ಲ. ಮೈದಾನದಲ್ಲಿ ಕೆಚ್ಚೆದೆಯಿಂದ ಆಡಿ ಡೆವಿಲ್-ಮೇ-ಕೇರ್ ಧೋರಣೆ ಪ್ರದರ್ಶಿಸುವ ಪಂತ್ ಮತ್ತು ಕಿಷನ್ ಟೀಮಿಗೆ ತಾವು ಯಾವ ರೀತಿಯ ಸೇವೆ ಒದಗಿಸಬೇಕು ಅನ್ನುವುದನ್ನು ಗ್ರಹಿಸಿಕೊಂಡು ಲೆಕ್ಕಾಚಾರದ ರಿಸ್ಕ್ಗಳೊಂದಿಗೆ ಬೆರಗು ಹುಟ್ಟಿಸುವ ಆಕ್ರಮಣಶೀಲತೆಯನ್ನು ಪ್ರದರ್ಶಿಸುತ್ತಿರುವುದು ಮನಸ್ಸಿಗೆ ಮುದ ನೀಡುತ್ತದೆ’ ಎಂದು ಕರೀಮ್ ಹೇಳಿದ್ದಾರೆ.
ಇದನ್ನೂ ಓದಿ: India vs England: ರೋಹಿತ್ ಆಡದಿರುವುದು ಬ್ರೇಕಿಂಗ್ ನ್ಯೂಸ್ ಎಂದ ಪಾರ್ಥೀವ್ ಪಟೇಲ್
Published On - 5:11 pm, Tue, 16 March 21