India vs England: ರೋಹಿತ್ ಆಡದಿರುವುದು ಬ್ರೇಕಿಂಗ್ ನ್ಯೂಸ್ ಎಂದ ಪಾರ್ಥೀವ್ ಪಟೇಲ್
ಶಿಖರ್ ಮೂರನೇ ಆಪ್ಷನ್ ಎಂದು ಖುದ್ದು ಕೊಹ್ಲಿಯೇ ಗುರುವಾರದಂದು ಹೇಳಿದ್ದರು. ಕೊಹ್ಲಿಯ ನಿರ್ಧಾರವನ್ನು ಭಾರತದ ಮಾಜಿ ವಿಕೆಟ್ಕೀಪರ್/ಬ್ಯಾಟ್ಸ್ಮನ್ ಪಾರ್ಥೀವ್ ಪಟೇಲ್ ಬ್ರೇಕಿಂಗ್ ನ್ಯೂಸ್ ಎಂದು ಬಣ್ಣಿಸಿದ್ದಾರೆ.
ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅಹಮದಾಬಾದನಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಟಾಸ್ ಸೋತ ನಂತರ ಆಡಲಿರುವ ಆಟಗಾರರ ಹೆಸರನ್ನು ಪ್ರಕಟಿಸಿದಾಗ ಎಲ್ಲರಿಗೂ ಆಶ್ಚರ್ಯ ಕಾದಿತ್ತು. ಅರಂಭ ಅಟಗಾರ ರೋಹಿತ್ ಶರ್ಮ ಅವರನ್ನು ಮೊದಲಿನ ಎರಡು ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿದೆ ಅಂತ ಅವರು ಹೇಳಿದಾಗ ಮನೆಗಳಲ್ಲಿ ಕೂತು ಟಿವಿ ವೀಕ್ಷಿಸುತ್ತಿದ್ದ ಕ್ರಿಕೆಟ್ ಪ್ರೇಮಿಗಳಿಗೂ ಶಾಕ್ ಆಯಿತು. ಯಾಕೆಂದರೆ, ಕಳೆದೆರಡು ದಿಗಳಿಂದ ಅವರು ಭಾರತದ ಇನ್ನಿಂಗ್ಸ್ ರೋಹಿತ್ ಮತ್ತು ಕರ್ನಾಟಕದ ಕೆ ಎಲ್ ರಾಹುಲ್ ಆರಂಭಿಸಲಿದ್ದಾರೆ ಅಂತ ಹೇಳುತ್ತಲೇ ಬಂದಿದ್ದರು. ಆದರೆ ಏಕಾಏಕಿ ಅವರು ವಿಶ್ರಾಂತಿ ಅಂತ ಘೋಷಿಸಿದಾಗ ಏನೋ ಎಡಟವಟ್ಟಾಗಿದೆ ಎಂಬ ಭಾವನೆ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಮೂಡಿದ್ದು ಸುಳ್ಳಲ್ಲ. ರೋಹಿತ್ ಅವರ ಸ್ಥಾನದಲ್ಲಿ ಎಡಚ ಶಿಖರ್ ಧವನ್, ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸಿದರು.
ಶಿಖರ್ ಮೂರನೇ ಆಪ್ಷನ್ ಎಂದು ಖುದ್ದು ಕೊಹ್ಲಿಯೇ ಗುರುವಾರದಂದು ಹೇಳಿದ್ದರು. ಕೊಹ್ಲಿಯ ನಿರ್ಧಾರವನ್ನು ಭಾರತದ ಮಾಜಿ ವಿಕೆಟ್ಕೀಪರ್/ಬ್ಯಾಟ್ಸ್ಮನ್ ಪಾರ್ಥೀವ್ ಪಟೇಲ್ ಬ್ರೇಕಿಂಗ್ ನ್ಯೂಸ್ ಎಂದು ಬಣ್ಣಿಸಿದ್ದಾರೆ. ‘ಇಂದಿನ ಪಂದ್ಯದಲ್ಲಿ ರೋಹಿತ್ ಆಡದಿರುವುದು ನಿಜಕ್ಕೂ ಬ್ರೇಕಿಂಗ್ ನ್ಯೂಸ್. ಆದರೆ ಅದು ಶಿಖರ್ ಧವನ್ಗೆ ಆಡುವ ಅವಕಾಶ ಕಲ್ಪಿಸಿದೆ. ದೇಶೀಯ ಕ್ರಿಕೆಟ್ನಲ್ಲಿ ಅವರು ಉತ್ತಮ ಪ್ರದರ್ಶನಗಳನ್ನು ನೀಡುತ್ತಿದ್ದಾರೆ,’ ಎಂದು ಕ್ರೀಡಾ ಚ್ಯಾನೆಲೊಂದರ ಜೊತೆ ಮಾತಾಡುತ್ತಾ ಪಟೇಲ್ ಹೇಳಿದರು.
ತಂಡಕ್ಕೆ ರಿಷಬ್ ಪಂತ್ ವಾಪಸ್ಸಾಗಿರುವುದರಿಂದ ರಾಹುಲ್ ಮೇಲೆ ಹೊಣೆಗಾರಿಕೆ ಕಮ್ಮಿಯಾಗಿದೆ. ಅವರು ನಿರಾತಂಕವಾಗಿ ಬ್ಯಾಟ್ ಮಾಡಬಹುದು ಅಂತ ಮೊನ್ನೆಯಷ್ಟೇ ಎಲ್ಲ ಬಗೆಯ ಕ್ರಿಕೆಟ್ಗೆ ವಿದಾಯ ಘೋಷಿಸಿದ ಪಟೇಲ್ ಹೇಳಿದರು.
‘ಕಳೆದ ಎರಡು ವರ್ಷಗಳಿಂದ ರಾಹುಲ್ ವಿಕೆಟ್ಕೀಪಿಂಗ್ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದಾರೆ. ಪಂತ್ ಟೀಮಿಗೆ ವಾಪಸ್ಸು ಬಂದಿರುವುದರಿಂದ ರಾಹುಲ್ ಕೇವಲ ಬ್ಯಾಟಿಂಗ್ ಮೇಲೆ ತಮ್ಮ ಗಮನ ಕೇಂದ್ರೀಕರಿಸಿ ಮುಕ್ತವಾಗಿ ಆಡಬಹುದು’ ಎಂದು ಪಟೇಲ್ ಹೇಳಿದರು.
ಟಾಪ್ ಆರ್ಡರ್ನಲ್ಲಿ ಮಾಡಿದ ಬದಲಾವಣೆಯೊಂದನ್ನು ಬಿಟ್ಟರೆ ಟೀಮ್ ಇಂಡಿಯಾದಲ್ಲಿ ಆಶ್ಚರ್ಯಕರ ಬೆಳವಣಿಗೆಗಳೇನೂ ಇರಲಿಲ್ಲ. ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಷನ್ರನ್ನು ಪ್ರಯೋಗಿಸುವ ಬದಲು ಶ್ರೇಯಸ್ ಅಯ್ಯರ್ ಅವರನ್ನೇ ಆಡಿಸಲು ನಿರ್ಧರಿಸಲಾಯಿತು.
ಬೌಲಿಂಗ್ ವಿಭಾಗದಲ್ಲಿ ಭಾರತ ಮೂವರು ಸ್ಪಿನ್ನರ್ಗಳೊಂದಿಗೆ-ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಮತ್ತು ಯುಜ್ವೇಂದ್ರ ಚಹಲ್ ಅವರೊಂದಿಗೆ ಕಣಕ್ಕಿಳಿಯಲು ಟೀಮ್ ಇಂಡಿಯಾ ನಿರ್ಧರಿಸಿತು. ವೇಗದ ಬೌಲಿಂಗ್ ವಿಭಾಗವನ್ನು ಭುವನೇಶ್ವರ್ ಕುಮಾರ್ ಮತ್ತು ಶಾರ್ದುಲ್ ಠಾಕೂರ್ ನಿಭಾಯಿಸುತ್ತಿದ್ದಾರೆ.