ಬೀದರ್, ಜನವರಿ 02: ಮೈಸೂರಿನ (Mysore) ಯುವಕ ಅಮಿತ್ ತಂದೆ ಮಾಡುವ ವ್ಯಾಪರಕ್ಕೆ ಸಹಾಯಕನಾಗಿ ಆತ ಖುಷಿ ಖುಷಿಯಾಗಿದ್ದನು. ಕನ್ನಡ ಸೇನೆಯ ಕಾರ್ಯಕರ್ತನಾಗಿ ಕನ್ನಡ ಪರ ಹೋರಾಟಗಳಲ್ಲೂ ಭಾಗಿಯಾಗುತ್ತಿದ್ದನು. ಆದರೆ ಈತನಿಗೆ ಕೃಷಿಯಲ್ಲಿ ಹೆಚ್ಚು ಆಸಕ್ತಿ ಇದ್ದಿದ್ದರಿಂದ ಕಳೆದ ಎರಡು ವರ್ಷದಿಂದ ಬೀದರ್ (Bidar) ತಾಲೂಕಿನ ವಿಳಸಾಪುರ ಗ್ರಾಮದಲ್ಲಿ ವಾಸವಾಗಿದ್ದನು. ಹೀಗೆ ಬೀದರ್ನಲ್ಲಿ ವಾಸವಾಗಿದ್ದವನು 2023 ನವೆಂಬರ್ 11 ರಂದು ಬರ್ಬರವಾಗಿ ಕೊಲೆಯಾಗಿದ್ದಾನೆ. ಅಷ್ಟಕ್ಕೂ ಅಮಿತ್ ಕೊಲೆಯಾಗಿದ್ದು ಏಕೆ? ಇಲ್ಲಿದೆ ಓದಿ…
ಅದು 2023 ನವೆಂಬರ್ 11 ಅಮೀತ್ ಹೊನ್ನಕೇರಿಯ ಪ್ರಗತಿ ಪರ ರೈತ ರವಿ ಪಾಟೀಲ್ ಅವರನ್ನು ಭೇಟಿಯಾಗಿ ಟೊಮೆಟೊ ಬೇಸಾಯದ ಬಗ್ಗೆ, ಮಾರುಕಟ್ಟೆಯ ಬಗ್ಗೆ ಮತ್ತು ಟೊಮೆಟೊ ಬೆಳೆಗೆ ಬರುವ ರೋಗದ ಬಗ್ಗೆ ಚರ್ಚಿಸಿದ್ದನು. ರವಿ ಪಾಟೀಲ್ ಅವರನ್ನು ಭೇಟಿಯಾಗಿ ರಾತ್ರಿ 9:30 ಸುಮಾರಿಗೆ ಅಮಿತ್ ಮನೆಗೆ ಬರುತ್ತಿದ್ದನು. ಈ ವೇಳೆ ದಾರಿಯಲ್ಲಿ ಹಂತಕರು ಅಮಿತ್ ಅವರನ್ನು ಅಡ್ಡ ಗಟ್ಟಿ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿ, ಜಾಕುವಿನಿಂದ ಕುತ್ತಿಗೆಯ ಹಿಂಬದಿಗೆ ಇರಿದ್ದಾರೆ. ಅಮಿತ್ ಸತ್ತ ನಂತರ ಆತನ ಸ್ಕೂಟಿಯನ್ನು ಆತನ ಮೇಲೆ ಬಿಳಿಸಿ ಕೊಲೆಗಾರರು ಅಲ್ಲಿಂದ ಓಡಿಹೋಗಿದ್ದಾರೆ.
ಇನ್ನು ಗ್ರಾಮಸ್ಥರು, ಸಂಬಂಧಿಕರು ಹೇಳುವ ಪ್ರಕಾರ ಅಮಿತ್ಗೆ ಯಾರು ಕೂಡಾ ಶತ್ರುಗಳು ಇರಲಿಲ್ಲ. ಯಾರ ಜೊತೆಗೂ ಕೂಡ ಆತ ಜಗಳ ಮಾಡಿಕೊಂಡ ಉದಾಹರಣೆವೇ ಇಲ್ಲ. ಆದರೆ ಆತ ಕೊಲೆಯಾಗಲು ಕಾರಣ ಮಾತ್ರ ನಿಗೂಢವಾಗಿಯೇ ಇತ್ತು. ಕೊಲೆಯಾದ ವಿಷಯ ತಿಳಿಯುತ್ತಿದಂತೆ ಜನವಾಡ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಶ್ವಾನ ದಳ ಬೆರಳಚ್ಚು ತಜ್ಜರ ತಂಡ ಬಂದು ಕೊಲೆಗಾರರ ಸುಳಿವು ಪತ್ತೆ ಹಚ್ಚಲು ಮಾಹಿತಿ ಕಲೆಹಾಕಿದ್ದರು.
ಅಮಿತ್ ಮಾನಾಜಿಯ ಪೋಷಕರ ಊರು ಬೀದರ್ ತಾಲೂಕಿನ ವಿಳಾಸಪುರ ಗ್ರಾಮ. ಆದರೆ ಇವರು ನೆಲೆಸಿದ್ದು ಮೈಸೂರಿನಲ್ಲಿ. ಇನ್ನೂ ಅಮಿತ್ ಮಾನಾಜಿ ಹುಟ್ಟಿದ್ದು, ಬೆಳೆದಿದ್ದೇಲ್ಲವೂ ಕೂಡ ಮೈಸೂರಿನಲ್ಲಿ. ಎಂಬಿಎ ಓದಿಕೊಂಡಿದ್ದ ಅಮಿತ್ ತಂದೆ ಮಾಡುತ್ತಿದ್ದ ಬೆಳೆ ವ್ಯಾಪಾರದಲ್ಲಿ ಸಹಾಯಮಾಡಿಕೊಂಡಿದ್ದನು. ಮೈಸೂರು ನಗರದ ಕನ್ನಡ ಸೇನೆಯ ಕಾರ್ಯಕರ್ತನಾಗಿ ಕನ್ನಡ ಪರ ಹೋರಾಟಗಳಲ್ಲೂ ಭಾಗಿಯಾಗುತ್ತಿದ್ದನು. ಹತ್ತು ವರ್ಷದ ಹಿಂದೆ ಮೈಸೂರು ನಿವಾಸಿ ಚೈತ್ರಾ ಎಂಬುವರನ್ನು ಮದುವೆಯಾಗಿದ್ದನು.
ದಂಪತಿಗೆ ಆರು ವರ್ಷದ ಒಂದು ಗಂಡು ಮಗುವಿದೆ. ಹೆಂಡತಿ, ಮಕ್ಕಳು ತಂದೆ ತಾಯಿ ಎಲ್ಲರೂ ಕೂಡಾ ಮೈಸೂರಿನಲ್ಲಿಯೇ ವಾಸವಿದ್ದಾರೆ. ಆದರೆ ಅಮಿತ್ ಮಾತ್ರ ಕೃಷಿ ಮಾಡಬೇಕು ಎಂಬ ಉದ್ದೇಶದಿಂದ ಲಾಕ್ಡೌನ್ ಅವಧಿಯಲ್ಲಿ ವಿಳಾಸಪುರ ಗ್ರಾಮಕ್ಕೆ ಬಂದು ನೆಲೆಸಿದ್ದನು.
ತಂದೆಯ 35 ಎಕರೆಯಷ್ಟು ನೀರಾವರಿ ಜಮೀನಿನಲ್ಲಿ ಟೊಮೆಟೊ, ತರಕಾರಿ ಬೆಳೆ ಬೆಳೆದು ಕೈ ತುಂಬಾ ಆದಾಯ ಗಳಿಸುತ್ತಿದ್ದನು. ಬಿಡುವಿನ ವೇಳೆಯಲ್ಲಿ ಮೈಸೂರಿಗೆ ಹೋಗಿ ಬಂದು ಮಾಡುತ್ತಿದ್ದನು. ಇತ್ತ ಪತ್ನಿ ಚೈತ್ರಾ ಕೂಡಾ ಆಗಾಗ ಗಂಡನನ್ನ ನೋಡಲು ಬೀದರ್ಗೆ ಬಂದು ಹೋಗುತ್ತಿದ್ದಳು.
ಇದನ್ನೂ ಓದಿ: ವಿಜಯಪುರದಲ್ಲಿ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ; ಹಂತಕರ ಪತ್ತೆಗೆ ಖಾಕಿ ಕಸರತ್ತು
ಪ್ರಕರಣದ ಸಂಬಂಧ ಮೃತ ಅಮಿತ್ ಹೆಂಡತಿ ಚೈತ್ರಾ ಜನವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೇಲ್ನೋಟಕ್ಕೆ ಅಪಘಾತದಂತೆ ಕಂಡು ಬಂದ ಪ್ರಕರಣದ ಬಗ್ಗೆ ಸಂಶಯಗೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್. ಎಲ್. ಅವರು ತನಿಖೆಗೆ ವಿಶೇಷ ತಂಡವನ್ನು ರಚಿಸಿದರು. ಜಿಲ್ಲಾ ಶ್ವಾನ ದಳ, ಬೆರಳಚ್ಚು ತಂಡದೊಂದಿಗೆ ಕಲಬುರಗಿಯ ಎಫ್‌ಎಸ್ಎಲ್ ತಂಡದ ನೆರವು ಕೂಡ ಪಡೆದುಕೊಂಡರು. ಅಮಿತ್ ಅಪಘಾತದಲ್ಲಿ ಮೃತಪಟ್ಟಿದ್ದಲ್ಲ, ಕೊಲೆ ಮಾಡಲಾಗಿದೆ ಎನ್ನುವುದು ತನಿಖೆಯಿಂದ ಖಾತ್ರಿ ಆಯಿತು.
ಹೊನ್ನಕೇರಿಯ ಪ್ರಗತಿ ಪರ ರೈತ ರವಿ ಪಾಟೀಲ್ ಜೊತೆಗೆ ಚೈತ್ರಾ ಅನೈತಿಕ ಸಂಬಂಧ ಹೊಂದಿದ್ದಳು. ರವಿ ಪಾಟೀಲ್ ಆಕೆಗೆ ದುಬಾರಿ ಆಭರಣ, ಕೊಡುಗೆಗಳನ್ನು ಕೊಟ್ಟಿದ್ದನು, ಅದರ ಬಗ್ಗೆ ಹೆಂಡತಿ ಚೈತ್ರಾಳನ್ನ ಪತಿ ಅಮಿತ್ ಕೇಳಿದಾಗ ಅವಳಿಂದ ಸರಿಯಾದ ಉತ್ತರ ಸಿಕ್ಕಿರಲಿಲ್ಲ. ಇದರಿಂದ ಆಕೆಯ ನಡವಳಿಕೆಯಿಂದ ಸಂಶಯಗೊಂಡ ಅಮೀತ್ ನವೆಂಬರ್ 2 ರಂದು ಪತ್ನಿಯನ್ನ ಮತ್ತೆ ವಿಚಾರಸಿದ್ದಾನೆ. ಆಕೆಗೆ ಪರಪುರುಷನ ಅನೈತಿಕ ಸಂಬಂಧ ಇದೆ ಎಂದು ಅಮೀತ್ಗೆ ಗೊತ್ತಾಗಿದೆ. ಹೀಗಾಗಿ ನವೆಂಬರ್ 2 ರಂದು ನಿನ್ನನ್ನು ಹಾಗೂ ನಿನ್ನ ಪ್ರೀಯಕರನನ್ನ ಕೊಲೆ ಮಾಡುವುದಾಗಿ ಅಮಿತ್ ಪತ್ನಿ ಚೈತ್ರಾಗೆ ಹೇಳಿದ್ದಾನೆ.
ತನ್ನ ಗಂಡ ಅಮಿತ್ ನಮ್ಮಿಬ್ಬರನ್ನ ಸಾಯಿಸುತ್ತಾನೆಂದು ಹೇಳಿದ್ದಾನೆ ಎಂದು ಚೈತ್ರಾ ತನ್ನ ಪ್ರೀಯಕರ ರವಿ ಪಾಟೀಲ್ಗೆ ಹೇಳಿದ್ದಾಳೆ. ತಕ್ಷಣ ಅಲರ್ಟ್ ಆದ ರವಿ ಪಾಟೀಲ್ ಹಾಗೂ ಚೈತ್ರಾ ಅಮಿತ್ನನ್ನ ಕೊಲೆ ಮಾಡಬೇಕು ಎಂದು ಸಂಚು ರೂಪಿಸಿದ್ದಾರೆ. ನಾವು ಕೊಲೆ ಮಾಡುವುದರ ಬದಲು ಸುಪಾರಿ ಕೊಟ್ಟು ವಾಹನ ಡಿಕ್ಕಿ ಹೊಡೆಸಿ ಕೊಲ್ಲಿಸೋಣ ಎಂದು ಪ್ಲ್ಯಾನ್ ಮಾಡಿದ್ದಾರೆ. ಅಮಿತ್ನನ್ನು ಕೊಲೆ ಮಾಡಲು 2 ಲಕ್ಷಕ್ಕೆ ಸಿಕಂದರ್, ವೆಂಕಟ್ ಗಿರಿಮಾಜೆ, ಆಕಾಶ್ ಗಿರಿಮಾಜೆಗೆ ಎಂಬುವರಿಗೆ ಸೂಪಾರಿ ಕೊಟ್ಟಿದ್ದರು. ಅಮೀತ್ ಬೈಕ್ ಮೇಲೆ ಹೋಗುವಾಗ ವಾಹನ ಡಿಕ್ಕಿ ಹೊಡೆಸಿ ಕೊಲೆ ಮಾಬೇಕು ಎಂದು ಅವರಿಗೆ ರವಿ ಪಾಟೀಲ್ ಹಾಗೂ ಚೈತ್ರ ಇಬ್ಬರು ಹೇಳಿದ್ದಾರೆ. ಅದರಂತೆ ನವೆಂಬರ್ 5 ರಂದು ರವಿ ಪಾಟೀಲ್ ತನ್ನದೆ ಬೈಕ್ ಕೊಟ್ಟು ಅಮೀತ್ಗೆ ಟೊಮೆಟೊ ಬೆಳೆಗೆ
ಅವತ್ತೆ ಅಮಿತ್ನನ್ನು ರಸ್ತೆ ಅಪಘಾತದಲ್ಲಿ ಕೊಲೆ ಮಾಡಬೇಕು ಎಂದುಕೊಂಡಿದ್ದರು ಆದರೆ ಅದು ವಿಫಲವಾಗಿತ್ತು. ಇನ್ನೂ ಅಮಿತ್ ಉದ್ಗಿರ್ನಿಂದ ಔಷಧಿ ತೆಗೆದುಕೊಂಡು ವಾಪಸ್ಸು ಬರುವಾಗ ಬಿಳಿ ಬಣ್ಣದ ಸ್ಕಾರ್ಪಿಯೋ ಕಾರು ಅಮಿತ್ನನ್ನು ಹಿಂಬಾಲಿಸಿಕೊಂಡು ಬಂದಿದೆ. ಅಮಿತ್ಗೆ ಡಿಕ್ಕಿ ಹೊಡೆಯಲು ಪ್ರಯತ್ನ ಪಡುವಾಗಲೇ ಆತ ಕಬ್ಬಿಣ ಲಾರಿ ಪಕ್ಕ ದಾಟಿ ತಪ್ಪಿಸಿಕೊಂಡು ಮನೆಗೆ ಬಂದಿದ್ದಾನೆ.
ಈ ವಿಚಾರವನ್ನ ಅಮಿತ್ ಮನೆಯವರಿಗೆ ಹೇಳಿದ್ದಾನೆ. ಮನೆಯವರು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಇದಾದ ನಂತರ ನವೆಂಬರ್ 11 ರಂದು ಅಮಿತ್ನ ಕೊಲೆ ಮಾಡುವಲ್ಲಿ ಪ್ರೀಯಕರ ರವಿ ಪಾಟೀಲ್, ಚೈತ್ರಾ ಯಶಸ್ವಿಯಾಗಿದ್ದರು.
ಕೊಲೆ ಪ್ರಕರಣವನ್ನು ಭೇದಿಸಲು ನವೆಂಬರ್ 5 ರಂದು ನಡೆದ ಘಟನೆಯ ಬಗ್ಗೆ ಪೊಲೀಸರಿಗೆ ದಾಭಾದವರು ಕೊಟ್ಟ ಮಹತ್ವದ ಸುಳಿವು, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳು ಬಹಳ ನೆರವಾಗಿವೆ. ನವೆಂಬರ್ 5 ರಂದು ವಾಹನ ಹತ್ತಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದ ಭಾಗದ ಧಾಬಾವೊಂದರ ಮಾಲೀಕರನ್ನು ವಿಚಾರಿಸಿದಾಗ, ಬಿಳಿ ಬಣ್ಣದ ಸ್ಕಾರ್ಪಿಯೊ ವಾಹನದಲ್ಲಿ ಇಬ್ಬರು ವ್ಯಕ್ತಿಗಳು ಬಂದು, ಸಿಗರೇಟ್ ಹಾಗೂ ಇತರೆ ವಸ್ತುಗಳನ್ನು ಖರೀದಿಸಿದರು. ಅಲ್ಲಿಂದ ಬೈಕ್ ಹಾದು ಹೋದ ಕೂಡಲೇ, ಚಿಲ್ಲರೆ ಹಣ ವಾಪಸ್ ಪಡೆಯದೆ ಬೈಕ್ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಪುನಃ ಬಂದು ಚಿಲ್ಲರೆ ಹಣ ಕೇಳಬಹುದೆಂದು ಅವರ ವಾಹನದ ಸಂಖ್ಯೆ ಬರೆದುಕೊಂಡಿದ್ದೆ ಎಂದು ಪೊಲೀಸರಿಗೆ ದಾಭಾದವರು ತಿಳಿಸಿದ್ದಾರೆ.
ಪೊಲೀಸರು ವಾಹನದ ವಿವರ ಕಲೆ ಹಾಕಿದಾಗ ಆ ವಾಹನ ಸಿಕಂದರ್ ಷಾ ಎಂಬಾತನಿಗೆ ಸೇರಿದ್ದು ಎಂಬುದು ಗೊತ್ತಾಯಿತು. ಈ ಕುರಿತು ಷಾನನ್ನು ವಿಚಾರಣೆಗೆ ಒಳಪಡಿಸಿದಾಗ ರವಿ ಪಾಟೀಲ್, ವೆಂಕಟ ಗಿರಿಮಾಜೆ ಒಳಸಂಚು ರೂಪಿಸಿ ನವೆಂಬರ್ 5ರಂದು ಅಮಿತ್ನನ್ನು ಕೊಲೆ ಮಾಡಲು ಪ್ರಯತ್ನಿಸಿದ್ದರು ಹೇಳಿದ್ದಾನೆ. ಆದರೆ, ಅದು ಕೈಗೂಡಿರಲಿಲ್ಲ. ಇದಾದ ಬಳಿಕ ರವಿ ಪಾಟೀಲ್ ಆರೋಪಿಗಳಾದ ವೆಂಕಟ ಗಿರಿಮಾಜೆ ಮತ್ತು ಆತನ ಮಗ ಆಕಾಶನನ್ನು ತನ್ನ ಫಾರಂ ಹೌಸ್‌ಗೆ ಕರೆಸಿಕೊಂಡು ಮತ್ತೊಮ್ಮೆ ಕೊಲೆ ಸಂಚು ರೂಪಿದ್ದಾನೆ. ಅದರಂತೆ ನವೆಂಬರ್ 11ರಂದು ಸ್ಪಿಂಕ್ಲರ್ ರಾಡ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದ ಎಂದು ಷಾ ಹೇಳಿದ್ದಾನೆ.
ಸಾಕ್ಷ್ಯ ನಾಶಗೊಳಿಸಲು ಕೊಲೆಗೆ ಬಳಸಿದ ಸ್ಪಿಂಕ್ಲರ್ ರಾಡ್ ಅನ್ನು ರವಿ ಪಾಟೀಲ್ ತನ್ನ ಫಾರಂ ಹೌಸಿನ ಜಮೀನಿನ ಬಾವಿಯೊಳಗೆ ಎಸೆದಿದ್ದಾನೆ. ಕೊಲೆಗೈದ ಆಕಾಶನಿಗೆ ಹಣ ಕೊಟ್ಟು ಹೈದರಾಬಾದಿಗೆ ಕಳಿಸಿದ್ದಾನೆ. ಆತ ಬಸ್ಸಿನಲ್ಲಿ ಹೋಗುವಾಗ ಮೊಬೈಲ್ ಕವರ್, ಬ್ಯಾಟರಿ ಕವರ್ ಅನ್ನು ತೆಲಂಗಾಣದ ಕೊತ್ತೂರ ಸಮೀಪದ ನಿರ್ಜನ ಪ್ರದೇಶದಲ್ಲಿ ಬಿಸಾಕಿದ್ದಾನೆ. ಉಳಿದ ಭಾಗವನ್ನು ಹೈದರಾಬಾದ್‌ನ ಪುರಾನಾ ಪೂಲ್ ಬಳಿ ಎಸೆದಿದ್ದಾನೆ. ಅವುಗಳನ್ನೆಲ್ಲ ವಶಕ್ಕೆ ತೆಗೆದುಕೊಳ್ಳಲಾಗಿದೆ. ಎಲ್ಲ ಆರೋಪಿಗಳು ಪರಸ್ಪರರ ದೂರವಾಣಿ ಸಂಭಾಷಣೆ, ವಾಟ್ಸಾಪ್ ಸಂದೇಶ, ಇಂಟರ್ನೆಟ್ ಕರೆಗಳನ್ನೆಲ್ಲ ಸಂಗ್ರಹಿಸಲಾಗಿದೆ.
ಇನ್ನು ನವೆಂಬರ್ 5 ರಂದು ನಡೆದ ಘಟನೆ ಬಗ್ಗೆ ಅಮಿತ್ ತನ್ನ ಸ್ನೇಹಿತನಿಗೆ ತಿಳಿಸಿದ್ದನು. ಇದು ಕೂಡ ತನಿಖೆಗೆ ನೆರವಾಗಿದೆ. ಇನ್ನು ಆರೋಪಿ ರವಿ ಪಾಟೀಲ್ ಕೊಲೆಗೆ 2 ಲಕ್ಷ ಕೊಡುವುದಾಗಿ ಹೇಳಿದ್ದನು. ಮುಂಗಡವಾಗಿ 25 ಸಾವಿರ ನೀಡಿದ್ದಾನೆ. ತನ್ನ ದೂರದ ಸಂಬಂಧಿ, ಹಿಂದೆ ತನ್ನಿಂದ ಹಣದ ಸಹಾಯ ಪಡೆದಿದ್ದ ವೆಂಕಟ್ ಗಿರಿಮಾಜೆ, ಆಕಾಶನ ನೆರವು ಪಡೆದುಕೊಂಡಿದ್ದಾನೆ. ಸಾಕ್ಷ್ಯಗಳನ್ನು ಆಧರಿಸಿ ಪೊಲೀಸರು ಸಿಕಂದರ್ ಷಾ, ವೆಂಕಟ್ ಗಿರಿಮಾಜಿ ಮತ್ತು ಆಕಾಶನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ನಡೆದದ್ದನ್ನು ಹೇಳಿದ್ದಾರೆ. ಬಳಿಕ ರವಿ ಪಾಟೀಲ್, ಚೈತ್ರಾಳನ್ನು ವಶಕ್ಕೆ ಪಡೆದಾಗ ಇಬ್ಬರು ತಪ್ಪೋಪ್ಪಿಕೊಂಡಿದ್ದಾರೆ. ಕೃತ್ಯವನ್ನು ಮುಚ್ಚಿ ಹಾಕುವ ದುರುದ್ದೇಶದಿಂದ ಸಾರ್ವಜನಿಕರಿಗೆ ಮತ್ತು ಮೃತನ ತಂದೆಗೆ ಅಪಘಾತದಲ್ಲಿ ಅಮಿತ್ ಸಾವನ್ನಪ್ಪಿದ್ದಾನೆ ಎಂದು ಬಿಂಬಿಸಲು ಪ್ರಯತ್ನಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಒಟ್ಟಾರೆಯಾಗಿ ಬೀದರ್ ಜಿಲ್ಲಾ ಪೊಲೀಸರು, ರವಿ ಪಾಟೀಲ್, ಚೈತ್ರಾ, ಸಿಕಂದರ್, ವೆಂಕಟ್ ಗಿರಿಮಾಜೆ, ಆಕಾಶ್ ಗಿರಿಮಾಜೆ ಐದು ಜನ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕವಯಸ್ಸಿನಿಂದಲೂ ಕೃಷಿಯ ಬಗ್ಗೆ ಜ್ಜಾನವಿಲ್ಲದ ಅಮಿತ್ಗೆ ಕೃಷಿಯ ಬಗ್ಗೆ ಯಾರಾದರೂ ಪ್ರಗತಿ ಪರ ರೈತರ ಸಹಾಯ ಬೇಕಾಗಿತ್ತು. ಹೀಗಾಗಿ ವಿಳಾಸಪುರ ಗ್ರಾಮದ ಪಕ್ಕದಲ್ಲಿಯೇ ಇರುವ ಹೊನ್ನೀಕೇರಿ ಗ್ರಾಮದ ಪ್ರಗತಿ ಪರ ರೈತರ ರವಿ ಪಾಟೀಲ್ ಪರಿಚಯವಾಗುತ್ತದೆ. ಇಬ್ಬರ ಜಾತಿಯೂ ಕೂಡಾ ಒಂದೆ ಆಗಿರುವುದರಿಂದ ಆತ್ಮೀಯತೆ ಜಾಸ್ತಿನೇ ಬೇಳೆಯುತ್ತೆ. ಇನ್ನೂ ರವಿ ಪಾಟೀಲ್ ಕೃಷಿಯಲ್ಲಿ ಸಾಕಷ್ಟು ಸಾಧನೆ ಮಾಡಿದ್ದನು. ರೈತನಾಗಿದ್ದ ಈತನ ಹೊಲಕ್ಕೆ ರಾಜಕಾರಣಿಗಳು, ಅಧಿಕಾರಿಗಳು ಕೂಡಾ ಬಂದು ಈತನ ಕೃಷಿಯ ಅನುಭವವನ್ನ ಪಡೆದುಕೊಂಡು ಹೋಗುತ್ತಿದ್ದರು. ಹೀಗಾಗಿ ಪದೆ ಪದೇ ಅಮಿತ್ ರವಿ ಪಾಟೀಲ್ ಮನೆಗೆ ಹೋಗಿ ಬಂದು ಮಾಡುತ್ತಿದ್ದನು. ಕೃಷಿಯ ಬಗ್ಗೆ ಮಾಹಿತಿ ತಿಳಿದುಕೊಂಡು ಬರುತ್ತಿದ್ದನು.
ಇನ್ನೂ ರವಿ ಪಾಟೀಲ್ ಕೂಡಾ ಅಮೀತ್ ಮನೆಗೆ ಬಂದು ಹೋಗಿ ಮಾಡುತ್ತಿದ್ದನು. ಈ ಸಮಯದಲ್ಲಿಯೇ ಅಮಿತ್ನ ಹೆಂಡತಿ ಚೈತ್ರಾಳಿಗೆ ರವಿ ಪಾಟೀಲ್ನ ಪರಿಚಯವಾಗಿದೆ. ಇದೇ ಸ್ನೇಹ ಅನೈತಿಕ ಸಂಬಂಧಕ್ಕೆ ತಿರುಗುತ್ತದೆ. ಆದರೆ ರವಿ ಪಾಟೀಲ್ ತನ್ನ ಹೆಂಡತಿಯ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆಂದು ಅಮಿತ್ಗೆ ಗೊತ್ತೆ ಆಗಿರಲಿಲ್ಲ. ಮನೆಯ ಮಗನನ್ನ ಕಳೆದುಕೊಂಡಿರುವ ಕುಟುಂಬದ ರೋದನೆ ಮುಗಿಲು ಮುಟ್ಟಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:53 am, Tue, 2 January 24