ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೈಕ್‌ಗಳ್ಳರ ಹಾವಳಿ ಮಿತಿಮೀರಿದೆ. ಶಾಪಿಂಗ್ ಕಾಂಪ್ಲೆಕ್ಸ್ ಮುಂದೆ ನಿಲ್ಲಿಸಿದ್ದ ಬೈಕ್ ಕೆಲವೇ ನಿಮಿಷಗಳಲ್ಲಿ ಕಳ್ಳತನವಾಗಿರುವ ಘಟನೆ ರಾಮಮೂರ್ತಿನಗರದಲ್ಲಿ ನಡೆದಿದೆ. ಜನ ತಮ್ಮ ಬೈಕ್ಗಳನ್ನು ಬಿಟ್ಟು ಹೋಗಲು ಆತಂಕ ಪಡುವಂತಾಗಿದೆ.
ನಿನ್ನೆ ಭಾನುವಾರ ಮಧ್ಯಾಹ್ನ ಸುಮಾರು 2.20ರ ಸಮಯದಲ್ಲಿ ಸತೀಶ್ ಎಂಬುವವರು ಶಾಪಿಂಗ್ ಕಾಂಪ್ಲೆಕ್ಸ್ ಮುಂದೆ ತನ್ನ ಬೈಕ್ ನಿಲ್ಲಿಸಿ ಹೋಗಿದ್ದರು. ಶಾಪಿಂಗ್ ಮುಗಿಸಿ ಬಂದು ನೋಡಿದ್ರೆ ಬೈಕ್ ನಾಪತ್ತೆಯಾಗಿತ್ತು. ಸಿಸಿಟಿವಿ ಪರಿಶೀಲಿಸಿದಾಗ ಬೈಕ್ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ.
ದೃಶ್ಯ ಸಿಸಿಟಿವಿಯಲ್ಲಿ ಸೆರೆ:
ಯುವಕ ಚಾತುರತೆಯಿಂದ ತನ್ನ ಕೈ ಚಳಕ ತೋರಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಸಿಸಿಟಿವಿ ಆಧರಿಸಿ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇತ್ತೀಚೆಗೆ ಕಳ್ಳರು ಜನನಿಬಿಡ ಪ್ರದೇಶವೇ ಆಗಲಿ, ಶಾಪಿಂಗ್ ಕಾಂಪ್ಲೆಕ್ಸ್ ಮುಂದೆಯಾಗಲಿ ಕ್ಷಣ ಮಾತ್ರದಲ್ಲಿ ಬೈಕ್ಗಳನ್ನ ಎಗರಿಸುತ್ತಿದ್ದಾರೆ. ಹೀಗಾಗಿ ಜನ ಸದ್ಯ ಬೈಕ್ ನಿಲ್ಲಿಸಿ ಎಲ್ಲೇ ಹೋಗ್ಬೇಕಿದ್ರೂ ಯೋಚಿಸುವಂತಾಗಿದೆ.