ಬೆಂಗಳೂರು: ಡಿಸೆಂಬರ್ 5ರಂದು ನಡೆದ ಹೊಸಕೋಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಬಿ.ಎನ್.ಬಚ್ಚೇಗೌಡರು ನನಗೆ ಸಹಕಾರ ನೀಡಿಲ್ಲ. ಪರೋಕ್ಷವಾಗಿ ಮಗನಿಗೆ ಬೆಂಬಲ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪಗೆ ಎಂಟಿಬಿ ನಾಗರಾಜ್ ದೂರು ನೀಡಿದ್ದಾರೆ.
ಬಚ್ಚೇಗೌಡರ ವಿರುದ್ಧ ಕ್ರಮಕೈಗೊಳ್ಳಿ ಎಂದು ಹೇಳಿಲ್ಲ:
ಮಗ ಶರತ್‌ರನ್ನ ಬೆಂಬಲಿಸುವಂತೆ ಕಾರ್ಯಕರ್ತರು, ಬೆಂಬಲಿಗರಿಗೆ ಬಚ್ಚೇಗೌಡರು ಕರೆ ನೀಡಿದ್ದಾರೆ. ಈ ಬಗ್ಗೆ ಸಿಎಂ ಯಡಿಯೂರಪ್ಪ ಜತೆ ಚರ್ಚಿಸಿದ್ದೇನೆ ಎಂದು ಎಂಟಿಬಿ ನಾಗರಾಜ್ ಪ್ರತಿಕ್ರಿಯಿಸಿದ್ದಾರೆ. ಆದ್ರೆ, ಸಂಸದ ಬಚ್ಚೇಗೌಡರ ವಿರುದ್ಧ ಕ್ರಮಕೈಗೊಳ್ಳಿ ಎಂದು ನಾನು ಹೇಳಿಲ್ಲ. ಅವರ ವಿರುದ್ಧ ಕ್ರಮಕೈಗೊಳ್ಳುವುದು ಪಕ್ಷಕ್ಕೆ ಬಿಟ್ಟ ವಿಚಾರ ಎಂದು ಯಡಿಯೂರಪ್ಪ ನಿವಾಸದ ಬಳಿ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಹೊಸಕೋಟೆಯಲ್ಲಿ ನನ್ನ ಗೆಲುವು ನಿಶ್ಚಿತ:
ಹೊಸಕೋಟೆ ಕ್ಷೇತ್ರದಲ್ಲಿ ಶೇ. 90.1ರಷ್ಟು ಮತದಾನ ಆಗಿದೆ. ಕ್ಷೇತ್ರದಲ್ಲಿ ನನ್ನ ಗೆಲುವು ನಿಶ್ಚಿತ. ಸೋತವರಿಗೆ ಸಚಿವ ಸ್ಥಾನ ಕೊಡುವ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ಬಿಜೆಪಿ ಹೈಕಮಾಂಡ್ ನಿರ್ಧರಿಸುತ್ತೆ. ಉಪಚುನಾವಣೆಯಲ್ಲಿ ಬಿಜೆಪಿಯ 12 ಅಭ್ಯರ್ಥಿಗಳು ಗೆಲ್ತಾರೆ. ಉಳಿದ 3 ಕ್ಷೇತ್ರಗಳಲ್ಲಿ 50-50 ಇದೆ ಎಂದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿಶ್ವಾಸ ವ್ಯಕ್ತಪಡಿಸಿದರು.
Published On - 11:52 am, Sat, 7 December 19