ದೇವಾಲಯದೊಳಗೆ ಕಿಸ್ಸಿಂಗ್ ದೃಶ್ಯ ತೋರಿಸಿದ್ದಕ್ಕೆ ನೆಟ್​ಫ್ಲಿಕ್ಸ್ ಮೇಲೆ ಜನಾಕ್ರೋಶ!

| Updated By: ganapathi bhat

Updated on: Apr 06, 2022 | 8:07 PM

ನೆಟ್​ಫ್ಲಿಕ್ಸ್ ಒರಿಜಿನಲ್ ಸೀರೀಸ್, A Suitable Boyನಲ್ಲಿ ದೇವಾಲಯದ ಹಿನ್ನೆಲೆಯಲ್ಲಿ ಚಿತ್ರಿಸಲಾದ ಕಿಸ್ಸಿಂಗ್ ದೃಶ್ಯ ಇರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.

ದೇವಾಲಯದೊಳಗೆ ಕಿಸ್ಸಿಂಗ್ ದೃಶ್ಯ ತೋರಿಸಿದ್ದಕ್ಕೆ ನೆಟ್​ಫ್ಲಿಕ್ಸ್ ಮೇಲೆ ಜನಾಕ್ರೋಶ!
Follow us on

ನೆಟ್​ಫ್ಲಿಕ್ಸ್ ಒರಿಜಿನಲ್ ಸೀರೀಸ್, A Suitable Boyನಲ್ಲಿ ದೇವಾಲಯದ ಹಿನ್ನೆಲೆಯಲ್ಲಿ ಚಿತ್ರಿಸಲಾದ ಕಿಸ್ಸಿಂಗ್ ದೃಶ್ಯ ಇರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಆರು ಸಂಚಿಕೆಗಳುಳ್ಳ ಸರಣಿಯ ಮೊದಲ ಆವೃತ್ತಿ ಅಕ್ಟೋಬರ್ 23ರಂದು ತೆರೆಕಂಡಿತ್ತು. ಮುಸ್ಲಿಂ ಯುವಕ ಹಿಂದೂ ಯುವತಿಯ ನಡುವಿನ ಪ್ರೇಮ ಕಥಾಹಂದರ ಹೊಂದಿರುವ ಸರಣಿಯಲ್ಲಿ ದೇವಾಲಯದೊಳಗಿನ ಕಿಸ್ ಅವಾಂತರ ಉಂಟುಮಾಡಿದೆ.

ನೆಟ್​ಫ್ಲಿಕ್ಸ್ ಇಂಡಿಯಾ ವಿರುದ್ಧ ಕೇಸ್ ದಾಖಲು!
ಈ ದೃಶ್ಯ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂಬ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಮತ್ತು ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಗೌರವ್ ತಿವಾರಿ ಆರೋಪಿಸಿದ್ದಾರೆ. ನವೆಂಬರ್ 23ರಂದು ಈ ಬಗ್ಗೆ ದೂರು ದಾಖಲಿಸಿರುವ ಬಿಜೆಪಿ ಮುಖಂಡರು, ಕಿಸ್ಸಿಂಗ್ ದೃಶ್ಯವನ್ನು ಸರಣಿಯಿಂದ ತೆಗೆಯುವಂತೆ ಆಗ್ರಹಿಸಿದ್ದಾರೆ. ನೆಟ್​ಫ್ಲಿಕ್ಸ್ ಇಂಡಿಯಾ ಉಪಾಧ್ಯಕ್ಷೆ ಮೋನಿಕಾ ಶೆರ್ಗಿಲ್ ಮತ್ತು ನೆಟ್​ಫ್ಲಿಕ್ಸ್ ಪಬ್ಲಿಕ್ ಪಾಲಿಸಿ ನಿರ್ದೇಶಕಿ ಅಂಬಿಕಾ ಖುರಾನ ಮೇಲೆ ಐಪಿಸಿ ಕಾಯ್ದೆ 295 A ಅಡಿಯಲ್ಲಿ ದೂರು ದಾಖಲಾಗಿದೆ.

ಯಾಕೆ ಈ ಪ್ರತಿಭಟನೆ?
ದೃಶ್ಯವನ್ನು ಮಧ್ಯಪ್ರದೇಶದ ನರ್ಮದಾ ನದಿ ತೀರದ ಮಹೇಶ್ವರ ದೇವಾಲಯದಲ್ಲಿ ಚಿತ್ರಿಸಲಾಗಿದೆ ಎಂದಿರುವ ಗೌರವ್ ತಿವಾರಿ, ಕಬೀರ್ ಮತ್ತು ಗೀತಾ ಪಾತ್ರಗಳು (ಮುಸ್ಲಿಂ ಯುವಕ ಹಿಂದೂ ಯುವತಿ) ಕಿಸ್ ಮಾಡುವುದು ಲವ್ ಜಿಹಾದ್ ಚಿಹ್ನೆ ಎಂದು ಆರೋಪಿಸಿದ್ದಾರೆ. ಶೀಘ್ರವೇ ನಮ್ಮ ಸರ್ಕಾರ ಲವ್ ಜಿಹಾದ್ ವಿರುದ್ಧ ಸೂಕ್ತ ಕಾನೂನು ತರಲಿದೆ ಎಂದೂ ಹೇಳಿದ್ದಾರೆ.

ಸರಣಿಯಲ್ಲಿ ಕಂಡುಬಂದಿರುವ ಈ ದೃಶ್ಯಗಳನ್ನು ಹಿಂದಿನ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇರುವಾಗ ಚಿತ್ರಿಸಲಾಗಿತ್ತು. ಆಗ ಮಧ್ಯಪ್ರದೇಶದ ಸಂಸ್ಕೃತಿ ಸಚಿವೆಯಾಗಿದ್ದ ಡಾ. ವಿಜಯ್​ಲಕ್ಷ್ಮಿ ಸಾಧೊ ಈ ಸರಣಿಯ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದರು. ಪ್ರಸ್ತುತ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸ್ಕೃತಿ ಸಚಿವೆ, ಸರಣಿಯ ಕತೆ ಮತ್ತು ಕಂಟೆಂಟ್ ಬಗ್ಗೆ ನನಗೆ ಮಾಹಿತಿ ಇರಲಿಲ್ಲ ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆ!
ಈ ಬಗ್ಗೆ ಕಳೆದ ಕೆಲವು ದಿನಗಳಿಂದ ಪರ-ವಿರೋಧದ ಚರ್ಚೆಗಳು ಜೋರಾಗಿದ್ದು, ನೆಟ್ಟಿಗರಿಂದ ವಿವಿಧ ಅಭಿಪ್ರಾಯಗಳು ಕೇಳಿಬಂದಿದೆ. ದೇವಾಲಯದಲ್ಲಿ ಈ ದೃಶ್ಯ ಚಿತ್ರಿಸಬಾರದಿತ್ತು ಎಂದು ಹಲವರು ಹೇಳಿದ್ದರೆ, ಕಿಸ್ ಮಾಡಿದ ಪಾತ್ರಗಳು ಹಿಂದೂ ಮುಸ್ಲಿಂ ಆಗಿರುವುದು ಪ್ರಕರಣಕ್ಕೆ ಇನ್ನಷ್ಟು ಬಿಸಿ ಮುಟ್ಟಿಸಿದೆ.

ಈ ಬಗ್ಗೆ ನೆಟ್​ಫ್ಲಿಕ್ಸ್ ಸರಣಿಯ ಪರ ವಾದಿಸಿರುವ ಹಲವರು, ದೇವಾಲಯದ ಒಳಗೆ ರಾಸಲೀಲೆಯ ಶಿಲ್ಪಕಲೆಗಳು ಇರಬಹುದು ಆದರೆ ಕಿಸ್ಸಿಂಗ್ ದೃಶ್ಯ ಚಿತ್ರಿಸಬಾರದು? ಎಂದು ವ್ಯಂಗ್ಯವಾಡಿದ್ದಾರೆ.

ಮೀರಾ ನಾಯರ್ ನಿರ್ದೇಶನದ ಸರಣಿಯು ವಿಕ್ರಮ್ ಸೇಥ್ ಕಾದಂಬರಿ A Suitable Boy ಆಧಾರಿತವಾಗಿದ್ದು, ಬೆಂಗಾಲಿ, ಹಿಂದಿ, ಉರ್ದು ಮತ್ತು ಇಂಗ್ಲಿಷ್ ಭಾಷೆಯಲ್ಲಿ ತೆರೆಕಂಡಿತ್ತು.

ಒಂದು ವೇಳೆ ಇದೇ ದೃಶ್ಯದಲ್ಲಿ ಪಾತ್ರಗಳ ಧರ್ಮ ಮತ್ತು ಚಿತ್ರೀಕರಣದ ಪ್ರದೇಶದಲ್ಲಿ ವ್ಯತ್ಯಾಸವಾಗಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ಎಂದು ಕೆಲವರು ಪ್ರಶ್ನಿಸಿದ್ದಾರೆ. ಮಸೀದಿಯಲ್ಲಿ ಹಿಂದೂ ಯುವಕನೊಬ್ಬ ಮುಸ್ಲಿಂ ಯುವತಿಯನ್ನು ಚುಂಬಿಸುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.

ದೇಗುಲಗಳಲ್ಲಿ ಮಿಥುನ ಶಿಲ್ಪಗಳಿದ್ದರೆ ನಮ್ಮ ಜನರಿಗೆ ಆಕ್ಷೇಪವಿಲ್ಲ. ಆದರೆ ಚಿತ್ರವೊಂದರಲ್ಲಿ ಮುತ್ತು ನೀಡುವ ದೃಶ್ಯ ತೋರಿಸಿದರೆ ಮಾತ್ರ ಆಕ್ಷೇಪ ವ್ಯಕ್ತಪಡಿಸುತ್ತಾರೆ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.

 

Published On - 11:42 am, Wed, 25 November 20