ರಣಬೀರ್ ಕಪೂರ್ (Ranbir Kapoor) ಹಾಗೂ ಆಲಿಯಾ ಭಟ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ (Brahmastra Movie) ಮಾಡಿದ ಅಬ್ಬರ ತುಂಬಾನೇ ದೊಡ್ಡದು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮೂರೇ ದಿನಕ್ಕೆ ದೊಡ್ಡ ದಾಖಲೆ ಬರೆಯಿತು. ಹಲವು ದಾಖಲೆಗಳನ್ನು ಈ ಸಿನಿಮಾ ಪುಡಿ ಮಾಡಿದೆ. ಆದರೆ, ದಿನ ಕಳೆದಂತೆ ಸಿನಿಮಾದ ಕಲೆಕ್ಷನ್ ತಗ್ಗುತ್ತಿದೆ. ನೂರಾರು ಕೋಟಿ ಬಾಚಿಕೊಂಡಿದ್ದ ಈ ಚಿತ್ರ ಈಗ ಬೆರಳೆಣಿಕೆ ಕೋಟಿಯಷ್ಟೇ ಗಳಿಕೆ ಮಾಡುತ್ತಿದೆ. ಅದಕ್ಕೂ ಕಾರಣ ಇದೆ.
ಬಾಲಿವುಡ್ನಲ್ಲಿ ಇತ್ತೀಚೆಗೆ ಯಾವ ಚಿತ್ರಗಳೂ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ. ಅಕ್ಷಯ್ ಕುಮಾರ್, ಆಮಿರ್ ಖಾನ್ ಅವರಂತಹ ಸಿನಿಮಾಗಳೇ ಬಾಕ್ಸ್ ಆಫೀಸ್ನಲ್ಲಿ ಸೊರಗುತ್ತಿದೆ. ಅಲ್ಲೊಂದು, ಇಲ್ಲೊಂದು ಸಿನಿಮಾಗಳು ಮಾತ್ರ ನೂರು ಕೋಟಿ ರೂಪಾಯಿ ಕ್ಲಬ್ ಸೇರುತ್ತಿವೆ. ಈಗ ‘ಬ್ರಹ್ಮಾಸ್ತ್ರ’ ಸಿನಿಮಾ ಒಳ್ಳೆಯ ಬಿಸ್ನೆಸ್ ಮಾಡುವ ಮೂಲಕ ಹಿಂದಿ ಚಿತ್ರರಂಗಕ್ಕೆ ಬೂಸ್ಟ್ ಸಿಕ್ಕಿದೆ. ಆರಂಭದಲ್ಲಿ ಅಬ್ಬರಿಸಿದ್ದ ಈ ಸಿನಿಮಾದ ಕಲೆಕ್ಷನ್ ದಿನ ಕಳೆದಂತೆ ತಗ್ಗುತ್ತಿದೆ.
ಶುಕ್ರವಾರ ಅಂದರೆ ಸೆಪ್ಟೆಂಬರ್ 9ರಂದು ‘ಬ್ರಹ್ಮಾಸ್ತ್ರ’ ಸಿನಿಮಾ ರಿಲೀಸ್ ಆಯಿತು. ಮೊದಲ ದಿನ ಈ ಚಿತ್ರ 37.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಸೆಪ್ಟೆಂಬರ್ 10ರಂದು 42.50 ಕೋಟಿ ರೂ., ಸೆಪ್ಟೆಂಬರ್ 11ರಂದು 45 ಕೋಟಿ ರೂ. ಸೆಪ್ಟೆಂಬರ್ 12ರಂದು 16.40 ಕೋಟಿ ರೂ., ಸೆಪ್ಟೆಂಬರ್ 13ರಂದು 12.50 ಕೋಟಿ ರೂ. ಹಾಗೂ ಸೆಪ್ಟೆಂಬರ್ 14ರಂದು ಈ ಸಿನಿಮಾ 10.50 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ದೇಶದ ಬಾಕ್ಸ್ ಆಫೀಸ್ನಲ್ಲಿ ಸಿನಿಮಾ 164 ಕೋಟಿ ರೂಪಾಯಿ ಬಾಚಿಕೊಂಡಿದೆ.
ವಾರದ ದಿನಗಳಲ್ಲಿ ಸಿನಿಮಾ ವೀಕ್ಷಿಸುವವರ ಸಂಖ್ಯೆ ಕಡಿಮೆ. ಆದಾಗ್ಯೂ ‘ಬ್ರಹ್ಮಾಸ್ತ್ರ’ ಸಿನಿಮಾ ಡಬಲ್ ಡಿಜಿಟ್ ಕಾಪಾಡಿಕೊಂಡಿದೆ. ಇದು ಚಿತ್ರತಂಡದ ಖುಷಿ ಹೆಚ್ಚಿಸಿದೆ. ಈ ವಾರಾಂತ್ಯದಲ್ಲಿ ಸಿನಿಮಾ ಒಳ್ಳೆಯ ಬಿಸ್ನೆಸ್ ಮಾಡುವ ನಿರೀಕ್ಷೆ ಇದೆ. ಹಾಗಾದಲ್ಲಿ ಚಿತ್ರ ಭಾರತದ ಬಾಕ್ಸ್ ಆಫೀಸ್ನಲ್ಲಿ ಅನಾಯಾಸವಾಗಿ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ. ವಿಶ್ವ ಮಟ್ಟದಲ್ಲಿ ಚಿತ್ರ 300 ಕೋಟಿ ರೂಪಾಯಿ ಕಲೆಕ್ಷನ್ ಗಳಿಕೆ ಮಾಡಲಿದೆ.
ಇದನ್ನೂ ಓದಿ: ರಣಬೀರ್ ನಟನೆಯ ‘ಬ್ರಹ್ಮಾಸ್ತ್ರ’ ಗೆಲುವಿನಲ್ಲಿ ಆಲಿಯಾ ಭಟ್ಗಿಲ್ಲ ಪಾಲು; ಯಾಕೀ ತಾರತಮ್ಯ?
ಅಯಾನ್ ಮುಖರ್ಜಿ ಅವರು ‘ಬ್ರಹ್ಮಾಸ್ತ್ರ’ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಆಲಿಯಾ ಭಟ್-ರಣಬೀರ್ ಕಪೂರ್ ಜತೆಗೆ ಅಮಿತಾ ಭಚ್ಚನ್, ಶಾರುಖ್ ಖಾನ್, ಮೌನಿ ರಾಯ್ ಹಾಗೂ ನಾಗಾರ್ಜುನ, ದೀಪಿಕಾ ಪಡುಕೋಣೆ ಕೂಡ ಒಂದೊಂದು ಪಾತ್ರ ನಿರ್ವಹಿಸಿದ್ದಾರೆ.