AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಂದಾಲ್ ಸ್ಟೀಲ್ ಕಂಪನಿಗೆ ಭೂಮಿ ನೀಡೋ ವಿಚಾರದಲ್ಲಿ ಅಡಕತ್ತರಿಗೆ ಸಿಕ್ಕ ಯಡಿಯೂರಪ್ಪ ಸರ್ಕಾರ..

ಜಿಂದಾಲ್ ಸ್ಟೀಲ್ ಕಂಪನಿಗೆ ಭೂಮಿ ನೀಡೋ ವಿಚಾರದಲ್ಲಿ ಯಡಿಯೂರಪ್ಪ ಸರ್ಕಾರ ಅಡಕತ್ತರಿಗೆ ಸಿಕ್ಕಿದೆ. ಜಿಂದಾಲ್​ಗೆ ಗುತ್ತಿಗೆ ಆಧಾರದ ಮೇಲೆ ನೀಡಿದ್ದ ಭೂಮಿಯನ್ನ ಯಾವುದೇ ಕಾರಣಕ್ಕೂ ಶುದ್ಧ ಕ್ರಯಪತ್ರ ಮಾಡಿಕೊಡಬಾರದು ಅಂತಾ ಹಿಂದಿನ ಸರ್ಕಾರದ ವಿರುದ್ಧ ರಂಪ ರಾಮಾಯಣ ಮಾಡಿದ್ದ ಬಿಜೆಪಿ, ತಾನೇ ತೋಡಿದ್ದ ಹಳ್ಳಕ್ಕೆ ಬೀಳುವ ಪರಿಸ್ಥಿತಿಗೆ ಬಂದಿದೆ.

ಜಿಂದಾಲ್ ಸ್ಟೀಲ್ ಕಂಪನಿಗೆ ಭೂಮಿ ನೀಡೋ ವಿಚಾರದಲ್ಲಿ ಅಡಕತ್ತರಿಗೆ ಸಿಕ್ಕ ಯಡಿಯೂರಪ್ಪ ಸರ್ಕಾರ..
Follow us
ಆಯೇಷಾ ಬಾನು
|

Updated on: Dec 06, 2020 | 6:56 AM

ಬೆಂಗಳೂರು: ಜಿಂದಾಲ್ ಸ್ಟೀಲ್ ಕಂಪನಿಗೆ ಭೂಮಿ ನೀಡೋ ವಿಚಾರದಲ್ಲಿ ಸದನದ ಒಳಗೆ, ಹೊರಗೆ ದೊಡ್ಡ ಸದ್ದು ಮಾಡಿದ್ದ ಕಮಲ ಪಾಳಯಕ್ಕೆ ಈಗ ಬಡ್ಡಿ ಸಮೇತ ಪ್ರಾಯಶ್ಚಿತ ಮಾಡಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ಅದರಲ್ಲೂ ಜಿಂದಾಲ್ ವಿಷಯವನ್ನೇ ಪ್ರಧಾನವಾಗಿ ಮುಂದಿಟ್ಟುಕೊಂಡು, ‘ಕೈ’ ಬಿಟ್ಟು ಕಮಲ ಹಿಡಿದಿದ್ದ ಆನಂದ್ ಸಿಂಗ್ ಅವರಿಗಂತೂ ಈಗ ಕೋಲು ಕೊಟ್ಟು ಹೊಡೆಸಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ.

ಅಂದಹಾಗೆ, ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್ ಬಳಿ ಜಿಂದಾಲ್ ತನ್ನ 2ನೇ ಘಟಕವನ್ನ ವಿಸ್ತರಣೆ ಮಾಡಲು 2007-08ರಲ್ಲಿ 3,667 ಎಕರೆಗೆ ಅರ್ಜಿ ಸಲ್ಲಿಸುತ್ತದೆ. ಅಂದಿನ ಹೆಚ್​ಡಿಕೆ ನೇತೃತ್ವದ 20-20 ಸರಕಾರದಲ್ಲಿ ಡಿಸಿಎಂ ಹಾಗೂ ಕೈಗಾರಿಕಾ ಮಂತ್ರಿ ಆಗಿದ್ದ ಯಡಿಯೂರಪ್ಪ ಎಕರೆಗೆ 1 ಲಕ್ಷ 22 ಸಾವಿರ ರೂಪಾಯಿಯಿಂದ 1 ಲಕ್ಷ 50 ಸಾವಿರ ರೂಪಾಯಿ ಲೆಕ್ಕದಲ್ಲಿ ಜಿಂದಾಲ್​ ಕಂಪನಿಗೆ ಗುತ್ತಿಗೆ ಆಧಾರದ ಮೇಲೆ ಭೂಮಿ ಕೊಟ್ಟಿದ್ರು.

ಈ ಒಪ್ಪಂದದ ಪ್ರಕಾರ 10 ವರ್ಷದ ಬಳಿಕ ಈ ಭೂಮಿಯನ್ನ ಸರ್ಕಾರ ಜಿಂದಾಲ್ ಕಂಪನಿಗೆ ಶುದ್ಧ ಕ್ರಯ ಪತ್ರ ಮಾಡಿಕೊಡಬೇಕು ಅಂತಾ ಒಪ್ಪಂದ ಆಗಿತ್ತು. ಇದೇ ರೀತಿ 2018ರ ಮೈತ್ರಿ ಸರ್ಕಾರದಲ್ಲಿ ಜಿಂದಾಲ್ ಕಂಪನಿಗೆ ಭೂಮಿ ನೀಡಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದಾಗ ಬಿಜೆಪಿ ವಿರೋಧಿಸಿತ್ತು. ಈಗ ಜಿಂದಾಲ್ ಕಂಪನಿಗೆ ಭೂಮಿ ನೀಡಲೇಬೇಕಾದ ಸಂದಿಗ್ಧ ಪರಿಸ್ಥಿತಿಗೆ ಬಿಜೆಪಿ ಸರ್ಕಾರ ಬಂದಿದೆ.

ಕೆಲವೇ ತಿಂಗಳ ಹಿಂದೆ ಜಿಂದಾಲ್ ವಿರುದ್ಧ ತೊಡೆ ತಟ್ಟಿದ್ದ ಯಡಿಯೂರಪ್ಪ, ಈಗ ತಮ್ಮದೇ ಸರ್ಕಾರದಲ್ಲಿ ಜಿಂದಾಲ್ ಕಂಪನಿಗೆ ಶುದ್ಧಕ್ರಯ ಪತ್ರ ಮಾಡಿಕೊಡಬೇಕು. ಇಲ್ಲದಿದ್ರೆ, ಭಾರಿ ಸಂಕಷ್ಟಕ್ಕೆ ಗುರಿಯಾಗಲಿದೆ. ಈ ಅವಮಾನದಿಂದ ತಪ್ಪಿಸಿಕೊಳ್ಳಲು ಸರ್ಕಾರ ಇತ್ತೀಚಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ, ಸಂಪುಟ ಉಪ ಸಮಿತಿ ರಚನೆ ಮಾಡಿದೆ. ಈ ಮೂಲಕ ತಾತ್ಕಾಲಿಕವಾಗಿ ಮುಖ ಮುಚ್ಚಿಕೊಳ್ಳೊ ಕೆಲಸ ಮಾಡಿದೆ.