Budget 2021 | ಇದು ದೇಶದ ಆರೋಗ್ಯ ವೃದ್ಧಿಸುವ ಬಜೆಟ್: ಡಾ.ಸುದರ್ಶನ್ ಬಲ್ಲಾಳ್
ನಾವು ಭಾವಿಸಿದಂತೆ ಆರೋಗ್ಯ ಕ್ಷೇತ್ರಕ್ಕೆ ಹಣಕಾಸು ಸಚಿವಾಲಯ ಹೆಚ್ಚಿನ ಅನುದಾನ ನೀಡಿದೆ. ಆರೋಗ್ಯ ಕ್ಷೇತ್ರಕ್ಕೆ ಇಷ್ಟು ಅನುದಾನ ನೀಡಿದ್ದು ಇತಿಹಾಸದಲ್ಲೇ ಇದೇ ಮೊದಲು ಎಂದು ಸಂತಸ ವ್ಯಕ್ತಪಡಿಸಿದರು ಡಾ.ಸುದರ್ಶನ್.

‘ಭದ್ರತೆ, ಆರ್ಥಿಕತೆಗಿಂತ ದೇಶದಲ್ಲಿರುವವರ ಆರೋಗ್ಯ ಮುಖ್ಯ ಎಂಬುದು ಇಡೀ ಜಗತ್ತಿಗೆ ಅರಿವಾಗಿದೆ. ಭಾರತ ಈ ವಿಚಾರದಲ್ಲಿ ಎಚ್ಚೆತ್ತುಕೊಂಡಿದ್ದು, ಈ ಬಾರಿಯ ಬಜೆಟ್ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದೆ’.
– ಮಣಿಪಾಲ್ ಆಸ್ಪತ್ರೆ ಸಮೂಹದ ವೈದ್ಯಕೀಯ ಸಲಹಾ ಮಂಡಳಿ ಅಧ್ಯಕ್ಷ ಡಾ.ಸುದರ್ಶನ್ ಬಲ್ಲಾಳ್ ಬಜೆಟ್ ಬಗ್ಗೆ ಮಾತು ಆರಂಭಿಸಿದ್ದು ಹೀಗೆ..
ಕೊವಿಡ್ ಸಮಯದಲ್ಲಿ ಆರೋಗ್ಯ ಕ್ಷೇತ್ರ ಸಂಕಷ್ಟಕ್ಕೆ ತುತ್ತಾಗಿದೆ. ಹೀಗಾಗಿ, ಆರೋಗ್ಯ ಕ್ಷೇತ್ರಕ್ಕೆ ಯಾವ ರೀತಿಯ ಕೊಡುಗೆ ಸಿಗಬಹುದು ಎಂದು ನಾವು ಕಾಯುತ್ತಿದ್ದೆವು. ನಾವು ಭಾವಿಸಿದಂತೆ ಆರೋಗ್ಯ ಕ್ಷೇತ್ರಕ್ಕೆ ಹಣಕಾಸು ಸಚಿವಾಲಯ ಹೆಚ್ಚಿನ ಅನುದಾನ ನೀಡಿದೆ. ಆರೋಗ್ಯ ಕ್ಷೇತ್ರಕ್ಕೆ ಇಷ್ಟು ಅನುದಾನ ಸಿಕ್ಕಿದ್ದು ಇತಿಹಾಸದಲ್ಲೇ ಇದೇ ಮೊದಲು ಎಂದು ಸಂತಸ ವ್ಯಕ್ತಪಡಿಸಿದರು.
ಈ ಬಾರಿ ಬಜೆಟ್ನಲ್ಲಿ ಕೆಲ ವಿಚಾರಗಳು ನನ್ನ ಗಮನಸೆಳೆದವು. ಕೊರೊನಾ ಲಸಿಕೆಗಾಗಿ ಕೇಂದ್ರ ಸರ್ಕಾರ ಸುಮಾರು 35 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದೆ. ಇದರ ಜತೆಗೆ ಸ್ವಚ್ಛತೆ, ನೀರು, ವಾಯುಮಾಲಿನ್ಯ ನಿಯಂತ್ರಣ ಮತ್ತು ಪೌಷ್ಟಿಕತೆಗೆ ಸರ್ಕಾರ ಒತ್ತು ನೀಡಿದೆ. ಈ ರೀತಿಮಾಡಿದಾಗ ನಮ್ಮ ದೇಶದ ಜನರ ಆರೋಗ್ಯ ತನ್ನಿಂದ ತಾನೇ ವೃದ್ಧಿಸುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ ಎಂದು ಡಾ.ಸುದರ್ಶನ್ ಅಭಿಪ್ರಾಯಪಟ್ಟರು.
ಐಸಿಯು ಬೆಡ್ಗೆ ಒತ್ತು ಕೊರೊನಾ ವೈರಸ್ ಕಾಣಿಸಿಕೊಂಡಾಗ ಆರಂಭದಲ್ಲಿ ಅನೇಕ ರೋಗಿಗಳು ಐಸಿಯು ಬೆಡ್ಗಾಗಿ ಪರದಾಡುತ್ತಿದ್ದರು. ಇದನ್ನು ಸರ್ಕಾರ ಮನಗಂಡಿದೆ. ಹೀಗಾಗಿ, ಐಸಿಯು ಬೆಡ್ಗಳನ್ನು ಹೆಚ್ಚಿಸಲು ಸರ್ಕಾರ ಅನುದಾನ ನೀಡಿದೆ. ಇದೊಂದು ಉತ್ತಮ ಕ್ರಮ. ಇದಲ್ಲದೆ, ಬಜೆಟ್ನಲ್ಲಿ ಮೂಲಸೌಕರ್ಯಕ್ಕೆ ಹೆಚ್ಚು ಆದ್ಯತೆ ನೀಡಿದೆ. ವೈದ್ಯಕೀಯ ಕ್ಷೇತ್ರಕ್ಕೆ ಇದು ಅತ್ಯಗತ್ಯವಾಗಿದೆ. ಮೂಲಸೌಕರ್ಯದಿಂದ ಅಭಿವೃದ್ಧಿ ಮಾತ್ರವಲ್ಲ ದೇಶದಲ್ಲಿ ಉದ್ಯೋಗ ಕೂಡ ಸೃಷ್ಟಿಯಾಗಲಿದೆ. ವೈರಲ್ ವೈರಾಣುಗಳ ವಿರುದ್ಧ ಹೋರಾಡಲು ಲ್ಯಾಬ್ಗಳ ಸ್ಥಾಪನೆಗೂ ಸರ್ಕಾರ ಮುಂದಾಗಿದೆ. ಇವೆಲ್ಲವೂ ಒಂದು ಅತ್ಯದ್ಭುತ ಕೆಲಸ ಎಂದರು ಡಾ.ಸುದರ್ಶನ್.
ಕೊರೊನಾ ಸರ್ಪ್ರೈಸ್ ಕೊರೊನಾ ಬರುತ್ತದೆ ಎಂದು ಯಾರಿಗೂ ಗೊತ್ತಿರಲಿಲ್ಲ. ಇದು ನಮಗೆ ಮಾತ್ರವಲ್ಲ ಎಲ್ಲ ರಾಷ್ಟ್ರಗಳಿಗೂ ಹೊಡೆತ ನೀಡಿದೆ. ಅಮೆರಿಕ ಸೇರಿ ಸಾಕಷ್ಟು ರಾಷ್ಟ್ರಗಳು ನಮಗಿಂತ ಹೆಚ್ಚು ತತ್ತರಿಸಿವೆ. ಕೊರೊನಾದಿಂದ ನಾವು ಪಾಠ ಕಲಿತಿದ್ದೇವೆ. ಮುಂದೆ ಇದೇ ಮಾದರಿಯ ರೋಗ ಬಂದರೆ ನಾವು ಅದನ್ನು ಸರಿಯಾಗಿ ಎದುರಿಸುತ್ತೇವೆ ಎನ್ನುವ ನಂಬಿಕೆ ಇದೆ ಎಂದು ಸುದರ್ಶನ್ ವಿಶ್ವಾಸ ವ್ಯಕ್ತಪಡಿಸಿದರು.
ರೋಗ ನಿರೋಧ ಶಕ್ತಿ ಹೆಚ್ಚಾಗಬೇಕು ಕೊರೊನಾದಂತ ಸೋಂಕನ್ನು ಎದುರಿಸಲು ವ್ಯಕ್ತಿಗೆ ರೋಗ ನಿರೋಧಕ ಶಕ್ತಿ ಅತ್ಯಗತ್ಯ. ಇದು ಆಗಬೇಕು ಎಂದರೆ, ವಾಯುಮಾಲಿನ್ಯ ಕಡಿಮೆ ಆಗಬೇಕು. ಕುಡಿಯಲು ಸ್ವಚ್ಛ ನೀರು, ನೈರ್ಮಲ್ಯ ಬೇಕು. ಇದನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಾಂಕ್ರಾಮಿಕವಲ್ಲದ ರೋಗವೇ ಭಾರತಕ್ಕೆ ಅಪಾಯ ಸಾಂಕ್ರಾಮಿಕ ರೋಗ- ಸಾಂಕ್ರಾಮಿಕವಲ್ಲದ ರೋಗ ಎನ್ನುವ ಎರಡು ವಿಧವಿದೆ. ಈ ಮೊದಲು ಸಾಂಕ್ರಾಮಿಕ ರೋಗವೇ ಭಾರೀ ಅಪಾಯ ತರುತ್ತಿತ್ತು. ಆದರೆ, ಈಗ ಸಾಂಕ್ರಾಮಿಕವಲ್ಲದ ರೋಗವೇ ಹೆಚ್ಚು ಅಪಾಯಕಾರಿ ಆಗುತ್ತಿದೆ. ಬದಲಾದ ಆರೋಗ್ಯ ಕ್ರಮವೇ ಇದಕ್ಕೆ ಕಾರಣ. ಹೀಗಾಗಿ ಪ್ರಾಥಮಿಕ ಆರೋಗ್ಯ ಒತ್ತು ಸಿಕ್ಕರೆ ಸಾಂಕ್ರಾಮಿಕವಲ್ಲದ ರೋಗ ನಮ್ಮ ಮೇಲೆ ದಾಳಿ ಇಡುವ ಮೊದಲೇ ಪತ್ತೆಹಚ್ಚಬಹುದು. ಈ ಕೆಲಸವನ್ನು ಈಗ ಕೇಂದ್ರ ಸರ್ಕಾರ ಮಾಡಿದೆ ಎಂದಿದ್ದಾರೆ.
ಮುಂದೆಯೂ ಆರೋಗ್ಯ ಕ್ಷೇತ್ರಕ್ಕೆ ಒತ್ತು ಯಾವ ರಾಷ್ಟ್ರ ಹೆಚ್ಚು ಆರೋಗ್ಯವಾಗಿರುತ್ತದೆಯೋ ಅಂಥ ರಾಷ್ಟ್ರ ಮಾತ್ರ ಸದೃಢ ರಾಷ್ಟ್ರ ಎಂದು ಕರೆಸಿಕೊಳ್ಳುತ್ತದೆ. ಸೇನೆ, ಆರ್ಥಿಕತೆ ಬಲವಾಗಿದ್ದರೂ ಆರೋಗ್ಯ ಇಲ್ಲದಿದ್ದರೆ ಅದು ನಿಷ್ಪ್ರಯೋಜಕ ಎನಿಸಿಕೊಳ್ಳುತ್ತದೆ. ಇದು ಎಲ್ಲರಿಗೂ ಈಗ ಗೊತ್ತಾಗಿದೆ. ಹೀಗಾಗಿ, ಮುಂದಿನ ವರ್ಷಗಳಲ್ಲೂ ಕೇಂದ್ರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವ ಭರವಸೆ ಇದೆ ಎಂಬುದು ಸುದರ್ಶನ್ ಅಭಿಪ್ರಾಯ.
Budget 2021 | ಷೇರುಪೇಟೆ ಗೂಳಿಗೆ ಬಜೆಟ್ ಬಲ: ಏರಿಕೆಯೊಂದಿಗೆ ವಹಿವಾಟು ಪೂರ್ಣಗೊಳಿಸಿದ ಬ್ಯಾಂಕ್ ನಿಫ್ಟಿ




