ಮೇ 10 ರೊಳಗೆ ಸಚಿವ ಸಂಪುಟ ವಿಸ್ತರಣೆಗೆ ವರಿಷ್ಠರು ಹಸಿರು ನಿಶಾನೆ ನೀಡಬಹುದು: ಬಿ ಎಸ್ ಯಡಿಯೂರಪ್ಪ
ಪಿ ಎಸ್ ಐ ನೇಮಕಾತಿ ಹಗರಣದಲ್ಲಿ ಉನ್ನತ ಶಿಕ್ಷಣ ಖಾತೆ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ ಅವರು ಸಹ ಆರೋಪಿ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಕೆಲವು ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ಆಪಾದಿಸುತ್ತಿದ್ದಾರೆ.
Bengaluru: ಬಹಳ ದಿನಗಳಿಂದ ಕುತೂಹಲ ಸೃಷ್ಟಿಸಿದ್ದ ಸಂಪುಟ ವಿಸ್ತರಣೆ ಇಷ್ಟರಲ್ಲೇ ಅಗಲಿದೆ ಎಂಬ ಸುಳಿವನ್ನು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ (BS Yediyurappa) ಶುಕ್ರವಾರ ಬೆಂಗಳೂರಲ್ಲಿ ನೀಡಿದರು. ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿಗಳು ತಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ರಾಜ್ಯ ಸಚಿವ ಸಂಪುಟ ಮುಂದಿನ 3-4 ದಿನಗಳಲ್ಲಿ ಆಗಲಿದೆ ಎಂದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಪಕ್ಷದ ವರಿಷ್ಠರು ಮತ್ತು ಕೇಂದ್ರ ಗೃಹ ಸಚಿವರೂ ಆಗಿರುವ ಅಮಿತ್ ಶಾ (Amit Shah) ಅವರೊಂದಿಗೆ ಚರ್ಚೆ ನಡೆಸಿ ಮೇ 10ರೊಳಗೆ ಸಂಪುಟ ವಿಸ್ತರಣೆಗೆ ಅನುಮತಿ ನೀಡಬಹುದು ಎಂದು ಬಿ ಎಸ್ ವೈ ಹೇಳಿದರು.
ಮುಖ್ಯಮಂತ್ರಿಗಳ ಬದಲಾವಣೆ ಅಗಲಿದೆಯೇ ಎಂದು ಕೇಳಿದ ಪ್ರಶ್ನೆಗೆ ಯಡಿಯೂರಪ್ಪನವರು ಹಾಗೇನೂ ಇಲ್ಲ, ಅದು ಸುಳ್ಳು ಸುದ್ದಿ ಎಂದು ಹೇಳಿದರು.
ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ಆಡಳಿತದ ಬಗ್ಗೆ ಹಲವಾರು ಪ್ರಶ್ನೆಗಳೆದ್ದಿವೆ. ಭ್ರಷ್ಟಾಚಾರದ ಅರೋಪದಲ್ಲಿ ಸಚಿವರಾಗಿದ್ದ ಕೆ ಎಸ್ ಈಶ್ವರಪ್ಪ ರಾಜೀನಾಮೆ ನೀಡಿದರು. ಈಗ ಪಿ ಎಸ್ ಐ ನೇಮಕಾತಿ ಹಗರಣದಲ್ಲಿ ಉನ್ನತ ಶಿಕ್ಷಣ ಖಾತೆ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ ಅವರು ಸಹ ಆರೋಪಿ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಕೆಲವು ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ಆಪಾದಿಸುತ್ತಿದ್ದಾರೆ.
ಈ ಎಲ್ಲ ವಿದ್ಯಮಾನಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳನ್ನು ಬದಲಾಯಿಸಲಾಗುವುದು ಮತ್ತು ಆರಗ ಜ್ಞಾನೇಂದ್ರ ಅವರನ್ನು ಗೃಹ ಖಾತೆಯಿಂದ ಸರಿಸಲಾಗುವುದು ಎಂಬ ವದಂತಿಗಳು ಹರಡಿದ್ದವು. ಎರಡು ದಿನಗಳ ಹಿಂದೆ ರಾಜ್ಯಕ್ಕೆ ಭೇಟಿ ನೀಡಿದ್ದ ಅಮಿತ್ ಶಾ ಎಲ್ಲ ಮಾಹಿತಿಯನ್ನು ಸಂಗ್ರಹಿಸಿದ್ದಾರೆ ಮತ್ತು ಅದನ್ನು ಪ್ರಧಾನಿ ಮೋದಿ ಅವರಿಗೆ ವಿವರಿಸಲಿದ್ದಾರೆ. ಅವರಿಬ್ಬರು ಸೇರಿ ಇಷ್ಟರಲ್ಲೇ ಕೆಲ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಬಹುದು.
ಇದನ್ನೂ ಓದಿ: ಅಮಿತ್ ಶಾ ದೆಹಲಿ ಹೋದ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತಾಡುತ್ತೇವೆ ಎಂದಿದ್ದಾರೆ -ಸಿಎಂ ಬಸವರಾಜ ಬೊಮ್ಮಾಯಿ