ಆನ್​ಲೈನ್​ ಮೂಲಕ ಊಟ ತರಿಸಿಕೊಳ್ಳುವವರಲ್ಲಿ ನೀವೂ ಸೇರಿದ್ದರೆ, ನಿಮ್ಮ ಊಟಕ್ಕೆ ಹೆಚ್ಚು ಹಣ ನೀಡಲು ತಯಾರಾಗಿರಿ!

ಆನ್​ಲೈನ್​ ಮೂಲಕ ಊಟ ತರಿಸಿಕೊಳ್ಳುವವರಲ್ಲಿ ನೀವೂ ಸೇರಿದ್ದರೆ, ನಿಮ್ಮ ಊಟಕ್ಕೆ ಹೆಚ್ಚು ಹಣ ನೀಡಲು ತಯಾರಾಗಿರಿ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 16, 2021 | 5:20 PM

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಫುಡ್ ಡೆಲಿವರಿ ಕಂಪನಿಗಳ ಮೇಲೆ ಶೇಕಡಾ 5 ಜಿ ಎಸ್ ಟಿ ವಿಧಿಸುವ ನಿರೀಕ್ಷೆ ಇದೆ. ಸೆಪ್ಟೆಂಬರ್ 17 ರಂದು ಜಿ ಎಸ್ ಟಿ ಕೌನ್ಸಿಲ್ ಸಭೆ ನಡೆಯಲಿದ್ದು, ಸದರಿ ವಿಷಯ ಚರ್ಚೆಗೆ ಬರಲಿದೆ.

ಅಗತ್ಯ ವಸ್ತುಗಳ ಬೆಲೆ ಪ್ರತಿದಿನ ಗಗನಮುಖಿಯಾಗುತ್ತಿದೆ. ದಿನಸಿ, ತರಕಾರಿ, ಹಣ್ಣು-ಹಂಪಲು ಮೊದಲಾದವುಗಳ ಬೆಲೆ ಜನಸಾಮಾನ್ಯ ಬೆಚ್ಚಿ ಬೀಳುವಂತೆ ಮಾಡುತ್ತಿದೆ. ಪೆಟ್ರೋಲಿಯಂ ಪದಾರ್ಥಗಳ ಬೆಲೆಯಂತೂ ಜನರನ್ನು ಒಂದು ದುಸ್ವಪ್ನವಾಗಿ ಕಾಡುತ್ತಿದೆ. ಅಡುಗೆ ಅನಿಲ ಕೇವಲ ಒಂದು ತಿಂಗಳ ಅವಧಿಯಲ್ಲಿ ರೂ 200 ಕ್ಕಿಂತ ಜಾಸ್ತಿಯಾಗಿದೆ. ಪೆಟ್ರೋಲ್ ಬೆಲೆ ರೂ. 106 ಪ್ರತಿ ಲೀಟರ್, ಡೀಸೆಲ್ ಆಲ್ಮೋಸ್ಟ್ 100 ರೂಪಾಯಿ! ಬಡವರು ಮತ್ತು ಮಧ್ಯಮ ವರ್ಗದವರ ಬದುಕು ಅಕ್ಷರಶಃ ದುಸ್ತರವಾಗಿದೆ. ಜನ ತಮ್ಮನ್ನು ಇನ್ನೂ ಇಷ್ಟಪಡುತ್ತಿದ್ದಾರೆ ಅನ್ನುವ ಭ್ರಮೆ ಕೇಂದ್ರ ಸರ್ಕಾರಕ್ಕೆ ಇದ್ದರೆ, ಅದರಿಂದ ಆದಷ್ಟು ಬೇಗ ಅದು ಹೊರಬರಬೇಕಿದೆ.

ಇದನ್ನೆಲ್ಲ ಯಾಕೆ ಹೇಳಬೇಕಾಗಿದೆಯೆಂದರೆ, ಬ್ಯಾಚುಲರ್ಸ್, ಬಲವಂತದ ಬ್ಯಾಚುಲರ್ಸ್ಗಳಿಗೆ ವರದಾನ ಅಥವಾ ಅಕ್ಷಯ ಪಾತ್ರೆಯಾಗಿ ಪರಿಣಮಿಸಿರುವ ಸ್ವಿಗ್ಗಿ, ಜೊಮ್ಯಾಟೊ, ಉನ್ಜೋ ಮೊದಲಾದ ಆಹಾರ ಸರಬರಾಜು ಮಾಡುವ ಸಂಸ್ಥೆಗಳ ಮೇಲೆ ಕೇಂದ್ರದ ಕಣ್ಣುಬಿದ್ದಿದೆ. ಆರ್ಡರ್ ಮಾಡಿದಾಕ್ಷಣ ಜನರ ಹೊಟ್ಟೆ ತುಂಬಿಸುವ ಈ ಸಂಸ್ಥೆಗಳು ಮತ್ತು ಅವುಗಳ ಡೆಲಿವರಿ ಬಾಯ್​ಗಳು ಸಮಾಜಕ್ಕೆ ಅತ್ಯುತ್ತಮ ಸೇವೆ ಒದಗಿಸುತ್ತಿದ್ದಾರೆ.

ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಫುಡ್ ಡೆಲಿವರಿ ಕಂಪನಿಗಳ ಮೇಲೆ ಶೇಕಡಾ 5 ಜಿ ಎಸ್ ಟಿ ವಿಧಿಸುವ ನಿರೀಕ್ಷೆ ಇದೆ. ಸೆಪ್ಟೆಂಬರ್ 17 ರಂದು ಜಿ ಎಸ್ ಟಿ ಕೌನ್ಸಿಲ್ ಸಭೆ ನಡೆಯಲಿದ್ದು, ಸದರಿ ವಿಷಯ ಚರ್ಚೆಗೆ ಬರಲಿದೆ. ಪ್ರಸ್ತಾಪ ಸಭೆಯಲ್ಲಿ ಓಕೆಯಾದರೆ ಸ್ವಿಗ್ಗಿಮ ಜೊಮ್ಯಾಟೋ ಮೂಲಕ ಮನೆಗೆ, ಕಚೇರಿಗಳಿಗೆ ಊಟ ತರಿಸಿಕೊಳ್ಳುವ ಹೆಚ್ಚು ಹಣ ವ್ಯಯಿಸಬೇಕಾಗುತ್ತದೆ.

ಆಹಾರ ಡೆಲಿವರಿ ಸಂಸ್ಥೆಗಳಿಂದಾಗಿ 2,000 ಕೋಟಿ ರೂ. ಗಳ ಹೊರೆ ಸರ್ಕಾರದ ಮೇಲೆ ಬೀಳುತ್ತಿದೆ ಎಂದು ಹೇಳಲಾಗುತ್ತಿದೆ. ಅದನ್ನು ಸರಿದೂಗಿಸಲು ಕಂಪನಿಗಳ ಮೇಲೆ ಶೇಕಡ 5 ರಷ್ಟು ಜಿ ಎಸ್ ಟಿ ವಿಧಿಸುವ ಯೋಚನೆ ಸರ್ಕಾರಕ್ಕೆ ಇದೆಯಂತೆ. ದೇಶದ ಒಟ್ಟಾರೆ ಆದಾಯ ಹೆಚ್ಚಿಸುವ ನಿಟ್ಟಿನಲ್ಲೂ ಈ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಕೇಂದ್ರ ಹೇಳಿದೆ.

ಇದನ್ನೂ ಓದಿ: ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ 150A ನಲ್ಲಿ ಎರಡು ಎತ್ತಿನಗಾಡಿಗಳ ನಡುವೆ ಸ್ಪರ್ಧೆ, ವಿಡಿಯೋ ವೈರಲ್