ಧಾರವಾಡದ ಹಿರಿಯ ಸಿತಾರ್ವಾದಕ, ಕರ್ನಾಟಕ ವಿಶ್ವದ್ಯಾಲಯದ ನಿವೃತ್ತ ಉಪನ್ಯಾಸಕರಾಗಿದ್ದ ಪಂಡಿತ್ ಶಿವಾನಂದ ತರಲಗಟ್ಟಿ (94) ಅವರು ಇದೇ 3ರಂದು ನಿಧನಹೊಂದಿದರು. ಸುಮಾರು ಅರವತ್ತು ವರ್ಷಗಳ ಕಾಲ ಸಿತಾರಿನ ಸಾಂಗತ್ಯದಲ್ಲಿದ್ದ ಇವರು ಮೂವತ್ತನಾಲ್ಕು ವರ್ಷಗಳ ಕಾಲ ಪಾಶ್ಚಾತ್ಯ ದೇಶಗಳಲ್ಲಿ ಸಿತಾರ್ ಕಾರ್ಯಕ್ರಮ, ಪ್ರಾತ್ಯಕ್ಷಿಕೆಗಳನ್ನು ನೀಡುವ ಮೂಲಕ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ವಿದೇಶಗಳಲ್ಲಿ ಪಸರಿಸಲು ಕಾರಣೀಕರ್ತರಾಗಿದ್ದರು. ಸಂಗೀತ ಕ್ಷೇತ್ರದ ಹಿರಿಯ ಕಲಾವಿದರು ತರಲಗಟ್ಟಿಯವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
ಹಿರಿಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದ ಎಂ. ವೆಂಕಟೇಶಕುಮಾರ ಅವರು, ‘ಕಲಾದೃಷ್ಟಿಯಿಂದ ಹೇಳುವುದಾದರೆ ತರಲಗಟ್ಟಿಯವರು ಒಬ್ಬ ಸಹೃದಯಿ. ಮಲ್ಲಿಕಾರ್ಜುನ ಮನ್ಸೂರರ ಗಾಯನದ ಬಗ್ಗೆ ಅವರಿಗೆ ಬಹಳ ಪ್ರೇಮವಿತ್ತು. ಮನ್ಸೂರರು ರಾಗಗಳನ್ನು ಕಟ್ಟಿಕೊಡುವ ಬಗೆ ನೋಡಿ, ಹೇಗೆ ಹಾಡುತ್ತಾರೆ ಅವರು ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದರು. ಹಾಗೆಯೇ ತಾನೂ ನುಡಿಸಬೇಕು ಎಂದು ಪದೇಪದೆ ಹೇಳುತ್ತಿದ್ದರು. ಹದಿನೈದು ದಿನಗಳ ಹಿಂದೆಯಷ್ಟೇ ಒಂದು ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು. ಧಾರವಾಡದಲ್ಲಿ ಒಬ್ಬ ಸಣ್ಣ ಹುಡುಗ ಹಾಡಿದರೂ ಸರಿ, ಶಭಾಷ್ ಎಂದು ಬೆನ್ನುತಟ್ಟಿಹೋಗುತ್ತಿದ್ದರು. ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿದ್ದಾಗ ಹಿಂದೂಸ್ತಾನಿ ಸಂಗೀತಶಾಸ್ತ್ರದ ಬಗ್ಗೆ ಪುಸ್ತಕ ಬರೆದು ಆಗಿನ ಕಾಲದ ವಿದ್ಯಾರ್ಥಿಗಳಿಗೆ ಬಹಳ ದೊಡ್ಡ ಉಪಕಾರವನ್ನೇ ಮಾಡಿದರು’ ಎಂದು ಅವರನ್ನು ಸ್ಮರಿಸಿದರು.
ಹಿರಿಯ ಸಿತಾರ್ ವಾದಕ ಉಸ್ತಾದ್ ಶಫೀಕ್ ಖಾನ್, ‘ನಮ್ಮ ತಂದೆ ಅಬ್ದುಲ್ ಕರೀಮ್ ಖಾನ್ ಮತ್ತು ನನ್ನ ಅಣ್ಣ ಉಸ್ಮಾನ್ ಖಾನ್ ಅವರ ಬಳಿ ಇವರು ಸಿತಾರ್ ಕಲಿಯಲು ನಮ್ಮ ಮನೆಗೆ ಬರುತ್ತಿದ್ದರಂತೆ. ಮನ್ಸೂರರ ಬಳಿ ರಾಗದ ಮಾಹಿತಿಗಾಗಿ ಕಲಿಯುತ್ತಿದ್ದರಂತೆ. ಮುಂದೆ ಧಾರವಾಡದಲ್ಲಿ ವಾಸ್ತವ್ಯ ಹೂಡಿದ್ದ ಫ್ರೆಂಚ್ ಉಪನ್ಯಾಸಕಿಯರೊಬ್ಬರ ಪರಿಚಯವಾಯಿತು. ಅವರಿಗೆ ಸಂಗೀತದಲ್ಲಿ ಅತೀವ ಆಸಕ್ತಿಇದ್ದಿದ್ದರಿಂದ ತಮ್ಮೊಂದಿಗೆ ಇವರನ್ನು ಪ್ಯಾರೀಸ್ಗೆ ಕರೆದುಕೊಂಡು ಹೋಗಿ ‘ಕಲಾವಿಸ್ತಾರ’ ಎಂಬ ಸಂಸ್ಥೆಯನ್ನೂ ಕಟ್ಟಿದರು. ಆ ಮೂಲಕ ಸಾಕಷ್ಟು ಶಿಷ್ಯಂದಿರನ್ನೂ ಸಂಪಾದಿಸಿದರು. ಮುಂದೊಂದು ದಿನ ನಾನು ಗುಲಬರ್ಗಾ ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಪ್ಯಾರೀಸ್ನಿಂದ ಐದು ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದರು. ಮರುದಿನವೇ ನನ್ನ ಕಛೇರಿಯನ್ನೂ ಏರ್ಪಡಿಸಿದರು. ಆಗಲೇ ನಾನು ಅವರನ್ನು ಮೊದಲ ಸಲ ನೋಡಿದ್ದು.’
ಶಿವಾನಂದ ಅವರ ಮಗ ಡಾ. ಮಲ್ಲಿಕಾರ್ಜುನ ತರಲಗಟ್ಟಿ ಅವರು ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಪ್ರಿನ್ಸಿಪಾಲ್ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಆಗ ನಮ್ಮ ಮನೆ ಧಾರವಾಡದ ಶಿವಪುರದಲ್ಲಿತ್ತು. ನನಗೆ ಎಂಟುವರ್ಷ ಇದ್ದಾಗಿನಿಂದಲೇ ಸಿತಾರಿನ ಪಾಠ ಶುರುಮಾಡಿದ್ದರು. ಬೆಳಗಿನ ನಾಲ್ಕೂವರೆಗೇ ಎಬ್ಬಿಸುತ್ತಿದ್ದರು. ಆಗ ಅದು ಕಿರಿಕಿರಿ ಅನ್ನಿಸುತ್ತಿತ್ತು. ಆದರೆ ಒಮ್ಮೆ ಅದರ ರುಚಿಗೆ ಬಿದ್ದ ಮೇಲೆ ನಾನಾಗಿಯೇ ಅಭ್ಯಾಸ ಮಾಡತೊಡಗಿದೆ. ಕೊನೆತನಕವೂ ನನಗೆ ಪಾಠ ಹೇಳಿಕೊಟ್ಟರು. ಎರಡು ಸಲ ಅವರೊಂದಿಗೆ ಪ್ಯಾರೀಸ್ಗೆ ಹೋಗಿ ಕಛೇರಿ ಕೊಟ್ಟುಬಂದೆ. 1986ರಿಂದ 2020ರವರೆಗೆ ಅವರು ಪ್ಯಾರೀಸ್ನಲ್ಲಿಯೇ ಹೆಚ್ಚು ವಾಸಿಸಿದ್ದು. ಯುರೋಪ್ ದೇಶಗಳಲ್ಲಿ ಅವರ ಶಿಷ್ಯಂದಿರು ಹೆಚ್ಚು. ಸ್ಯಾಕ್ಸೊಫೋನ್, ಗಿಟಾರ್ ಕಲಾವಿದರೂ ಇವರ ಬಳಿ ಕಲಿಯುತ್ತಿದ್ದರು.’
ಇದನ್ನೂ ಓದಿ : ಕೊರೊನ ಸಮಯವನ್ನು ಬಳಸಿಕೊಂಡು ಸಂಗೀತದಲ್ಲಿ ಸಾಧನೆ.. ತಂಡ ಕಟ್ಟಿಕೊಂಡು ಹಾಡಿನ ಮೂಲಕ ಮೂಡಿ ಮಾಡ್ತಿದ್ದಾರೆ ಈ ವಿದ್ಯಾರ್ಥಿಗಳು