ಬೆಳಗಾವಿ: ಮುಂದಿನ ತಿಂಗಳು ಡಿಸೆಂಬರ್ 5 ರಂದು ಗೋಕಾಕ್ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು, ಅಣ್ಣ ತಮ್ಮಂದಿರ ಮಧ್ಯೆ ನೇರಾನೇರ ಪೈಪೋಟಿ ಏರ್ಪಟ್ಟಿದೆ. ಬಿಜೆಪಿಯಿಂದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಕಾಂಗ್ರೆಸ್ನಿಂದ ಲಖನ್ ಜಾರಕಿಹೊಳಿ ಕಣದಲ್ಲಿದ್ದಾರೆ. ಈ ಮಧ್ಯೆ, ಕ್ಷೇತ್ರದ ಪ್ರಭಾವಿ ರಾಜಕಾರಣಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಜಾರಕಿಹೊಳಿ ಕುಟುಂಬಕ್ಕೆ ಬೆದರಿ ಗೋಕಾಕ್ ಪ್ರಚಾರ ಕಣದಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ.
ಲಿಂಗಾಯತ ಮತಗಳ ಜವಾಬ್ದಾರಿ ನೀಡಿದ್ದ ಹೈಕಮಾಂಡ್!
ಕೈ ಅಭ್ಯರ್ಥಿ ಲಖನ್ ಜಾರಕಿಹೊಳಿಗೆ ಕೊನೆ ಘಳಿಗೆಯಲ್ಲಿ ಕೈಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗೋಕಾಕ್ ಕ್ಷೇತ್ರದ ಉಸ್ತುವಾರಿಗೆ ಗುಡ್ ಬೈ ಹೇಳಿ ಅಥಣಿಗೆ ಶಿಫ್ಟ್ ಆಗಿದ್ದಾರೆ. ಆಕ್ಚುಯಲಿ, ಕಾಂಗ್ರೆಸ್ ಹೈಕಮಾಂಡ್ ಶಾಸಕಿ ಹೆಬ್ಬಾಳ್ಕರ್ಗೆ ಕ್ಷೇತ್ರದ ಲಿಂಗಾಯತ ಮತಗಳ ಒಗ್ಗೂಡಿಸುವ ಜವಾಬ್ದಾರಿಯನ್ನ ನೀಡಿತ್ತು. ಆದ್ರೆ ನಿನ್ನೆಯಿಂದ ದಿಢೀರ್ ಉಸ್ತುವಾರಿ ಕ್ಷೇತ್ರ ಬದಲು ಮಾಡಿಕೊಂಡ ಶಾಸಕಿ, ನಾಮಪತ್ರ ಸಲ್ಲಿಕೆಗೂ ಗೈರಾಗಿದ್ದರು.
ರಮೇಶ್ ಗೆದ್ದು ಬಂದ್ರೆ ರಾಜಕೀಯವಾಗಿ ತೊಂದರೆಯ ಸಾಧ್ಯತೆ:
ರಮೇಶ್ ಜಾರಕಿಹೊಳಿ ಗೆದ್ದು ಅಧಿಕಾರಕ್ಕೆ ಬಂದರೆ ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯವಾಗಿ ತೊಂದರೆಯಾಗುವ ಸಾಧ್ಯತೆ ಎದುರಾಗುತ್ತದೆ ಎಂಬುದು ಲಕ್ಷ್ಮೀ ಹೆಬ್ಬಾಳ್ಕರ್ ಮುಂದಾಲೋಚನೆ. ಈ ಹಿನ್ನೆಲೆ ಭಯಗೊಂಡು ಗೋಕಾಕ್ ಕ್ಷೇತ್ರಕ್ಕೆ ಒಂದು ಬಾರಿಯೂ ಕಾಲಿಡದೆ, ಯುದ್ಧಕ್ಕೂ ಮುನ್ನ ಶಸ್ತ್ರತ್ಯಾಗ ಮಾಡಿದ್ರಾ ಹೆಬ್ಬಾಳ್ಕರ್ ಎಂದು ಕ್ಷೇತ್ರದ ಜನ ಮಾತನಾಡಿಕೊಳ್ಳತೊಡಗಿದ್ದಾರೆ. ಗೋಕಾಕ್ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬಾರದಂತೆ ಕೆಲವು ಬಿಜೆಪಿ ನಾಯಕರು ಹೆಬ್ಬಾಳ್ಕರ್ ಮನವೊಲಿಸಿದ್ದಾರೆ. ಹಾಗಾಗಿ, ರಾಜಕೀಯ ಭವಿಷ್ಯ ದೃಷ್ಟಿಯಿಂದ ಸೈಲೆಂಟ್ ಆಗಿ ಹೆಬ್ಬಾಳ್ಕರ್ ಪ್ರಚಾರದಿಂದ ಹಿಂದೆ ಸರಿದಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಮಾಜಿ ಸಚಿವ ಸತೀಶ್ ಜಾರಕಿಹೊಳಿ ಗೋಕಾಕ್ ಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಡಿಕೆ ಶಿವಕುಮಾರ್ ಕೂಡ ಪ್ರಚಾರಕ್ಕೆ ಆಗಮಿಸಲಿದ್ದಾರೆ ಅಂದಿದ್ದರು.