ತಂತ್ರಜ್ಞಾನ ದಿನೇದಿನೇ ಮುಂದುವರೆಯುತ್ತಿದ್ದಂತೆ ಎಲ್ಲಾ ಕ್ಷೇತ್ರಗಳೂ ಬದಲಾವಣೆಗೆ ಒಗ್ಗಿಕೊಳ್ಳುತ್ತಿವೆ. ಈಗಾಗಲೇ ಡಿಜಿಟಲ್ ಇಂಡಿಯಾ ಯೋಜನೆಯಡಿಯಲ್ಲಿ ಕ್ಯಾಶ್ಲೆಸ್ ವ್ಯವಹಾರಕ್ಕೆ ದೇಶದಲ್ಲಿ ಸಾಕಷ್ಟು ಮಹತ್ವ ಒದಗಿದ್ದು ತಂತ್ರಜ್ಞಾನ ಬಳಕೆ ಜನಸಾಮಾನ್ಯರಿಗೆ ಸುಲಭವಾಗಿ ತಲುಪಿದೆ. ಈ ಬೆಳವಣಿಗೆಗಳು ಕೊರೊನಾ ಸಂದರ್ಭದಲ್ಲಂತೂ ಜನರ ಪಾಲಿಗೆ ವರದಾನವಾಗಿದ್ದವು. ಅದರ ಮುಂದುವರಿದ ಭಾಗವೆಂಬಂತೆ ATM ಕೇಂದ್ರಗಳಲ್ಲೂ ಈಗ ನೂತನ ತಂತ್ರಜ್ಞಾನ ಆಧಾರಿತ ಪದ್ಧತಿ ಜಾರಿಗೆ ತರಲು ಯೋಜಿಸಲಾಗಿದ್ದು. ಕಾಂಟ್ಯಾಕ್ಟ್ ಲೆಸ್ ವ್ಯವಹಾರಕ್ಕೆ ಇದು ದಾರಿ ಮಾಡಿಕೊಡಲಿದೆ ಎಂದು ಸಂಬಂಧಿಸಿದವರು ಹೇಳಿದ್ದಾರೆ. ATMಗಳಲ್ಲಿ ಕಾರ್ಡ್ ಬಳಸದೇ ಕೇವಲ QR ಕೋಡ್ ಮೂಲಕವೇ ಹಣ ಪಡೆಯುವ ವ್ಯವಸ್ಥೆ ಸದ್ಯದಲ್ಲೇ ಎಲ್ಲೆಡೆ ಲಭ್ಯವಾಗಲಿದೆ.
ಇದಕ್ಕಾಗಿ AGS Transact Technologies ಜೊತೆಗೆ Mastercard ಕೈ ಜೋಡಿಸಿದ್ದು, ಈ ನೂತನ ತಂತ್ರಜ್ಞಾನದಡಿಯಲ್ಲಿ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಬಳಸಿಕೊಂಡು ATM ಯಂತ್ರದಿಂದ ಹಣಪಡೆಯಬಹುದಾಗಿದೆ. ಸದ್ಯ Mastercard ಬಳಕೆದಾರರಿಗೆ ಹೊಸ ಸೌಲಭ್ಯ ಸಿಗಲಿದ್ದು, ಗ್ರಾಹಕರು ಹಣ ಪಡೆಯುವ ಮುನ್ನ ATM ಯಂತ್ರದ ಮೇಲೆ ಕಾಣುವ QR ಕೋಡ್ ಸ್ಕ್ಯಾನ್ ಮಾಡಬೇಕಿದೆ. ನಂತರ ತಮ್ಮ ಮೊಬೈಲ್ನಲ್ಲಿ ಪಿನ್ ನಮೂದಿಸಿ, ಪಡೆಯಬೇಕಾದ ಹಣದ ಮೊತ್ತವನ್ನೂ ಹಾಕಿ ನಗದು ಸ್ವೀಕರಿಸಬಹುದಾಗಿದೆ.
ಈ ವ್ಯವಸ್ಥೆ ಶೀಘ್ರದಲ್ಲೇ ದೇಶದ ಎಲ್ಲಾ ATM ಕೇಂದ್ರಗಳಲ್ಲೂ ಜಾರಿಯಾಗಲಿದ್ದು, ನೀವು ನಿಮ್ಮ ATM ಕಾರ್ಡ್ ಬಳಸದೇ, ಮಶೀನ್ನಲ್ಲಿ ಪಿನ್ ನಮೂದಿಸದೇ ಹಣ ಪಡೆಯುವುದು ಸಾಧ್ಯವಾಗಲಿದೆ.
Published On - 1:01 pm, Fri, 12 February 21